ಪ್ರಜಾ ಪ್ರತಿನಿಧಿಯ ಲಕ್ಷಣಗಳನ್ನು ಖ್ಯಾತ ಸಾಮಾಜಿಕ ಚಿಂತಕ ಡಿ.ವಿ ಗುಂಡಪ್ಪನವರು ಈ ರೀತಿ ಚಿತ್ರಿಸಿದ್ದಾರೆ. ಪ್ರಜೆಯ ಪ್ರತಿನಿಧಿ ಎನಿಸಿಕೊಳ್ಳಬೇಕು ಎಂಬುವವನಲ್ಲಿ ಇರಬೇಕಾದ ಯೋಗ್ಯತೆ ಐದಾರು ಗುಣಗಳ ಒಟ್ಟು ಮೊತ್ತ.
1. ಮೊದಲು ಅವನು ಸತ್ಯ ಪ್ರೀತಿಯೂ, ನ್ಯಾಯ ಪ್ರೀತಿಯೂ ಉಳ್ಳವನಾಗಿರಬೇಕು.
2. ಎರಡನೆಯದಾಗಿ ಅವನಿಗೆ ಸಾರ್ವಜನಿಕ ಪ್ರವೃತ್ತಿಯಿರಬೇಕು.
3. ಮೂರನೆಯದಾಗಿ ಅವನ ಜೀವಿಕೆಗಾಗಿ ಸ್ವಂತ ಕಸುಬೋ, ಆಸ್ತಿಯೋ ಇರಬೇಕು. ರಾಜಕೀಯವೇ ಜೀವನೋಪಾಯ ವಾಗಬಾರದು.
4. ನಾಲ್ಕನೆಯದಾಗಿ, ಅವನಲ್ಲಿ ಗ್ರಂಥ ವ್ಯಾಸಂಗದ ಅಭ್ಯಾಸವೂ, ಪ್ರಶ್ನೆಗಳನ್ನು ವಿಮರ್ಶೆ ಮಾಡುವ ಅಭ್ಯಾಸವೂ ಇರಬೇಕು.
5. ಐದನೆಯದಾಗಿ, ಅವನಿಗೆ ಕೊಂಚಮಟ್ಟಿಗಾದರೂ ಲೋಕಾನುಭವವಿರಬೇಕು. ಅದಿಲ್ಲದವನ ಬುದ್ದಿ ಆಕಾಶದಲ್ಲಿ ತೇಲಾಡುತ್ತಿರುತ್ತದೆ.
6. ಆರನೆಯದಾಗಿ ಅವನು ಮಾರ್ಯಾದೆಗಳ ಮೇಲೆ ದೃಷ್ಟಿ ಯುಳ್ಳವನಾಗಿರಬೇಕು. ಸಂಭಾವಿತನಾಗಿರಬೇಕು. ಹೀಗೆ ಲೋಕ ಪರಿಜ್ಞಾನ, ಯುಕ್ತಾಯುಕ್ತ ವಿವೇಚನೆ, ಪ್ರಾಮಾಣಿಕತೆ, ನ್ಯಾಯನಿಷ್ಠೆ, ನಿಸ್ಪೃಹತೆ, ನಿರ್ಭಯ ಮತ್ತು ಸುಸಂಸ್ಕೃತವಾದ ನಡವಳಿಕೆ- ಇವು ಯೋಗ್ಯವಾದ ಸಾರ್ವಜನಿಕ ಲಕ್ಷಣಗಳು.
ಡಿ.ವಿ ಗುಂಡಪ್ಪನವರ ಈ ಮೇಲಿನ ಮಾತುಗಳು ಸಾರ್ವಕಾಲಿಕ, ಸಾರ್ವದೇಶಿಕ.
ಇನ್ನು ಮೂರು ತಿಂಗಳೊಳಗೆ ಒಂದು ಮಹಾ ಚುನಾವಣೆ ಬರಲಿದೆ. ಮೊನ್ನೆ ತಾನೇ 16 ನೇ ಲೋಕಸಭೆಯ ಕೊನೇ ಅಧಿವೇಶನ ಮುಕ್ತಾಯಗೊಂಡಿದೆ. 17ನೇ ಲೋಕಸಭೆಗೆ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹೊತ್ತು ಇದೀಗ ಬಂದಿದೆ. ಕರ್ನಾಟಕದಲ್ಲಿ ಇರುವ ೨೮ ಸ್ಥಾನಗಳಿಗೆ ನೂರಾರು ಜನರು ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್, ಜನತಾದಳ, ಬಿಜೆಪಿಯಿಂದ ಕೆಲವರಾದರೆ ಮತ್ತನೇಕರು ಚಿಲ್ಲರೆ ಪಕ್ಷಗಳಿಂದ, ಸ್ವತಂತ್ರ ಅಭ್ಯರ್ಥಿಗಳಾಗಿ. ಮತದಾನಿಗೆ ಯಾರನ್ನು ಆರಿಸಬೇಕೆಂಬುದೇ ಗೊಂದಲ. ಈ ಮಧ್ಯೆ ಹಣ, ಹೆಂಡ, ವಸ್ತ್ರ ಮುಂತಾದ ಆಸೆ- ಆಮಿಷಗಳು ಬೇರೆ. ಇಂಥ ಸಮಯದಲ್ಲೇ ಪೂಜ್ಯ ಡಿವಿಜಿಯವರ ಮಾತುಗಳು ನಮಗೆ ನೆನಪಿಗೆ ಬರಬೇಕು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 71 ವರ್ಷ 8 ತಿಂಗಳು ಉರುಳಿವೆ. ಹೆಚ್ಚು ಕಡಿಮೆ ಇದೇ ಕಾಲಾವಧಿಯಲ್ಲಿ ಸ್ವಾತಂತ್ರ್ಯಗಳಿಸಿದ ಇಸ್ರೇಲ್, ಜಪಾನ್ ದೇಶಗಳ ಅಭಿವೃದ್ಧಿಯ ಕಡೆಗೊಮ್ಮೆ ನೋಡಿ. ಅಲ್ಲಿ ಸಾಮಾನ್ಯ ಪ್ರಜೆ ಅಂದರೆ -ಆಮ್ ಆದ್ಮಿ- ನೆಮ್ಮದಿಯ ಬದುಕನ್ನು ಬದುಕುತ್ತಿದ್ದಾನೆ. (ನಮ್ಮಲ್ಲಿ ಆಂ ಆದ್ಮಿ ಪಕ್ಷದವರು ಮಾತ್ರ) ನಾವು ಬಡತನ ನಿವಾರಣೆಯ ಕೂಗನ್ನು ಇಂದಿರಾ ಕಾಲದಿಂದಲೂ ಕೇಳುತ್ತಿದ್ದೇವೆ. ಕೂಗಿದವರ ಗರೀಬೀ ಹಠಾವೋ ಆಯಿತೇ ವಿನಃ ಕೂಗು ಕೇಳಿಸಿಕೊಂಡವರ ಗರೀಬೀ ಹೋಗಲೇ ಇಲ್ಲ, ಅದಿನ್ನೂ ಜಾಸ್ತಿ ಆಗಿ ಆತ್ಮಹತ್ಯೆಯ ಹಂತ ತಲುಪಿದೆ. ಇದಕ್ಕೆ ಕಾರಣ ನಾವು ಆರಿಸಿದ ಚಾರಿತ್ರ್ಯಹೀನರು.
ಇಂದಿನ ಚುನಾವಣೆ ದುಡ್ಡಿದ್ದವನ ಕೇಂದ್ರವಾಗಿದೆ. ದುಡ್ಡಿದ್ದವನೇ ದೊಡ್ಡಪ್ಪ. ಇನ್ನು ರಾಜಕೀಯ ಪಕ್ಷಗಳಂತೂ ಅಂಥವರಿಗೆ ಮಣೆ ಹಾಕುತ್ತವೆ. ಕಳೆದ ಅನೇಕ ಲೋಕಸಭೆಯ ಸಂಸದರು ಜೈಲಿಗೆ ಹೋಗಿರುವುದನ್ನು ಕೇಳಿದ್ದೇವೆ. ಸ್ಪರ್ಧಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸುವ ಅವರ ಜಾತಕ ಓದಿದರೆ ಅಸಹ್ಯವಾಗುತ್ತದೆ. ಓರ್ವ ಶಾಸಕನ ಹಸುಗೂಸು ಮೊಮ್ಮಗನ ಆಸ್ತಿ ಅವರಪ್ಪ, ಅಮ್ಮ, ತಾತ, ಅಜ್ಜಿಯರ ಒಟ್ಟು ಆಸ್ತಿಗಿಂತ ಅಧಿಕ. ಅವರ ಮನೆಯಲ್ಲಿ ಕುಬೇರನೇ ಭಂಡಾರ ಸಹಿತ ಹುಟ್ಟಿರಬೇಕು! ಇಂಥ ಪ್ರನಿನಿಧಿಗಳು ಜನಸೇವಕರಾಗುವರೇ? ಒಂದು ಕ್ಷಣ ಯೋಚಿಸಿ.
ಪ್ರಜಾಪ್ರಭುತ್ವದಲ್ಲಿ ಬಹುಮತದ ಪಕ್ಷ ಅಧಿಕಾರಕ್ಕೆ ಬರುತ್ತದೆ. ಬಿಡಿ ಪ್ರತಿನಿಧಿಗಳು ಸಜ್ಜನರಾದರೂ ಅವರ ಕೂಗಿಗೆ ಬೆಲೆ ಇರುವುದಿಲ್ಲ. ಆದ್ದರಿಂದ ನಾವು ಪಕ್ಷಗಳನ್ನು ಅದರಲ್ಲೂ ರಾಷ್ಟ್ರೀಯ ಪಕ್ಷಗಳಿಗೆ ಮತನೀಡಬೇಕು. ಸ್ಥಾನೀಯ ಪಕ್ಷಗಳು ರಾಷ್ಟ್ರೀಯ ಚಿಂತನೆ ಮಾಡಲಾರವು. ಹಲವು ಸ್ಥಾನೀಯ ಪಕ್ಷಗಳು ಒಗ್ಗೂಡಿದರೂ ಅದು ಕೂಪ ಮಂಡೂಕಗಳಾಗೇ ಯೋಚಿಸುತ್ತವೆ. ಪರಸ್ಪರರಲ್ಲಿ ಅಪನಂಬಿಕೆ, ಅಧಿಕಾರದ ಹಂಚಿಕೆಯಲ್ಲಿ ಅಪಸ್ವರ ಸ್ವಾರ್ಥಸಾಧನೆಗೆ ತೀವ್ರ ಗಮನ. ಹೀಗೆ ರಾಷ್ಟ್ರಹಿತ ಸಾಧನೆಯಾಗುವುದು ತೀರ ಕಷ್ಟದಾಯಕ. ನಮ್ಮ ಆಯ್ಕೆಗೆ ಇನ್ನುಳಿದುದು ಎರಡು ರಾಷ್ಟ್ರೀಯ ಪಕ್ಷಗಳು. ಕಾಂಗ್ರೆಸ್ ಹಾಗೂ ಬಿ. ಜೆ. ಪಿ. ಈಗಿರುವ ಪ್ರಶ್ನೆ ಯಾರು ಹಿತರವರು ನಮಗೆ ಈ ಇಬ್ಬರೊಳಗೆ? ಒಬ್ಬರಂತೂ ಈ ದೇಶವನ್ನು 50 ವರ್ಷಗಳಿಗೂ ಮೀರಿ ಆಳಿದವರು. ಮುತ್ತಾತ, ಅಜ್ಜಿ, ಅಪ್ಪ, ಅಮ್ಮ ಈಗ ಕೊನೆಯ ಕುಡಿಯ ಕಾಲ. ಅಜ್ಜಿಯ ಗರೀಬಿ ಹಠಾವೋ ಕೂಗನ್ನು ಮೊಮ್ಮಗ, ಮೊಮ್ಮಗಳು ಮುಂದುವರೆಸುತ್ತಿದ್ದಾರೆ. ಅವರದ್ದೆಲ್ಲಾ ಗರೀಬೀ ಹಠಾವ್ ಆಗಿದೆ ಎಂಬುದು ಎಲ್ಲರಿಗೂ ಅರ್ಥವಾಗಿದೆ!
ಅವರ 50-55 ವರ್ಷಗಳಲ್ಲಿ ಅದೆಷ್ಟು ಹಗರಣಗಳು? ಮುಂದ್ರಾ ಬ್ಯಾಂಕ್ ಹಗರಣ, ಬೋಫೋರ್ಸ್ ಗನ್ ಹಗರಣ, 2 ಜಿ, 3ಜಿ ಇನ್ನೆಷ್ಟೋ ಜಿ ಗಳು, ಕಲ್ಲಿದ್ದಿಲಿನಿಂದ ಮಸಿಬಳಿದುಕೊಂಡ ಹಗರಣ. ಒಟ್ಟಾರೆ ಹಗರಣಗಳ ಸರಮಾಲೆ!
ಇನ್ನುಳಿದೊಂದು ರಾಷ್ಟ್ರೀಯ ಪಕ್ಷ ಆಳಿದ್ದೇ ಕಡಿಮೆ ಸಮಯ. ಒಂದಾದರೂ ಹಗರಣ ಇಲ್ಲ. ನಾನು ಭಾರತೀಯ ಎಂದು ಎದೆ ಎತ್ತಿ ಹೆಮ್ಮೆಯಿಂದ ನಮ್ಮ ಎನ್ ಆರ್ ಐ ಅನಿವಾಸೀ ಭಾರತೀಯರೂ ಹೇಳಿಕೊಳ್ಳುವಷ್ಟು ಆಡಳಿತದ ಅದರ ನಾಯಕತ್ವದ ಸಾಧನೆ.
ಇನ್ನು ಪ್ರಧಾನಮಂತ್ರಿ-ದೇಶವನ್ನು ಮುನ್ನಡೆಸಬೇಕಾದ ನಾಯಕರ ಆಕಾಂಕ್ಷೆಗಳನ್ನು ಗಮನಿಸಿ.
ಒಬ್ಬಾತ ಬಡತನವನ್ನೇ ಉಂಡು ಹಾಸಿ ಹೊದ್ದವನು. ಮತ್ತೊಬ್ಬ Born with a silver spoon! ಒಬ್ಬನಿಗೆ Nation First. ಮತ್ತೊಬ್ಬನಿಗೆ Family First. ಒಬ್ಬ ದೇಶದೋನ್ನತಿಯ ಕನಸುಗಾರ. ಮತ್ತೊಬ್ಬ ಹಗಲು ಕನಸು ಕಾಣುವವನು. ಒಬ್ಬನ ನೆಂಟರಿಷ್ಟರು ಇಂದಿಗೂ ಕಡುಬಡವರು. ಮತ್ತೊಬ್ಬನ ಸಂಬಂಧಿಕ ಕೋರ್ಟಿಗೆ ಅಲೆದಾಡುತ್ತಿರುವ ಕರೋಡ್ಪತಿ. ಒಬ್ಬನ ಸುತ್ತ ಜನಸಾಗರ, ಮತ್ತೊಬ್ಬನ ಸುತ್ತ ಪಂಚರಂಗಿಗಳು. ಒಬ್ಬ ಬಾಯಿಬಿಟ್ಟರೆ ಪ್ರೇರಣಾಸ್ರೋತ. ಮತ್ತೊಬ್ಬ ಬಾಯಿ ಬಿಟ್ಟರೆ ಬಣ್ಣಗೇಡು.
ಈಗ ನೀವೇ ಯೋಚಿಸಿ ಯಾರು ನಿಮಗೆ, ನಿಮ್ಮ ದೇಶಕ್ಕೆ ಹಿತ. ಯೋಚಿಸುತ್ತಾ ಕೂರುವ ಕಾಲ ಇದಲ್ಲ. ವಿವೇಕಾನಂದರ ಏಳಿ, ಎದ್ದೇಳಿ ಎಂಬ ಕಾಲನ ಕರೆಗೆ ಓಗೊಟ್ಟು ಕಣಕ್ಕಿಳಿದು ಕೆಲಸ ಮಾಡುವ ಕಾಲ. ನಾವಿತ್ತ ಓಟು ಸಾರ್ಥಕವಾಗಬೇಕಾದರೆ ನಮ್ಮಂತೆ ಯೋಚಿಸಿ, ನಾವು ಮತ ನೀಡುವವರಿಗೇ ಮತ ನೀಡುವಂತೆ, ಜನರನ್ನು ಪ್ರೇರೇಪಿಸಬೇಕು. ಈ ಮಾತು ಒಬ್ಬರಿಂದೊಬ್ಬರಿಗೆ ಹರಡಿ ನಾವು ಮತನೀಡಿದವರೇ ಗದ್ದುಗೆ ಏರಬೇಕು. ಆಗ ಮಾತ್ರ ನಮ್ಮ ಮತ ಸಾರ್ಥಕ, ನಮ್ಮ ಹಿತ ಅಬಾಧಿತ.
✍ ಹೆಚ್. ನಾಗಭೂಷಣ್ ರಾವ್
ಪೋಷಕರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.