ಬೆಳ್ತಂಗಡಿ: ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರಗಳ (ಆರ್ಸೆಟಿ) ಆಡಳಿತ ಹಾಗೂ ವಿಸ್ತರಣೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವ್ಯಾಪ್ತಿ ಹೆಚ್ಚಿಸಲು ಪಂಜಾಬ್ ನ್ಯಾಶನಲ್ ಬ್ಯಾಂಕ್ ವತಿಯಿಂದ ಪೂರ್ಣ ಬೆಂಬಲ ನೀಡಲಾಗುವುದು ಎಂದು ಬ್ಯಾಂಕ್ನ ಆಡಳಿತ ನಿರ್ದೇಶಕ ಡಾ. ರಾಮ್ ಎಸ್. ಸಂಗಾಪುರೆ ಪ್ರಕಟಿಸಿದರು.
ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ನಿಂದ ಪ್ರಾಯೋಜಿತ ಆರ್ಸೆಟಿಗಳ ನಿರ್ದೇಶಕರುಗಳ 5ನೇ ವಾರ್ಷಿಕ ಸಮ್ಮೇಳನದಲ್ಲಿ ಮಂಗಳವಾರ ಸಮಾರೋಪ ಭಾಷಣ ಮಾಡಿ ಅವರು ಮಾತನಾಡಿದರು.
ಧರ್ಮಸ್ಥಳವು ಧಾರ್ಮಿಕವಾಗಿ ಪವಿತ್ರ ಕ್ಷೇತ್ರ ಮಾತ್ರವಲ್ಲದೆ ಲಕ್ಷಾಂತರ ಜನರ ಆರ್ಥಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಪರಿವರ್ತನೆಗೆ ಪ್ರೇರಣೆ, ಮಾರ್ಗದರ್ಶನ ನೀಡುವ ಚೈತನ್ಯದ ಕೇಂದ್ರವಾಗಿದೆ. ಧರ್ಮಸ್ಥಳದ ಆಡಳಿ ವ್ಯವಸ್ಥೆ ಮತ್ತು ಸೇವಾ ವೈಖರಿ ಎಲ್ಲಾ ಸೇವಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿ ಹೆಗ್ಗಡೆಯವರನ್ನು ಅಭಿನಂದಿಸಿದರು.
ಸಮಾಜದ ಕೆಳಸ್ತರದ ಜನರ ಕಲ್ಯಾಣ ಹಾಗೂ ಸಮಗ್ರ ಪ್ರಗತಿಗಾಗಿ ಸಹಕರಿಸುವುದೇ ಅರ್ಥಶಾಶ್ತ್ರದ ಮೂಲ ತತ್ವವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ಬ್ಯಾಂಕ್ ಸಿಬ್ಬಂದಿಗಳ ಬಡ್ತಿ, ವೇತನ ಹೆಚ್ಚಳ ಹಾಗೂ ತರಬೇತಿಗೆ ಆದ್ಯತೆ ನೀಡಿ ಪ್ರೋತ್ಸಾಹಿಸಲಾಗುವುದು. ಯಾವುದೇ ಸಮಸ್ಯಗಳಿದ್ದಲ್ಲಿ ಒಂದು ತಿಂಗಳೊಳಗೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ತಮ್ಮ ಬ್ಯಾಂಕ್ನಿಂದ ಪ್ರಾಯೋಜಿತ ಆರ್ಸೆಟಿಗಳನ್ನು ಉತ್ಕೃಷ್ಟತಾ ಕೇಂದ್ರಗಳಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಆರ್ಸೆಟಿಗಳ ರಾಷ್ಟ್ರೀಯ ಅಕಾಡೆಮಿ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ವತೋಮುಖ ಪ್ರಗತಿಯಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಗ್ರಾಮರಾಜ್ಯದ ಮೂಲಕ ರಾಮರಾಜ್ಯ ರೂಪಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿದ್ದು ಅವುಗಳ ಸದುಪಯೋಗ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
1982ರಲ್ಲಿ ಉಜಿರೆಯಲ್ಲಿ ಪ್ರಾಯೋಗಿಕವಾಗಿ ಅಲ್ಪಾವಧಿ ತರಬೇತಿ ಮೂಲಕ ಪ್ರಾರಂಭಿಸಿದ ರುಡ್ಸೆಟ್ ಸಂಸ್ಥೆಯ ಕಾರ್ಯ ಸಾಧನೆ ಅದ್ಭುತ ಯಶಸ್ಸನ್ನು ಕಂಡಿದೆ. ಇದರ ಪ್ರೇರಣೆಯಿಂದ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಆರ್ಸೆಟಿಗಳನ್ನು ಪ್ರಾರಂಭಿಸಲಾಗಿದೆ. ಫಲಾನುಭವಿಗಳ ತರಬೇತಿಯ ಉನ್ನತ ಗುಣಮಟ್ಟ ಕಾಪಾಡಿ ಅವರ ಪ್ರಗತಿಗೆ ಸಕಾಲಿಕ ಮಾರ್ಗದರ್ಶನ ನೀಡುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಯೋಜನಾ ಸಂಯೋಜಕ ಕೆ.ಎನ್. ಜನಾರ್ದನ್ ಆರ್ಸೆಟಿ ಸಾಧನೆಯ ಪಕ್ಷಿನೋಟ ನೀಡಿದರು.
ಪ್ರಸ್ತುತ ದೇಶದಲ್ಲಿ 556 ಜಿಲ್ಲೆಗಳಲ್ಲಿ 582 ಆರ್ಸೆಟಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ವರೆಗೆ 22,03,269 ನಿರುದ್ಯೋಗಿಗಳಿಗೆ ತರಬೇತಿ ನೀಡಲಾಗಿದ್ದು 13,79,238 ಮಂದಿ ಯಶಸ್ವಿ ಸ್ವ-ಉದ್ಯೋಗಿಗಳಾಗಿದ್ದಾರೆ ಎಂದರು.
ಪಂಜಾಬ್ ನ್ಯಾಶನಲ್ ಬ್ಯಾಂಕ್ನ ಮಹಾಪ್ರಬಂಧಕ ಡಾ. ರಾಕೇಶ್ ಗುಪ್ತಾ ಮತ್ತು ಉಪ ಮಹಾಪ್ರಬಂಧಕ ಎನ್.ಕೆ. ಮಿತ್ತಲ್, ಯೋಜನಾ ನಿರ್ದೇಶಕ ಒ.ಎನ್. ಬನ್ಸಾಲ್, ಜಗದೀಶ್ ಮೂರ್ತಿ, ಅಜಿತ್ ರಾಜಣ್ಣನವರ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.