ಎರಡು ಮೂರು ವರ್ಷಗಳ ಹಿಂದೆ ದಕ್ಷಿಣ ಸಿಕ್ಕಿಂ ಜಿಲ್ಲೆಯ ರಂಗ್ಬುಲ್ ಗ್ರಾಮದ ಪರಿಸ್ಥಿತಿ ತೀರಾ ಕೆಟ್ಟದಾಗಿತ್ತು, ಮಕ್ಕಳು ಬೀದಿ ದೀಪಗಳ ಕೆಳಗೆ ಓದಬೇಕಾದ ಅನಿವಾರ್ಯತೆ ಇತ್ತು, ಶಾಲೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ, ಇಡೀ ಗ್ರಾಮವೇ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಸಂಕಷ್ಟಕ್ಕೀಡಾಗಿತ್ತು. ಆದರೆ 2014ರಲ್ಲಿ ದಕ್ಷಿಣ ಸಿಕ್ಕಿಂ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಆಗಿ ಐಎಎಸ್ ಅಧಿಕಾರಿ ರಾಜ್ ಯಾದವ್ ಅವರು ಅಧಿಕಾರವನ್ನು ಸ್ವೀಕರಿಸಿದ ಬಳಿಕ ಎಲ್ಲವೂ ಬದಲಾಗುತ್ತಾ ಬಂತು.
ರಾಜ್ ಯಾದವ್ ಅವರ ನಾಯಕತ್ವದಿಂದಲೇ ರಾಮ್ಬುಲ್ ಗ್ರಾಮ ಪರಿವರ್ತನೆಯನ್ನು ಕಂಡಿತು ಎಂದರೆ ತಪ್ಪಾಗುತ್ತದೆ. 2014 ರಲ್ಲಿ ಕೇಂದ್ರ ಸರಕಾರ ಅನುಷ್ಠಾನಗೊಳಿಸಿದ ಸಂಸದ್ ಆದರ್ಶ ಗ್ರಾಮ ಯೋಜನೆ ಕೂಡ ಈ ಗ್ರಾಮದ ಪ್ರಗತಿಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಯಾದವ್ ಅವರು ಹೇಳುವಂತೆ, 2014ರಲ್ಲಿ ಸಂಸದ ಆದರ್ಶ ಗ್ರಾಮ ಯೋಜನೆ ಆರಂಭವಾದ ಬಳಿಕ ಆ ಯೋಜನೆಯಡಿ ದತ್ತು ಪಡೆಯಲಾದ ಗ್ರಾಮಗಳ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲಾಡಳಿತವೇ ಹೊತ್ತುಕೊಳ್ಳುವ ಚಿಂತನೆ ಯಾದವ್ ಅವರಿಗೆ ಹೊಳೆಯಿತು. ಹೀಗಾಗಿ ಜಿಲ್ಲಾಡಳಿತವು ಗ್ರಾಮಗಳನ್ನು ದತ್ತು ಪಡೆದು ಕೊಂಡಿತು. ಸಂಸದ ಆದರ್ಶ ಗ್ರಾಮ ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿಯನ್ನು ವಿಸ್ತೃತ ಮಾದರಿಯಲ್ಲಿ ಮಾಡುವ ಸಲುವಾಗಿ ಆರಂಭಿಸಲಾಗಿತ್ತು. ಆದರೆ ಯಾದವ್ ಮತ್ತು ಅವರ ತಂಡ ಗ್ರಾಮಗಳ ತಳಮಟ್ಟಗಳಿಗೆ ಹೋಗಿ, ಅಲ್ಲಿರುವ ಸಮಸ್ಯೆಗಳ ನಿವಾರಣೆಗೆ ಪ್ರಯತ್ನ ಪಟ್ಟಿತು. ಅಲ್ಲಿಂದ 2000 ಮಂದಿಯ ಬದುಕನ್ನು ಬದಲಾಯಿಸುವ ಭರವಸೆಯೊಂದಿಗೆ ಗ್ರಾಮೀಣ ಅಭಿವೃದ್ಧಿಯ ಪಯಣವು ಆರಂಭಗೊಂಡಿತು.
ಸಿಕ್ಕಿಂ ಜಿಲ್ಲೆಯ ಕುಗ್ರಾಮವನ್ನು ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಮಹತ್ವದ ಉದ್ದೇಶದೊಂದಿಗೆ ಮಹತ್ವದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. 4,400 ಅಡಿ ಎತ್ತರದಲ್ಲಿರುವ ಸಬ್ ಟ್ರಾಪಿಕಲ್ ರಂಗ್ ಬುಲ್ ಗ್ರಾಮ ಪಂಚಾಯತ್ ಯೂನಿಟ್ ನಿರಂತರವಾಗಿ ನೀರಿನ ಸಮಸ್ಯೆಯಿಂದ, ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿತ್ತು. ಇದರ ಅಧೀನದಲ್ಲಿದ್ದ ಐದು ಗ್ರಾಮಗಳು ಕೂಡ ಕೃಷಿಯನ್ನು ಅವಲಂಬಿತವಾಗಿದ್ದವು, ಇದರಿಂದಾಗಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತ್ತು. ಅವ್ಯವಸ್ಥಿತ ವಿದ್ಯುತ್ ಪೂರೈಕೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ನಿರಾಸಕ್ತಿ ಈ ಗ್ರಾಮಗಳ ಅತಿ ದೊಡ್ಡ ಸಮಸ್ಯೆಯಾಗಿತ್ತು. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿದ ಬಳಿಕ ಯಾದವ್ ಅವರು, ಗ್ರಾಮ ಪಂಚಾಯತ್ ಅಡಿಯಲ್ಲಿನ ರಂಗ್ ಬುಲ್ ಅನ್ನು ಯೋಜನೆಯಡಿ ದತ್ತು ಸ್ವೀಕರಿಸಿ ಮಾದರಿ ಗ್ರಾಮವನ್ನಾಗಿ ಪರಿವರ್ತಿಸಲು ಮುಂದಾದರು.
ನೇಪಾಳಿ ಭಾಷೆಯಲ್ಲಿನ ‘ಅಪ್ನೋ ಗಾವ್ ಆಪ್ ಬನಾವ್’ ಅಂದರೆ ನಿಮ್ಮ ಗ್ರಾಮವನ್ನು ನೀವೇ ರೂಪಿಸಿ ಎಂಬ ಮಂತ್ರದೊಂದಿಗೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಮೊದಲ ಭಾಗವಾಗಿ ಗ್ರಾಮ ಪಂಚಾಯಿತಿಯನ್ನು ಸೇರಿಸಲಾಯಿತು ಮತ್ತು ಅಲ್ಲಿನ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಲಾಯಿತು. ಗ್ರಾಮದ ಪುರುಷರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ಸಲಹೆ ಸೂಚನೆಗಳನ್ನು ಕೇಳಿ ಅವರ ಮೂಲ ಅವಶ್ಯಕತೆಗಳ ಬಗ್ಗೆ ತಿಳಿದುಕೊಳ್ಳಲಾಯಿತು, ಎಲ್ಲದಕ್ಕೂ ಮೊದಲು ಅವರಿಗೆ ನೀರಿನ ಪೂರೈಕೆ ಮತ್ತು ವಿದ್ಯುತ್ ಪೂರೈಕೆಯ ಅವಶ್ಯಕತೆ ಇದೆ ಎಂಬುದು ಈ ವೇಳೆ ಗಮನಕ್ಕೆ ಬಂದಿತು. ಹೀಗಾಗಿ ಪ್ರಾಥಮಿಕವಾಗಿ 2 ವಿಷಯಗಳತ್ತ ಗಮನ ಹರಿಸಲಾಯಿತು. ರಂಗ್ ಬುಲ್ ಗ್ರಾಮದ ಪ್ರತಿನಿಧಿಗಳೊಂದಿಗೆ ಸಭೆಗಳನ್ನು ನಡೆಸಿದ ಬಳಿಕ ಜಿಲ್ಲಾಡಳಿತ ಯೋಜನೆಯನ್ನು ಅಭಿವೃದ್ಧಿಪಡಿಸಲು ಸಮುದಾಯಗಳನ್ನು ಮತ್ತು ಆಡಳಿತ ವರ್ಗವನ್ನು ಒಟ್ಟಿಗೆ ತಂದಿತು. ಎಲ್ಲರಿಗೂ ಖುಷಿಯಾಗುವ ರೀತಿಯಲ್ಲಿ ಗ್ರಾಮವನ್ನು ಅಭಿವೃದ್ಧಿಪಡಿಸುವುದು ಆಶಯವಾಗಿತ್ತು. ‘ನಮ್ಮ ಕಾರ್ಯಕ್ಕೆ ಜನರ ಬೆಂಬಲವನ್ನು ಪಡೆಯುವುದು ಅತಿ ದೊಡ್ಡ ಸವಾಲಾಗಿತ್ತು, ಮೊದಮೊದಲು ಜನರು ನಮ್ಮನ್ನು ನಂಬಲಿಲ್ಲ ಆದರೆ ನಾವು ಕಾರ್ಯವನ್ನು ಆರಂಭಿಸಿದಂತೆ, ಶಾಲೆಗಳ ಸುಂದರೀಕರಣದಲ್ಲಿ, ರಸ್ತೆಗಳ ನಿರ್ಮಾಣದಲ್ಲಿ ವಯಸ್ಕರು ಮತ್ತು ಮಕ್ಕಳು ನಮ್ಮ ಕಾರ್ಯಕ್ಕೆ ಕೈ ಜೋಡಿಸಲು ಆರಂಭಿಸಿದರು. ನಮ್ಮ ಅನುಭವಕ್ಕೆ ಬರುವ ಮುನ್ನವೇ ಜಿಲ್ಲಾಡಳಿತ ಮತ್ತು ಗ್ರಾಮಗಳು ಒಟ್ಟಾಗಿ ಯೋಜನೆಯೊಂದಿಗೆ ಒಟ್ಟಾಗಿ ಶ್ರಮಿಸಲು ಆರಂಭಿಸಿದರು’ ಎಂದು ಯಾದವ್ ಹೇಳುತ್ತಾರೆ.
ಯಾದವ್ ಅವರು ತಮ್ಮ ಪುಸ್ತಕ ‘I am DAAV’ ನಲ್ಲಿ ರಂಗ್ ಬುಲ್ನಲ್ಲಿ ಕೈಗೊಳ್ಳಲಾದ ಪ್ರಾಜೆಕ್ಟ್ಗಳ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಕೃಷಿಯಿಂದ ಹಿಡಿದು ಭೂ ಆದಾಯಗಳವರೆಗೆ ಮತ್ತು ರಸ್ತೆಗಳಿಂದ ಹಿಡಿದು ಬ್ರಿಡ್ಜ್ಗಳವರೆಗೆ ಮಾನವ ಸಂಪನ್ಮೂಲಗಳ ಬಗ್ಗೆ ಯೋಜನೆಗಳನ್ನು ಅತ್ಯಂತ ಕಾಳಜಿಯುಕ್ತವಾಗಿ ಯೋಜಿಸಿ ಮತ್ತು ಪೊಲೀಸ್ ಇಲಾಖೆ, ವಿಪತ್ತು ನಿರ್ವಹಣೆ ಇಲಾಖೆ, ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ಅನುಷ್ಠಾನಗೊಳಿಸಿದ ಬಗ್ಗೆ ಅವರು ತಮ್ಮ ಪುಸ್ತಕದಲ್ಲಿ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಗ್ರಾಮದ ಜನರು ಕೂಡ ಹಣಕಾಸು ನೆರವಿನಿಂದ ಹಿಡಿದು ಮಾನವ ಸಂಪನ್ಮೂಲವನ್ನು ಒದಗಿಸುವವರೆಗೂ ಗ್ರಾಮಗಳ ಅಭಿವೃದ್ಧಿಯಲ್ಲಿ ಮಹತ್ವದ ಕಾರ್ಯವನ್ನು ನಿಭಾಯಿಸಿದ್ದಾರೆ ಎಂಬುದನ್ನು ಅವರು ತಿಳಿಸಿದ್ದಾರೆ.
ತಮ್ಮ ಅಧಿಕಾರಾವಧಿಯ 6-8 ತಿಂಗಳಲ್ಲಿ ಗ್ರಾಮ ಪಂಚಾಯತ್ ಯುನಿಟ್ನಲ್ಲಿನ ಪ್ರತಿ ಗ್ರಾಮವೂ ಅಭಿವೃದ್ಧಿ ಕಾಣುವುದನ್ನು ಅವರು ಖಚಿತಪಡಿಸಿದರು. ಈ ಪ್ರಕ್ರಿಯೆಯಲ್ಲಿ ಅವರು ಜನರ ಅಭೂತಪೂರ್ವ ಬೆಂಬಲವನ್ನೂ ಪಡೆದುಕೊಂಡರು. ವಿದ್ಯುತ್ ಪೂರೈಕೆ, ನೀರು ಪೂರೈಕೆಯನ್ನು ಸಮರ್ಪಕವಾಗಿರುವಂತೆ ಮಾಡಲಾಯಿತು, ಶಾಲೆಯನ್ನು ಅಭಿವೃದ್ಧಿಪಡಿಸಲಾಯಿತು, ಶಿಕ್ಷಕರ ಕೊರತೆಯನ್ನು ನೀಗಿಸಲಾಯಿತು. ಇದರಿಂದಾಗಿ ದತ್ತು ಪಡೆದುಕೊಂಡು 5 ಗ್ರಾಮಗಳಲ್ಲಿನ 7000 ಮಂದಿಯ ಬದುಕು ಪರಿವರ್ತನೆಗೊಂಡಿತು. ಅವರ ಈ ಕಾರ್ಯ ಎಲ್ಲಾ ಅಧಿಕಾರಿಗಳಿಗೂ ಪ್ರೇರಣಾಶೀಲವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.