ಮಾತಾ ಭೂಮಿಃ, ಪುತ್ರೋಹಂ ಪೃಥಿವ್ಯಾಃ
ವೇದಗಳ ಕಾಲದಿಂದಲೂ, ಭೂಮಿಯನ್ನು ಒಂದು ಜಡವಸ್ತುವನ್ನಾಗಿಯೋ, ಕೇವಲ ಭೂಭಾಗವನ್ನಾಗಿಯೋ ನೋಡದೆ, ಅದೊಂದು ಮಾತೃಸ್ವರೂಪ ಎಂದೇ ಭಾರತೀಯರು ಪರಿಗಣಿಸಿದ್ದಾರೆ. ಭಾರತೀಯ ಪರಂಪರೆಯ ಎಲ್ಲ ಕಾವ್ಯಗಳಲ್ಲೂ ಈ ಅಂಶ ಮತ್ತೆ ಮತ್ತೆ ಸ್ಫುಟವಾಗಿ ನಿರೂಪಿತವಾಗಿದೆ. ಕಾಲಾನುಕ್ರಮದಲ್ಲಿ, ಭೋಗಜೀವನದ ಪ್ರಭಾವ ಹೆಚ್ಚಾದಂತೆಲ್ಲಾ ಈ ಪವಿತ್ರ ಭಾವನೆಯು ಮಸುಕಾಗಿ, ಜನರ ಮನಸ್ಸುಗಳು ಬೂದಿಯಲ್ಲಿ ಮುಚ್ಚಿದಾಗೆಲ್ಲ, ಮಹಾತ್ಮರು ಮತ್ತೆ ಆವಿರ್ಭವಿಸಿ ರಾಷ್ಟ್ರಮಾತೆಯ ದಿವ್ಯ ಸಂದೇಶವನ್ನು ಅರುಹಿದ್ದಾರೆ. ಆ ಎಲ್ಲ ಸಂದೇಶಗಳಲ್ಲಿ ಉತ್ತುಂಗದಲ್ಲಿ ನಿಲ್ಲುವುದು ಬಂಕಿಮ ಚಂದ್ರರ `ವಂದೇ ಮಾತರಂ.!!
‘ವಂದೇ ಮಾತರಂ’ ಒಂದು ಗೀತೆ ಅನ್ನೋದಕ್ಕಿಂತಲೂ ಅದೊಂದು ಮಂತ್ರ. ಈ ದೇಶದ ಸ್ವಾತಂತ್ರ್ಯಕ್ಕೆ ತರುಣರನ್ನು ಪ್ರೇರೇಪಿಸಿದ ಸ್ಫೂರ್ತಿ. ದೇಶದ ಪ್ರಜ್ಞೆಯೇ ಇಲ್ಲದ ಜನರಲ್ಲಿ ರಾಷ್ಟ್ರಚಿಂತನೆಯನ್ನು ಉಜ್ಜುಗಿಸಿದ ಶಕ್ತಿ. ಸ್ವಾಭಿಮಾನದ ಪ್ರತೀಕ. ವಂದೇ ಮಾತರಂ ಗೀತೆಗೆ ಸುದೀರ್ಘ ಇತಿಹಾಸವಿದೆ.
1838, ಜೂನ್ 27 ರಂದು ಬಂಕಿಮಚಂದ್ರರು ಬಂಗಾಳದ ಕಂತಳಪಾಡಾದಲ್ಲಿ ಜನಿಸಿದರು. ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನವನ್ನು ಮುಗಿಸಿ, ಸರ್ಕಾರಿ ಸೇವೆಗೆ ಸೇರಿದರು. ಬಂಕಿಮರಲ್ಲಿ ಸಾಹಿತ್ಯದೆಡೆಗೆ ಮೊದಲಿಂದಲೂ ಒಲವಿತ್ತು. ಮೊದಲು ಆಂಗ್ಲಭಾಷೆಯಲ್ಲಿ ಸಾಹಿತ್ಯವನ್ನು ಪ್ರಾರಂಭಿಸಿದರಾದರೂ, ಯಾಕೋ ಅದು ಅವರ ಮನಸ್ಸನ್ನು ಗೆಲ್ಲಲಿಲ್ಲ. ಹೀಗಾಗಿ, ಬಂಗಾಲಿಯಲ್ಲಿಯೇ ಸಾಹಿತ್ಯವನ್ನು ಆರಂಭಿಸಿದರು. ಸುಮಾರು, 1872 ರಲ್ಲಿ ‘ಬಂಗದರ್ಶನ’ವೆಂಬ ತಮ್ಮದೇ ಪತ್ರಿಕೆಯನ್ನೂ ಅವರು ಪ್ರಾರಂಭಿಸಿದರು. ಅಲ್ಲದೆ ಅನೇಕ ಕಾದಂಬರಿಗಳು, ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾದವು.
ಅದು 1875 ರ ಸಮಯ. ಒಂದು ರಜಾದಿನ ಬಂಕಿಮರು ರೈಲಿನಲ್ಲಿ ತಮ್ಮ ಊರಿನೆಡೆಗೆ ಪಯಣಿಸುತ್ತಿದ್ದರು. ಕಿಟಕಿಯಾಚೆಗೆ ಒಮ್ಮೆ ನೋಡಿದರು. ವಿಸ್ತಾರವಾದ ಬಯಲು, ಹಚ್ಚ ಹಸುರಿನ ಪೈರುಗಳು, ಫಲ-ಪುಷ್ಪಗಳಿಂದ ಸಮೃದ್ಧವಾದ ತರುಲತೆಗಳು, ಮನಮೋಹಕವಾಗಿ ಹರಿಯುವ ಝರಿಗಳು – ಇವೆಲ್ಲವನ್ನೂ ನೋಡುತ್ತಾ ಬಂಕಿಮರ ಎದೆ ಸುಂದರ ಅನುಭೂತಿಯತ್ತ ಮುಖಮಾಡಿತು. ಆ ಅನುಭವವೇ ‘ವಂದೇ ಮಾತರಂ’ ಗೀತೆಗೆ ನಾಂದಿಯಾಯಿತು. ವಾಸ್ತವಿಕವಾಗಿ ಬಂಕಿಮರು ‘ವಂದೇ ಮಾತರಂ’ ಅನ್ನು ಮೊದಲೇ ಬರೆದಿದ್ದರೂ, ಅದು ಜನಸಮೂಹಕ್ಕೆ ದೊರೆತಿದ್ದು ಅನೇಕ ವರ್ಷಗಳ ನಂತರ. ‘ಆನಂದಮಠ’ ಎಂಬ ಕಾದಂಬರಿ ಮೂಲಕ.
1763-1800 ರ ಆಸುಪಾಸಿನಲ್ಲಿ ನಡೆದ ‘ಸನ್ಯಾಸಿ ದಂಗೆ’ಯೇ ಆನಂದಮಠ ಕಾದಂಬರಿಯ ಮೂಲವಸ್ತು. ಈ ಕಥೆಯನ್ನು ಅದೆಷ್ಟು ಉದ್ಬೋಧಕವಾಗಿ ಹೇಳಿದ್ದರೆಂದರೆ, ಆ ಕಾದಂಬರಿಯ ಪಾತ್ರಗಳೇ ಸ್ವಾತಂತ್ರ ಹೋರಾಟಗಾರರೇನೋ ಅನ್ನುವಷ್ಟು ಪ್ರಭಾವ ಅದರಿಂದಾಗಿತ್ತು. ಬಂಕಿಮರು ತಾವು ಹಿಂದೆ ಬರೆದಿದ್ದ ‘ವಂದೇ ಮಾತರಂ’ ಗೀತೆಯನ್ನು ಈ ಕಾದಂಬರಿಯಲ್ಲಿ, ಅತ್ಯಂತ ಸಂದರ್ಭೋಚಿತವಾಗಿ ಬಳಸಿಕೊಂಡರು. ಅದು ಓದುಗರ ಎದೆಯಿಂದ ಹಾಡಾಗಿ ಹೊಮ್ಮಿತು. ನೋಡುನೋಡುತ್ತಲೇ ಜನರು ಮೈಮರೆತು ‘ವಂದೇ ಮಾತರಂ’ ಅನ್ನು ಹಾಡತೊಡಗಿದರು.. ಪ್ರತಿಯೊಂದು ಮೆರವಣಿಗೆ, ಪ್ರತಿಭಟನೆಗಳಲ್ಲಿ ‘ವಂದೇ ಮಾತರಂ’ ಘೋಷವಾಕ್ಯವಾಗಿ ಮೊಳಗಿತು. ಬರೀ ಬಂಗಾಳವಷ್ಟೇ ಅಲ್ಲ, ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ತಮಿಳುನಾಡು ದೇಶದ ಉದ್ದಗಲಕ್ಕೂ ವಂದೇ ಮಾತರಂನ ಕಿಚ್ಚು ಹಬ್ಬಿತು. ಎಲ್ಲಿಯವರೆಗೂ ಹೋಯಿತೆಂದರೆ, ಬ್ರಿಟಿಷರು `ವಂದೇ ಮಾತರಂ’ ಗೀತೆ, ಘೋಷಣೆಗಳನ್ನೇ ನಿಷೇಧಿಸುವಷ್ಟು..
‘ವಂದೇ ಮಾತರಂ’ ಅನ್ನೋದು ಬ್ರಿಟಿಷರ ವಿರುದ್ಧ ಊದಿದ ಕಹಳೆಯಾದರೂ, ಅದು ನಮ್ಮವರಿಂದಲೇ ಮತ್ತಷ್ಟು ಮರೆಯಾಗಿದ್ದು ದೊಡ್ಡ ದುರಂತ. ಕಾಂಗ್ರೆಸ್ಸ್ನ ಎಲ್ಲ ಸಭೆಗಳಲ್ಲೂ ವಂದೇ ಮಾತರಂ ಗಾನವು ಒಂದು ರೀತಿ ಸಂಪ್ರದಾಯವೇ ಆಗಿತ್ತು. 1923 ರ ಕಾಂಗ್ರೆಸ್ಸ್ ಸಭೆಯಲ್ಲಿ ಎಂದಿನಂತೆ ಪಂ.ವಿಷ್ಣು ದಿಗಂಬರ ಪಲುಸ್ಕರ್ ಅವರು ‘ವಂದೇ ಮಾತರಂ’ ಹಾಡುತ್ತಿದ್ದರು. ಸಭೆಯ ಅಧ್ಯಕ್ಷರಾದ ‘ಮೌಲಾನ ಅಬ್ದುಲ್ ಕಲಾಮ್ ಅಜಾದ್’, ಆ ಗಾಯನಕ್ಕೆ ವಿರೋಧ ವ್ಯಕ್ತಪಡಿಸಿದರು. ವಂದೇಮಾತರಂನಲ್ಲಿ ತಾಯಿ-ದೇವತೆಯ ವರ್ಣನೆಯಿರುವುದರಿಂದ, ಇದನ್ನು ಮುಸ್ಲಿಮರು ಅಂಗೀಕರಿಸುವುದಿಲ್ಲ ಎಂದು ಹೇಳಿ, ಸಭೆಯಿಂದ ಹೊರನಡೆದರು. ಅಂದಿನಿಂದ ವಂದೇ ಮಾತರಂಗೆ ಕರಿದಿನಗಳು ಆವರಿಸಿದವು. ಯಾವ ಎರಡು ಶಬ್ದಗಳು ಜನಮಾನಸವನ್ನು ಬೆಸೆದಿದ್ದವೋ, ದೇಶದ ಸ್ವಾತಂತ್ರಕ್ಕೆ ಎಲ್ಲವನ್ನೂ ತ್ಯಾಗ ಮಾಡುವಂತೆ ತರುಣರನ್ನು ಪ್ರೇರೇಪಿಸಿದ್ದವೋ, ಆ ಶಬ್ದಗಳು, ಆ ಗೀತೆ ಧರ್ಮದ ಹೆಸರಿನಲ್ಲಿ ಹಿಂಬದಿಗೆ ಸರಿಯಿತು. ತುಷ್ಟೀಕರಣದ ಗೀಳಿನಲ್ಲಿ ಕಾಂಗ್ರೆಸ್ಸ್ ಕೂಡ, ವಂದೇ ಮಾತರಂನ ಕೊಲೆಗೆ ನಾಂದಿ ಹಾಡಿತು. ಮೊದಮೊದಲು, ಮುಸ್ಲಿಂಲೀಗ್ ಅನ್ನು ಓಲೈಸಲು, ಮಹಮ್ಮದ್ ಇಕ್ಬಾಲರ ‘ಹಿಂದುಸ್ತಾನ್ ಹಮಾರಾ’ ಗೀತೆಯನ್ನು ವಂದೇ ಮಾತರಂ ಗೀತೆಯ ಜೊತೆ ಹಾಡಿಸುತ್ತಿದ್ದರು. ಬರುಬರುತ್ತಾ ಓಲೈಕೆ ವಿಪರೀತವಾಗಿ, ರಾಷ್ಟ್ರಗೀತೆ ಯಾಗಬೇಕಿದ್ದ ಆ ದಿವ್ಯವಾದ ಮಂತ್ರವು ಮೂಲೆಗುಂಪಾಯಿತು.
ಇವೆಲ್ಲದರ ನಡುವೆಯೂ, ಇವತ್ತಿಗೂ ‘ವಂದೇ ಮಾತರಂ’ ಎಲ್ಲ ಯುವಕರ ಎದೆಯಲ್ಲಿ ಅನುರಣಿಸುತ್ತಿದೆ. ವಂದೇ ಮಾತರಂ ಬಗ್ಗೆ ಏನು ಹೇಳುವುದು ? ಧ್ಯಾನಕ್ಕೆ ಕೂತರೆ, ತಾಯಿ ದುರ್ಗೆಯ ಸಾಕ್ಷಾತ್ ಪ್ರಾದುರ್ಭಾವವಾದ ಅನುಭವ. ಗಾಯನವನ್ನು ಕೇಳಿದರೆ, ಗಂಧರ್ವ ಗಾನದ ರಮಣೀಯತೆ. ಅದ್ಭುತ ಪದ-ವರ್ಣನೆಗಳ ಮಹೋನ್ನತ ಕಾವ್ಯ, ದೇಶಕ್ಕಾಗಿ ಸಿಡಿದು ನಿಂತರೆ, ಕೈಯಲ್ಲಿ ಸಾವಿರ ಆಯುಧಗಳಿವೆಯೇನೋ ಎನ್ನುವ ಧೈರ್ಯ, ನಮ್ಮ ತಾಯಿಯ ದರ್ಶನ ಮಾಡಿಸಿದ ಮಂತ್ರ.
ಇಂತಹ ಮಂತ್ರವನ್ನು ಕೊಟ್ಟ ರಾಷ್ಟ್ರ ಋಷಿ ಬಂಕಿಮಚಂದ್ರರಿಗೆ ಪ್ರಣಾಮಗಳು. ಅ ಋಷಿಯ ದಿವ್ಯ ತೇಜಸ್ಸು ವಂದೇ ಮಾತರಂ ಗೀತೆಯ ಮೂಲಕ ಇನ್ನೂ ಭಾರತದೆದೆಯಲ್ಲಿ ಜೀವಂತವಾಗಿದೆ. ವಂದೇ ಮಾತರಂನ ಜಪ ನಮ್ಮೆದೆಯಲ್ಲಿ ನಿರಂತರವಾಗಿರಲಿ.
ವಂದೇ ಮಾತರಂ…
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.