ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಹು ಭಾಷಾ ಖಳ ನಟ ಹಾಗೂ ಗೌರಿ ಲಂಕೇಶ್ ಹತ್ಯೆಯ ನಂತರ ಸಾಮಾಜಿಕ ಹೋರಾಟಗಾರರಾಗಿ ಹೆಚ್ಚು ಗುರುತಿಸಿಕೊಂಡಿರುವ ಪ್ರಕಾಶ್ ರೈ ಅವರು ಬಹಿರಂಗಪಡಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಆದರೆ ಅವರ ಇದುವರೆಗಿನ ನಡೆಗಳನ್ನು ಹಾಗೂ ಕರ್ನಾಟಕದ ಸದ್ಯದ ರಾಜಕೀಯ ಸ್ಥಿತಿ ಗತಿಗಳನ್ನು ಗಮನಿಸಿದರೆ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ಆದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಬಹುದು ಎಂದು ಊಹಿಸಿಕೊಳ್ಳಬಹುದಾಗಿದೆ. ಹಾಗೆ ಹೇಳಲು ಸಾಕಷ್ಟು ಕಾರಣಗಳೂ ಇವೆ.
ಪ್ರಕಾಶ್ ರೈ/ರಾಜ್ ಅವರು ಗೌರಿ ಲಂಕೇಶ್ ಅವರ ಹತ್ಯೆಯಾಗುವವರೆಗೂ ಕೇವಲ ನಟರಾಗಿ ಮಾತ್ರ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ TV ಸಂದರ್ಶನವೊಂದರಲ್ಲಿ ಕರ್ನಾಟಕದ ರೈತರ ವಿಚಾರದ ಪ್ರಶ್ನೆಯೊಂದಕ್ಕೆ “ನಾನು ಕೇವಲ ನಟ ಮಾತ್ರ, ನನ್ನಲ್ಲಿ ಇಂತಹಾ ಪ್ರಶ್ನೆಗಳನ್ನೆಲ್ಲಾ ಏಕೆ ಕೇಳುತ್ತೀರಿ?” ಎಂದು ಕೋಪದಿಂದ ಮೈಕ್ ಕಿತ್ತೆಸೆದು ಹೊರಟಿದ್ದೂ ಇದೆ. ಆದರೆ ಗೌರಿ ಲಂಕೇಶ್ ಹತ್ಯೆಯಾದ ಕೆಲವು ಸಮಯದ ನಂತರ ಅದೇ ವಿಚಾರವನ್ನಿಟ್ಟುಕೊಂಡು ನಿರಂತರವಾಗಿ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿಗಳನ್ನು ನಡೆಸುತ್ತಾ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡತೊಡಗಿದರು. ಹಿಂದೆ “ನಾನೊಬ್ಬ ಕೇವಲ ನಟ, ನನ್ನಲ್ಲಿ ಬೇರೆ ಏನನ್ನೂ ಕೇಳಬೇಡಿ” ಎನ್ನುತ್ತಿದ್ದ ಅವರು ನಂತರದ ದಿನಗಳಲ್ಲಿ ರೈತರು, ಆದಿವಾಸಿಗಳು, ಕೂಲಿ ಕಾರ್ಮಿಕರು, ವಿಚಾರವಾದಿಗಳು, ಸಾಹಿತಿಗಳು… ಹೀಗೆ ಎಲ್ಲರ ಜೊತೆಯೂ ಕುಳಿತು ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿಯವರ ವಿರುದ್ಧ ಪ್ರತಿಭಟಿಸಿ ಸಾಮಾಜಿಕ ಬದ್ಧತೆ ಮೆರೆದಿದ್ದರು. ಆಗಿನಿಂದಲೂ ಬಿಜೆಪಿಯ ಎಲ್ಲ ನಡೆಗಳನ್ನೂ ವಿರೋಧಿಸುತ್ತಾ ಬಂದ ಪ್ರಕಾಶ್ ರೈ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣದ ನಿಧಾನಗತಿಯ ತನಿಖೆಯೂ ಸೇರಿದಂತೆ ಕಾಂಗ್ರೆಸ್ ಪಕ್ಷದ ಯಾವ ನಡೆಗಳ ವಿರುದ್ಧ ಕೂಡಾ ಚಕಾರವೆತ್ತಿಲ್ಲ. ಇತ್ತೀಚೆಗಷ್ಟೇ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರೊಂದಿಗೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ಕೃಷ್ಣರಾಜಸಾಗರದ ಬಳಿ ರಾಜ್ಯ ಸರ್ಕಾರ ನಿರ್ಮಿಸಲುದ್ದೇಶಿಸಿರುವ ಡಿಸ್ನಿ ಲ್ಯಾಂಡ್ ಮಾದರಿಯ ಕಾಮಗಾರಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಬೇಕಿದ್ದ ಅವರು ಅಲ್ಲಿ ಕೂಡಾ ಕಾಣಿಸಿಕೊಂಡಿರಲಿಲ್ಲ. ಇದು ಅವರ ಕಾಂಗ್ರೆಸ್ ಪಕ್ಷದ ಮೇಲಿನ ನಿಷ್ಠೆಯನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಲಾಭ ಪಡೆಯಲು ಕಾಂಗ್ರೆಸ್ ಪಕ್ಷ ಕೂಡಾ ಸಾಕಷ್ಟು ಕಸರತ್ತು ಮಾಡಿತ್ತು ಮತ್ತು ಆ ಪ್ರಕರಣ ನಡೆದ ಕೂಡಲೇ ತನಿಖೆ ಪ್ರಾರಂಭವಾಗುವುದಕ್ಕೂ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ವಿರುದ್ಧವಿರುವ ಒಂದು ಪಕ್ಷ ಹಾಗೂ ಸಂಘಟನೆಗಳ ವಿರುದ್ಧ ನಿರಂತರ ಆರೋಪ ಮಾಡುವ ಮೂಲಕ ತನಿಖೆಯ ದಿಕ್ಕನ್ನು ನಿರ್ಧರಿಸಿದ ಬಹುತೇಕ ಸಾಹಿತಿಗಳು ಹಾಗೂ ವಿವಿಧ ಅಕಾಡೆಮಿಗಳ ಅಧ್ಯಕ್ಷರುಗಳು/ಸದಸ್ಯರುಗಳು ಕಾಂಗ್ರೆಸ್ ಪಕ್ಷದ ಅವಧಿಯಲ್ಲಿಯೇ ನೇಮಕವಾದವರಾಗಿದ್ದರು. ಹಾಗೆ ಪ್ರಕರಣದ ತನಿಖೆ ಆರಂಭವಾಗುವುದಕ್ಕೂ ಮೊದಲೇ ವಿರೋಧಿಗಳ ಮೇಲೆ ಬೊಟ್ಟು ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಮಾಡಿಕೊಟ್ಟವರಲ್ಲಿ ಬಹುತೇಕರು ಪ್ರಕಾಶ್ ರೈ ಅವರಿಗೂ ಅತ್ಯಾಪ್ತರೇ ಆಗಿದ್ದಾರೆ. ಅದೇ ರೀತಿ ಅವರೆಲ್ಲರೂ ಕೂಡಾ ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಿಗೂ ಆಪ್ತರೆನ್ನುವುದು ಕೂಡಾ ಸತ್ಯ.
ಇದೆಲ್ಲವನ್ನೂ ಗಮನಿಸಿದಾಗ ಮೇಲ್ನೋಟಕ್ಕೆ ಪ್ರಕಾಶ್ ರೈ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತೇನೆ ಎಂದು ಇದೀಗ ಹೇಳಿಕೆ ನೀಡಿದ್ದರೂ ಅವರೊಳಗೊಬ್ಬ ಕಾಂಗ್ರೆಸ್ಸಿಗನಿರುವುದು ಸತ್ಯವೇ ಆಗಿರುವುದರಿಂದ ಚುನಾವಣೆ ಸಮೀಪಿಸುತ್ತಿದ್ದಂತೆಯೇ ತಮ್ಮ ಮಾತಿನ ಮೂಲಕವೇ ಪರಿಸ್ಥಿತಿಯನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಅವರು ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಹೌದು, ಅವರು ಮುಂದಿನ ದಿನಗಳಲ್ಲಿ ಪಕ್ಷೇತರನಿಂದ ಕಾಂಗ್ರೆಸ್ ಪಕ್ಷೀಯನಾಗಿ ಬದಲಾಗಲಾರರು ಎಂದೇನೂ ಭಾವಿಸಬೇಕಿಲ್ಲ. ಕೆಲವೇ ತಿಂಗಳ ಹಿಂದೆ “ನನಗೆ ರಾಜಕೀಯ ಇಷ್ಟ, ಆದರೆ ಅದಕ್ಕೆ ಬರಲ್ಲ” ಎಂದು ಮಂಗಳೂರಿನಲ್ಲಿ ಪತ್ರಕರ್ತರೆದುರಿಗೆ ಇದೇ ಪ್ರಕಾಶ್ ರೈ ಅವರು ಹೇಳಿದ್ದರು. ಆದರೆ ಈಗ ರಾಜಕೀಯಕ್ಕೆ ಬಂದು ಪಕ್ಷೇತರನಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದಿದ್ದಾರೆ. ಹಾಗೆಯೇ ಮುಂದೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಕೂಡಾ ಘೋಷಿಸಬಹುದು. ಅವರ ರಾಜಕೀಯ ಜೀವನಕ್ಕೆ ಮೆಟ್ಟಿಲಾದ ಗೌರಿ ಲಂಕೇಶ್ ಅವರು ಕೂಡಾ ಕಾಂಗ್ರೆಸ್ ಪಕ್ಷೀಯರ ಜೊತೆ ಆಪ್ತರಾಗಿ ಗುರುತಿಸಿಕೊಂಡವರೇ ಆಗಿದ್ದರು. ಜೊತೆಗೆ ಅವರ ಬಹುತೇಕ ಹಿಂಬಾಲಕರು ಕೂಡಾ ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿಯೇ ಗುರುತಿಸಿಕೊಂಡಿರುವುದು ಕೂಡಾ ಬಹಿರಂಗ ಸತ್ಯ. ಇದೆಲ್ಲದರಿಂದಾಗಿ ಕಾಂಗ್ರೆಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಿ ಆ ಪಕ್ಷದಿಂದ ಟಿಕೆಟ್ ಪಡೆಯುವುದೇನೂ ಅವರಿಗೆ ಕಷ್ಟವಾಗಲಾರದು.
ಕಾಂಗ್ರೆಸ್ ಪಕ್ಷದ ಕರಾವಳಿ ಭಾಗದ ಪ್ರಭಾವೀ ನಾಯಕ ರಮಾನಾಥ ರೈ ಅವರೊಂದಿಗೂ ಕೂಡಾ ಪ್ರಕಾಶ್ ರೈ ಆಪ್ತರಾಗಿಯೇ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಹಿಂದಿನ ಕಾಂಗ್ರೆಸ್ ಸರ್ಕಾರ “ಸೇವ್ ವೈಲ್ಡ್ ಲೈಫ್” ಅಭಿಯಾನಕ್ಕೂ ಕೂಡಾ ಅವರನ್ನೇ ರಾಯಭಾರಿಯನ್ನಾಗಿ ಆಯ್ಕೆ ಮಾಡಿಕೊಂಡಿತ್ತು. ಇದು ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಮತ್ತಷ್ಟು ಅನುಕೂಲ ಒದಗಿಸಬಹುದು.
ಒಟ್ಟಿನಲ್ಲಿ ಪ್ರಕಾಶ್ ರೈ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಬಹುದಾದರೂ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದೇ ಈಗಿರುವ ಕುತೂಹಲ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಪ್ರಬಲವಾಗಿಲ್ಲದಿರುವುದರಿಂದ ಅಲ್ಲಿ ಸ್ಪರ್ಧಿಸಲು ಅವರು ಹಿಂದೇಟು ಹಾಕಲೂ ಬಹುದು. ಇನ್ನು ಹಳೇ ಮೈಸೂರು ಭಾಗದಲ್ಲಿ ಸ್ಪರ್ಧಿಸಬಹುದಾದರೂ ಅಲ್ಲಿ ಜೆಡಿಎಸ್ ಪ್ರಾಬಲ್ಯವಿರುವುದರಿಂದ ಆ ಪಕ್ಷ ಆ ಕ್ಷೇತ್ರಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲಾರದು. ಉತ್ತರ ಕರ್ನಾಟಕದಲ್ಲಿ ಪ್ರಕಾಶ್ ರೈ ಅವರನ್ನು ಇದುವರೆಗೆ ಒಬ್ಬ ನಟನನ್ನಾಗಿ ಗುರುತಿಸಿದ್ದಾರೆಯೇ ಹೊರತೂ ಒಬ್ಬ ರಾಜಕಾರಣಿಯಾಗಿ ಅವರನ್ನು ಅಷ್ಟು ಸುಲಭವಾಗಿ ಅಲ್ಲಿನ ಮತದಾರರು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಇನ್ನುಳಿದಿರುವುದು ಬೆಂಗಳೂರು ಮಾತ್ರ. ಅಲ್ಲಿ ಅವರಿಗೆ ಪ್ರಭಾವೀ ನಾಯಕ ಹ್ಯಾರಿಸ್ ಹಾಗೂ ಅವರ ಕುಟುಂಬದೊಂದಿಗಿನ ಸಂಬಂಧ ಕೂಡಾ ಉತ್ತಮವಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೋಡಿದಾಗ ಪ್ರಕಾಶ್ ರೈ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದೇ ಆದರೆ ಬೆಂಗಳೂರಿನ ಯಾವುದಾದರೊಂದು ಕ್ಷೇತ್ರದಿಂದಲೇ ಸ್ಪರ್ಧಿಸುವುದು ಬಹುತೇಕ ಖಚಿತ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.