ಪ್ರಜಾಪ್ರಭುತ್ವದ ನೆಲೆಗಟ್ಟಿನ ದೇಶ ಭಾರತ. ದೇಶದ ಭವಿಷ್ಯವನ್ನು ಸೂಕ್ತ ಕೈಗಳಿಗೆ ಒಪ್ಪಿಸುವ ಪ್ರಕ್ರಿಯೆಯಾದ ಲೋಕಸಭಾ ಚುನಾವಣೆಗೆ ಮತದಾರ ಸಜ್ಜಾಗುತ್ತಲಿದ್ದಾರೆ. ಇನ್ನೆರಡು ತಿಂಗಳಲ್ಲಿ ರಾಜಕೀಯ ಪಕ್ಷಗಳಿಗೆ ಜನರ ನಾಡಿ ಮಿಡಿತ ತಿಳಿಯಲಿದೆ. ಅಲ್ಲಿಯ ತನಕ ರಾಜಕೀಯ ಪ್ರಹಸನಗಳು, ಕೆಸರೆರಚಾಟ ತೀವ್ರಗೊಳ್ಳುತ್ತಲಿದೆ. ಸೋಷಿಯಲ್ ಮೀಡಿಯಾದ ಈಗಿನ ಕಾಲದಲ್ಲಿ ವಿಷಯದ ಚರ್ಚೆ, ಅನಾವರಣ, ವೈಭವೀಕರಣವು ಸ್ವಲ್ಪ ಹೆಚ್ಚಾಗಿಯೇ ಜನರ ಮುಂದೆ ಬಂದು ನಿಲ್ಲುವುದರಿಂದ ಮತದಾರ ಪ್ರಭುವಿನ ಅಭಿಪ್ರಾಯ ನಿಖರವಾಗಿ ಅಂದಾಜಿಸಲಾರೆವು. ಜನರ ಆಕ್ರೋಶ, ಅಸಡ್ಡೆ, ಜಿಗುಪ್ಸೆಗಳು ಮತದಾನದಿಂದ ಅವರು ವಿಮುಖರಾಗಿ ನಿಲ್ಲುವಂತೆ ಮಾಡಿದೆ. ಆ ನಿಟ್ಟಿನಲ್ಲಿ ಒಂದು ನೋಟ ‘ನೋಟಾ’ (None of the above) ಸ್ಪರ್ಧಿಸಿದ ಅಭ್ಯರ್ಥಿಗಳಾರೂ ನನ್ನ ಮತಕ್ಕೆ ಅರ್ಹರಲ್ಲಾ)ದೆಡೆಗೆ. ಎಷ್ಟರ ಮಟ್ಟಿಗೆ ಅಸಂಗತವೆನ್ನುವ ಕುರಿತು ಈ ಲೇಖನ.
2009 ರಲ್ಲಿ ಕೇಂದ್ರ ಚುನಾವಣಾ ಆಯೋಗವು ಸುಪ್ರೀಂಗೆ ನೋಟಾ ಕುರಿತು ಅರ್ಜಿ ಸಲ್ಲಿಸಿತ್ತು. ವಿಚಾರಣೆಯ ನಂತರ 2013 ಸೆಪ್ಟೆಂಬರ್ 27ರಂದು ಅದು ಜಾರಿಗೆ ಬಂದಿತು. ಸುಪ್ರಿಂ ಅನ್ವಯ ‘ನೋಟಾ’ ಮತದಾರರ ಸ್ವಾತಂತ್ರ್ಯತೆಯನ್ನು ಪ್ರತಿಪಾದಿಸುತ್ತದೆ ಹಾಗೂ ಗೌರವಿಸುತ್ತದೆ. ಮತ್ತು ನೋಟಾ ನಂತರ ಮರು ಚುನಾವಣೆ ಪ್ರಕ್ರಿಯೆ ಇಲ್ಲಾ ಎಂದು ಸ್ವಷ್ಟವಾಗಿ ತಿಳಿಸಿದೆ.
ನೋಟಾದಲ್ಲಿ ಮತದಾರ ತನ್ನ ಆಕ್ರೋಶವನ್ನು ನಿರಾಕರಣೆ ಮೂಲಕ ತೋರಿಸಬಹುದು. ನೋಟಾದ ಅರ್ಥವೇ ಚುನಾವಣೆಗೆ ಸ್ಫರ್ಧಿಸಿದ ಅಭ್ಯರ್ಥಿಗಳಿಗೆ ನನ್ನ ಮತವಿಲ್ಲ ಎಂದು. ಅದಕ್ಕಾಗಿ ವಿದ್ಯುನ್ಮಾನ ಯಂತ್ರದಲ್ಲಿ ಕೊನೆಗೆ ನೋಟಾ ಬಟನ್ ಇರುವುದು. ಈ ನೋಟಾದ ತೊಂದರೆಯೇನೆಂದು ನೀವು ‘ಪಂಚರಾಜ್ಯಗಳ’ ಚುನಾವಣಾ ಫಲಿತಾಂಶಗಳಲ್ಲಿ ಕಂಡಿರಬಹುದು. ಮತದಾನವಾದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಬಂದ ಮತಕ್ಕಿಂತ ಮತದಾರ ನೋಟಾವನ್ನೇ ಹೆಚ್ಚು ಚಲಾಯಿಸಿದ್ದ. ನೋಟಾದ ಸಂಖ್ಯೆಯ ಹತ್ತಿರವಿರೋ ಅಭ್ಯರ್ಥಿಗಳಿದ್ದರೋ ಅವರನ್ನೇ ವಿಜಯಿಯೆಂದು ಘೋಷಿಸಲಾಯಿತು. ಘಂಟಾಘೋಷವಾಗಿ ಅಭ್ಯರ್ಥಿಗಳೇ ಬೇಡವೆಂದು ಧಿಕ್ಕರಿಸಿದ ಬಹುಮತ ಯಾವುದೇ ಪ್ರಯೋಜನಕ್ಕೂ ಬರದಿರುವುದು ಹಲವರ ಅಸಮಾಧಾನಕ್ಕೂ ಕಾರಣವಾಗಿದ್ದು ಮತಗಟ್ಟೆಗೆ ಬಂದು ಮತ ಚಲಾಯಿಸಿದರೂ ಒಂದೇ ಬಿಟ್ಟರೂ ಒಂದೇ ಎಂಬ ಮನೋಭಾವ ಬಂದಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತೀ ಮಾರಕ. ಮತದಾರರ ನೋಟಾ ಪ್ರಕ್ರಿಯೆಯ ಇನ್ನೊಂದು ಮುಖವೆಂದರೆ ಗೆಲ್ಲದ ಅಭ್ಯರ್ಥಿಯನ್ನೂ ಕೂಡಾ ಪರೋಕ್ಷವಾಗಿ ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು. ಮಧ್ಯ ಪ್ರದೇಶದಲ್ಲಿ ಮ್ಯಾಜಿಕ್ ನಂ. 116 ದಾಟಿದ ಪಕ್ಷಕ್ಕೆ ಗೆದ್ದ ಪಕ್ಷವೆಂದು ಘೋಷಣೆ ಮಾಡಲಾಯಿತು. ಅಲ್ಲಿ ಒಟ್ಟಾರೆ 5.4 ಮತಗಳ ಪೈಕಿ ನೋಟಾಕ್ಕೆ ಶೇ 1.4 ಪಾಲು ಸಿಕ್ಕಿತ್ತು. ಬಿ ಜೆಪಿ ಶೇ. 41 , ಕಾಂಗ್ರೆಸ್ ಶೇ. 40.9, ಬಿ.ಎಸ್ ಪಿ ಹಾಗೂ ಜಿ ಜಿ ಐ ಕ್ರಮವಾಗಿ ಶೇ. 5 ಹಾಗೂ 1.8 ಮತಗಳಿಸಿದ್ದು ಈ ಮ್ಯಾಜಿಕ್ ನಂ 116 ಸಂಖ್ಯೆಯು ಬಹುದೊಡ್ಡ ಫಲಿತಾಂಶ ಕೂಡ ಉಲ್ಟಾ ಪಲ್ಟಾ ಆಗಿ ಹೋಯಿತು. ರಾಜಸ್ಥಾನದಲ್ಲಿ 199 ಸ್ಥಾನಕ್ಕೆ ನಡೆದ ಚುನಾವಣೆಗೆ, ಅಧಿಕಾರ ಸ್ಥಾಪಿಸಲು 100 ಸ್ಥಾನಗಳು ಸಾಕು ಎಂದಿತ್ತು. ಇಲ್ಲಿ ನೋಟಾಕ್ಕೆ 1.3% ಮತಗಳು ಚಲಾಯಿಸಲ್ಪಟ್ಟಿದ್ದವು. ರಾಜಸ್ತಾನದ ಚುನಾವಣಾ ಫಲಿತಾಂಶ ಮ್ಯಾಜಿಕ್ ಸಂಖ್ಯೆಯ ಜೊತೆಗೂಡಿ ಬಹುಪಾಲು ಜನಾದೇಶ ಪಡೆದ ಪಕ್ಷದ ಅಭ್ಯರ್ಥಿ ಅಲ್ಲಿ ಮಣ್ಣು ಮುಕ್ಕಿದ್ದು, ಹೊಂದಾಣಿಕೆ ಮೂಲಕ ಮ್ಯಾಜಿಕ್ ನಂಬರ್ ಗಳಿಸಿ ವಿಜಯಗೊಂಡಿದ್ದು ಇತಿಹಾಸ.
ನೋಟಾವೊಂದು ಹಲ್ಲಿಲ್ಲದ ಹಾವಿನಂತೆ. ಜನರ ನಿರಾಕರಣೆ ಅರಿತು ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಮುತುವರ್ಜಿ ವಹಿಸಿ ಚಾರಿತ್ರ್ಯವಂತರನ್ನೇ ಆಯ್ಕೆ ಮಾಡುತ್ತದೆ ಎನ್ನುವುದು ಕೇವಲ ಭ್ರಮೆ. ಇಲ್ಲಿ ಮತದಾರ ಅಭ್ಯರ್ಥಿಗಳ ವಿಷಯವಾಗಿ ಅಸಂತೃಪ್ತಿ ಹೊಂದಿದ್ದು ಆತನನ್ನು ಧಿಕ್ಕರಿಸುವ ಬದಲಾಗಿ ಸಿದ್ಧಾಂತಗಳು ಸರಿಯಾಗಿದ್ದು ಆ ನಿಟ್ಟಿನಲ್ಲಿ ತಮ್ಮ ನಿಲುವನ್ನು ಪ್ರತಿಪಾದಿಸುತ್ತಿರುವ ಪಕ್ಷಗಳ ಆಯ್ಕೆ ಮಾಡಿದಲ್ಲಿ ಮೇಲಿನ ಒತ್ತಡ, ಪರಿಸರದಿಂದಾದರೂ ಅಭ್ಯರ್ಥಿಗಳು ಬದಲಾಗಬಹುದು. ಕೇವಲ ಅಭ್ಯರ್ಥಿ ಒಳ್ಳಯವನಿದ್ದು ಪಕ್ಷದ ಸಿದ್ಧಾಂತಗಳೆಲ್ಲವೂ ವಿದ್ರೋಹಪೂರ್ಣವಾಗಿದ್ದರೆ ಅರ್ಹ ವ್ಯಕ್ತಿಗೆ ಮೇಲಿನಿಂದ ಸಿಗಬೇಕಾದ ಸಹಕಾರ, ಮಾನ್ಯತೆ ಸಿಗದೆ ಹೋಗಬಹುದು.
ಪ್ರಮುಖವಾಗಿ ಮತದಾನ ಯಾವುದೇ ಜಾತಿ, ಧರ್ಮ, ಪ್ರಲೋಭನೆಗೆ ಒಳಗಾಗದೆ ದೇಶದ ಹಿತಕಾಯುವ ಸರಿಯಾದ ಪಕ್ಷಕ್ಕೆ ಬಲ ತುಂಬ ಬೇಕಿದೆ. ಆ ಮೂಲಕ ಮತದಾನದೆಡೆಗಿನ ಅನಾಸಕ್ತಿ ತೊಡೆದು ಸಮಾಜದ ಆಗುಹೋಗುಗಳ ಮೌಲ್ಯಾಂಕನ ಮಾಡಿ ಅಮೂಲ್ಯ ಮತ ಚಲಾಯಿಸಬೇಕಿದೆ. ಒಂದೊಂದು ಮತವು ದೇಶಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
ನೋಟಾವನ್ನೂ ಕೂಡ ಬಳಸಿ ಅನರ್ಹ ವ್ಯಕ್ತಿಗಳು ಆರಿಸಿಬರುವುದನ್ನು ತಡೆದು ಇನ್ನೊಬ್ಬ ಮತದಾರರ ಅಭಿಪ್ರಾಯಕ್ಕೂ ಪರಸ್ಪರ ಗೌರವ ಕೊಡಬೇಕಿದೆ. ತಿಳಿದ ವಿದ್ಯಾವಂತರೆ ನೋಟಾದ ಸಾಧಕ ಬಾಧಕವರಿಯದೇ ಕೇವಲ ನಮ್ಮ ನಿರಾಕರಣೆಯ ಸೂಚ್ಯವದು ಎಂದು ಬಳಸಿದರೆ, ಪ್ರಯೋಜನವಿಲ್ಲ. ಈ ದೇಶ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವಿರುವ ತಾಣ. ಜನರು ಪ್ರತಿನಿಧಿಗಳಿಗೆ ಅಧಿಕಾರ ಕೊಟ್ಟು ಪ್ರಜೆಗಳಿಗೋಸ್ಕರ ಅವರಿರುವುದು ಎಂದು ನೆನಪಿಸಬೇಕಿದೆ. ವ್ಯವಸ್ಥೆಯ ಬದಲಾವಣೆಗೆ ನಮ್ಮ ಉದಾಸೀನತೆಯೆ ಮದ್ದಲ್ಲಾ. ಜನ ಮನಸ್ಸು ಮಾಡಿದರೆ ಯಾವಾಗ ಬೇಕಾದರೂ ಮಂತ್ರಿ ಮಹೋದಯರನ್ನು ಬದಲಾಯಿಸಬಲ್ಲರು. ವ್ಯಕ್ತಿ, ಕುಟುಂಬ, ಸಮುದಾಯ ಕೇಂದ್ರೀಕೃತ ರಾಜಕಾರಣವನ್ನು ತೊಲಗಿಸಿ ಮುಂದಾಲೋಚನೆಯ, ತರ್ಕಬದ್ಧ ಯೋಜನೆಗಳೊಂದಿಗೆ ನಮ್ಮೆದುರಿಗೆ ಬರುವ ಪಕ್ಷ ಸಿದ್ಧಾಂತಗಳಿಗೆ ಆದ್ಯತೆ ನೀಡೋಣ. ಜನರ ಅಭಿಪ್ರಾಯಗಳಿಗೆ ಮನ್ನಣೆ ಸಿಗುವ ಸರ್ಕಾರ ಬಂದರೆ ಹಲವಾರು ಯೋಜನೆ, ಕಾರ್ಯಗಳ ಅನುಷ್ಟಾನವಾದರೂ ಆದೀತು. ಮತದಾನ ಒಂದು ಕರ್ತವ್ಯ ಅದನ್ನು ಮಾರಿಕೊಳ್ಳದೇ, ವ್ಯರ್ಥ ಮಾಡದೆ ಬಳಸೋಣ. ನಿರಾಕರಣೆಯೇ ಪರಿಹಾರವಲ್ಲ. ಅದರ ದುರುಪಯೋಗದ ಸಾಧ್ಯಾಸಾಧ್ಯತೆಗಳನ್ನು ಮನಗಂಡು ಇತರರಿಗೂ ಮನಗಾಣಿಸೋಣ. ನಮ್ಮ ದೇಶದ ಭವಿಷ್ಯ ಸರಿಪಡಿಸೋ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯ ಕೂಡ ಮುಖ್ಯ. ವ್ಯವಸ್ಥೆಯನ್ನು ಸರಿಪಡಿಸಲು ನಮ್ಮ ಧ್ವನಿಯಾಗಿ ಹೊರಹೊಮ್ಮಲು ಪಕ್ಷದ ಆಯ್ಕೆಗೆ ಮತದಾನವೆಂಬುದನ್ನು ಮರೆಯದಿರೋಣ. ನೋಟಾದಲ್ಲಿ ತರಬೇಕಾದ ತುರ್ತು ಬದಲಾವಣೆಯನ್ನು ಗಮನಿಸೋಣ. ಅರ್ಹರಿಗೆ ಅಧಿಕಾರ ನೀಡೋಣ.
✍ ಶ್ರೀಮತಿ ಸುನಿತಾ ಗಂಗಾಧರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.