ರಾಜಲಕ್ಷ್ಮಿ ಪ್ರೊಡಕ್ಷನ್ಸ್ ರವರು 1963 ರಲ್ಲಿ ಬಿ. ವಿಠ್ಠಲಾಚಾರ್ಯ ರವರು ನಿರ್ದೇಶನ ಮಾಡುತ್ತಾರೆ. ರವಿ ರವರ ಛಾಯಾಗ್ರಹಣ, ಘಂಟಸಾಲ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಉದಯ್ ಕುಮಾರ್, ಆರ್. ನಾಗೇಂದ್ರರಾವ್, ಬಾಲಕೃಷ್ಣ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ, ಇ.ವಿ.ಸರೋಜ ಹಾಗೂ ನರಸಿಂಹರಾಜು ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಅಶ್ವತ್ಥ್ ಹಾಗೂ ಕು.ರಾ.ಸೀತಾರಾಮಶಾಸ್ತ್ರಿಯವರ ಸಾಹಿತ್ಯದ ಗೀತೆಗಳಿಗೆ ಸಂಗೀತ ಕೊಟ್ಟು ಘಂಟಸಾಲ ರವರು ದನಿಯಾಗಿದ್ದಾರೆ. ಅಲ್ಲದೇ, ಪಿ.ಲೀಲಾ ಹಾಗೂ ಪಿ.ಸುಶೀಲ ರವರು ಇವರ ದನಿಗೆ ಜೊತೆಯಾಗಿದ್ದಾರೆ.
ಕಥೆ:
ಬೆಟ್ಟದಾ ತುದಿಯಲ್ಲಿ, ಮುಸುಕುಧಾರಿ ವ್ಯಕ್ತಿಯೊಬ್ಬ ಕುದುರಯನೇರಿ ಕುಳಿತು, ದೂರದಲ್ಲೆಲ್ಲೋ ದೃಷ್ಟಿ ಹಾಯಿಸಿ, ತನ್ನ ಕುದುರೆಯನ್ನು ಕೆನೆಯಿಸಿ, ಒಂದು ರಾಜವಂಶದವರ ಬಿಡಾರಕ್ಕೆ ದಾಳಿ ಮಾಡುವ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಸಪ್ತಸೇನ ಮಹಾರಾಜನ (ಆರ್.ನಾಗೇಂದ್ರ ರಾವ್) ಮಗಳು ಮಂದಾರಮಾಲ (ಲೀಲಾವತಿ) ಬೀಡು ಬಿಟ್ಟ ಬಿಡಾರಕ್ಕೆ ಹಣ ಒಡವೆಗಳಿಗಾಗಿ ದಾಳಿ ಮಾಡಿದ ಮುಸುಕುವೀರನನ್ನು (ಅಶ್ವತ್ಥ್) ನರಸಿಂಹ (ರಾಜ್ ಕುಮಾರ್) ಅಡ್ಡಗಟ್ಟಿ, ಸದೆಬಡಿಯುತ್ತಾನೆ. ನರಸಿಂಹನ ಶೌರ್ಯ ಮೆಚ್ಚಿದ ಮುಸುಕುವೀರನಿಗೆ ನರಸಿಂಹ ತನ್ನ ಅಣ್ಣನ ಮಗನೆಂಬ ಸತ್ಯ ಗೊತ್ತಾಗುತ್ತದೆ. ಸೇನಾಧಿಪತಿ ಶೂರಸಿಂಹ (ಉದಯ್ ಕುಮಾರ್) ಮಹಾರಾಜ ಸಪ್ತಸೇನನಿಗೆ ಮುಸುಕುವೀರ ರಾಜನ ನಂಬಿಕಸ್ಥನಾದ ಸಾಳುವರಾಯ (ಹೆಚ್.ರಾಮಚಂದ್ರಶಾಸ್ತ್ರಿ) ಸೋದರನೆಂದು ತಿಳಿಸುತ್ತಾನೆ. ಆಗ ಸಾಳುವರಾಯನನ್ನು ಕರೆಸಿ, ವಿಚಾರಿಸಿದಾಗ ರಾಜ್ಯದ ಜನರಿಗೆ ಕೇಡು ಬಗೆಯುವ ನನ್ನ ತಮ್ಮನಲ್ಲ ಎಂದು ವಾದಿಸುತ್ತಾನಾದರೂ, ರಾಜನ ಅಣತಿಯಂತೆ ತಮ್ಮನನ್ನು ಕರೆತರುವ ಮನಸು ಮಾಡುತ್ತಾನೆ. ಎರಡೂ ಕಾಲು ಕಳೆದುಕೊಂಡ ರಾಜನ ಔದಾರ್ಯದ ಗುಣವನ್ನೇ ಬಂಡವಾಳ ಮಾಡಿಕೊಂಡು ತಾನು ಮಾಡುತ್ತಿರುವ ಅನಾಚಾರಗಳೆಲ್ಲಾ ಮುಸುಕುವೀರ ರಾಜನನ್ನು ಭೇಟಿಯಾದರೆ ಬಯಲಾಗುತ್ತದೆ ಎಂದು ತಿಳಿದ ಶೂರಸಿಂಹ ದಾರಿಯಲ್ಲಿ ಸಾಳುವ ಅಣ್ಣ-ತಮ್ಮಂದಿರನ್ನು ಕೊಲ್ಲಿಸುತ್ತಾನೆ. ಅರೆಜೀವದಿಂದ ಮನೆವರೆಗೆ ಬಂದ ಸಾಳುವರಾಯ ನರಸಿಂಹನಿಗೆ ಶೂರಸಿಂಹನಿಂದಾದ ಅನ್ಯಾಯ ತಿಳಿಸುತ್ತಾನೆ. ಅಲ್ಲದೇ ತನ್ನ ಚಿಕ್ಕಪ್ಪನ ಹಾದಿಯಲ್ಲಿಯೇ ಹೋಗಿ, ಶೂರಸಿಂಹನಿಗೆ ಬುದ್ದಿ ಕಲಿಸುವಂತೆ ಹೇಳಿ ಪ್ರಾಣ ಬಿಡುತ್ತಾನೆ. ತಂದೆ ಹಾಗೂ ಚಿಕ್ಕಪ್ಪನನ್ನು ಕಳೆದುಕೊಂಡ ನರಸಿಂಹ, ಊರಿಂದ ದೂರವಾಗಿ ಸುರಂಗ ಮಾರ್ಗದಲ್ಲೆಲ್ಲೋ ಒಂದು ವಾಸಸ್ಥಾನ ಮಾಡಿಕೊಂಡು, ತನ್ನವರನ್ನೆಲ್ಲಾ ನೆಮ್ಮದಿಯಿಂದ ಜೀವನ ಮಾಡುವಂತೆ ಬೆನ್ನುಲುಬಾಗಿ ನಿಲ್ಲುತ್ತಾನಲ್ಲದೇ, ಮುಸುಕುವೀರನಾಗಿ ಆಸ್ಥಾನದವರಿಗೆ ಕಾಣಿಸಿಕೊಳ್ಳುತ್ತಾನೆ.
ಇತ್ತ ಶೂರಸಿಂಹನು ಮುಸುಕುವೀರನಾದ ನರಸಿಂಹನನ್ನು ಬಂಧಿಸಲು ಹರಸಾಹಸ ಪಡುತ್ತಾನೆ. ಈ ನಡುವೆ ರಾಜಕುಮಾರಿ ಮಂದಾರಮಾಲಳನ್ನು ಪ್ರೀತಿಸುತ್ತಾನೆ. ಒಮ್ಮೆ ಆಕೆಯನ್ನು ತನ್ನ ಗೌಪ್ಯಸ್ಥಳಕ್ಕೂ ಕರೆದೊಯ್ಯುತ್ತಾನೆ. ಅಲ್ಲಿ ಜನರ ಕಷ್ಟದ ಬದುಕನ್ನು, ಶೂರಸಿಂಹನ ದಬ್ಬಾಳಿಕೆಯಿಂದ ಜನರಿಗಾದ ಅವಮಾನ, ಯಾತನೆಯ ಕ್ರೂರತೆಯನ್ನು ಪರಿಚಯ ಮಾಡಿಸುತ್ತಾನೆ. ಅದರಿಂದಾಗಿ, ನರಸಿಂಹನನ್ನು ದ್ವೇಷಿಸುತ್ತಿದ್ದ ಮಂದಾರಮಾಲ, ಶೂರಸಿಂಹನ ಕುರಿತು ಅಸಹ್ಯ ಪಡುತ್ತಾಳಲ್ಲದೇ, ನರಸಿಂಹನ ಮೇಲೆ ಒಲವು ಹೆಚ್ಚಾಗಿ ಆತನನ್ನೇ ಮದುವೆಯಾಗುವ ಬಯಕೆ ಮುಂದಿಡುತ್ತಾಳೆ. ನರಸಿಂಹನೂ ಆಕೆಯ ಮಾತಿಗೆ ಒಪ್ಪುತ್ತಾನೆ. ಅರಮನೆಗೆ ಹಿಂದಿರುಗಿದ ಮಂದಾರಮಾಲಳನ್ನು ಶೂರಸಿಂಹ ಬಂಧಿಸಿ ತನ್ನನ್ನೇ ಮದುವೆ ಮಾಡಿಕೊ ಎಂದು ಪೀಡಿಸುತ್ತಾನೆ. ಆ ದುಷ್ಟನಿಂದ ತಪ್ಪಿಸಿಕೊಳ್ಳಲು ಆಕೆ ಹುಚ್ಚು ಹಿಡಿದವಳಂತೆ ನಾಟಕವಾಡುತ್ತಾಳೆ. ಆಗ ಅಲ್ಲಿಗೆ ವೇಷ ಮರೆಸಿ ಬರುವ ನರಸಿಂಹ ಆಕೆಯನ್ನು ಕಾಪಾಡುತ್ತಾನೆ. ಆ ಬಂಧನದಿಂದ ತಪ್ಪಿಸಿಕೊಂಡು ಹೋಗುವಷ್ಟರಲ್ಲಿ ಶೂರಸಿಂಹ ಬಂದು, ನರಸಿಂಹನನ್ನು ಬಂಧಿಸಿ ರಾಜನ ಮುಂದೆ ತಪ್ಪಿತಸ್ಥನನ್ನಾಗಿ ಮಾಡಿ, ರಾಜನಿಂದ ಗಲ್ಲುಶಿಕ್ಷೆಗೆ ಗುರಿ ಮಾಡಿಸುತ್ತಾನೆ. ಬಂಧನದಿಂದ ಹೇಗೊ ತಪ್ಪಿಸಿಕೊಂಡು ಬಂದ ಮಂದಾರಮಾಲ ತನ್ನ ತಂದೆ ಸಪ್ತಸೇನ ಮಹಾರಾಜನಿಗೆ ಶೂರಸಿಂಹನ ಅರಾಜಕತೆಯ ವಿವರಿಸುತ್ತಾಳೆ. ಆಗ ಬಂದ ಶೂರಸಿಂಹ, ಕಾಲು ಕಳೆದುಕೊಂಡ ಮಹಾರಾಜನನ್ನೇ ಬಂಧಿಸುತ್ತಾನೆ. ಸೈನಿಕರ ವೇಷದಲ್ಲಿದ್ದ ಸ್ನೇಹಿತನ (ನರಸಿಂಹರಾಜು) ಸಹಾಯದಿಂದ ನರಸಿಂಹ ತಪ್ಪಿಸಿಕೊಂಡು ಬಂದು, ಮಹಾರಾಜರನ್ನು ಬಂಧನದಿಂದ ಬಿಡಿಸಿ ತಂದು, ಶೂರಸಿಂಹನ ಪಟ್ಟಾಭಿಷೇಕವನ್ನು ತಡೆದು, ಅವನೊಂದಿಗೆ ಹೋರಾಡಿ, ರಾಜ್ಯವನ್ನು ಮತ್ತೇ ಸಪ್ತಸೇನ ಮಹಾರಾಜನಿಗೆ ವಹಿಸಿ, ರಾಜಕುಮಾರಿಯನ್ನು ವರಿಸುತ್ತಾನೆ. ಇಲ್ಲಿಗೆ ಸಿನಿಮಾ ಮುಗಿಯುತ್ತದೆ.
ಈ ಸಿನಿಮಾ ಕತೆಯನ್ನಾಧರಿಸಿ ಅನೇಕ ಸಿನಿಮಾಗಳು ಬಂದಿವೆ. ಉದಾಹರಣೆಗೆ ಗಜಪತಿ ಗರ್ವಭಂಗ ಹಾಗೂ ಇತರೆ ಸಿನಿಮಾಗಳು. ಇದು ರಾಜ-ರಾಣಿ ಕತೆಯಾದರೂ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಒಂದಷ್ಟು ಉತ್ತಮ ಸಂಭಾಷಣೆ ಈ ಸಿನಿಮಾದಲ್ಲಿದೆ. ಕಪ್ಪು-ಬಿಳುಪು ಸಿನಿಮಾವಾದರೂ, ಸಿನಿಮಾದ ಕೊನೆಯ ಭಾಗ ಈಸ್ಟಮನ್ ಕಲರ್ ನಲ್ಲಿ ಚಿತ್ರಿಸಿರುವುದು ಈ ಸಿನಿಮಾದ ವಿಶೇಷ. ರಾಜಕೀಯದಲ್ಲಿ ರಾಜರ ಪಾತ್ರಕ್ಕಿಂತ ಅವರ ಅಧೀನದಲ್ಲಿರುವವರಿಂದ ಜನಸಾಮಾನ್ಯರಿಗಾಗುವ ತೊಂದರೆಗಳ ಕುರಿತಂತೆ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ ಈ ಸಿನಿಮಾದಲ್ಲಿ. ರಾಜರ ಆಳ್ವಿಕೆ ಹೋಗಿ, ಬ್ರಿಟೀಷರ ಆಳ್ವಿಕೆಯೂ ಮುಗಿದು, ಕೊನೆಗೆ ಪ್ರಜಾಪ್ರಭುತ್ವವೇ ಬಂದರೂ ಜನಸಾಮಾನ್ಯರಿಗೆ ಈ ತೊಂದರೆಗಳು ತಪ್ಪಿಲ್ಲ ಎಂಬುದಂತೂ ಸುಳ್ಳಲ್ಲ.
ಈ ಸಿನಿಮಾದ ಸಂಗೀತ ನಿರ್ದೇಶಕರಾಗಿರುವ ಘಂಟಸಾಲರವರು ಅಶ್ವತ್ಥ್ ರವರು ಬರೆದ “ದುಂಡು ಮಲ್ಲೇ ದುಂಡು ಮಲ್ಲೇ”, “ಎಲ್ಲಾ ನಿನಗಾಗಿ”, “ಪ್ರಜರ ಮಾತನ್ನು”, “ರಾಮಲಕ್ಷ್ಮಣರನು” ಎಂಬ ಗೀತೆಗೆ ದನಿಯಾಗಿದ್ದಾರೆ ಹಾಗೂ ಅಶ್ವತ್ಥ್ ರವರು ಬರೆದ “ಹರೆಯುಕ್ಕಿದೆ” ಗೀತೆಗೆ ಪಿ.ಲೀಲಾ ರವರು ದನಿಗೂಡಿಸಿದರೆ, “ಓ ನಾಮ ಬರೆದ” ಗೀತೆಗೆ ಪಿ.ಸುಶೀಲರವರು ದನಿಯಾಗಿದ್ದಾರೆ. ಅದೇ ರೀತಿ ಕು.ರಾ.ಸೀತಾರಾಮಶಾಸ್ತ್ರಿಯವರು ಬರೆದ “ಮೆಲ್ಲುಸಿರೆ ಸವಿಗಾನ, ಎದೆ ಝಲ್ಲೆನೆ ಹೂವಿನಬಾಣ” ಗೀತೆ ಇಂದಿಗೂ ಮಧುರ ಪ್ರಣಯಗೀತೆಯಾಗಿ ಜನಮಾನಸದಲ್ಲಿರುವುದು ಹಿರಿಮೆಯ ವಿಷಯ ಹಾಗೂ “ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೇ” ಎಂಬ ಗೀತೆಯೂ ಕೂಡ ಇಂದಿಗೂ ಕನ್ನಡದ ಅತ್ಯುತ್ತಮ ಹಾಗೂ ಜನಪ್ರಿಯ ಗೀತೆಯಾಗಿ ಉಳಿದಿದೆ. ಹಿನ್ನೆಲೆ ಸಂಗೀತವಂತೂ ನಿಮ್ಮನು ಕಾಡದೇ ಬಿಡುವುದಿಲ್ಲ. ಅದರಲ್ಲೂ ಈ ಎರಡೂ ಹಾಡು..!!
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ರಾಜರ ಆಳ್ವಿಕೆಯ ಕಾಲದಲ್ಲಿ ಜನಸಾಮಾನ್ಯರಿಗೆ ಆಗುತ್ತಿದ್ದ ನೋವು-ಸಂಕಟಗಳ ಕುರಿತು ತಿಳಿಯಲು.
2. ರಾಜಕೀಯದ ಪರಿಣಾಮ ಸಾಮಾನ್ಯರನ್ನು ಹೇಗೆ ದಾರಿ ತಪ್ಪಿಸುತ್ತದೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳೇನೆಂದು ತಿಳಿಯಲು.
3. ಕನ್ನಡ ಸಾಹಿತ್ಯಾಭಿಮಾನಿಗೆ ಇದೊಂದು ರಸಮಯ ಸಿನಿಮಾ ಎನಿಸುತ್ತದೆ.
4. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
5. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.