ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉಸೇನ್ ಬೋಲ್ಟ್, ಜಸ್ಟಿನ್ ಗಟ್ಲಿನ್ನಂತೆ ಮಿಂಚಬಲ್ಲ ಸಾಮರ್ಥ್ಯವುಳ್ಳ, ಭಾರತದ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಬಲ್ಲಂತಹ ಪ್ರತಿಭೆವುಳ್ಳ ಅಥ್ಲೀಟ್ ನಾರಾಯಣ ಠಾಕೂರ್. 27ವರ್ಷ ಇವರು, 2018ರ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತಕ್ಕೆ ಬಂಗಾರದ ಪದಕವನ್ನು ತಂದು ಕೊಟ್ಟವರು. ಈ ಸಾಧನೆ ಮಾಡಿದ ದೇಶದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.
ಹುಟ್ಟುತ್ತಲೇ ದೇಹದ ಎಡಭಾಗದಲ್ಲಿ ಹೆಮಿಪ್ಯಾರಸಿಸ್ ಸಮಸ್ಯೆಯನ್ನು ಹೊತ್ತುಕೊಂಡಿರುವ ಇವರು, ಟಿ-35 ಕೆಟಗರಿ(ಶೇ.70-80% ರಷ್ಟು ಹೊಂದಾಣಿಕೆಯ ದುರ್ಬಲತೆ ಇರುವ ಜನರಿಗೆ ಒಂದು ಅಂಗವೈಕಲ್ಯ ಕ್ರೀಡಾ ವರ್ಗೀಕರಣ)ಯಲ್ಲಿ ಬಂಗಾರ ಜಯಿಸಿದ್ದಾರೆ. ಓಟವನ್ನು ದಾಖಲೆಯ 13.50 ಸೆಕೆಂಡುಗಳಲ್ಲಿ ಪೂರೈಸಿದ ಕೀರ್ತಿ ಇವರದ್ದು. ಏಷ್ಯಾದ ಪ್ಯಾರಾ ಅಥ್ಲೀಟ್ಗಳ ಪೈಕಿ ಪ್ರಸ್ತುತ ಇವರು ನಂ.1 ಸ್ಥಾನದಲ್ಲಿದ್ದಾರೆ.
ಇಷ್ಟು ದೊಡ್ಡ ಸಾಧನೆ ಮಾಡಿರುವ ನಾರಾಯಣ್ ಅವರು, ತುಳಿದು ಬಂದ ಹಾದಿ ಹೂವಿನದ್ದಾಗಿರಲಿಲ್ಲ, ಮುಳ್ಳಿನ ಹಾದಿಯಲ್ಲಿ ನಡೆದು ಸಾಧನೆಯ ಬೆಟ್ಟವನ್ನು ಹತ್ತಿದವರು ಅವರು.
ಬಿಹಾರದ ಬಡ ಕುಟುಂಬದಲ್ಲಿ ಜನಿಸಿದ ಅವರ ಕುಟುಂಬ ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಕೆಲಸ ಮಾಡುತ್ತಿತ್ತು. ಕೈಗಾರಿಕೆಯ ಹೊಗೆಯಿಂದಾಗಿ ಅವರ ತಂದೆಗೆ ದೃಷ್ಟಿ ಹೀನತೆಯಾಗಿ ಬಳಿಕ ಅವರು ತೀರಿಯೂ ಹೋದರು. ಇದರಿಂದ ಅನಾಥಾಶ್ರಮದಲ್ಲಿ ಬೆಳೆಯುವುದು ನಾರಾಯಣ್ಗೆ ಅನಿವಾರ್ಯವಾಯಿತು.
ವಿಕಲಾಂಗತೆಯಿಂದ ಹಲವರ ವ್ಯಂಗ್ಯವನ್ನು ಎದುರಿಸಬೇಕಾಯಿತು. ಅಡ್ಡ ಹೆಸರು ಹಿಡಿದು ಹಲವರು ಕರೆಯುತ್ತಿದ್ದರು. ಶಾಲೆಯಲ್ಲಿನ ಬೆಳಗ್ಗಿನ ಪ್ರಾರ್ಥನೆಯ ವೇಳೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಪದಕ, ಹಾರಗಳಿಂದ ಸನ್ಮಾನಿಸುತ್ತಿದ್ದನ್ನು ನೋಡಿ, ನನಗೂ ಹೀಗೆ ಆಗಬೇಕೆಂದು ಅವರು ಬಯಸುತ್ತಿದ್ದರು. ಆದರೆ ವಿಕಲಾಂಗತೆ ಅವರಿಗೆ ದೊಡ್ಡ ಸವಾಲಾಗಿತ್ತು.
ಉಜ್ವಲ ಭವಿಷ್ಯವನ್ನು ಪಡೆಯಬೇಕೆಂದು ಹಠ ತೊಟ್ಟಿದ್ದ ಅವರು, ವಿಕಲಾಂಗ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲು ನಿರ್ಧರಿಸಿದರು. ಇದಕ್ಕಾಗಿ ಹಣ ಹೊಂದಿಸಲು ಪಾನ್ ಸ್ಟಾಲ್ನಲ್ಲಿ ಕೆಲಸ ಮಾಡಿದರು. ಬೆಳಿಗ್ಗೆ ಐದು ಗಂಟೆಗೆ ಎದ್ದು ಪಾನ್ ಸ್ಟಾಲ್ನತ್ತ ಓಡಿದರು. ಬಳಿಕ ಹೋಟೆಲ್ನಲ್ಲಿ, ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದರು. ದಿನಕ್ಕೆ 200 ರೂಪಾಯಿ ಸಂಪಾದನೆ ಮಾಡಲು ಇಡೀ ರಾತ್ರಿ ಹಗಲು ದುಡಿದರು.
ಆದರೆ ಹೆಮಿಪ್ಯಾರಸಿಸ್ನಿಂದಾಗಿ ಅವರು ಕ್ರಿಕೆಟ್ ತಂಡ ಸೇರಲು ಸಾಧ್ಯವಾಗಲೇ ಇಲ್ಲ, ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬಂತೆ ಅವರು ಉತ್ತಮ ಓಟಗಾರನಾದರು. ಓಟದಲ್ಲೇ ಅವರಿಗೆ ಉಜ್ವಲ ಭವಿಷ್ಯವೊಂದು ರೂಪುಗೊಂಡಿತ್ತು.
ಸ್ನೇಹಿತನ ಸಲಹೆಯಂತೆ ಜವಹಾರ್ ಲಾಲ್ ನೆಹರೂ ಸ್ಟೇಡಿಯಂಗೆ ಹೋದ ಇವರು, ಭಾರತಕ್ಕೆ ಪದಕ ತರುವ ನಿರ್ಧಾರವನ್ನು ಅವರು ಅಲ್ಲೇ ಮಾಡಿದರು. 3 ಬಸ್ ಬದಲಿಸಿ, ನಾಲ್ಕು ಗಂಟೆ ಸವೆಸಿ ಸ್ಟೇಡಿಯಂ ತಲುಪಿ, ತರಬೇತಿಯನ್ನು ಪಡೆದರು. ನಾರಾಯಣ್ ಕೋಚ್ ಅಮಿತ್ ಖನ್ನಾ ಅವರು ಕೂಡ ಭಾರತದ ವೇಗದ ಅಥ್ಲೀಟ್, 2018ರ ಏಷ್ಯನ್ ಪ್ಯಾರಾ ಗೇಮ್ಸ್ಗೆ ಅವರಿಂದಲೇ ತರಬೇತಿಯನ್ನು ಇವರು ಪಡೆದುಕೊಂಡರು.
ಗುರುವನ್ನು ಮೀರಿಸಿದ ಶಿಷ್ಯರಾಗಿದ್ದ ನಾರಾಯಣ್, 2015ರಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 100 ಮೀ, 200ಮೀ, ಶಾಟ್ಪುಟ್ಗಳಲ್ಲಿ ಬಂಗಾರದ ಪದಕ ಜಯಿಸಿದ್ದರು. ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕವನ್ನು ಜಯಿಸಿದರು, 2016ರ ನ್ಯಾಷನಲ್ ಗೇಮ್ನಲ್ಲಿ ಟಿ-37 ಕೆಟಗರಿಯಲ್ಲಿ 100ಮೀ, 200ಮೀ, ಶಾಟ್ಪುಟ್ನಲ್ಲಿ ಬಂಗಾರದ ಪದಕ ಜಯಿಸಿದರು. 2017ರಲ್ಲಿ ವಿಶ್ವ ಚಾಂಪಿಯನ್ಶಿಪ್ಗೆ ಆಯ್ಕೆಯಾದರು. ಆದರೆ ಆಯ್ಕೆ ಪ್ರಕ್ರಿಯೆಗೆ ಹೋಗಲು ಬೇಕಿದ್ದ ರೂ 1.5 ಲಕ್ಷಗಳನ್ನು ಸ್ನೇಹಿತರು ಕೋಚ್ನಿಂದ ಪಡೆದುಕೊಂಡು ಹೋಗಬೇಕಾದ ದುರಾದೃಷ್ಟ ಅವರಿಗೆ ಬಂದೊದಗಿದ್ದು ವಿಪರ್ಯಾಸ. ಆದರೆ ಆಯ್ಕೆಯಾಗದೆ ಅವರು ವಾಪಾಸ್ ಕೂಡ ಬರಬೇಕಾಯಿತು. ಆದರೆ 2018ರಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್ಗೆ ಆಯ್ಕೆಗೊಂಡು, 100 ಮೀ ರೇಸ್ನಲ್ಲಿ ಬಂಗಾರ ಗೆದ್ದು ಇತಿಹಾಸ ನಿರ್ಮಿಸಿದ್ದು ಈಗ ಇತಿಹಾಸ.
ಅವರ ಊರಲ್ಲಿ ಅವರ ಗೆಲುವಿನ ಸಂಭ್ರಮಾಚರಣೆ ಜರಗಿತು, ಪ್ರಧಾನಿಯವರೂ ಅಭಿನಂದಿಸಿದರು, 30 ಲಕ್ಷ ರೂಪಾಯಿ ಬಹುಮಾನ ಸಿಕ್ಕಿತು. ಸರ್ಕಾರ ರೂ.1 ಕೋಟಿಯನ್ನು ಘೋಷಿಸಿತು. ಆದರೆ ಡೋಪಿಂಗ್ ಟೆಸ್ಟ್ನಲ್ಲಿ ಅವರು ವಿಫಲರಾಗಿದ್ದಾರೆ ಎಂಬ ವರದಿಯೊಂದು ಅವರಿಗೆ ಗೆಲುವಿನ ಮರುದಿನವೇ ಬರಸಿಡಿಲಿನಂತೆ ಬಂದೆರಗಿತು. ಶೀತ, ಕೆಮ್ಮಿಗೆಂದು ವೈದ್ಯರಿಂದ ಪಡೆದುಕೊಂಡಿದ್ದ ಔಷಧಿ ಅವರಿಗೆ ಮಾರಕವಾಗಿ ಪರಿಣಮಿಸಿತು. ನಿಷೇಧಿತ ಪದಾರ್ಥಗಳುಳ್ಳ ಔಷಧಿ ಕೊಡಬೇಡಿ, ನನಗೆ ಡೋಪಿಂಗ್ ಪರೀಕ್ಷೆ ಎದುರಿಸಲಿಕ್ಕಿದೆ ಎಂದು ಅವರು ವೈದ್ಯರಿಗೆ ಮನವಿ ಮಾಡಿಕೊಂಡಿದ್ದರೂ ಅವರ ಪರೀಕ್ಷೆ ವಿರುದ್ಧವಾಗಿ ಬಂದಿದ್ದು, ನಿಷೇಧಕ್ಕೊಳಗಾಗುವ, ಪ್ರಶಸ್ತಿ ವಾಪಾಸ್ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ವೈದ್ಯರ ಪ್ರಮಾಣಪತ್ರವನ್ನು ಪಡೆದು, ಒಂದಿಷ್ಟು ಕಠಿಣ ಪರೀಕ್ಷೆಗಳನ್ನು ಮತ್ತೆ ಎದುರಿಸಿ ಅವರು ಹೇಗೋ ಆರೋಪದಿಂದ ಮುಕ್ತಗೊಂಡರು.
ಈಗ ಅವರು ಎಲ್ಲಾ ಕ್ರೀಡಾಳುಗಳಿಗೂ ನೀಡುವ ಸಲಹೆ ಒಂದೇ, ‘ಯಾವುದೇ ವೈದ್ಯ, ಸ್ನೇಹಿತರನ್ನು ನಂಬಬೇಡಿ. ನಾಡಾ ಮತ್ತು ವಾಡಾ ಯಾವ ಔಷಧಿಗಳನ್ನು ಪಡೆಯಬೇಕು, ಬೇಡ ಎಂಬ ಪಟ್ಟಿಯನ್ನು ಸ್ಪಷ್ಟವಾಗಿ ನೀಡಿದೆ. ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ ಇದೆ. ಎರಡೆರಡು ಬಾರಿ ಗೂಗಲ್ ಮಾಡಿ ಪರಿಶೀಲಿಸಿ ಬಳಿಕವೇ ಔಷಧಿ ಖರೀದಿಸಿ’ ಎನ್ನುತ್ತಾರೆ.
ಒಬ್ಬ ವಿಕಲಾಂಗನಾಗಿ, ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಿರುವ ನಾರಾಯಣ್ ಇಂದು ಭಾರತದ ಕ್ರೀಡಾ ತಾರೆಯಾಗಿ ಮಿನುಗುತ್ತಿದ್ದಾರೆ. ಕಷ್ಟಕ್ಕೆ ತಲೆಬಾಗಿ ಜೀವನವೇ ಹೊರೆ ಎಂದು ಅಂದುಕೊಳ್ಳುವವರು ಇವರನ್ನು ನೋಡಿ ಕಲಿಯಬೇಕಾದುದು ಸಾಕಷ್ಟಿದೆ.
source: indiatimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.