ಪ್ರೀಮಿಯರ್ ಸ್ಟುಡಿಯೋ ಸಂಸ್ಥೆಯಿಂದ ಪುಟ್ಟಣ ಕಣಗಾಲ್ ರವರು 1975 ರಲ್ಲಿ ಎಂ.ಎನ್.ಮೂರ್ತಿ ಯವರ ಕಾದಂಬರಿಯನ್ನು ಆಯ್ಕೆ ಮಾಡಿಕೊಂಡು ಚಿತ್ರಕಥೆ ಬರೆದು, ನಿರ್ದೇಶನ ಮಾಡುತ್ತಾರೆ. ಬಿ.ಎನ್.ಹರಿದಾಸ್ ರವರ ಛಾಯಾಗ್ರಹಣ, ವಿಜಯ ಭಾಸ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಆರತಿ, ಮಾರ್ಗರೇಟ್ ಥಾಮ್ಸನ್, ಲೀಲಾವತಿ, ಉಮಾ ಶಿವಕುಮಾರ್, ಅನಿಲ್ ಕುಮಾರ್, ಸೀತಾರಾಮ್ ಹಾಗೂ ಲೋಕನಾಥ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಉದಯ್ ಕುಮಾರ್ ಹಾಗೂ ಅಂಬರೀಶ್ ರವರು ಗೌರವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಥೆ:
ಸ್ತ್ರೀ ಪ್ರಧಾನ ಪಾತ್ರಗಳೇ ಇರುವ ಈ ಸಿನಿಮಾದಲ್ಲಿ ಆರತಿ, ಮಾರ್ಗರೇಟ್ ಥಾಮ್ಸನ್, ಲೀಲಾವತಿ, ಉಮಾಶಿವಕುಮಾರ್ ರವರು ಇಡೀ ಸಿನಿಮಾವನ್ನು ಆವರಿಸಿದ್ದಾರೆ. ಒಂದು ಪುಟ್ಟ ಕುಟುಂಬ. ಆ ಕುಟುಂಬದ ಯಜಮಾನನ ಮಗ ಉನ್ನತ ವ್ಯಾಸಂಗಕ್ಕಾಗಿ ಹಾಗೂ ಉದ್ಯೋಗ ಅರಸಿ ಅಮೇರಿಕಾದಲ್ಲಿ ನೆಲೆಸಿರುತ್ತಾನೆ. ತುಂಬಾ ವರುಷಗಳ ನಂತರ ಮಗ ಭಾರತಕ್ಕೆ ಹಿಂದಿರುಗಿ ಬರುತ್ತಾನೆ. ಮಗನ ಬರುವಿಕೆಯು ಸ್ವಾಭಾವಿಕವಾಗಿ ತಾಯಿ (ಲೀಲಾವತಿ) ಹಾಗೂ ತಂದೆ (ಸೀತಾರಾಮ್)ಗೆ ಖುಷಿಯಾಗುತ್ತದೆ. ಶಾರದಳನ್ನು (ಆರತಿ) ತಮ್ಮ ಸೊಸೆಯನ್ನಾಗಿ ಮಾಡಿಕೊಳ್ಳುವ ಆಸೆ ಆ ತಂದೆ-ತಾಯಿಗೆ ಇತ್ತು. ಆದರೆ ಮಗ, ಅಮೇರಿಕಾದ ಹುಡುಗಿಯನ್ನೇ ಮದುವೆಯಾಗಿ ಕರೆದುಕೊಂಡು ಬರುತ್ತಾನೆ. ಆ ಅಮೇರಿಕಾ ಮೂಲದ ಸೊಸೆಯನ್ನು ಒಪ್ಪಲು ತಾಯಿ ತಯಾರಿಲ್ಲ. ಆದರೆ ಹಿಂದೂ ಧರ್ಮ, ಸಂಪ್ರದಾಯಗಳ ಮೇಲೆ ಎಲಿಸಾ (ಮಾರ್ಗರೇಟ್ ಥಾಮ್ಸನ್) ಗಿದ್ದ ಗೌರವ ನೋಡಿ, ಮಾವ ತನ್ನ ಸೊಸೆಯನ್ನು ಮನೆಗೆ ಕರೆತರುತ್ತಾನೆ. ಬೇಡದ ಸೊಸೆ ಮನೆಗೆ ಬಂದಾಗ ಅತ್ತೆ ಪಡುವ ಮಾನಸಿಕ ಹಿಂಸೆ, ತಾನು ಪ್ರೀತಿಸಿದ ಹುಡುಗ, ಬೇರೊಬ್ಬ ಹೆಣ್ಣನ್ನು ಮದುವೆಯಾಗಿ ಮನೆಗೆ ಬಂದಾಗ ಶಾರದಳಿಗಾಗುವ ಸಂಕಟ, ಮಗಳ ತಂದೆಯಾಗಿ (ಲೋಕನಾಥ್) ಪಡುವ ಸಂಕಟ, ಯಾತನೆ, ಇವೆಲ್ಲಾ ಅಂಶಗಳ ನಡುವೆ ಈ ಸಿನಿಮಾ ಸಾಗುತ್ತದೆ. ಭಾವನೆಗಳ ತಮ್ಮ ಮುಖಭಾವದ ನಟನೆಯಲ್ಲಿ ತೋರಿಸುವಲ್ಲಿ ಎಲ್ಲಾ ನಟರು ಸೈ ಎನಿಸಿಕೊಂಡಿದ್ದಾರೆ. ಮಾರ್ಗರೇಟ್ ಥಾಮ್ಸನ್ ಕೂಡ, ಕನ್ನಡದಲ್ಲಿಯೇ ನಿಧಾನವಾಗಿ ಮಾತಾಡುತ್ತಾ, ಭಾವಾಭಿನಯ, ಕಣ್ಣಿನಲ್ಲಿಯೇ ಭಾವವನ್ನು ಹೊರಗೆಡುಹುವುದು ಇಷ್ಟವಾಗುತ್ತದೆ.
ಯಾವ ಮನೆಯಾದರೂ, ಮನವಾದರೂ ಎರಡು ಜಡೆಗಳು ಒಂದಾದಾಗ ಸುಖಃ ನೆಮ್ಮದಿ ಶಾಂತಿ ಅಲ್ಲಿ ನೆಲೆಸುತ್ತದೆ ಎನ್ನುವು ಸಂದೇಶವನ್ನು ಸಾರಿ ಸಾರಿ ಹೇಳಲು ಈ ರೀತಿಯಲ್ಲಿ ವಿಭಿನ್ನ ಬಗೆಯ ನಿರೂಪಣೆಯ ಮೊರೆ ಹೊಕ್ಕಿದ್ದಾರೆ ಅನ್ನಿಸುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಮನೆಯ ಆಳಿನ ಪಾತ್ರ “ಮಲ್ಲ” ಹೇಳುವ ಮಾತು.. ಕಾರಿನಲ್ಲಿ ಕೂತು ಬರುವಾಗ ಇರುವ ಒಗ್ಗಟ್ಟು ಸಂಸಾರದಲ್ಲಿಯೂ ಇದ್ದಾರೆ ನಮ್ಮ ಪರ್ಪಂಚ ಸುಂದರ ಅತಿ ಸುಂದರ (ಸುಮಾರು ಹತ್ತು ಹೆಂಗಸರು ಅಂಬಾಸಡರ್ ಕಾರಿನಲ್ಲಿ ಬಿಳಿ ಹೆಂಡ್ತಿಯನ್ನು ನೋಡಲು ಬರುತ್ತಾರೆ.. ಆಗ ಮಲ್ಲ ಹೇಳುವ ಮಾತು) ರಂಗೇನ ಹಳ್ಳಿಯಾಗೆ ಹಾಡಿನಲ್ಲಿ ಪಕ್ಕ ಹಳ್ಳಿ ಕುಣಿತ ಕುಣಿವ ಇವರು, ಹ್ಯಾಪಿಯೇಸ್ಟ್ ಮೊಮೆಂಟ್ ಹಾಡಿನಲ್ಲಿ ಪಾಶ್ಚಾತ್ಯ ಮತ್ತು ನಮ್ಮ ದೇಶದ ಎರಡು ತರಹದ ನೃತ್ಯ ಮಾಡುತ್ತಾ ಹಾಡಿರುವುದು ಸೂಪರ್ ಎನ್ನಿಸುತ್ತದೆ. ಜೊತೆಯಲ್ಲಿಯೇ ಮುಖ ಭಾವ ಬೇಕಾದ ದೃಶ್ಯಗಳಲ್ಲಿ ಮಾತ್ರ ಅವರ ಮುಖವನ್ನು ಹತ್ತಿರದಿಂದ ತೋರಿಸಿ, ತುಟಿ ಚಾಲನೆಗೆ ಸರಿಯಾದ ಸಂಭಾಷಣೆಗಳನ್ನು ಕೊಟ್ಟು.. ಉದ್ದುದ್ದ ಮಾತುಗಳಿಗೆ ದೂರದಿಂದ ದೃಶ್ಯವನ್ನು ಚಿತ್ರಿಕರಿಸಿರುವುದು ಜಾಣ್ಮೆಯ ನಡೆಯಾಗಿದೆ. ಮಾತುಗಳಿಗೆ.. ಹಾಡುಗಳಿಗೆ ಸರಿಯಾದ ತುಟಿ ಚಾಲನೆ ನೀಡಿರುವ ಈ ಕಲಾವಿದೆಗೆ ಸಹಸ್ರ ಅಭಿನಂದನೆಗಳು. “ಅತ್ತೆ ನಿಮಗೆ ಬಾಯ್ ಬೇಬಿ ಬೇಕೋ ಗರ್ಲ್ ಬೇಬಿ ಬೇಕೋ… ನಾ ಬೇಬಿ ಕೊಟ್ಟರೆ ನನ್ನ ಮೇಲಿನ ಕೋಪ ಒಂಟೋಯ್ತದೆ ಅಲ್ಲವಾ ಅತ್ತೆ” ಅತ್ತ್ಯುತ್ತಮ ದೃಶ್ಯ ಮತ್ತು ಸಂಭಾಷಣೆ.
ಆರತಿಯವರು ನೀರಿನ ತರಹ ಯಾವ ಪಾತ್ರ ಕೊಟ್ಟರೂ ಅದಕ್ಕೆ ಪ್ರವೇಶ ಮಾಡಿಯೇ ಬಿಡುತ್ತಾರೆ.. ಇಡಿ ಚಿತ್ರದಲ್ಲಿ ತಮ್ಮ ಹತಾಶೆ, ಪ್ರೀತಿ, ಪ್ರೇಮ, ನೋವು, ನಲಿವು, ಸಂತಸ ಎಲ್ಲವನ್ನು ಅದುಮಿಟ್ಟುಕೊಂಡು ಹದವಾಗಿ ಕೊಡುವ ಅಭಿನಯ ಇಷ್ಟವಾಗುತ್ತದೆ. ಅತ್ತೆ ಮಾವನ ಮನೆಯಲ್ಲದ್ದಿದ್ದರೂ ಅವರನ್ನು ಅತ್ತೆ ಮಾವ ಎಂದು ಕರೆಯುತ್ತಾ ಅಕ್ಷರಶಃ ಆ ಮನೆಯಲ್ಲಿಯೇ ಕಳೆಯುವ, ಹಾಗೆಯೇ ತನ್ನ ಅಪ್ಪ ಅಮ್ಮನ ಗೊಂದಲಗಳು, ನೋವುಗಳು ಇವಕ್ಕೆ ತಕ್ಕ ಉತ್ತರ ಕೊಡುತ್ತಾ ಎರಡನ್ನು ಸಂಭಾಳಿಸುವಂಥಹ ಅಭಿನಯ ನೀಡಿ ಗೆದ್ದಿದ್ದಾರೆ. ಎಲಿಸಾಳನ್ನು ತನ್ನ ಅತ್ತೆ ಮಾವನ ಮನದಲ್ಲಿ ಭದ್ರವಾಗಿ ಕೂರಿಸುವ ಅವರ ಪ್ರಯತ್ನ ಮತ್ತು ಅದರಲ್ಲಿ ಯಶಸ್ವೀ ಆಗುವ ಅಭಿನಯ ಗಮನ ಸೆಳೆಯುತ್ತದೆ. ಪ್ರೀತಿ ತ್ಯಾಗ ಮಮತೆ ಎಲ್ಲವನ್ನು ಹದವಾದ ಪಾಕದಲ್ಲಿ ಬೆರೆಸಿ ಅಭಿನಯದ ಮೂಲಕ ನಮಗೆ ಹಂಚಿದ್ದಾರೆ. ಆರತಿ ನಿಮಗೆ ಒಂದು ಸಲಾಂ.
ಬೇಡದ ಸೊಸೆಯನ್ನು ನೋಡಿಕೊಳ್ಳುವ ಬೇಡ ಕೆಲಸವನ್ನು ಸಿಟ್ಟು ಸೆಡವುಗಳಲ್ಲಿ ತೋರಿಸುವ ಲೀಲಾವತಿ, ತನ್ನ ಆಂಗ್ಲ ಸೊಸೆ ತುಳಸಿ ಕಟ್ಟೆಯನ್ನು ಸುತ್ತುವುದನ್ನು ಕಂಡು ಅಭಿಮಾನ ಉಕ್ಕಿದರೂ, ಅತ್ತೆ ಎನ್ನುವ ಅಹಂ ಅಡ್ಡಿ ಬರುವ ಅಭಿನಯ, ತನ್ನ ಸೊಸೆ ಗರ್ಭಿಣಿ ಎಂದು ಗೊತ್ತಾದಾಗ ತಡೆದು ತಡೆದು ಬಂದು ಪ್ರೀತಿ ವ್ಯಕ್ತ ಪಡಿಸುವ ರೀತಿ.. ಸೂಪರ್.. ಲೀಲಾವತಿ ಇಲ್ಲಿ ಎಂದಿನಂತೆ ಕಲಾವತಿಯಾಗಿ ಬಿಟ್ಟಿದ್ದಾರೆ.
ಮೃದು ಮಾತು, ಮೃದು ಅಭಿನಯ, ಸರಳ ವ್ಯಕ್ತಿತ್ವ ಇದರ ಸಮಾಗಮ ಸೀತಾರಾಮ್. ಸೊಸೆಯನ್ನು ಕರೆದು ತರುವ ಇವರು ಅವಳ ಗುಣಕ್ಕೆ ಮಾರು ಹೋಗಿ ತನ್ನ ಸ್ನೇಹಿತನಿಗೆ ಕೊಟ್ಟ ಮಾತನ್ನು ಮುರಿಯುತ್ತಾರೆ. ಆದರೆ ಅದಕ್ಕೆ ಅವರು ಕೊಡುವ ಕಾರಣ “ದುಡ್ಡು ಕೊಟ್ಟು ಅವಳ ಕಾಲಿಗೆ ಬಿದ್ದು ನನ್ನ ಮಗನ ಜೀವನದಿಂದ ಹೊರಗೆ ಕಲಿಸಬೇಕು ಎಂದು ಹೋದೆ.. ಅವಳ ಗುಣ ನಡತೆಯನ್ನು ನೋಡಿ.. ನಮ್ಮ ದೇಶದ ಸಂಸ್ಕೃತಿ ಗುಣವನ್ನು ಆದರಿಸುತ್ತದೆಯೇ ಹೊರತು ಹಣವನ್ನಲ್ಲ ಎನ್ನುವಂಥಹ ತರ್ಕ ಬದ್ಧ ಮಾತುಗಳನ್ನು ಆಡುವಾಗ ಅವರ ತೊಳಲಾಟ ಇಷ್ಟವಾಗುತ್ತದೆ.
ಚಿತ್ರದ ಬಹುತೇಕ ಭಾಗ ಸ್ಟುಡಿಯೋ ಒಳಗೆ ನಡೆದರೂ ಪುಟ್ಟಣ್ಣ ಅವರ ಸುಂದರ ತಾಣಗಳ ಹುಡುಕಾಟ ಮೇಲುಕೋಟೆ, ತೊಣ್ಣುರ್ ಕೆರೆ, ದೊಡ್ಡ ಆಲದ ಮರ ಇವುಗಳ ಸುತ್ತಮುತ್ತಲಿನ ವಿಹಂಗಮ ದೃಶ್ಯಗಳನ್ನು ಕಣ್ಣ ಮುಂದೆ ಬಿಡಿಸಿದ್ದಾರೆ.
ಮನದ ಕಡಲಲ್ಲಿ ಬರುವ ಅಸಮಾಧಾನದ ತರಂಗಗಳನ್ನು ಜೋಪಾನವಾಗಿ ತಡೆದು ಅದನ್ನು ಸರಿಯಾಗಿ ಬಳಕೆ ಮಾಡಿ ಅದನ್ನು ಏರಿ ಸಾಗಿ ನಮ್ಮ ಸಮಾಧಾನ ಎನ್ನುವ ಗುರಿಯನ್ನು, ಸಂಬಂಧ ಎನ್ನುವ ಗುಡಿಯನ್ನು ಮುಟ್ಟಲೇಬೇಕು ಎನ್ನುವ ಸುಂದರ ಸಂದೇಶವನ್ನು ಹೊತ್ತು ತಂದ ಬಿಳಿ ಹೆಂಡ್ತಿ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಬತ್ತಳಿಕೆಯಿಂದ ಹೊರ ಬಂದ ಇನ್ನೊಂದು ಚಿತ್ರ ರತ್ನ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಮನೆಯ ಸೊಸೆಯಾಗಿ ಬಂದಾಕೆ, ಆ ಮನೆಯ ಆದರ್ಶಗಳಿಗೆ ಬೆಲೆ ಕೊಟ್ಟು, ಮನೆಯವರ ಗೌರವ ಕಾಪಾಡುತ್ತಾ, ಪ್ರೀತಿ ಸಂಪಾದಿಸುತ್ತಾ, ಮನೆಯ ಅವಿಭಾಜ್ಯ ಅಂಗವಾಗುವ ಸೊಸೆಯ ಕರ್ತವ್ಯಗಳ ಕುರಿತು ತಿಳಿಯಲು.
2. ಧರ್ಮ-ಅಧರ್ಮ, ಪ್ರೀತಿ, ಆಣೆ-ಪ್ರಮಾಣ ಕುರಿತು ತಿಳಿಯಲು.
3. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.