ಅತೀ ಕ್ಲಿಷ್ಟಕರ ಸವಾಲುಗಳನ್ನು ಎದುರಿಸುತ್ತಾ ದೇಶದ ಭದ್ರತೆಗೆ ಸಹಕರಿಸುತ್ತಿರುವ ಭಾರತೀಯ ಗುಪ್ತಚರರು ನಿಜವಾದ ಅರ್ಥದಲ್ಲಿ ಲೆಜೆಂಡ್ಗಳಾಗಿರುತ್ತಾರೆ. ಸಮರ್ಥ ಬೇಹುಗಾರರಿಲ್ಲದೇ ಹೋದರೆ, ದೇಶದ ಆಂತರಿಕ, ಬಾಹ್ಯ ಭದ್ರತೆಗಳು ದುರ್ಬಲಗೊಳ್ಳುತ್ತದೆ. ನಮ್ಮ ಗುಪ್ತಚರರು ದಂತಕಥೆಗಳಿದ್ದಂತೆ, ಅವರ ಸುತ್ತ ಹತ್ತು ಹಲವು ಕಥೆಗಳು ಹುಟ್ಟಿಕೊಂಡಿರುತ್ತದೆ, ಈ ಕಥೆಗಳಲ್ಲಿ ಅರ್ಧ ಸತ್ಯ ಮತ್ತು ಅರ್ಧ ಕಲ್ಪನೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಅಂತಹ ಒಂದು ಅತ್ಯಮೂಲ್ಯ ಜೀವಂತ ದಂತಕಥೆ ಅಜಿತ್ ಕುಮಾರ್ ದೋವಲ್. ನಮ್ಮ ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ. ಹಲವಾರು ಭಾರತ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕಿದ ಧೀರ, ಇತ್ತೀಚಿಗೆ ಇಸಿಸ್ ಮಾದರಿಯ ಮತ್ತೊಂದು ಸಂಘಟನೆ ಧ್ವಂಸವಾಗುವಂತೆ ಮಾಡಿದ ಹಿಂದಿನ ರುವಾರಿ.
ದೇಶದಲ್ಲಿ ವಿವಿಧ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ, ಇಸಿಸ್ ಪ್ರೇರಿತ ಸಂಘಟನೆಯೊಂದರ ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ರಾಷ್ಟ್ರೀಯ ತನಿಖಾ ತಂಡ ಮಹತ್ವದ ಪಾತ್ರವಹಿಸಿದೆ. ಉತ್ತರಪ್ರದೇಶ, ದೆಹಲಿಗಳಲ್ಲಿ ದಾಳಿ ನಡೆಸಿ 25 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡು, ಹಲವರನ್ನು ಬಂಧಿಸಿದೆ. ಇಂತಹ ಒಂದು ದೊಡ್ಡ ಕಾರ್ಯಾಚರಣೆಯ ಹಿಂದೆ ದೋವಲ್ ಅವರ ಸಲಹೆ ಸೂಚನೆಗಳು ಕೆಲಸ ಮಾಡಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ನರೇಂದ್ರ ಮೋದಿ ಆಡಳಿತದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಕುಗ್ಗಿರುವುದರ ಹಿಂದೆ ಭದ್ರತಾ ಸಲಹೆಗಾರರಾದ ದೋವಲ್ ಅವರ ಚಾಣಾಕ್ಷ್ಯ ನಡೆ ಇದೆ ಎಂಬುದು ಸತ್ಯ.
ಕೇರಳ ಕೇಡರ್ನ ಐಪಿಎಸ್ ಅಧಿಕಾರಿಯಾಗಿರುವ ದೋವಲ್, ಪ್ರಧಾನಿಗಳಿಗೆ ಬಾಹ್ಯ ಮತ್ತು ಆಂತರಿಕ ಭದ್ರತೆಗಳ ವಿಷಯದಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತಾರೆ. ದೋವಲ್ ಒರ್ವ ಚಾಣಾಕ್ಷ್ಯ, ಹಲವು ವರ್ಷಗಳ ಕಾಲ ಭಾರತದ ಗುಪ್ತಚರ ಇಲಾಖೆಯಲ್ಲಿ ಭೂಗತರಾಗಿ ಕಾರ್ಯನಿರ್ವಹಿಸಿದವರು. ಶತ್ರುಗಳ ಹೆಜ್ಜೆಯನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿವುಟಿ ಹಾಕುವುದರಲ್ಲಿ ಅವರು ನಿಪುಣ. 7 ವರ್ಷಗಳ ಕಾಲ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದಲ್ಲಿ ಮುಸ್ಲಿಮನಂತೆ ಮಾರುವೇಷ ತೊಟ್ಟು ಬೇಹುಗಾರರಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಪಾಕ್ನಲ್ಲಿದ್ದಾಗ, ಒಂದು ಬಾರಿ ವ್ಯಕ್ತಿಯೊಬ್ಬ ಇವರ ಕಿವಿಯಲ್ಲಿದ್ದ ತೂತನ್ನು ಗಮನಿಸಿ ಇವರು ಹಿಂದೂ ಎಂಬುದನ್ನು ಪತ್ತೆ ಹಚ್ಚಿದ್ದ. ನಿಮ್ಮ ಕಿವಿಯಲ್ಲಿ ತೂತು ಇದೆ, ನೀವು ಹಿಂದೂ ತಾನೇ ಎಂದು ಪ್ರಶ್ನಿಸಿದ್ದ, ಇವರು ಇಲ್ಲ ಎಂದು ಹೇಳುತ್ತಿದ್ದರೂ ಆತ ಪದೇ ಪದೇ ಅದೇ ಪ್ರಶ್ನೆ ಕೇಳುತ್ತಿದ್ದ. ಕೊನೆಗೆ ಇಲ್ಲ ನಾನು ಹಿಂದೂವಾಗಿದ್ದೆ, ಈಗ ಮುಸ್ಲಿಂ ಆಗಿ ಮತಾಂತರವಾಗಿದ್ದೇನೆ ಎಂದಿದ್ದರು. ಬಳಿಕ ಹೆದರಬೇಡಿ, ನಾನು ಕೂಡ ಹಿಂದು ನನ್ನ ಕುಟುಂಬದವರು ಹತ್ಯೆಯಾದ ಕಾರಣ ಭಯಗೊಂಡು ಮುಸ್ಲಿಂ ವೇಷಧಾರಿಯಾಗಿ ಬದುಕುತ್ತಿದ್ದೇನೆ ಎಂದ ಆತ, ಇವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಕಪಾಟಿನಲ್ಲಿದ್ದ ಶಿವಾಜಿ, ದುರ್ಗಾ ಮಾತೆಯ ಮೂರ್ತಿಯನ್ನು ತೋರಿಸಿದ್ದ, ಅಲ್ಲದೇ ಪ್ಲಾಸ್ಟಿಕ್ ಸರ್ಜರಿ ಮೂಲಕ ಕಿವಿ ತೂತನ್ನು ಮುಚ್ಚುವಂತೆ ಸಲಹೆ ನೀಡಿದ್ದ. ಆತನ ಸಲಹೆಯನ್ನು ದೋವಲ್ ಪಾಲಿಸಿದ್ದಾರೆ.
ಇವರ ಸುತ್ತ ಇರುವ ಮತ್ತೊಂದು ಕಥೆಯೆಂದರೆ ಅದು ‘ಆಪರೇಶನ್ ದಾವೂದ್’. ಈ ಕಥೆ ದೃಢಪಟ್ಟಿಲ್ಲ, ಬಹುಶಃ ಮುಂದೆಯೂ ಅದು ದೃಢಪಡುವುದಿಲ್ಲ ಎಂದೆನಿಸುತ್ತದೆ. 2005ರಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಮಗಳು ಮೆಹ್ರೂಕ್ ಮತ್ತು ಪಾಕಿಸ್ಥಾನಿ ಕ್ರಿಕೆಟರ್ ಜಾವೆದ್ ಮಿಯಾಂದದ್ನ ಮಗ ಜುನೈದ್ನ ಮದುವೆ ಮೆಕ್ಕಾದಲ್ಲಿ ನಡೆದಿತ್ತು, ದುಬೈ ಹಯತ್ ಹೋಟೆಲ್ನಲ್ಲಿ ಅದ್ಧೂರಿ ಔತನಕೂಟ ಏರ್ಪಡಿಸಲಾಗಿತ್ತು. ದಾವೂದ್ ಇದರಲ್ಲಿ ಭಾಗಿಯಾಗುತ್ತಿದ್ದಾನೆ ಎಂಬ ಖಚಿತ ಮಾಹಿತಿ ಗುಪ್ತಚರಕ್ಕೆ ಸಿಕ್ಕಿತ್ತು. ಇದನ್ನೇ ಅವಕಾಶವಾಗಿ ಬಳಸಲು ನಿರ್ಧರಿಸಿದ್ದ ದೋವಲ್(ಆಗ ಐಬಿ ನಿರ್ದೇಶಕರಾಗಿದ್ದರು), ದಾವೂದ್ ವಿರುದ್ಧ ತಿರುಗಿಬಿದ್ದು ಸೇಡು ತೀರಿಸಲು ಹವಣಿಸುತ್ತಿದ್ದ ಛೋಟಾ ರಾಜನ್ನ ಬಂಧಿತ ಸಹಚರರನ್ನು ಬಳಸಿ, ದಾವೂದ್ನನ್ನು ಔತನಕೂಟದಲ್ಲೇ ಹತ್ಯೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ರಾಜನ್ನ ಇಬ್ಬರು ಸಹಚರರಿಗೆ ಗುಪ್ತ ಜಾಗದಲ್ಲಿ ತರಬೇತಿಯನ್ನೂ ನೀಡಿದ್ದರು. ಆದರೆ ಕೆಲವೊಂದು ಮಾಹಿತಿಗಳು ಸೋರಿಕೆಯಾದ ಹಿನ್ನಲೆಯಲ್ಲಿ ಬೇರೆ ಆಯ್ಕೆ ಇಲ್ಲದೆ ಈ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾದ ಅನಿವಾರ್ಯತೆ ಬಂದೊದಗಿತು. ಕಾರ್ಯಾಚರಣೆ ಮೊಟಕುಗೊಳ್ಳಲು ಬೇರೆ ಬೇರೆ ಕಾರಣಗಳನ್ನು ನೀಡಲಾಗುತ್ತದೆ. ಆದರೆ ಇದುವರೆಗೆ ಈ ಬಗೆಗಿನ ಮಾಹಿತಿ ಅಧಿಕೃತಗೊಂಡಿಲ್ಲ.
ಇತ್ತೀಚಿಗೆ ದೋವಲ್ ಅವರ ಮತ್ತೊಂದು ಮಹತ್ವದ ನಡೆ ಎಂದರೆ ಅದು ‘ಆಪರೇಶನ್ ರಾಜಪಕ್ಷೆ’. ಶ್ರೀಲಂಕಾದ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ರಾಜಪಕ್ಷೆಯನ್ನು ಸೋಲುವಂತೆ ಮಾಡಿದ್ದರಲ್ಲಿಯೂ ದೋವಲ್ ಪಾತ್ರ ಇದೆ ಎನ್ನಲಾಗಿದೆ. ರಾಜಪಕ್ಷೆ ಭಾರತದ ಮಟ್ಟಿಗೆ ಸ್ನೇಹಿತನಲ್ಲದ ವ್ಯಕ್ತಿ, ಅವರ ಅಧಿಕಾರ ಭಾರತದ ಹಿತಾಸಕ್ತಿಗೆ ವಿರುದ್ಧವಾಗುತ್ತಿತ್ತು. ಒಪ್ಪಂದಕ್ಕೆ ವಿರುದ್ಧವಾಗಿ ಭಾರತಕ್ಕೆ ತಿಳಿಸದೆ ಅವರು ತಮ್ಮ ನೆಲದಲ್ಲಿ ಚೀನಾದ ಎರಡು ಹಡುಗು ನಿಲುಗಡೆಗೆ ಅವಕಾಶ ನೀಡಿದ್ದರು, ಇದು ದೋವಲ್ಗೆ ಹಿಡಿಸಲಿಲ್ಲ.
ರಾಜಪಕ್ಷೆಯನ್ನು ಕೆಳಕ್ಕಿಳಿಸಲು ಅಲ್ಲಿನ ವಿರೋಧಪಕ್ಷದ ಮೈತ್ರಿಪಾಲ ಸಿರಿಸೇನಾಗೆ ಸಹಾಯ ಮಾಡಿದ ಆರೋಪದ ಮೇರೆಗೆ ಇತ್ತೀಚಿಗೆ ಕೊಲಂಬೋ ಸ್ಟೇಶನ್ನ ರಾ ಮುಖ್ಯಸ್ಥನನ್ನು ಶ್ರೀಲಂಕಾ ವಜಾಗೊಳಿಸಿತ್ತು. ರಾಜಪಕ್ಷೆ ಸತತ ಚುನಾವಣೆಯಲ್ಲಿ ಸೋತಿದ್ದಾರೆ ಎಂಬುದು ನಿಜ. ಆದರೆ ಸಿರಿಸೇನಾರನ್ನು ರಾಜಪಕ್ಷೆ ಸಂಪುಟದಿಂದ ಹೊರನಡೆಯುವಂತೆ ಸೂಚಿಸಿದ್ದೇ ಅಜಿತ್ ದೋವಲ್ ಎನ್ನಲಾಗಿದೆ. ಎರಡು ಚೀನಾ ಸಬ್ಮರೀನ್ಗಳು ಶ್ರೀಲಂಕಾ ನೆಲದಲ್ಲಿ ನಿಲುಗಡೆಯಾದ ಬಳಿಕ ದೋವಲ್ ರಾಜಪಕ್ಷೆಯನ್ನು ಭೇಟಿಯಾಗಲು ಲಂಕಾಗೆ ತೆರಳಿದ್ದರು. ಮೇಲ್ನೋಟಕ್ಕೆ ಇದೊಂದು ಸರಳ ಸಭೆ, ಭಾರತದ ಹಿತಾಸಕ್ತಿ ಕಾಯ್ದುಕೊಳ್ಳಲು ನೀಡಿದ ಭೇಟಿ. ಆದರೆ ಇನ್ನೊಂದು ಮೂಲದ ಪ್ರಕಾರ, ದೋವಲ್ ಶ್ರೀಲಂಕಾಗೆ ತೆರಳಿದ್ದು ಸಿರಿಸೇನಾ, ವಿಜಯ ವಿಕ್ರಮಸಿಂಘೆ ಮತ್ತು ಚಂದ್ರಿಕಾ ಕುಮಾರತುಂಗರನ್ನು ಭೇಟಿಯಾಗಲು. ತಮಿಳು ಪಕ್ಷ ಟಿಎನ್ಎ ಸದ್ಯರನ್ನೂ ಅವರು ಭೇಟಿಯಾಗಿದ್ದಾರೆ. ಚುನಾವಣೆ ಬಹಿಷ್ಕರಿಸದಂತೆ ತಮಿಳು ಪಕ್ಷಕ್ಕೆ ಅವರು ಮನವಿ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ, ರಾಜಪಕ್ಷೆ ವಿರುದ್ಧ ಸ್ಪರ್ಧಿಸದಂತೆ ವಿಕ್ರಮಸಿಂಘೆಯ ಮನವೊಲಿಸಿದ್ದರು ಮತ್ತು ಸಿರಿಸೇನಾಗೆ ರಾಜಪಕ್ಷೆ ವಿರುದ್ಧ ಸ್ಪರ್ಧಿಸುವಂತೆ ಮನವೊಲಿಸಲು ಕುಮಾರತುಂಗರಿಗೆ ದೋವಲ್ ತಿಳಿಸಿದ್ದರು ಎನ್ನಲಾಗಿದೆ.
2014ರಲ್ಲಿ 46 ಭಾರತೀಯ ನರ್ಸ್ಗಳು ತಿಕ್ರಿತ್ನಲ್ಲಿ ಮತ್ತು 39 ಭಾರತೀಯ ಕಾರ್ಮಿಕರು ಮಸೂಲ್ನಲ್ಲಿ ಇಸಿಸ್ ಕಪಿಮುಷ್ಟಿಯಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಬೊಬ್ಬೆ ಹೊಡೆದವು, ಆರೋಪಿಸಿದವು. ಆದರೆ ಮೋದಿ ಜೊತೆಗಿನ ಉನ್ನತ ಮಟ್ಟದ ಸಭೆಯ ಬಳಿಕ ದೋವಲ್ ಖುದ್ದಾಗಿ ಇರಾಖ್ಗೆ ತೆರಳಿದರು. ಇರಾಖ್ನಲ್ಲಿ ಏನು ನಡೆಯಿತು ಎಂಬುದು ತಿಳಿದಿಲ್ಲ. ಇನ್ನೊಂದೆಡೆ ಐಬಿ ನಿರ್ದೇಶಕ ಆಸಿಫ್ ಇಬ್ರಾಹಿಂ ಅವರನ್ನು ರಿಯಾದ್ಗೆ ಕಳುಹಿಸಿ ಬಿಡುಗಡೆಗೆ ಮಾತುಕತೆ ನಡೆಸಲಾಯಿತು. ದೊವಲ್ ಭೇಟಿ ನೀಡಿದ್ದು ಜೂನ್ 25ರಂದು, ಇಬ್ರಾಹಿಂ ಭೇಟಿ ನೀಡಿದ್ದು 26ರಂದು. ಜುಲೈ 6ರಂದು ಕೇರಳದ ಎಲ್ಲಾ ನರ್ಸ್ಗಳು ಇರಾಕ್ನಿಂದ ಕೊಚ್ಚಿ ವಿಮಾನನಿಲ್ದಾಣಕ್ಕೆ ಬಂದಿಳಿದರು.
ಆಪರೇಶನ್ ಬ್ಲೂ ಸ್ಟಾರ್ ವೇಳೆ, ದೋವಲ್ ಸ್ವರ್ಣಮಂದಿರದೊಳಗೆ ಪ್ರವೇಶಿಸಿದ್ದರು ಎನ್ನಲಾಗಿದೆ, ಅಲ್ಲಿ ಐಎಸ್ಐ ಅಧಿಕಾರಿಯಂತೆ ಬಿಂಬಿಸಿಕೊಂಡು ಇವರು ಖಲಿಸ್ತಾನ್ ಟೆರರ್ ಕಮಾಂಡರ್ ಸುರ್ಜಿತ್ ಸಿಂಗ್ ಪೆಂತ ಜೊತೆ ಕಾರ್ಯನಿರ್ವಹಿಸಿದ್ದರು. ಆತನೊಂದಿಗೆ ಸೇರಿ ಸ್ಫೋಟಕ ತಯಾರಿಕೆಯಲ್ಲೂ ಭಾಗಿಯಾಗಿದ್ದರು. ಈ ಮೂಲಕ ಗುಪ್ತಚರಕ್ಕೆ ಬೇಕಾದ ಎಲ್ಲಾ ಮಾಹಿತಿಯನ್ನೂ ಅವರು ಕಲೆ ಹಾಕಿದರು. ಇದರಿಂದಾಗಿ ಬಳಿಕ ಕಾರ್ಯಾಚರಣೆ ನಡೆದು ಖಲಿಸ್ಥಾನ್ ಉಗ್ರರು ಶರಣಾಗುವಂತಾಯಿತು.
ಚಬಹಾರ್ ಬಂದರಿಗೆ ಸಂಬಂಧಿಸಿದಂತೆ ಇರಾನ್ ಮತ್ತು ಇಸ್ರೇಲ್ಗೆ ದೋವಲ್ ಗುಪ್ತ ಭೇಟಿಗಳನ್ನು ನೀಡಿದ್ದಾರೆ ಎಂದೂ ಹೇಳಲಾಗಿದೆ, ಇರಾನಿನ ಸೂಕ್ಷ್ಮ ವಿಚಾರಗಳ ಬಗ್ಗೆ ಅವರು ಚರ್ಚಿಸಿದ್ದಾರೆ. ಈ ಬಗೆಗಿನ ಮಾಹಿತಿಗಳು ಬಹಿರಂಗವಾಗಿಲ್ಲ. ಇಸ್ರೇಲ್ನಲ್ಲೂ, ದೋವಲ್ ನ್ಯೂಕ್ಲಿಯರ್ ಸಹಕಾರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಅಜಿತ್ ದೋವಲ್, ತಮ್ಮ ಗಮನವನ್ನು ಇಸಿಸ್ನತ್ತ ಕೇಂದ್ರೀಕರಿಸಿದ್ದಾರೆ. ಇಸಿಸ್ ಪ್ರೇರಿತ ಉಗ್ರರಿಂದ ಎದುರಾಗುವ ಬೆದರಿಕೆಗಳನ್ನು ಹೇಗೆ ಹತ್ತಿಕ್ಕಬಹುದು ಎಂಬ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಈಗಾಗಲೇ ಹಲವು ಸಂಚುಗಳನ್ನು ಧ್ವಂಸಮಾಡಲಾಗಿದೆ, ಹಲವು ಬಂಧನಗಳಾಗಿವೆ, ಇಸಿಸ್ ಮಾದರಿಗಳು ನಾಶವಾಗಿದೆ. ಪಾಕಿಸ್ಥಾನದ ಐಎಸ್ಐನ ಕುತಂತ್ರಗಳನ್ನೂ ಗಮನಿಸುತ್ತಿರುವ ಅವರು, ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತಾ ವ್ಯವಸ್ಥೆಗಳನ್ನು ಬಲಗೊಳಿಸಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಬಲಿಷ್ಠ ಪ್ರಧಾನಿಗೆ ಸಮರ್ಥ ಸಲಹೆಗಾರನಾಗಿ ದೋವಲ್ ಮಿಂಚುತ್ತಿದ್ದಾರೆ, ದೇಶವನ್ನು ಬಲಪಡಿಸುತ್ತಿದ್ದಾರೆ.
ಮೂಲ ಲೇಖನ: ನೂಪುರ್ ಜೆ ಶರ್ಮಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.