ಮಂಗಳೂರು : ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23 ನೇ ಭಾನುವಾರದ ಶ್ರಮದಾನಕ್ಕೆ ದಿನಾಂಕ 12-5-2019 ರಂದು ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ ಎದುರುಗಡೆ ಚಾಲನೆ ದೊರೆಯಿತು. ವಂದನೀಯ ಫಾ. ಅಕ್ವೀನ್ ನರೋಹ್ನ ಮುಖ್ಯಸ್ಥರು, ಸಂತ ಡೋಮಿನಿಕ್ ಚರ್ಚ್ ಅಶೋಕನಗರ ಹಾಗೂ ಉದ್ಯಮಿ ರಾಮಕುಮಾರ್ ಬೇಕಲ್ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಶುಭಾರಂಭ ಮಾಡಿದರು. ಉಮಾಪ್ರಸಾದ್ ಕಡೇಕಾರ್, ಪ್ರೋ. ಸತೀಶ್ ಭಟ್, ಸರಿತಾ ಶೆಟ್ಟಿ, ರಾಮಚಂದ್ರ ಶೆಟ್ಟಿ, ಕೇಶವ ಶೆಟ್ಟಿಗಾರ್, ಪ್ರಕಾಶ್ ಎಸ್ ಎನ್, ಕಿರಣಕುಮಾರ್ ಕೋಡಿಕಲ್, ಶಿವರಾಜ್ ಶೆಟ್ಟಿ ಹಾಗೂ ದತ್ತ ಪಾರಡೈಸ್ ನಿವಾಸಿಗಳು ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ರೆ.ಫಾ ಅಕ್ವೀನ್ ನರೋಹ್ನ ‘ಭಗವಂತನು ಸೃಷ್ಟಿಯಲ್ಲಿ ಮಾನವನನ್ನು ಸೃಷ್ಟಿಸಿದಂತೆ ಹಲವು ಜೀವಿಗಳನ್ನು ಸೃಷ್ಟಿಸಿದ್ದಾನೆ. ಎಲ್ಲಜೀವಿಗಳಂತೆ ಮರಗಿಡಗಳಲ್ಲಿಯೂ ಜೀವವಿದೆ. ಆದರೆ ಅವನ್ನೆಲ್ಲ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಈ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ನಿನ ಈ ಅಭಿಯಾನ ಶ್ಲಾಘನೀಯ! ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ಶ್ರಮಿಸಬೇಕಿದೆ. ಇದು ಕೇವಲ ಸರಕಾರಿ ಕಾರ್ಯಕ್ರಮವಾಗದೇ ಇದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯವಾಗಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ನಿಗದಿತ ಡಬ್ಬಿಯಲ್ಲಿ ಹಾಕುವ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡಾಗ ಸ್ವಚ್ಛ ಭಾರತ ಯಶಸ್ವಿಯಾಗುತ್ತದೆ’ ಎಂದು ತಿಳಿಸಿ ಶುಭ ಹಾರೈಸಿದರು.
ಶ್ರಮದಾನ: ಸ್ವಾಮಿ ಏಕಗಮ್ಯಾನಂದಜಿ ಹಾಗೂ ಫಾ. ಅಕ್ವೀನ್ ಕೆಲಕಾಲ ರಸ್ತೆಯನ್ನು ಗುಡಿಸಿದರು; ಬಳಿಕ ಸ್ವಯಂಸೇವಕರು ಡೊಮಿನಿಕ್ ಚರ್ಚ್ ಜಂಕ್ಷನ್ನಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಶ್ರಮದಾನ ಮಾಡಿದರು. ಚರ್ಚ್ ಎದುರಿನ ತ್ಯಾಜ್ಯತುಂಬಿದ ಸ್ಥಳವನ್ನು ಮೊದಲು ಸ್ವಚ್ಛಗೊಳಿಸಲಾಯಿತು. ಅಲ್ಲಿದ್ದ ನಿರುಪಯುಕ್ತ ಗೂಡಂಗಡಿಯನ್ನು ತೆರವು ಮಾಡಲಾಯಿತು. ನಂತರ ಅನೇಕ ವರ್ಷಗಳಿಂದ ಅಲ್ಲಿ ತೋಡಿದ್ದ ಗುಂಡಿಯನ್ನು ಮಣ್ಣು ಹಾಕಿ ಮುಚ್ಚಲಾಯಿತು. ಹಾಗೂ ಅಲ್ಲಿಯ ನೆಲವನ್ನು ಸಮತಟ್ಟುಗೊಳಿಸಿ ಸಾರ್ವಜನಿಕರು ಅಲ್ಲಿಮತ್ತೆ ಕಸಹಾಕದಂತೆ ಗಿಡಗಳನ್ನಿಟ್ಟು ಸುಂದರತಾಣವನ್ನಾಗಿಸಲಾಗಿದೆ. ಚರ್ಚ್ ಮುಂಭಾಗದಿಂದ ಕೋಡಿಕಲ್ ಹೋಗುವ ರಸ್ತೆಯ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಲ್ಲು ಮಣ್ಣುಗಳ ರಾಶಿ ತೆಗೆದು ಹಸನು ಮಾಡಲಾಯಿತು. ಕಾಲುದಾರಿಯಲ್ಲಿದ್ದ ಕಲ್ಲುಗಳನ್ನು ತೆಗೆದು ನಡೆದುಹೋಗುವವರಿಗೆ ಅನುಕೂಲ ಮಾಡಿಕೊಡಲಾಯಿತು. ಮೂರನೇ ತಂಡ ಉರ್ವಾ ಸ್ಟೋರನತ್ತ ಸಾಗುವ ಮಾರ್ಗವನ್ನು ಹಾಗೂ ಅದೇ ರಸ್ತೆಯ ತಿರುವಿನಲ್ಲಿದ್ದ ಕಾಂಕ್ರೀಟ್ ಕಸದ ತೊಟ್ಟಿಯನ್ನು ಜೆಸಿಬಿ ಮೂಲಕ ತೆರವು ಮಾಡಿ ಸ್ವಚ್ಛಗೊಳಿಸಲಾಯಿತು. ಇದೀಗ ಆ ಜಾಗೆಯಲ್ಲಿ ಸುಂದರ ಗಿಡಗಳ ಕುಂಡಗಳನ್ನಿಟ್ಟು ಸ್ಥಳ ಚೆಂದ ಕಾಣುವಂತೆ ಮಾಡಲಾಗಿದೆ. ಮೆಹಬೂಬ ಖಾನ್, ರಾಮಚಂದ್ರ ಭಟ್, ಸಂತೋಷ ಸುವರ್ಣ, ವಿಠಲದಾಸ್ ಪ್ರಭು, ಸುಮಾಶಿವು, ಪ್ರಶಾಂತ ಉಪ್ಪಿನಂಗಡಿ, ದಿನೇಶ್ ಶೆಟ್ಟಿ, ಅಭಿಯಾನದ ಮುಖ್ಯ ಸಂಯೋಜಕ ದಿಲ್ರಾಜ್ ಆಳ್ವ ಸೇರಿದಂತೆ ಅನೇಕ ಕಾರ್ಯಕರ್ತರು ಸುಮಾರು ಮೂರು ಗಂಟೆಗಳ ಕಾಲ ಶ್ರಮದಾನ ಮಾಡಿದರು. ಕಳೆದ ವಾರದಂತೆ ಈ ವಾರವೂ ಜಗನ್ ಕೋಡಿಕಲ್ ನೇತೃತ್ವದಲ್ಲಿ ಸ್ವಚ್ಛತಾ ಯೋಧರ ಕಣ್ಗಾವಲು ಪಡೆ ತ್ಯಾಜ್ಯ ಬೀಳುತ್ತಿದ್ದ ಸ್ಥಳದಲ್ಲಿ ಕಾಯ್ದು ನಿಂತು ಮತ್ತೆ ಆ ಜಾಗೆಯಲ್ಲಿ ಸಾರ್ವಜನಿಕರು ಕಸ ಹಾಕದಂತೆ ಮುನ್ನಚ್ಚರಿಕೆ ವಹಿಸಲಿದೆ
5೦೦ ಕಸದ ಬುಟ್ಟಿಗಳ ವಿತರಣೆ : ಸ್ವಚ್ಛ ಮಂಗಳೂರು ಅಭಿಯಾನದಡಿ 500 ಸಣ್ಣ ಅಂಗಡಿಗಳ ವರ್ತಕರಿಗೆ 60 ಲೀ ಸಾಮರ್ಥ್ಯದ ಕಸದ ಬುಟ್ಟಿಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇಂದು ಸ್ಥಳೀಯ ವರ್ತಕರಿಗೆ ಕಸದ ಬುಟ್ಟಿಗಳನ್ನು ವಿತರಿಸುವ ಮೂಲಕ ಆ ಯೋಜನೆಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚಾಲನೆ ನೀಡಿದರು. ವಿಶೇಷವಾಗಿ ಸಣ್ಣ ಮಳಿಗೆಗಳ ವ್ಯಾಪಾರಸ್ಥರಿಗೆ ಈ ಡಸ್ಟಬಿನ್ ವಿತರಣೆ ನಡೆಯಲಿದೆ. ಆ ಮೂಲಕ ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಕಸದ ಬುಟ್ಟಿ ಉಪಯೋಗಿಸುವಂತೆ ಉತ್ತೇಜಿಸಿ ಸ್ವಚ್ಛತೆಯ ಕಲ್ಪನೆಯನ್ನು ವರ್ತಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಬಿತ್ತುವ ಗುರಿ ಹೊಂದಲಾಗಿದೆ. ಯೋಜನೆಯ ನೇತೃತ್ವವನ್ನು ಸುಧೀರ ವಾಮಂಜೂರು, ಪುನೀತ್ ಪೂಜಾರಿ ಹಾಗೂ ಉದಯ ಕೆಪಿ ವಹಿಸಿಕೊಂಡಿದ್ದಾರೆ. ಎಂ.ಆರ್.ಪಿ.ಎಲ್ ಯೋಜನೆಗೆ ಸಂಪೂರ್ಣ ಪ್ರಾಯೋಜಕತ್ವ ನೀಡಿದೆ.
ಸ್ವಚ್ಛ ಪುತ್ತೂರು: ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಪುತ್ತೂರಿನಲ್ಲಿ ಇಂದು ಮೂರನೇ ವರ್ಷದ ಸ್ವಚ್ಛತಾ ಅಭಿಯಾನದ 6ನೇ ಶ್ರಮದಾನ ನೆಹರು ನಗರದ ವಿವೇಕಾನಂದ ಕಾಲೇಜಿನ ಸಂಪರ್ಕ ರಸ್ತೆಯಲ್ಲಿ ಜರುಗಿತು. ಎಂ ಎಸ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಉಪನ್ಯಾಸಕ ಗೋಪಾಲಕೃಷ್ಣ ಭಟ್, ಶಂಕರ ಮಲ್ಯ ಇರ್ದೆ, ಸಂತೋಷ ವಾಗ್ಲೆ, ದೇವಿಪ್ರಸಾದ್ ಮಲ್ಯ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು. ಕೃಷ್ಣ ಜಿ ಕಾರ್ಯಕ್ರಮವನ್ನು ಸಂಯೊಜಿಸಿದರು.
ಸ್ವಚ್ಛ ಕಾಯರ್ತಡ್ಕ: ರಾಮಕೃಷ್ಣ ಮಿಷನ್ ಆಶ್ರಯದಲ್ಲಿ ಕಾಯರ್ತಡ್ಕದಲ್ಲಿ ೫ನೇ ಶ್ರಮದಾನ ಜರುಗಿತು. ಊರಿನ ಸೇತುವೆಗೆ ಬಣ್ಣ ಬಳಿದು ಸುಂದರಗೊಳಿಸಲಾಯಿತು. ಹಾಗೂ ಸೇತುವೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ವಿಜೇತ್ ಕುಲಾಡಿ, ಪ್ರವೀಣ ಪಾಂಗಳ, ಪ್ರದೀಪ್ ಕುಲಾಲ್ ಹಂಕರ್ಜಾಲು ಸೇರಿದಂತೆ ಊರಿನ ಅನೇಕರು ಶ್ರಮದಾನದಲ್ಲಿ ಭಾಗಿಯಾಗಿದ್ದರು. ಯೋಗೀಶ್ ಕಾಯರ್ತಡ್ಕ ಶ್ರಮದಾನದ ನೇತೃತ್ವ ವಹಿಸಿದ್ದರು. ಈ ಸ್ವಚ್ಛತಾ ಅಭಿಯಾನದ ಚಟುವಟಿಕೆಗಳಿಗೆ ಎಂ.ಆರ್.ಪಿ.ಎಲ್ ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.