ತನ್ನ ಸರ್ಕಾರದ ವಿರುದ್ಧ ಸಮರ ಸಾರಲಾಗಿದೆ ಎಂದು ಆರೋಪಿಸಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾನುವಾರ ರಾತ್ರಿಯಿಂದ ಕೋಲ್ಕತ್ತಾದಲ್ಲಿ ಹೈ ಪ್ರೊಫೈಲ್ ಧರಣಿಯನ್ನು ನಡೆಸುತ್ತಿದ್ದಾರೆ, ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಲು ತೆರಳಿದ್ದ 8 ಸಿಬಿಐ ಅಧಿಕಾರಿಗಳನ್ನು ಆಕೆಯ ಪೊಲೀಸರು ಬಂಧಿಸಲು ಮುಂದಾಗಿದ್ದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಚಿಟ್ ಫಂಡ್ ಹಗರಣದ ಬಗ್ಗೆ ಸಿಬಿಐ ತನಿಖೆಗೆ ಮುಂದಾಗಿದ್ದು, ಮಮತಾರನ್ನು ಎಷ್ಟರ ಮಟ್ಟಿಗೆ ಕುಪಿತಗೊಳಿಸಿದೆ ಅಂದರೆ ಬಿಜೆಪಿ ವಿರುದ್ಧ ಹಿಗ್ಗಾ ಮುಗ್ಗಾ ಹೇಳಿಕೆಯನ್ನು ನೀಡಿ, ರಾತೋರಾತ್ರಿ ತನ್ನ ಗ್ಯಾಂಗ್ ಕಟ್ಟಿಕೊಂಡು ಅವರು ’ಸಂವಿಧಾನ ಉಳಿವಿಗಾಗಿ’ ಎನ್ನುತ್ತಾ ಧರಣಿ ಕೂತಿದ್ದಾರೆ. ಮಾತ್ರವಲ್ಲ, ತಾಕತ್ತಿದ್ದರೆ ಪಶ್ಚಿಮಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಧಿಸಿ ಎಂದು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಮಮತಾ ಬ್ಯಾನರ್ಜಿಯವರು ಸಿಬಿಐನ ಪ್ರಶ್ನೆಯಲ್ಲಿರುವ ಪೊಲೀಸ್ ಅಧಿಕಾರಿ ರಾಜೀವ್ ಕುಮಾರ್ ಅವರನ್ನೂ ಸಮರ್ಥಿಸಿಕೊಂಡಿದ್ದಾರೆ. ‘ಜಗತ್ತಿನ ಅತ್ಯುತ್ತಮ ಕಮಿಷನರ್ಗಳಲ್ಲಿ ಕೋಲ್ಕತ್ತಾ ಕಮಿಷನರ್ ಕೂಡ ಒಬ್ಬರು. ಅವರ ಸಮಗ್ರತೆ, ಸಾಹಸ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ. ದಿನದ 24 ಗಂಟೆಯೂ ಅವರು ಕೆಲಸ ಮಾಡುತ್ತಾರೆ. ಇತ್ತೀಚಿಗೆ ಒಂದೇ ಒಂದು ದಿನ ರಜೆ ಪಡೆದುಕೊಂಡಿದ್ದರು. ನೀವು ಎಷ್ಟೇ ಸುಳ್ಳು ಹರಡಿದರೂ ಸುಳ್ಳು ಸುಳ್ಳಾಗಿಯೇ ಇರುತ್ತದೆ’ ಎಂದು ಟ್ವೀಟ್ ಬೇರೆ ಮಾಡಿದ್ದಾರೆ.
2013ರಲ್ಲಿ ಶಾರದಾ ಮತ್ತು ರೋಸ್ ವ್ಯಾಲಿ ಪೋಂನ್ಝೀ ಹಗರಣಗಳ ವಿಚಾರಣೆ ನಡೆಸಿದ್ದ ಎಸ್ಐಟಿಯ ನೇತೃತ್ವ ವಹಿಸಿದ್ದ ಕೋಲ್ಕತ್ತ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಮಮತಾ ಯಾಕೆ ಅಷ್ಟೊಂದು ಸಮರ್ಥಿಸಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರದ್ದು.
ಸಿಬಿಐನ ಹಂಗಾಮಿ ಮುಖ್ಯಸ್ಥ ಎಂ.ನಾಗೇಶ್ವರ್ ರಾವ್ ಅವರು ಹೇಳುವಂತೆ, ರಾಜೀವ್ ಕುಮಾರ್ ವಿರುದ್ಧ ಸಾಕ್ಷ್ಯಾಧಾರಗಳಿವೆ. ಹಗರಣಗಳ ಸಾಕ್ಷಿಗಳನ್ನು ಅವರು ಧ್ವಂಸಪಡಿಸಿ ನ್ಯಾಯ ಸಿಗದಂತೆ ಮಾಡಿದ್ದಾರೆ. ಕೋಲ್ಕತ್ತಾ ಪೊಲೀಸರು ಎಲ್ಲಾ ದಾಖಲೆಗಳನ್ನು, ಸಾಕ್ಷಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಬಿಐ ತನಿಖೆಗೆ ಬೇಕಾದ ದಾಖಲೆಗಳನ್ನು ಅವರು ಒದಗಿಸುತ್ತಿಲ್ಲ. ಹಲವು ದಾಖಲೆಗಳನ್ನು ನಾಶಪಡಿಸಿ ಯಾರ ಕೈಗೂ ಸಿಗದಂತೆ ಮಾಡಲಾಗಿದೆ.
ಶಾರದಾ ಮತ್ತು ರೋಸ್ ವ್ಯಾಲಿ ಪೊಂಜ್ಝೀ ಹಗರಣಗಳು ಅತೀದೊಡ್ಡ ಹಗರಣಗಳಾಗಿದ್ದು ಅದರಲ್ಲಿ ದೊಡ್ಡ ದೊಡ್ಡ ಹೆಸರುಗಳು ತಳುಕು ಹಾಕಿಕೊಂಡಿದೆ. ಆಡಳಿತರೂಢ ಟಿಎಂಸಿ ಪಕ್ಷದ ಹಲವಾರು ರಾಜಕಾರಣಿಗಳು ಶಾರದಾ ಮತ್ತು ರೋಸ್ ವ್ಯಾಲಿಯಿಂದ ಲಾಭವನ್ನು ಪಡೆದುಕೊಂಡಿದ್ದಾರೆ. ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ 2016ರ ಡಿ.30ರಂದು ಟಿಎಂಸಿ ಸಂಸದ ತಪಸ್ ಪಾಲ್ ಅವರನ್ನು ಸಿಬಿಐ ಬಂಧಿಸಿತ್ತು, 2017ರ ಜನವರಿಯಲ್ಲಿ ಟಿಎಂಸಿ ಎಂಪಿಸುದೀಪ್ ಬಂದೋಪಧ್ಯಾಯ ಅವರನ್ನು ಬಂಧಿಸಿತ್ತು. ತಪಸ್ ಪಾಲ್ ರೋಸ್ ವ್ಯಾಲಿ ಗ್ರೂಪ್ನ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದರು, ಬಂದೋಪಧ್ಯಾಯ ಪೋಂಜ್ಝೀ ಸಂಸ್ಥೆಯ ಪ್ರೊಮೋಟರ್ಗಳಲ್ಲಿ ಒಬ್ಬರಾಗಿದ್ದರು. ಬಂದೋಪಧ್ಯಾಯ ಬಂಧನವಾದಾಗ ಟಿಎಂಸಿ ಕಾರ್ಯಕರ್ತರು ಕೋಲ್ಕತ್ತಾದ ಬಿಜೆಪಿ ಕಛೇರಿ ಮೇಲೆ ದಾಳಿ ಮಾಡಿದ್ದರು, ಇದರಿಂದ ಹಲವಾರು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದರು. ವರದಿಗಳ ಪ್ರಕಾರ, ರೋಸ್ ವ್ಯಾಲಿ ಹಗರಣದ ಮೊತ್ತ ಬರೋಬ್ಬರಿ 17 ಸಾವಿರ ಕೋಟಿ ರೂಪಾಯಿ.
2014ರ ಡಿಸೆಂಬರ್ನಲ್ಲಿ, ಸಿಬಿಐ ಪಶ್ಚಿಮಬಂಗಾಳದ ಸಾರಿಗೆ ಸಚಿವ ಮತ್ತು ಟಿಎಂಸಿ ನಾಯಕ ಮದನ್ ಮಿತ್ರಾ ಅವರನ್ನು ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಸಿಬಿಐ ಅಧಿಕಾರಿ ಕಂಚನ್ ಪ್ರಸಾದ್ ಹೇಳುವಂತೆ, ‘ಮಿತ್ರಾ ಅವರು ಹಗರಣದ ಪ್ರಮುಖ ಆರೋಪಿ, ಅವರು ಕ್ರಮಿನಲ್ ಪಿತೂರಿ, ವಂಚನೆ ಎಸಗಿದ ಬಗ್ಗೆ ಸಾಕ್ಷ್ಯವಿದೆ’ ಎಂದಿದ್ದರು. ಶಾರದಾ ಉದ್ಯೋಗಿಗಳ ಯೂನಿಯನ್ ಮುಖ್ಯಸ್ಥರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
ಸತಾಬ್ದಿ ರಾಯ್, ನಟಿ ಮತ್ತು ಟಿಎಂಸಿ ಸಂಸದೆ. ಶಾರದಾದ ರಾಯಭಾರಿಯಾಗಿದ್ದರು. ಮೊದಮೊದಲು ನನಗೂ ಶಾರದಾ ಗ್ರೂಪ್ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಇವರು, ಬಳಿಕ ತಾನು ಶಾರದಾದ ರಿಯಲ್ ಎಸ್ಟೇಟ್ ವಲಯದೊಂದಿಗೆ ಸಂಪರ್ಕ ಹೊಂದಿದ್ದೆ, ಆದರೆ ಗ್ರೂಪ್ನ ಹಣಕಾಸು ವಲಯಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದರು.
ಶಾರದಾ ಗ್ರೂಪ್ನ ಏಜೆಂಟ್ಗಳು ಬಹಿರಂಗವಾಗಿ ತಾವು ಆಡಳಿತರೂಢ ಸರ್ಕಾರದೊಂದಿಗೆ ಸಂಬಂಧ ಹೊಂದಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಗ್ರೂಪ್ನ ಮೀಡಿಯಾ ಕಂಪನಿಗಳೂ ಟಿಎಂಸಿ ಬಹಳ ಹತ್ತಿರವಾಗಿದ್ದವು. ಟಿಎಂಸಿಯೊಂದಿಗೆ ನಿಕಟತೆ ಹೊಂದಿರುವ ಕಾರಣಕ್ಕಾಗಿಯೇ ನಾವು ಇದರಲ್ಲಿ ಹೂಡಿಕೆ ಮಾಡಿದ್ದೇವೆ ಎಂಬ ಹೇಳಿಕೆಗಳನ್ನು ಹಲವರು ನೀಡಿದ್ದರು.
’ನಮಗೆ ಮೊದಲು ಗ್ರೂಪ್ ಮುಖ್ಯಸ್ಥ ಮುಖ್ಯಮಂತ್ರಿಗಳ ಜೊತೆ ಇರುವ ಫೋಟೋಗಳನ್ನು ತೋರಿಸಲಾಯಿತು. ಗ್ರೂಪ್ನೊಂದಿಗೆ ತೃಣಮೂಲ ಸಂಸದ, ಶಾಸಕರಿದ್ದಾರೆ. ಹಾಗಾಗಿ ಗ್ರೂಪ್ಗೆ ಏನೂ ಆಗಲ್ಲವೆಂದು ನಮ್ಮನ್ನು ನಂಬಿಸಲಾಯಿತು’ ಎಂದು ಗ್ರೂಪ್ ಏಜೆಂಟ್ ಆಗಿದ್ದ ಆಟೋ ಡ್ರೈವರ್ವೊಬ್ಬರು ಹೇಳಿರುವ ಹೇಳಿಕೆಯನ್ನು ಫಸ್ಟ್ಪೋಸ್ಟ್ ವರದಿ ಮಾಡಿತ್ತು.
ಟಿಎಂಸಿಯ ಉಚ್ಛಾಟಿತ ಸಂಸದ ಕುನಾಲ್ ಘೋಷ್ ಅವರು ಶಾರದಾ ಮೀಡಿಯಾ ಯುನಿಟ್ನ ಸಿಇಓ ಆಗಿದ್ದರು. ಅವರು ಮಮತಾ ಬ್ಯಾನರ್ಜಿ ತುಂಬಾ ಆತ್ಮೀಯರಾಗಿದ್ದರು. ಆದರೆ ಹಗರಣ ನಡೆದ ಬಳಿಕ ಇಬ್ಬರ ನಡುವಣ ಸಂಬಂಧ ಹದಗೆಟ್ಟಿತ್ತು. ಇಂಡಿಯಾ ಟುಡೇ ವರದಿಯ ಪ್ರಕಾರ, ಚಿಟ್ ಫಂಡ್ ಕಂಪನಿ ಪಶ್ಚಿಮಬಂಗಾಳದಲ್ಲಿ ಬೆಳೆಯಲು ಮತ್ತು ಕುಸಿಯಲು ಟಿಎಂಸಿ ನಾಯಕರೇ ಕಾರಣ ಎಂದು ಕುನಾಲ್ ಹೇಳಿಕೊಂಡಿದ್ದರು. ಕಂಪನಿಯ ಕಾರ್ಯಾಚರಣೆಯ ಬಗ್ಗೆ, ಜನರನ್ನು ವಂಚಿಸಿ ಅದು ಅವರಿಂದ ಹೇಗೆ ಹಣ ಸಂಗ್ರಹ ಮಾಡುತ್ತಿದೆ ಎಂಬಿತ್ಯಾದಿಗಳ ಬಗ್ಗೆ ಟಿಎಂಸಿ ಹೈಕಮಾಂಡ್ಗೆ ಎಲ್ಲಾ ಮಾಹಿತಿ ಇತ್ತು ಎಂದು ಅವರು ಹೇಳಿಕೊಂಡಿದ್ದಾರೆ, ಅಷ್ಟೇ ಅಲ್ಲದೇ ಶಾರದಾ ಗ್ರೂಪ್ ಮುಖ್ಯಸ್ಥ ಸುದೀಪ್ತಾ ಸೇನ್ರೊಂದಿಗೆ ನಿಕಟ ಸಂಬಂಧ ಹೊಂದಿದ್ದ ಹಲವಾರು ಟಿಎಂಸಿ ನಾಯಕರ ಹೆಸರನ್ನೂ ಅವರು ಉಲ್ಲೇಖಿಸಿದ್ದಾರೆ. ಸುದೀಪ್ತಾ ಅವರು ಟಿಎಂಸಿ ಸಂಬಂಧವನ್ನೇ ಬಳಸಿಕೊಂಡು ಜನರನ್ನು ಠೇವಣಿ ಇಡುವಂತೆ ಮೋಸ ಮಾಡಿದರು ಎಂದು ಕುನಾಲ್ ಹೇಳಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಟಿಎಂಸಿ ರಾಜ್ಯಸಭಾ ಸಂಸದ ಶ್ರೀಂಜಾಯ್ ಬೋಸ್ ಮತ್ತು ಉಪಾಧ್ಯಕ್ಷ ರಜತ್ ಮಜೂಂದಾರ್ ಅವರೂ ಜೈಲು ಪಾಲಾಗಿದ್ದಾರೆ.
2014ರಲ್ಲಿ, ಮಮತಾ ಬ್ಯಾರ್ಜಿಯವರ ಪೇಟಿಂಗ್ವೊಂದನ್ನು ಸುದೀಪ್ತಾ ಸೇನ್ ಬರೋಬ್ಬರಿ 1.8 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ”ಸೇನ್ ಅವರು ಬ್ಯಾನರ್ಜಿಯವರ ಪೇಟಿಂಗ್ ಖರೀದಿ ಮಾಡಿದ್ದನ್ನು ತನಿಖೆಯ ವೇಳೆ ಅಲ್ಲಗೆಳೆದಿದ್ದಾರೆ, ಆದರೆ ಟಿಎಂಸಿಯ ಐಟಿ-ರಿಟರ್ನ್ಸ್ ದಾಖಲೆಗಳನ್ನು ಪರಿಶೀಲಿಸಿದರೆ ಈ ಗ್ರೂಪ್ ಪೇಟಿಂಗ್ ಪಡೆದಿದೆ ಎಂಬುದು ತಿಳಿದು ಬರುತ್ತದೆ’ ಎಂದು ಸಿಬಿಐ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರೆಡೀಫ್.ಕಾಮ್ ವರದಿಯ ಪ್ರಕಾರ, 2011-12ರಲ್ಲಿ ಶಾರದಾ ಚಿಟ್ ಫಂಡ್ನ ವಾರ್ಷಿಕ ಸಂಗ್ರಹ ರೂ.15 ಮಿಲಿಯನ್ನಿಂದ ರೂ.10.08 ಬಿಲಿಯನ್ವರೆಗೂ ಹೋಗಿತ್ತು, 2012-13ನೇ ಸಾಲಿನಲ್ಲಿ ರೂ.8.5 ಬಿಲಿಯನ್ ಆಗಿತ್ತು. ಅಷ್ಟೇ ಅಲ್ಲದೇ, ಬ್ಯಾನರ್ಜಿಯವರು ಜಂಗಲ್ಮಹಲ್ ಮುಂತಾದ ಹಿಂದುಳಿದ ಪ್ರದೇಶಗಳಲ್ಲಿ ವಿತರಣೆ ಮಾಡಿದ್ದ ಬೈಸಿಕಲ್, ಮೋಟಾರ್ಸೈಕಲ್, ಅಂಬ್ಯುಲೆನ್ಸ್ಗಳ ಪ್ರಚಾರಕ್ಕಾಗಿ ಶಾರದಾ ಗ್ರೂಪ್ ಮಿಲಿಯನ್ಗಟ್ಟಲೆ ದುಡ್ಡನ್ನು ವ್ಯಯಿಸಿತ್ತು.
ಮಮತಾ ಬ್ಯಾನರ್ಜಿ ಸರ್ಕಾರದಡಿ ಪಶ್ಚಿಮಬಂಗಾಳದಲ್ಲಿ ಪೋಂಜ್ಝೀ ಸ್ಕ್ಯಾಮ್ಗಳು ಗಗನಕ್ಕೆ ಮುಟ್ಟಿದವು ಮತ್ತು ಸಿಂಡಿಕೇಟ್ ರಾಜ್ ಅರಳಿದವು ಎಂಬ ಸತ್ಯವನ್ನು ಯಾರೊಬ್ಬರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಹಗರಣದ ಬಗ್ಗೆ ಸಿಬಿಐ ತನಿಖೆಯನ್ನು ಆಕೆ ಯಾಕೆ ಅಷ್ಟೊಂದು ಬಲವಾಗಿ ವಿರೋಧಿಸುತ್ತಾರೆ ಎಂಬುದನ್ನೂ ಇದು ವಿವರಿಸುತ್ತದೆ.
source: rightlog.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.