ಬಂಟ್ವಾಳ: ರಾಜ್ಯದಲ್ಲಿ ಕಳೆದ ಬಿಜೆಪಿ- ಜೆಡಿಎಸ್ ಸರ್ಕಾರ ಆಡಳಿತಾವಧಿಯಲ್ಲಿ ಜಾರಿಗೊಂಡ ’ಸುವರ್ಣ ಗ್ರಾಮ ಯೋಜನೆ’ಯು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನುದಾನ ಹೆಚ್ಚಳಗೊಂಡು ’ಗ್ರಾಮ ವಿಕಾಸ ಯೋಜನೆ’ಯಾಗಿ ಪರಿವರ್ತನೆಗೊಂಡಿದೆ.
ಈ ಬಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಉತ್ಸುಕತೆಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಐದು ಗ್ರಾಮಗಳು ’ಗ್ರಾಮ ವಿಕಾಸ ಯೋಜನೆ’ಯಡಿ ಆಯ್ಕೆಗೊಂಡಿದೆ.
ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಯಿಲ, ಚೆನ್ನೈತ್ತೋಡಿ ಗ್ರಾಮ ಪಂಚಾತ್ನ ಅಜ್ಜಿಬೆಟ್ಟು, ನರಿಕೊಂಬು ಗ್ರಾಮ ಪಂಚಾಯತ್ನ ಶಂಭೂರು, ಕಾವಳಮೂಡೂರು ಗ್ರಾಮ ಪಂಚಾಯತ್ ಕಾವಳಮೂಡೂರು, ಕೊಳ್ನಾಡು ಗ್ರಾಮ ಪಂಚಾಯತ್ ಸಾಲೆತ್ತೂರು ಗ್ರಾಮಗಳು ಈ ಯೋಜನೆಯಡಿ ಸೇರಿಕೊಂಡಿದೆ.
ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಈಗಾಗಲೇ ರಾಯಿ ಮತ್ತು ಅರಳ ಗ್ರಾಮಗಳು ’ಸುವರ್ಣ ಗ್ರಾಮ ಯೋಜನೆ’ಯಡಿ ಆಯ್ಕೆಗೊಂಡು ಜನಸಂಖ್ಯೆಗೆ ಅನುಗುಣವಾಗಿ ತಲಾ ರೂ. 45ಲಕ್ಷ ಮತ್ತು ರೂ. 89ಲಕ್ಷ ವೆಚ್ಚದಲ್ಲಿ ಬಹುತೇಕ ರಸ್ತೆಗಳು ಡಾಂಬರೀಕರಣಗೊಂಡಿದೆ.
ಇದೀಗ ಕೊಯಿಲ ಗ್ರಾಮಕ್ಕೆ ಈ ಯೋಜನೆಯಡಿ ರೂ. 75ಲಕ್ಷ ಅನುದಾನ ಮಂಜೂರಾಗಿರುವುದು ಇಲ್ಲಿನ ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ. ಕೊಯಿಲ ಗ್ರಾಮದಲ್ಲಿ ಹಲವಾರು ರಸ್ತೆಗಳು ಡಾಂಬರೀಕರಣ ಮತ್ತು ವಿಸ್ತರಣೆಗೆ ಬಾಕಿ ಉಳಿದಿದ್ದು, ಈ ಬಾರಿ ಪೂರ್ಣಗೊಳ್ಳುವ ನಿರೀಕ್ಷೆಯಲ್ಲಿದೆ. ಕೊಯಿಲ ಗ್ರಾಮಕ್ಕೆ ಸಂಬಂಧಿಸಿದಂತೆ ಕೈತ್ರೋಡಿ, ಕೊಯಿಲ ಮತ್ತು ಪಾಂಡವರಕಲ್ಲು ಎಂಬಲ್ಲಿ ಸರ್ಕಾರ ನೀಡಿರುವ ನೂರಾರು ಮನೆ ನಿವೇಶನಗಳಲ್ಲಿ ಬಹುತೇಕ ಮಂದಿ ಕೂಲಿ ಕಾರ್ಮಿಕರು ನೆಲೆಸಿದ್ದು, ರಸ್ತೆಯಂತಹ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ. ಈ ಪೈಕಿ ಕೊಯಿಲ -ಪಾಂಡವರಕಲ್ಲು-ಪಂಜಿಕಲ್ಲು ಸಂಪರ್ಕ ರಸ್ತೆಯು ’ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ನಿರ್ಮಾಣಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದ್ದಾರೆ.
ಇನ್ನೊಂದೆಡೆ ರಾಯಿ-ಪುಂಚೋಡಿ ಸಂಪರ್ಕ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ನಾಗರಿಕರು ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಈ ನಡುವೆ ರಾಯಿ-ಬದನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನ ರಸ್ತೆಗೆ ಅಲ್ಲಿನ ’ಷಷ್ಠಿ ಮಹೋತ್ಸವ’ ಸಂದರ್ಭದಲ್ಲಿ ಸ್ಥಳೀಯ ಜಿ.ಪಂ.ಸದಸ್ಯೆ ನಳಿನಿ ಬಿ.ಶೆಟ್ಟಿ ಸ್ಪಂದಿಸಿ ಹೊಂಡಮಯ ರಸ್ತೆಗೆ ತೇಪೆ ಕಾಮಗಾರಿ ನಡೆಸಿದ್ದಾರೆ. ಈ ರಸ್ತೆಯನ್ನು ವಿಸ್ತರಿಸಿ ಸಜಂಕಬೆಟ್ಟು, ಬೊಲ್ಲೋಡಿ, ಕೈತ್ರೋಡಿಬೈಲು ಸಂಪರ್ಕಗೊಳಿಸುವಂತೆ ಇಲ್ಲಿನ ನಾಗರಿಕರಿಂದ ಬೇಡಿಕೆಯೂ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆ ಮೊದಲು ಈ ಎಲ್ಲಾ ರಸ್ತೆಗಳು ವಿಸ್ತರಣೆಗೊಂಡು ಡಾಂಬರೀಕರಣಗೊಂಡಾಗ ಮಾತ್ರ ’ರಾಜಕಾರಣಿ’ಗಳಿಗೆ ’ಮತಯಾಚನೆ’ ಸುಲಭ ಸಾಧ್ಯ ಎಂಬ ಅಭಿಪ್ರಾಯವೂ ಮತದಾರರಿಂದ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.