ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಪಾಕಿಸ್ಥಾನ ಮೂಲದ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆ ಅಮಾನವೀಯ ದಾಳಿಯನ್ನು ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಭಾರತ ರಾಜತಾಂತ್ರಿಕ ಶಕ್ತಿಯನ್ನು ಬಳಸಿಕೊಂಡು ಭಯೋತ್ಪಾದಕ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಲೆಗುಂಪು ಮಾಡುವತ್ತ ಚಿತ್ತ ನೆಟ್ಟಿದೆ. ಭಾರತದ ಈ ರಾಜತಾಂತ್ರಿಕ ಪ್ರಯತ್ನಗಳು ಅದ್ಭುತವನ್ನೇ ಸೃಷ್ಟಿ ಮಾಡಿದೆ ಎಂಬುದಕ್ಕೆ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮೂದ್ ಖುರೇಶಿ ನೀಡಿರುವ ಹೇಳಿಕೆ ಸಾಕ್ಷಿಯಾಗಿದೆ. ‘ಭಾರತ ರಾಜತಾಂತ್ರಿಕ ಲಾಬಿಯ ಮೂಲಕ ಪಾಕಿಸ್ಥಾನವನ್ನು ಪಿನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF)ನಲ್ಲಿ ‘ಗ್ರೇ’ ಪಟ್ಟಿಗೆ ಸೇರಿಸಬಹುದು’ ಎಂಬ ಆತಂಕವನ್ನು ಖುರೇಶಿ ವ್ಯಕ್ತಪಡಿಸಿದ್ದಾರೆ. FATFನ ಗ್ರೇ ಲಿಸ್ಟ್ನಲ್ಲಿ ಪಾಕಿಸ್ಥಾನ ಮುಂದುವರೆದರೆ ಅದು ಯುಎಸ್ಡಿ 10 ಬಿಲಿಯನ್ ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನೂ ಹೊರಹಾಕಿದ್ದಾರೆ. FETF ಪಾಕಿಸ್ಥಾನವನ್ನು ಪ್ರಸ್ತುತ ಗ್ರೇ ಲಿಸ್ಟ್ನಲ್ಲಿಟ್ಟಿದೆ. ಹಣಕಾಸು ವಂಚನೆ ಮತ್ತು ಭಯೋತ್ಪಾದನಾ ಹಣಕಾಸು ನೆರವು ನಿಗ್ರಹಿಸುವ ನಿಟ್ಟಿನಲ್ಲಿ ದುರ್ಬಲವಾದ ಕಾನೂನುಗಳನ್ನು ಹೊಂದಿರುವ ರಾಷ್ಟ್ರಗಳನ್ನು ಗ್ರೇ ಲಿಸ್ಟ್ನಲ್ಲಿ ಇಡಲಾಗುತ್ತದೆ.
‘ಭಾರತ ರಾಜತಾಂತ್ರಿಕ ಪ್ರಯತ್ನವನ್ನು ಪರೋಕ್ಷವಾಗಿ ನಡೆಸುತ್ತಿರುವುದರಿಂದಾಗಿ, ಒಂದು ವೇಳೆ FATFನಲ್ಲಿ ಪಾಕಿಸ್ಥಾನವನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಆಗುವ ನಷ್ಟದ ಬಗ್ಗೆ ವಿದೇಶಾಂಗ ಕಾರ್ಯಾಲಯ ಲೆಕ್ಕಾಚಾರ ಹಾಕುತ್ತಿದೆ’ ಎಂದು ಖುರೇಶಿ ತಮ್ಮ ಗವರ್ನರ್ಸ್ ಹೌಸ್ನಲ್ಲಿ ಹೇಳುತ್ತಿರುವುದನ್ನು ವರದಿ ಮಾಡಲಾಗಿದೆ. ಇತ್ತೀಚಿಗೆ, FETFನ ತಜ್ಞರು ಪಾಕಿಸ್ಥಾನಕ್ಕೆ ಭೇಟಿಕೊಟ್ಟು, ಆ ದೇಶವನ್ನು ಗ್ರೇ ಲಿಸ್ಟ್ನಿಂದ ಹೊರಗಿಡುವ ನಿಟ್ಟಿನಲ್ಲಿ ಏನಾದರೂ ಪ್ರಗತಿ ಸಾಧಿಸಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಿತ್ತು. ಆದರೆ ತಜ್ಞರು ಆ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದನಾ ಸಂಘಟನೆಗಳು ಮತ್ತು ಅವುಗಳಿಗೆ ಹರಿಯುತ್ತಿರುವ ಹಣಕಾಸಿನ ಬಗ್ಗೆಯೇ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದು ಪಾಕಿಸ್ಥಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ನಿಷೇಧಿತ ಉಗ್ರ ಸಂಘಟನೆಗಳ ಮತ್ತು ಸರ್ಕಾರೇತರ ಸಂಘಟನೆಗಳ ಚಲನವಲನಗಳನ್ನು ಜಿಲ್ಲಾ ಮಟ್ಟದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ ಅಥವಾ ತಳಮಟ್ಟದಲ್ಲಿ ನಿರ್ಮೂಲನೆಗೊಳಿಸಲು ಆ ದೇಶ ಯಾವುದೇ ಕಠಿಣ ಕ್ರಮವನ್ನೂ ಜರುಗಿಸಿಲ್ಲ ಎಂಬುದಾಗಿ ತಜ್ಞರ ತಂಡ ಹೇಳಿಕೊಂಡಿದೆ. ಇದರಿಂದ, FATF ಗ್ರೇ ಲಿಸ್ಟ್ನಿಂದ ಆ ದೇಶ ಹೊರಕ್ಕೆ ಬರುವುದು ಸದ್ಯದ ಮಟ್ಟಕ್ಕೆ ಸಾಧ್ಯವೇ ಇಲ್ಲ ಎಂದೆನಿಸುತ್ತದೆ.
ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಲು FATF ಪ್ಲೇನರಿ ಮೀಟಿಂಗ್ನಲ್ಲಿ ಪರೋಕ್ಷವಾಗಿ ಪ್ರಯತ್ನ ನಡೆಸಲು ಭಾರತ ನಿರ್ಧರಿಸಿದೆ ಎಂದು ವರದಿಯಾಗಿದೆ. ಒಂದು ವೇಳೆ FATFನಲ್ಲಿ ಕಪ್ಪು ಪಟ್ಟಿಗೆ ಸೇರಿದರೆ ಪಾಕಿಸ್ಥಾನ ದೀರ್ಘಾವಧಿಯವರೆಗೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಲ ಪಡೆಯುವ ಸಲುವಾಗಿ ಬಾಂಡ್ಸ್ಗಳನ್ನು ಹೊರಡಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ. ಒಂದು ವೇಳೆ ಗ್ರೇ ಲಿಸ್ಟ್ಗೆ ಸೇರಿದರೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನಿಂದ ಬೇಲೌಟ್ ಪ್ಯಾಕೇಜ್ ಕೂಡ ಸಿಗುವುದಿಲ್ಲ ಎಂಬ ಭಯವೂ ಪಾಕಿಸ್ಥಾನವನ್ನು ಕಾಡುತ್ತಿದೆ. ಕೇವಲ ಎರಡು ತಿಂಗಳುಗಳ ವಿದೇಶಿ ಆಮದಿಗೆ ಹಣ ಒದಗಿಸಲು ಮಾತ್ರ ವಿದೇಶಿ ವಿನಿಮಯವನ್ನು ಹೊಂದಿರುವ ಕಾರಣ ಪಾಕಿಸ್ಥಾನವು ಐಎಂಎಫ್ನಿಂದ 12 ಬಿಲಿಯನ್ ಡಾಲರ್ ಸಾಲವನ್ನು ಕೇಳುತ್ತಿದೆ. ಒಂದು ವೇಳೆ ಅದು ಗ್ರೇ ಲಿಸ್ಟ್ಗೆ ಸೇರಿದರೆ, ಐಎಂಎಫ್, ಎಡಿಬಿಗಳು ಅದಕ್ಕೆ ಸಾಲ ನೀಡಲು ಮುಂದಾಗುವುದಿಲ್ಲ ಮತ್ತು ರೇಟಿಂಗ್ ಏಜೆನ್ಸಿಗಳು ಕೂಡ ರೇಟಿಂಗ್ಸ್ ಅನ್ನು ಡೌನ್ ಗ್ರೇಡ್ ಮಾಡಲಿದೆ. 2018ರಲ್ಲಿ ಪಾಕಿಸ್ಥಾನದಲ್ಲಿ 8,707 ಅನುಮಾನಾಸ್ಪದ ವಹಿವಾಟುಗಳು ನಡೆದಿವೆ ಎಂಬುದಾಗಿ ಜಾಗತಿಕ ಉಗ್ರ ಹಣಕಾಸು ವಾಚ್ಡಾಗ್ವೊಂದು ವರದಿ ಮಾಡಿದೆ. FATFಯು ಉಗ್ರ ಹಣಕಾಸು ವಿರುದ್ಧ ಕ್ರಮ ಕೈಗೊಳ್ಳಲು ಆ ದೇಶಕ್ಕೆ 27 ಅಂಶಗಳ ಟಾರ್ಗೆಟ್ ಒದಗಿಸಿದೆ. ಜಮಾತ್ ಉದ್ ದಾವಾ, ಪಲ್ಹ್ -ಇ-ಇನ್ಸಾನಿಯತ್ ಫೌಂಡೇಶನ್ ಅನ್ನು FATFನ ಮೀಟಿಂಗ್ ನಡೆಯುತ್ತಿದ್ದ ವೇಳೆ ಪಾಕಿಸ್ಥಾನ ನಿಷೇಧಿಸಿದೆ. FATF ಈಗ ಆ ದೇಶವನ್ನು ಕಪ್ಪುಪಟ್ಟಿಗೆ ಸೇರಿಸಲು ಮುಂದಾಗಿದೆ. 2018ರಲ್ಲಿ ಆ ದೇಶದಲ್ಲಿ 8,707 ಅನುಮಾನಾಸ್ಪದ ವಹಿವಾಟು ನಡೆದಿರುವ ಬಗ್ಗೆ ಫಿನಾನ್ಶಿಯಲ್ ಮಾನಿಟರಿಂಗ್ ಯುನಿಟ್ ವರದಿ ಮಾಡಿದೆ, 2017ರಲ್ಲಿ ಈ ಸಂಖ್ಯೆ 5,548 ಇತ್ತು. ಒಂದು ವರ್ಷದಲ್ಲಿ ಶೇ.57ರಷ್ಟು ಏರಿಕೆಯಾಗಿರುವುದನ್ನು ಇದು ಸೂಚಿಸಿದೆ. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲೇ 1,136 ಅನುಮಾನಾಸ್ಪದ ವಹಿವಾಟುಗಳು ನಡೆದ ಬಗ್ಗೆ ವರದಿಗಳಾಗಿವೆ.
ನೆರೆಯ ರಾಷ್ಟ್ರ ಅಂತಾರಾಷ್ಟ್ರೀಯ ಸಂಬಂಧ ಮತ್ತು ರಾಜತಾಂತ್ರಿಕ ವಿಷಯದಲ್ಲಿ ತನಗೆ ಹಿನ್ನಡೆಯಾಗುತ್ತಿರುವುದನ್ನು ಈಗಾಗಲೇ ಅರ್ಥ ಮಾಡಿಕೊಂಡಂತಿದೆ. ಪಾಕಿಸ್ಥಾನ ಹೇಗೆ ಸಕ್ರಿಯವಾಗಿ ಭಯೋತ್ಪಾದನೆಯನ್ನು ಪೋಷಣೆ ಮಾಡುತ್ತಿದೆ ಎಂಬುದನ್ನು ಜಗತ್ತಿಗೆ ತೋರಿಸುವಲ್ಲಿ ಭಾರತ ಯಶಸ್ವಿಯಾಗುತ್ತಿದೆ. FATFನಲ್ಲಿ ತಾವು ಗ್ರೇ ಲಿಸ್ಟ್ಗೆ ಒಳಗಾಗಬಹುದು ಎಂಬ ಆತಂಕವನ್ನು ಅಲ್ಲಿನ ವಿದೇಶಾಂಗ ಸಚಿವರು ವ್ಯಕ್ತಪಡಿಸಿದ್ದು, ಭಯೋತ್ಪಾದಕ ರಾಷ್ಟ್ರ ತನ್ನ ನೀಚ ಕೃತ್ಯಗಳಿಗೆ ತಕ್ಕುದಾದ ಶಿಕ್ಷೆಯನ್ನು ಅನುಭವಿಸಲು ಸಜ್ಜಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಭಾರತ ಪಾಕಿಸ್ಥಾನವನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಮೂಲೆಗುಂಪು ಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.