ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಎಲ್ಲರು ವೈದ್ಯ ವೃತ್ತಿಯನ್ನು ಮಾಡುತ್ತಾರೆ, ಆದರೆ ಪುಣೆ ಮೂಲದ ವ್ಯಕ್ತಿಯೊಬ್ಬರು ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ವೈದ್ಯ ವೃತ್ತಿಯನ್ನು ತೊರೆದು ಸಾವಯವ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ.
68 ವರ್ಷದ ಡಾ.ದ್ವಾರಕನಾಥ ಖಡ್ರೆಯವರು, ಆರೋಗ್ಯ ಮತ್ತು ಸಮತೋಲಿತ ಜೀವನ ಶೈಲಿಯ ಪ್ರತಿಪಾದಕ. ತಿನ್ನುವ ಆಹಾರವೇ ಆರೋಗ್ಯದ ಮೂಲ ಎಂಬುದನ್ನು ಅರ್ಥ ಮಾಡಿಕೊಂಡಿರುವ ಇವರು, ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿಗಳನ್ನು ಜನರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ವೈದ್ಯ ಎಂದು ಕರೆಸಿಕೊಳ್ಳುವ ಬದಲು ತರಕಾರಿ ಮಾರುವವ ಎಂದು ಕರೆಸಿಕೊಳ್ಳಲು ಇಚ್ಛೆಪಡುತ್ತಿದ್ದಾರೆ.
ರೈತರ ಮತ್ತು ಜನರ ಉಜ್ವಲ, ಆರೋಗ್ಯಯುತ ಬದುಕಿಗಾಗಿ ಇವರು ಕಳೆದ 10 ವರ್ಷಗಳಿಂದ ಸಾವಯಕ ತರಕಾರಿ, ಫಲ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.
‘ಒಬ್ಬ ವೈದ್ಯನಾಗಿ ಆರೋಗ್ಯದ ಮೇಲೆ ಆಹಾರ ಬೀರುವ ಪ್ರಭಾವ ನನಗೆ ತಿಳಿದಿದೆ. ಬಹಳಷ್ಟು ಮಂದಿ ಇಂದು ಹೈಬ್ರೀಡ್ ತರಕಾರಿ, ರಾಸಾಯನಿಕ ಭರಿತ ಹಣ್ಣುಗಳನ್ನು ಸೇವನೆ ಮಾಡುತ್ತಿದ್ದಾರೆ. ಆರೋಗ್ಯಕ್ಕೆ ಇದು ಮಾರಕವಾಗಿದ್ದು, ಈ ಕಾರಣದಿಂದ ಪ್ರಸ್ತುತ ಕಾಲಘಟ್ಟದಲ್ಲಿ ಸಾವಯವ ತರಕಾರಿ ಅತ್ಯಗತ್ಯವಾಗಿದೆ’ ಎಂದು ದ್ವಾರಕನಾಥ್ ಹೇಳುತ್ತಾರೆ.
ಆದರೆ ಪ್ರಸ್ತುತ ಇರುವ ಸಾವಯವ ಕೃಷಿ ಮಳಿಗೆಗಳು ದುಬಾರಿ ದರದಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಬಗ್ಗೆ ಅವರಿಗೆ ಬೇಸರವಿದೆ. ಕೈಗೆಟಕುವ ದರದಲ್ಲಿ ಎಲ್ಲಾ ಜನರು, ಎಲ್ಲಾ ಕುಟುಂಬ, ಎಲ್ಲಾ ಸ್ಲಂಗಳಿಗೆ ಆರೋಗ್ಯಯುತ ತರಕಾರಿ ಸಿಗಬೇಕು ಎಂಬುದು ಇವರ ಬಲವಾದ ಪ್ರತಿಪಾದನೆ. ಹೀಗಾಗಿಯೇ ಅವರು, ಸಾವಯವ ಕೃಷಿಕರಿಂದ ತರಕಾರಿಗಳನ್ನು, ಹಣ್ಣುಗಳನ್ನು ಖರೀದಿ ಮಾಡಿ ಅದನ್ನು ಮಾರುಕಟ್ಟೆ ದರದಲ್ಲಿಯೇ ಮಾರಾಟ ಮಾಡುತ್ತಾರೆ. ಸಾವಯವ ಎಂದು ಹೆಚ್ಚು ಬೆಲೆಯನ್ನು ಹೇರುವುದಿಲ್ಲ. ಕೆಲವೊಮ್ಮೆ ಅತೀ ಕಡಿಮೆ ದರದಲ್ಲೂ ಇವರು ತರಕಾರಿಗಳನ್ನು ನೀಡುತ್ತಾರೆ.
ಗ್ರಾಹಕರು ನೀಡುವ ಒಂದು ರೂಪಾಯಿಯಲ್ಲಿ ಕೇವಲ 20-25 ಪೈಸೆ ರೈತರಿಗೆ ಸೇರುತ್ತದೆ. ಈ ಚಿತ್ರಣವನ್ನು ಬದಲಾಯಿಸಬೇಕು, ಈ ಅನುಪಾತವನ್ನು 70-75 ಪೈಸೆಗೆ ತರಬೇಕು ಎಂಬುದು ದ್ವಾರಕನಾಥ್ ಗುರಿಯಾಗಿದೆ.
ಇದಕ್ಕಾಗಿಯೇ ಅವರು ಮಧ್ಯವರ್ತಿಗಳ ಸಂಪರ್ಕ ಮಾಡದೆ, ನೇರವಾಗಿ ರೈತರಿಂದ ಗ್ರಾಹಕರಿಗೆ ತರಕಾರಿ ಸಿಗುವಂತೆ ಮಾಡುತ್ತಿದ್ದಾರೆ. ಬೆಳಗ್ಗೆ ಎದ್ದು 40ರಿಂದ 45 ಕಿ.ಮೀ ಪ್ರಯಾಣಿಸಿ ತರಕಾರಿಗಳನ್ನು ತೆಗೆದುಕೊಂಡು ಬರುತ್ತಾರೆ.
2008ರಲ್ಲಿ ನಾಸಿಕ್ಗೆ ತೆರಳಿದ್ದ ದ್ವಾರಕನಾಥ್ ಅವರಿಗೆ ಎಕ್ಸಿಬಿಷನ್ವೊಂದರಲ್ಲಿ ವ್ಯಾಪಾರಿಯೊಬ್ಬ ತನ್ನ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿಯನ್ನು ವಿದೇಶಕ್ಕೆ ರಫ್ತು ಮಾಡುತ್ತಿರುವುದು ಕಂಡು ಬರುತ್ತದೆ. ಆತನ ಬಳಿಕ ಹೋದ ಇವರು, ಯಾಕೆ ನೀನು ಇಷ್ಟು ಗುಣಮಟ್ಟದ ದ್ರಾಕ್ಷಿಯನ್ನು ನಮ್ಮ ನಾಗರಿಕರಿಗೆ ಮಾರಾಟ ಮಾಡುವ ಬದಲು ವಿದೇಶಕ್ಕೆ ರಫ್ತು ಮಾಡುತ್ತಿದ್ದೀಯ ಎಂದು ಪ್ರಶ್ನಿಸಿದ್ದಾರೆ. ಅದಕ್ಕವನು, ನಮ್ಮ ಬೆಳೆಯನ್ನು ನಮ್ಮ ನೆಲದಲ್ಲಿ ಮಾರಾಟ ಮಾಡಲು ನಮಗೆ ವೇದಿಕೆ ಸಿಗುತ್ತಿಲ್ಲ ಎಂದಿದ್ದಾನೆ. ಅಲ್ಲೇ ತುಸು ಯೋಚನೆ ಮಾಡಿದ ದ್ವಾರಕನಾಥ್, ತಾನೇ ಖುದ್ದಾಗಿ ವೇದಿಕೆ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಅವರು ಸಾವಯವ ಕೃಷಿಕರ ಉತ್ಪನ್ನಗಳಿಗೆ ಮಾರಾಟಗಾರನಾಗಿ ವೇದಿಕೆಯನ್ನು ಒದಗಿಸುತ್ತಲೇ ಬರುತ್ತಿದ್ದಾರೆ.
ಈ ಹತ್ತು ವರ್ಷಗಳಲ್ಲಿ ಪುಣೆಯ ಪಿಂಪ್ರಿ ಚಿಂಚವಾಡ್ ಪ್ರದೇಶಗಳ ಹಲವಾರು ಕಡೆ ಇವರು ಸುತ್ತಾಡಿ, 50 ರೈತರೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಂಪ್ರಿ ಚಿಂಚವಾಡ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಸ್ ಫೆಡರೇಶನ್ನ ಸಹಕಾರದೊಂದಿಗೆ 70 ಸೊಸೈಟಿಗಳಲ್ಲಿ ತರಕಾರಿಗಳು ಮಾರಾಟವಾಗುವಂತೆ ಮಾಡಿದ್ದಾರೆ.
ನ್ಯುರೋಪಥಿ ವೈದ್ಯನಾಗಿ ತರಕಾರಿ ಮಾರಾಟಗಾರನಾಗುವ ತನಕದ ದ್ವಾರಕನಾಥ್ ಪಯಣ ನಿಜಕ್ಕೂ ಪ್ರೇರಣಾಶೀಲ. ಆಧುನಿಕ ತಂತ್ರಜ್ಞಾನ, ಸಂಶೋಧನೆಗಳನ್ನು ಬಳಸಿ ನಿಸರ್ಗದ ಉಡುಗೊರೆಯನ್ನು ಉತ್ಕೃಷ್ಟಗೊಳಿಸಬೇಕು ಎಂಬ ಅವರ ಆಶಯ ನಿಜಕ್ಕೂ ಶ್ಲಾಘನೀಯ.
ನಾಗರಿಕತೆಯನ್ನು ಸ್ಥಾಪಿಸಿದ್ದು, ನಾಗರಿಕತೆಯನ್ನು ಉಳಿಸಿದ್ದು ಕೃಷಿ, ನಾವು ಮಣ್ಣನ್ನು ಅನಾಥವಾಗಿ ಬಿಡಲು ಸಾಧ್ಯವಿಲ್ಲ. ಏನೇ ಅಭಿವೃದ್ಧಿ ಬರಲಿ, ಹೋಗಲಿ ಕೃಷಿಯೆಂಬ ವೃತ್ತಿ ನಿರಂತರವಾಗಿರಲೇ ಬೇಕು.
source: betterindia.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.