ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಎಲ್ಲಾ ಪಕ್ಷಗಳು ಪ್ರಚಾರ ಸಿದ್ಧತೆಯನ್ನು ಆರಂಭಿಸಿಕೊಂಡಿವೆ. ಪ್ರಮುಖ ಮಾಧ್ಯಮ ಸಂಸ್ಥೆಗಳ ವಿಷಯಕ್ಕೆ ಬಂದರೆ, ಅವುಗಳು 2014ರಿಂದಲೇ ಚುನಾವಣಾ ಪ್ರಚಾರ ಅಭಿಯಾನವನ್ನು ಆರಂಭಿಸಿವೆ. ಹಿಂದೆಲ್ಲಾ ಈ ಮಾಧ್ಯಮ ಸಂಸ್ಥೆಗಳು ಒಂದು ಪಕ್ಷ ಅಥವಾ ಒಬ್ಬ ರಾಜಕಾರಣಿಯ ಪರವಾಗಿ ಅಥವಾ ವಿರುದ್ಧವಾಗಿ ಜನಾಭಿಪ್ರಾಯವನ್ನು ಸೃಷ್ಟಿಸಲು ಯಶಸ್ವಿಯಾಗುತ್ತಿದ್ದವು. ಆದರೀಗ ಕಾಲ ಬದಲಾಗಿದೆ.
ಸಾಮಾಜಿಕ ಜಾಲತಾಣಗಳ ಉಗಮಕ್ಕೂ ಮುನ್ನ, ಚುನಾವಣೆ ಸಂದರ್ಭದಲ್ಲಿ ಜನಾಭಿಪ್ರಾಯ ಸೃಷ್ಟಿಸುವಲ್ಲಿ ಮಾಧ್ಯಮ ಸಂಸ್ಥೆಗಳು ಏಕಸ್ವಾಮ್ಯತೆ ಹೊಂದಿದ್ದವು. ಆದರೆ ಸಾಮಾಜಿಕ ಜಾಲತಾಣಗಳು ಮುನ್ನಲೆಗೆ ಬಂದ ಬಳಿಕ ಎಲ್ಲವೂ ಬದಲಾಗಿದೆ. ಇವುಗಳು ಜನರ ನಡುವಣ ಮಾಹಿತಿ ಹಂಚಿಕೆಯ ಪ್ರಮುಖ ಮಾಧ್ಯಮಗಳಾಗಿ ಬದಲಾಗಿವೆ. ಮಾಹಿತಿ ಹರಿಯುವಿಕೆಯನ್ನು ನಿಯಂತ್ರಿಸುವ ತಾಕತ್ತು ಇಂದು ಮಾಧ್ಯಮಗಳಿಗಿಲ್ಲ. ಅಷ್ಟೇ ಅಲ್ಲದೇ, ಇವುಗಳು ನೀಡುವ ಸುದ್ದಿಯೇ ಅಂತಿಮ, ಪವಿತ್ರ ಎಂದು ಪರಿಗಣಿಸುವ ಪ್ರಮೇಯವೂ ಇಲ್ಲ. ಮಾಧ್ಯಮಗಳ ವರದಿಯನ್ನು ಪರಿಶೀಲನೆ ನಡೆಸುವ ಮತ್ತು ಪ್ರಶ್ನಿಸುವ ಮಟ್ಟಕ್ಕೆ ನೆಟ್ಟಿಜನ್ಗಳು ಬೆಳೆದಿದ್ದಾರೆ. ಕೆಲವೊಮ್ಮೆ ಮಾಧ್ಯಮಗಳು ಹರಿಬಿಡುವ ಫೇಕ್ನ್ಯೂಸ್, ಅಜೆಂಡಾಗಳನ್ನೂ ಇವರು ಬಹಿರಂಗಪಡಿಸುತ್ತಾರೆ. 2019ರ ಲೋಕಸಭಾ ಚುನಾವಣೆಯ ವಿಷಯಕ್ಕೆ ಬಂದರೆ, ಈ ಚುನಾವಣೆ ಫೀಲ್ಡ್ನಲ್ಲಿ ನಡೆಯುವಂತಹುದಲ್ಲ, ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಡೆಯುವಂತಹುದು ಎಂದೇ ಹೇಳಬಹುದು. ನಿಜವಾದ ಚುನಾವಣೆಯನ್ನು ಗೆಲ್ಲುವ ಮುನ್ನ ಡಿಜಿಟಲ್ ಯುದ್ಧವನ್ನು ಇಲ್ಲಿ ಪಕ್ಷಗಳು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.
ಸಾಮಾಜಿಕ ಜಾಲತಾಣದಲ್ಲಿ ಗೆಲ್ಲುವ ವಿಷಯಕ್ಕೆ ಬಂದರೆ, ಬಿಜೆಪಿಗೆ ನಿಜಕ್ಕೂ ಮೇಲುಗೈ ಇದೆ. ಬಿಜೆಪಿಯ ಟ್ರಂಪ್ ಕಾರ್ಡ್ ನರೇಂದ್ರ ಮೋದಿಯವರಿಗೆ ಖ್ಯಾತ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಮಾಣದ ಬೆಂಬಲಿಗರಿದ್ದಾರೆ. ವರದಿಗಳ ಪ್ರಕಾರ, ಮೋದಿಯವರಿಗೆ ಟ್ವಿಟರ್ನಲ್ಲಿ 4.5 ಕೋಟಿ ಹಿಂಬಾಲಕರಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ಇರುವುದು ಕೇವಲ 82 ಲಕ್ಷ ಹಿಂಬಾಲಕರು. ಇಬ್ಬರ ಹಿಂಬಾಲಕರ ನಡುವೆ ಐದು ಪಟ್ಟು ಅಂತರವಿದೆ. ಫೇಸ್ಬುಕ್ನಲ್ಲೂ ಮೋದಿಯದ್ದೇ ಪ್ರಾಬಲ್ಯ. 4.34 ಕೋಟಿ ಮಂದಿ ಅವರನ್ನು ಫೇಸ್ಬುಕ್ನಲ್ಲಿ ಹಿಂಬಾಲಿಸುತ್ತಿದ್ದಾರೆ. ರಾಹುಲ್ ಅವರಿಗೆ ಕೇವಲ 22 ಲಕ್ಷ ಹಿಂಬಾಲಕರಿದ್ದಾರೆ. ಈ ಅಂತರ ನಿಜಕ್ಕೂ ಅಪಾರ, ಅಪಾರ. ಇನ್ಸ್ಟಾಗ್ರಾಂನಲ್ಲೂ ಇದೇ ಕಥೆ. ಇಲ್ಲಿ ಮೋದಿಗೆ 1.64 ಕೋಟಿ ಹಿಂಬಾಲಕರಿದ್ದರೆ, ರಾಹುಲ್ ಅವರಿಗೆ 4.96 ಲಕ್ಷ ಹಿಂಬಾಲಕರಿದ್ದಾರೆ.
ಇನ್ನು ಸಕ್ರಿಯತೆಯ ವಿಷಯಕ್ಕೆ ಬಂದರೆ, ರಾಹುಲ್ ಗಾಂಧಿಯವರ ಪೋಸ್ಟ್ಗಳಿಗಿಂತ ಮೋದಿಯವರ ಪೋಸ್ಟ್ಗಳು ಉತ್ತುಂಗದಲ್ಲಿವೆ. 2018ರ ಡಿ.24 ಮತ್ತು 2018ರ ಡಿ.31ರ ನಡುವೆ ನಡೆಸಲಾದ ಅಧ್ಯಯನದಲ್ಲಿ, ನಿತ್ಯ ಟ್ವಿಟರ್ನಲ್ಲಿ ಮೋದಿ 1.60 ಲಕ್ಷ ಸಕ್ರಿಯತೆಯನ್ನು ಪ್ರದರ್ಶಿಸಿದ್ದಾರೆ, ರಾಹುಲ್ ಕೇವಲ 29 ಸಾವಿರ ಅಷ್ಟೇ. ವಾರಕ್ಕೆ ಹೋಲಿಸಿದರೆ, ಮೋದಿ 12 ಲಕ್ಷ ಸಕ್ರಿಯತೆ ಮತ್ತು ರಾಹುಲ್ 2 ಲಕ್ಷ 33 ಸಾವಿರ ಸಕ್ರಿಯತೆ ಪ್ರದರ್ಶಿಸಿದ್ದಾರೆ.
ಫೇಸ್ಬುಕ್ನಲ್ಲೂ ಮೋದಿ ಪ್ರಾಬಲ್ಯ ಮುಂದುವರೆಯುತ್ತದೆ. ನಿತ್ಯದ ಆಧಾರದಲ್ಲಿ, ಮೋದಿ ಫೇಸ್ಬುಕ್ನಲ್ಲಿ 80,588 ಸಕ್ರಿಯತೆಯನ್ನು ಪ್ರದರ್ಶಿಸಿದರೆ, ರಾಹುಲ್ ಪ್ರರ್ದಶಿಸಿದ್ದು ಕೇವಲ 25,513 ಸಕ್ರಿಯತೆ. ವಾರದ ಲೆಕ್ಕಾಚಾರದಲ್ಲಿ ಮೋದಿಯದ್ದು 6.44 ಲಕ್ಷ ಮತ್ತು ರಾಹುಲ್ 2.04 ಲಕ್ಷ. ಕೇವಲ ಮೋದಿಯಲ್ಲ, ಇಡೀ ಬಿಜೆಪಿ ಕಾಂಗ್ರೆಸ್ಗಿಂತ ಹೆಚ್ಚಿನ ಪ್ರಾಬಲ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹೊಂದಿದೆ. ಕಾಂಗ್ರೆಸ್ ಖಾತೆಗಳಿಗಿಂತ ಬಿಜೆಪಿ ಖಾತೆಗಳನ್ನು ಜನ ಹೆಚ್ಚು ಹಿಂಬಾಲಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆ, ಉತ್ಪನ್ನ, ಪಕ್ಷದ ಜನಪ್ರಿಯತೆಯನ್ನು ಅಳೆಯಲು ಗೂಗಲ್ ಟ್ರೆಂಡ್ ಹೊಸ ಅಸ್ತ್ರವಾಗಿ ಹೊರಹೊಮ್ಮಿದೆ. ನಾಗರಿಕರಿಗೆ ಹೆಚ್ಚಿನ ಇಂಟರ್ನೆಟ್ ಲಭ್ಯತೆಯನ್ನು ನೀಡುತ್ತಿರುವುದರಿಂದ ಗೂಗಲ್ ಆಧಾರಿತ ವಿಶ್ಲೇಷನೆಗಳು ಭಾರತಕ್ಕೆ ಅತ್ಯವಶ್ಯಕವಾಗಿದೆ. ಭಾರತದಲ್ಲಿ ಸುಮಾರು 512 ಮಿಲಿಯನ್ ಜನರು ಇಂಟರ್ನೆಟ್ ಬಳಸುತ್ತಿದ್ದಾರೆ. ಈ ಬಳಕೆದಾರರು ಹೆಚ್ಚಿನ ಸಮಯವನ್ನು ಗೂಗಲ್ ಸರ್ಚ್, ಬ್ರೌಸಿಂಗ್ನಲ್ಲೇ ಕಳೆಯುತ್ತಾರೆ. ಗೂಗಲ್ ಸರ್ಚ್ನಿಂದ ಜನರ ಆಸಕ್ತಿ, ಆಯ್ಕೆ ಇತ್ಯಾದಿಗಳು ಬಹಿರಂಗಗೊಳ್ಳುತ್ತವೆ. 2014ರಿಂದ ಇಂಟರ್ನೆಟ್ನಲ್ಲಿ ಬಿಜೆಪಿ ಅತೀವವಾಗಿ ಟ್ರೆಂಡ್ ಆಗಿದೆ. ಹೆಚ್ಚಿನವರು ಈ ಪಕ್ಷದತ್ತ ಆಸಕ್ತಿಯನ್ನು ತೋರಿಸಿದ್ದಾರೆ. ಚುನಾವಣೆ ಬಂದಾಗಲೆಲ್ಲಾ ಇಂಟರ್ನೆಟ್ ಬಳಕೆದಾರರ ಆಸಕ್ತಿ ಬಿಜೆಪಿ ಬಗ್ಗೆ ಹೆಚ್ಚಾಗುವುದು ಗೋಚರಿಸುತ್ತಿದೆ. ಗೂಗಲ್ ಟ್ರೆಂಡ್ ಪ್ರಕಾರ, ವಿದೇಶ ಮತ್ತು ದೇಶ ಎರಡಲ್ಲೂ ಬಿಜೆಪಿ ಹೆಚ್ಚು ಹುಡುಕಾಡಲ್ಪಟ್ಟ ಪಕ್ಷ. ಭಾರತದಲ್ಲಿ ಶೇ.64ರಷ್ಟು ಗೂಗಲ್ ಸರ್ಚ್ಗಳು ಬಿಜೆಪಿ ಪರವಾಗಿ ಇದೆ, ಶೇ.36ರಷ್ಟು ಕಾಂಗ್ರೆಸ್ ಪರವಾಗಿ ಇದೆ. 2014ರಿಂದಲೂ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಮೋದಿ ಮೇಲುಗೈನಲ್ಲೇ ಇದ್ದಾರೆ ಎಂಬುದು ಗೂಗಲ್ ಟ್ರೆಂಡ್ನಿಂದ ಸಾಬೀತಾಗಿದೆ.
2004ರಲ್ಲಿ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಿಗೆ ಹೆಚ್ಚಿನ ಮಹತ್ವ ಇರಲಿಲ್ಲ. ಆದರೆ ಈಗ ಮೈದಾನದಲ್ಲಿ ಚುನಾವಣಾ ಯುದ್ಧ ಗೆಲ್ಲಬೇಕಾದರೆ ಸಾಮಾಜಿಕ ಜಾಲತಾಣದಲ್ಲಿ ಮೊದಲು ಯುದ್ಧವನ್ನು ಗೆಲ್ಲಬೇಕಾಗುವುದು ಅನಿವಾರ್ಯವಾಗುತ್ತದೆ. ಬಿಜೆಪಿ ಇದಕ್ಕಾಗಿ ಈಗಾಗಲೇ ಪೂರ್ಣ ಸಜ್ಜಾಗಿದೆ. ಜನರು ಈಗ ಹೆಚ್ಚು ಹೆಚ್ಚು ಮಾಹಿತಿಗಳನ್ನು ಇಂಟರ್ನೆಟ್ನಿಂದಲೇ ಪಡೆಯುತ್ತಿರುವುದು, ಮುಂಬರುವ ಚುನಾವಣೆಯಲ್ಲಿ ಇದು ಜನಾಭಿಪ್ರಾಯವನ್ನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.