ಗುಪ್ತಚರ ಇಲಾಖೆಯು ಆಂತರಿಕ ಭದ್ರತೆಯನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದೆ. ಐಬಿ ಈಗ, ಅಂದರೆ ಆರಂಭವಾದ 130 ವರ್ಷಗಳ ತರುವಾಯ ತನ್ನ ಅಧಿಕಾರಿಗಳ ಕಾರ್ಯಕ್ಷಮತೆಯನ್ನು, ಪ್ರಯತ್ನಗಳನ್ನು ಸಾಧನೆಗಳನ್ನು ಪುರಸ್ಕರಿಸಲು ಮುಂದಾಗಿದೆ. ಸರ್ಕಾರಿ ಇಂಟೆಲಿಜೆನ್ಸ್ ವಿಂಗ್ನಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿದವರಿಗೆ ‘ಅಸಾಧಾರಣ ಅಸೂಚನಾ ಕುಶಲತಾ ಪದಕ’ವನ್ನು ನೀಡಿ ಗೌರವಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದಾಗಿ ಭಾರತವನ್ನು ಸುಭದ್ರವಾಗಿಟ್ಟುಕೊಳ್ಳಲು ಸದಾ ಹೋರಾಡುವ ಹೆಸರಿಲ್ಲದ, ಗುರುತಿಲ್ಲದ ಯೋಧರು ತಮ್ಮ ಶೌರ್ಯಕ್ಕೆ ತಕ್ಕ ಗೌರವವನ್ನು ಪಡೆಯುವಂತಾಗುತ್ತದೆ ಎಂಬುದೇ ಹೆಮ್ಮೆಯ ಸಂಗತಿಯಾಗಿದೆ.
ಮೂರು ಮಂದಿ ಐಪಿಎಸ್ ಅಧಿಕಾರಿಗಳು ಮತ್ತು 34 ಮಂದಿ ಇಂಟೆಲಿಜೆನ್ಸ್ ಅಧಿಕಾರಿಗಳು ಈ ಪ್ರಶಸ್ತಿಯನ್ನು ಸ್ವೀಕರಿಸುವ ಮೊದಲಿಗರಾಗಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತ ಮತ್ತು ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಇವರು ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಅಧಿಕಾರಿಗಳು ಟೆರರ್ ಫಂಡಿಂಗ್ ಮತ್ತು ಇತರ ಸಂಘನಾತ್ಮಕ ಚಟುವಟಿಕೆಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಗ್ರಹಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.
ಪ್ರಶಸ್ತಿಗೆ ಪಾತ್ರರಾದ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸುವಂತಿಲ್ಲ. ಅವರು ಮಾಡುತ್ತಿರುವುದು ಅತ್ಯಂತ ಗೌಪ್ಯವಾದ ಕಾರ್ಯವಾದ್ದರಿಂದ ಅವರ ಹೆಸರು ಮತ್ತು ಗುರುತುಗಳನ್ನು ಅತ್ಯಂತ ಗೌಪ್ಯವಾಗಿಯೇ ಇಡಲಾಗಿದೆ.
ಗುಪ್ತಚರ ಅಧಿಕಾರಿಗಳು ನೀಡುವ ಮಹತ್ತರವಾದ ಕೊಡುಗೆಯನ್ನು ಪುರಸ್ಕರಿಸುವ ಸಲುವಾಗಿ, 2012ರಲ್ಲಿ ಕರ್ತವ್ಯದ ವೇಳೆ ಅಸುನೀಗಿದ ಅಧಿಕಾರಿಗಳಿಗೆ ಸಮರ್ಪಿತಗೊಳಿಸಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿತ್ತು. ಗುಪ್ತಚರ ಇಲಾಖೆಯ ದಕ್ಷಿಣ ದೆಹಲಿಯಲ್ಲಿನ ಕಛೇರಿಯಲ್ಲಿ ಈ ಸ್ಮಾರಕ ಇದೆ. ಬಳಿಕ ಹಿರಿಯ ಅಧಿಕಾರಿಗಳ ಬೇಡಿಕೆಯ ಮೇರೆಗೆ, ದೇಶಕ್ಕೆ ಅಸಾಧಾರಣ ಸೇವೆಯನ್ನು ನೀಡುತ್ತಿರುವ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವ ಬಗ್ಗೆ ಪರಿಶೀಲನೆಯನ್ನು ನಡೆಸಲು ಕೇಂದ್ರ ಗೃಹ ಇಲಾಖೆ ಸಮಿತಿಯನ್ನು ರಚನೆ ಮಾಡಿತ್ತು.
‘ಅತ್ಯಂತ ಅಪಾಯಕಾರಿ ರೀತಿಯಲ್ಲಿ ತಮ್ಮ ಬದುಕನ್ನು ಪಣಕ್ಕಿಟ್ಟು ಗುಪ್ತಚರ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡುತ್ತಾರೆ. ಅವರನ್ನು ಪರಿಗಣಿಸಲ್ಪಡದೆ, ಅವರಿಗೆ ಗೌರವವನ್ನು ನೀಡದೇ, ಅಂತಹ ಕಠಿಣ ಸನ್ನಿವೇಶದ ಕೆಲಸಗಳನ್ನು ನಾವು ಉತ್ತೇಜಿಸಲು ಹೇಗೆ ಸಾಧ್ಯ?’ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
‘ವೃತ್ತಿಯ ಗುಣ ಸ್ವಭಾವದ ಹಿನ್ನಲೆಯಲ್ಲಿ ಅಧಿಕಾರಿಗಳನ್ನು ಹಿಂದೆಯೇ ಇರುವಂತೆ ನಿರ್ಬಂಧಿಸಲಾಗುತ್ತದೆ ಮತ್ತು ಅವರ ಗುಪ್ತಚರ ಕೊಡುಗೆಯನ್ನು ಸರ್ಕಾರಿ ನಿಯಮದ ಚಕ್ರವ್ಯೂಹದಡಿಯಲ್ಲಿ ಸಮಾಧಿ ಮಾಡಲಾಗುತ್ತದೆ, ಹೀಗಾದರೆ ಅಧಿಕಾರಿಗಳನ್ನು ಪ್ರೇರೇಪಿಸುವುದು ಹೇಗೆ? ಮುಖ್ಯವಾಗಿ, ಗುಪ್ತಚರ ಕಾರ್ಯಗಳು ಅನಾಮಧೇಯವಾಗಿರುವುದರಿಂದ ಮತ್ತು ಅನಾನುಕೂಲತೆಯಿಂದ ಕೂಡಿರುವುದರಿಂದ ಸಮರ್ಥ ಮತ್ತು ಬುದ್ಧಿವಂತ ಅಧಿಕಾರಿಗಳು ಈ ಕಾರ್ಯವನ್ನು ಮಾಡಲು ಇಚ್ಛೆಪಡುವುದಿಲ್ಲ. ಆದರೆ ಸಮುದಾಯದೊಳಗೇ ಇವರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಈ ಭಿನ್ನತೆ ತೊಲಗುತ್ತದೆ’ ಎಂದು ಹಲವಾರು ವರ್ಷಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಗುಪ್ತಚರ ಇಲಾಖೆಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ ಅವಿನಾಶ್ ಮೊಹನಾನಿ ಹೇಳುತ್ತಾರೆ.
‘ಅಸಾಧಾರಣ ಅಸೂಚನಾ ಕುಶಲತಾ ಪದಕ’ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೇ ನೀಡಲಾಗುತ್ತದೆ ಮತ್ತು ಒಬ್ಬ ಅಧಿಕಾರಿಗೆ ಜೀವಮಾನದಲ್ಲಿ ಒಂದು ಬಾರಿ ಮಾತ್ರ ಪ್ರಶಸ್ತಿ ದೊರಕಲಿದೆ. ಈ ಪ್ರಶಸ್ತಿ ಸ್ಥಾಪನೆಯಾಗುವುದಕ್ಕೂ ಮುನ್ನ, ಗುಪ್ತಚರ ಅಧಿಕಾರಿಗಳಿಗೆ ಪೊಲೀಸ್ ಪದಕಗಳನ್ನು ನೀಡಿ ಗೌರವಿಸಲಾಗುತ್ತಿತ್ತು. ಆದರೆ ಈ ಪ್ರಶಸ್ತಿಗಳು ಗುಪ್ತಚರ ಅಧಿಕಾರಿಗಳ ಬದಲು ಪೊಲೀಸರಿಗೇ ಹೆಚ್ಚಾಗಿ ಹೋಗುತ್ತಿತ್ತು.
ಗೌಪ್ಯವಾಗಿ ಕಾರ್ಯನಿರ್ವಹಿಸುವ ಗುಪ್ತಚರ ಇಲಾಖೆ, ಅತೀ ಸೂಕ್ಷ್ಮ ಮಾಹಿತಿಗಳನ್ನು ದೇಶ ಮತ್ತು ಗಡಿ ಪ್ರದೇಶಗಳಿಂದ ಸಂಗ್ರಹ ಮಾಡುತ್ತದೆ. ಈ ಮಾಹಿತಿಗಳು ಕಾನೂನು ಸುವ್ಯವಸ್ಥೆಯ ಪಾಲನೆಯಲ್ಲಿ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಗುಪ್ತಚರ ಇಲಾಖೆ ನಡೆಸುವ ಕಾರ್ಯಾಚರಣೆಗಳನ್ನು ವರ್ಗೀಕರಣ ಮಾಡಲಾಗುವುದಿಲ್ಲ. ಮೊದಲು ಗುಪ್ತಚರ ಇಲಾಖೆ ಬಾಹ್ಯ ಮತ್ತು ಆಂತರಿಕ ಇಂಟೆಲಿಜೆನ್ಸ್ ಸರ್ವಿಸ್ ಏಜೆನ್ಸಿಯಾಗಿತ್ತು. ಬಳಿಕ, ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (RAW)ದ ಸ್ಥಾಪನೆಯ ಬಳಿಕ ಇದಕ್ಕೆ ಆಂತರಿಕ ಇಂಟೆಲಿಜೆನ್ಸ್ ಪ್ರಾಜೆಕ್ಟ್ ಅನ್ನು ನೋಡುವ ಕರ್ತವ್ಯವನ್ನು ನೀಡಲಾಯಿತು.
ಸರ್ಕಾರದ ನೀತಿಯಲ್ಲಿ ಬದಲಾವಣೆಯ ಪರಿಣಾಮವಾಗಿ, ಈಗ ಭದ್ರತೆಗಾಗಿ ಕಾರ್ಯನಿರ್ವಹಿಸುವ ಸಾವಿರಾರು ಗುಪ್ತಚರ ಅಧಿಕಾರಿಗಳಿಗೆ ಗೌರವ ಸಂದಾಯವಾಗುತ್ತಿದೆ. ಸುದೀರ್ಘ ಸಮಯದಿಂದ ಪರಿಗಣಿಸಲ್ಪಡದೇ ಇದ್ದ ಸಮರ್ಥ ಮತ್ತು ಬದ್ಧ ಕಾರ್ಯಪಡೆಯನ್ನು ಗೌರವಿಸುವ ನಿಟ್ಟಿನಲ್ಲಿ ಸರ್ಕಾರ ನಿಜಕ್ಕೂ ಸಕಾರಾತ್ಮಕ ಹೆಜ್ಜೆಯನ್ನೇ ಮುಂದಿಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.