ಮಹಾರಾಜ ಮೂವೀಸ್ ಸಂಸ್ಥೆಯಿಂದ ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ.ಕಾರಂತ್ ರವರು ಎಸ್.ಎಲ್.ಭೈರಪ್ಪ ರವರ ಕಾದಂಬರಿಯೊಂದನ್ನು ಆಯ್ಕೆ ಮಾಡಿ, 1977 ರಲ್ಲಿ ಚಿತ್ರಕಥೆಯನ್ನು ಬರೆದು, ನಿರ್ದೇಶನದ ಹೊಣೆ ಹೊತ್ತುತ್ತಾರೆ. ಅರೂಪದ ಕಿಶೋರ್ ಬಿರ್ (ಎ.ಕೆ.ಬಿರ್) ರವರ ಛಾಯಾಗ್ರಹಣ, ಭಾಸ್ಕರ್ ಚಂದಾವರ್ಕರ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ನಾಸೀರುದ್ದೀನ್ ಶಾ, ಮನು, ಪೌಲ ಲಿಂಡೆಸಿ (ವಿದೇಶಿ ನಟಿ), ಲಕ್ಷ್ಮಿ ಕೃಷ್ಣಮೂರ್ತಿ ಹಾಗೂ ಸುಂದರ್ ರಾಜ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಅತ್ತ್ಯುತ್ತಮ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಪಡೆದ ಸಿನಿಮಾವಿದು. ಅದೇ ಸಾಲಿನಲ್ಲಿ “ಗೋಧೂಳಿ” ಎಂಬ ಹೆಸರಿನಲ್ಲಿ ಹಿಂದಿ ಭಾಷೆಯಲ್ಲೂ ಈ ಸಿನಿಮಾ ಬಿಡುಗಡೆಯಾಗುತ್ತದೆ. ಹಿಂದಿಯ ಖ್ಯಾತ ನಟ ನಾಸೀರುದ್ದೀನ್ ಶಾ ರವರು ತಮ್ಮ ಯೌವನದ ದಿನಗಳಲ್ಲಿ ನಟಿಸಿದ ಸಿನಿಮಾ ಇದು. ಶಾಸ್ತ್ರಿಯ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ಪೌಲ್ ಲಿಂಡೇಸಿ ಪರದೇಶಿಯವಳಾದರೂ ಭಾರತೀಯ ಸೊಸೆಯ ಪಾತ್ರದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾಳೆ. ಆಕೆ ಇರುವ ದೃಶ್ಯಗಳೆಲ್ಲವೂ ಒಮ್ಮೆ ಇಂಗ್ಲೀಷ್ ಸಿನಿಮಾದಂತೆ ಕಂಡರೆ ಮತ್ತೊಮ್ಮೆ ಕನ್ನಡ ಸಿನಿಮಾದಂತೆ ಕಾಣುತ್ತದೆ. ದೇಶ-ವಿದೇಶ ಭಿನ್ನತೆ ನಡುವೆ ಹೆಣಗುವ ಪಾತ್ರದಲ್ಲಿ ಮನು ರವರು ಚೆನ್ನಾಗಿ ನಟಿಸಿದ್ದಾರೆ. ಮಾನವ ಸಂಕುಲದ ಉಳಿವಿನಲ್ಲಿ ಗೋವಿನ ಪಾತ್ರ ತುಂಬಾ ಮುಖ್ಯ. ತಾಯಿಗಿಂತ ಹೆಚ್ಚಾಗಿ ಮಗುವಿಗೆ ಹಾಲು ನೀಡುವುದೇ ಈ ಗೋವು. ಅಂತಹ ಗೋವನ್ನು ಪಾಶ್ಚಿಮಾತ್ಯ ಪ್ರಭಾವದಿಂದಾಗಿ ಕೇವಲ ಮಾಂಸಕ್ಕಾಗಿ ಕೊಲ್ಲುತ್ತಿರುವುದು ಖೇದಕರ ವಿಷಯ. ಒಂದು ವೇಳೆ ಗೋವು ಹಾಲು ನೀಡದೇ ಹೋಗಿದ್ದರೇ ನಾವೆಲ್ಲಾ ಹಸಿವಿನಿಂದಲೇ ಸಾಯುತ್ತಿದ್ದೆವು. ಅದಕ್ಕಾಗಿಯೇ ಹಸುವಿನ ಹಾಲನ್ನು ಅಮೃತವೆಂದೇ ಕರೆಯುವುದು ಎಂದೆನಿಸುತ್ತದೆ. ಎಂಥಾ ಕಟುಕನಿಗೂ ಹಸುವಿನ ಮೇಲೆ ಪ್ರೀತಿಯುಂಟಾಗುವಂತಿದೆ ಈ ಸಿನಿಮಾ.
ಕಥೆ:
ಜನಪ್ರಿಯ ಗೀತೆಯಾದ “ಧರಣಿ ಮಂಡಲ ಮಧ್ಯದೊಳಗೆ” ಎಂಬ ಗೀತೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಗೋವಿನ ಬಗ್ಗೆ ಅದಮ್ಯ ಪ್ರೀತಿ, ಗೌರವ, ಪೂಜನೀಯ ಭಾವನೆ ಹೊಂದಿರುವ ಹಳ್ಳಿ ಅದಾಗಿರುತ್ತದೆ. ತಾಯವ್ವ (ಲಕ್ಷ್ಮಿ ಕೃಷ್ಣಮೂರ್ತಿ) ಮಾತು ಬರದ ಮೂಕಿ. ಆಕೆಯ ತಂದೆ ತನ್ನ ಪಾಲಿನ ಒಂದಷ್ಟು ಜಮೀನನ್ನು ಊರಿನ ದೇವಸ್ಥಾನದ ಅರ್ಚಕರಾದ ವೆಂಕಟರಮಣನಿಗೆ (ನಾಸೀರುದ್ದೀನ್ ಶಾ) ದಾನವಾಗಿ ನೀಡುತ್ತಾರೆ. ಆ ಹಳ್ಳಿಯಲ್ಲಿ ಸರ್ಕಾರದ ವತಿಯಿಂದದ ರಸ್ತೆ ನಿರ್ಮಾಣ ಮಾಡಲು, ತಾಯವ್ವನ ಜಮೀನಿನ ಹತ್ತಿರ ಹಾಗೂ ಆಕೆಯ ಮನೆಯಲ್ಲಿ ಮಗಳಂತೆ ಸಾಕಿದ, ತಾಯಿಯ ಸ್ಥಾನ ಕೊಟ್ಟು ಗೌರವಿಸಿದ ಪುಣ್ಯಕೋಟಿ ಎಂಬ ಹೆಸರಿನ ಹಸುವಿನ ಸಮಾಧಿ ನಾಮಾವಶೇಷವಿಲ್ಲದಂತೆ ಮಾಡುತ್ತಾರೆ. ಈ ಕೊರಗಿನಲ್ಲಿ ಆಕೆಯ ತಂದೆ ಪ್ರಾಣ ಬಿಡುತ್ತಾನೆ. ಆತನ ಕರ್ಮ ಸಂಸ್ಕಾರಗಳನ್ನು ನೆರವೇರಿಸುವ ದಿನ ತಾಯವ್ವನ ಮಗ ಕಾಳಿಂಗ (ಮನು) ಊರಿಗೆ ಒಬ್ಬನೇ ಬರುತ್ತಾನೆ. ಆತ ಅಮೇರಿಕದಲ್ಲೇ ಇದ್ದವ. ಈಗ ತನ್ನೂರಿನಲ್ಲೇ ಏನನ್ನಾದರೂ ಸಾಧಿಸುವ ಸಲುವಾಗಿ ಆತ ಅಮೇರಿಕದಿಂದ ವಾಪಾಸ್ಸು ಬರುತ್ತಾನೆ. ಇಲ್ಲಿನ ವಿಧಿವಿಧಾನಗಳಿಗೆ, ತಲೆ ಬೋಳಿಸುವುದನ್ನು ವಿರೋಧಿಸುತ್ತಾನೆ. ಆದರೂ ಮತ್ತೆ ತಾಯಿಯ ಮಾತಿಗೆ ತಲೆಬಾಗಿ ತಿಥಿ ಕಾರ್ಯ ನೆರವೇರಿಸುತ್ತಾನೆ.
ಸ್ವಲ್ಪ ದಿನಗಳ ನಂತರ ಆತನ ಜಮೀನಿನ ಹತ್ತಿರವೇ ವಿದೇಶಿ ಶೈಲಿಯಲ್ಲಿ ಒಂದು ಪುಟ್ಟ ಮನೆಯನ್ನು ಕಟ್ಟಿಸುತ್ತಾನೆ. ಮನೆ ಕಟ್ಟಿಸಿದ ಬಳಿಕ, ಅಮೇರಿಕದಲ್ಲಿ ತಾನು ಮದುವೆಯಾಗಿದ್ದ ಲಿಡಿಯಾ (ಪೌಲ ಲಿಂಡೇಸಿ) ಎಂಬಾಕೆಯನ್ನು ಕರೆತರುತ್ತಾನೆ. ಊರಿನ ಜನಕ್ಕೆ ಅವಳನ್ನು ನೋಡುವುದೇ ಒಂದು ಮಜ. ಕೊನೆಗೆ ತನ್ನ ತಾಯಿಯ ಮುಂದೆ ಲಿಡಿಯಾಳನ್ನು ಪಕ್ಕಾ ಭಾರತೀಯ ಶೈಲಿಯಲ್ಲಿ ಸೀರೆಯನ್ನುಡಿಸಿ ಆಕೆಯ ಮುಂದೆ ಕರೆತರುತ್ತಾನೆ ಕಾಳಿಂಗ. ಮೊದಮೊದಲು ತಮ್ಮವಳಲ್ಲದ ಯಾವುದೋ ಕೆಂಪಗಿನ ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಮುನಿಸಿಕೊಂಡಿದ್ದ ತಾಯವ್ವ, ಲಿಡಿಯಾಳನ್ನು ನೋಡಿ ಹಾಗೂ ಅವಳ ಸೀರೆಯುಟ್ಟಿದ್ದನ್ನು ನೋಡಿ ಮನಸೋಲುತ್ತಾಳೆ. ಸೊಸೆ ಎಂದು ಒಪ್ಪಿಕೊಂಡು ಬಿಡುತ್ತಾಳೆ. ಲಿಡಿಯಾಳಿಗೆ ಭಾರತ ಸಂಸ್ಕೃತಿಯ ಕುರಿತು ಅಭಿಮಾನವಿರುತ್ತದೆ ಹಾಗೂ ಗೌರವವಿರುತ್ತದೆ. ಅದರಿಂದಾಗಿ ಆಕೆ ಕನ್ನಡದಲ್ಲಿಯೇ ವ್ಯವಹರಿಸಲು, ಭಾಷೆಯನ್ನು ಸಹ ಕಲಿಯುತ್ತಿರುತ್ತಾಳೆ. ಇದಕ್ಕಾಗಿ ವೆಂಕಟರಮಣನ ಬಳಿ ಕೆಲವು ಭಾರತೀಯ ಸಂಸ್ಕೃತಿಯ ವಿಷಯ ಕುರಿತು ಚರ್ಚಿಸುತ್ತಿರುತ್ತಾಳೆ. ಇಲ್ಲಿಯ ಹಳ್ಳಿಯ ಜನರು ಮೂಕ ಜೀವಿಗಳಾದ ಗೋವುಗಳ ಮೇಲೆ ಅನನ್ಯ ಪ್ರೀತಿ ತೋರುವುದನ್ನು ಕಂಡು, ಆಕೆಯೂ ಅವನ್ನು ಪೂಜ್ಯತೆಯಿಂದ ಕಾಣುತ್ತಾಳೆ. ಹೀಗಿದ್ದಾಗ ಕಾಳಿಂಗ ದೇವಸ್ಥಾನಕ್ಕೆಂದು ನೀಡಿದ್ದ ಬಾವಿಗೆ ಕೊಳವೆಬಾವಿ ಅಳವಡಿಸಿ, ತನ್ನ ಜಮೀನಿಗೆ ನೀರನ್ನು ಉಪಯೋಗಿಸಲು ಅವಕಾಶ ಮಾಡಿಕೊಂಡಿದ್ದು, ವೆಂಕಟರಮಣನಿಗೆ ಹಿಡಿಸುವುದಿಲ್ಲ. ಅದಕ್ಕೆ ವಿರೋಧಿಸಿದರೂ ಮನು ಮನಸು ಬದಲಾಯಿಸುವುದಿಲ್ಲ. ಹೀಗೆ ಅವರ ನಡುವೆ ಹಾಗೂ ಊರವರ ನಡುವೆ, ತನ್ನ ತಾಯಿಯ ನಡುವೆ ಒಂದಲ್ಲ ಒಂದು ಕಾರಣಗಳಿಗಾಗಿ ಮನಸ್ತಾಪ ಬೆಳೆಯುತ್ತಾ ಹೋಗುತ್ತದೆ. ಈ ಮಧ್ಯೆ ಲಿಡಿಯಾ ಗರ್ಭವತಿಯಾಗುತ್ತಾಳೆ. ಗರ್ಭವತಿಯಾದಾಗ ಆಕೆಯ ಮಾನಸಿಕ ಭಾವನೆಗಳ ಸಮತೋಲನ ಏರುಪೇರಾಗಿ ಆಕೆಯ ಕೋಪ ಹಳ್ಳಿಯವರೆಲ್ಲರ ವಿರುದ್ಧ ನಿಲ್ಲುತ್ತದೆ. ತಾನು ಹೆಚ್ಚಾಗಿ ಗೌರವಿಸುತ್ತಿದ್ದ ಶಾಸ್ತ್ರಿಯವರು ಸಹ ಆಕೆಯ ಮನನೊಂದುಕೊಳ್ಳುವಂತೆ ಮಾತನಾಡಿದ್ದರಿಂದ ಆಕೆಯ ಕೋಪ ಹೆಚ್ಚುತ್ತದೆ. ಇದರಿಂದಾಗಿ ಹಳ್ಳಿಯವರಂತೆ ತಾನು ಪ್ರೀತಿಸುತ್ತಿದ್ದ, ಗೌರವಿಸುತ್ತಿದ್ದ, ಪೂಜಿಸುತ್ತಿದ್ದ, ತಾನೇ ಹೆಸರಿಟ್ಟು ಕರೆಯುತ್ತಿದ್ದ ಗೋವುಗಳಲ್ಲಿ ಪುಣ್ಯಕೋಟಿ ತಳಿಯ ಹಸುವಲ್ಲಿ ಕೊಲ್ಲುವಂತೆ ಹಾಗೂ ಅದರ ಮಾಂಸದಿಂದ ತನಗೆ ಅಡುಗೆ ಮಾಡಿಕೊಡುವಂತೆ ಅಡುಗೆಯವನಿಗೆ ಕೋಪದಲ್ಲಿ ಆದೇಶ ನೀಡುತ್ತಾಳೆ. ಪುಣ್ಯಕೋಟಿ ತಳಿಯ ಹಸುವನ್ನು ಕೊಂದಿದ್ದಾಳೆ ಎಂಬ ಸುದ್ದಿ ಹರಡುತ್ತಿದ್ದಂತೆ ಆ ಗ್ರಾಮಸ್ಥರೆಲ್ಲರೂ ಸೇರಿ ಆಕೆಯ ಮನೆಗೆ ಮುತ್ತಿಗೆ ಹಾಕುತ್ತಾರೆ. ಆ ಸಮಯವನ್ನು ಶಾಂತಿಗೊಳಿಸಿದ ಮನು, ಶಾಸ್ತ್ರಿಯವರ ಕೋರಿಕೆಯಂತೆ (ಆದೇಶದಂತೆ) ಊರಿಗಾಗಿ ಒಂದು ಹಸುವನ್ನು ದೇವರಿಗೆ ಬಿಡಲು ಸೂಚಿಸುತ್ತಾರೆ ಅಲ್ಲದೇ, ಅವನ ಬಳಿ ಇದ್ದ ಎಲ್ಲಾ ಗೋವುಗಳನ್ನು ದಾನವಾಗಿ ಶಾಸ್ತ್ರಿ ಪಡೆಯುತ್ತಾನೆ. ಇದರಲ್ಲಿ ಶಾಸ್ತ್ರಿಯ ಮಸಲತ್ತು ನಡೆಯುತ್ತದೆ. ಇದರಿಂದಾಗಿ ತುಂಬಾ ನೊಂದುಕೊಂಡ ಮನು ಹಾಗೂ ಲಿಡಿಯಾ ಊರು ಬಿಟ್ಟು ಹೋಗಲು ತೀರ್ಮಾನಿಸುತ್ತಾರೆ. ಪೂಜೆ ಮಾಡಿ ದಾನವಾಗಿ ಕೊಟ್ಟರೂ, ಅದು ಅವನ ಆಸ್ತಿಯಾಗಿದ್ದರಿಂದ ಅವನ ಭಾಗದ ಜಮೀನು, ಮನೆ, ದನ-ಕರುಗಳನ್ನು ಮಾರಲು ತೀರ್ಮಾನಿಸಿ, ಒಂದೊಂದಾಗಿ ಮಾರಲು ಶುರು ಮಾಡುತ್ತಾನೆ. ಇದನ್ನು ನೋಡಿ ಗ್ರಾಮಸ್ಥರು ಬೆಚ್ಚುತ್ತಾರೆ. ಲಿಡಿಯಾ ಜನ್ಮ ನೀಡಿದ ಮಗುವಿಗೆ ಹಾಲುಣಿಸಲು ಸಾಧ್ಯವಾಗದ ಪರಿಸ್ಥಿತಿ ಅವಳದಾಗಿರುತ್ತದೆ. ಅಂತಹ ಸಂಧಿಗ್ಧ ಸಮಯದಲ್ಲಿ, ಎರಡು ದಿನಗಳಿಂದ ಹಾಲು ಕುಡಿಯದೇ, ಹಸಿವಿನಿಂದ ಕಂಗೆಟ್ಟಿದ್ದ ಕೂಸಿಗೆ, ಹಸುವಿನ ಕೆಚ್ಚಲಿನಿಂದ ನೇರವಾಗಿ ಹಾಲುಣಿಸಲು ಊರಿನವರ ಹತ್ತಿರ ದುಂಬಾಲು ಬೀಳುತ್ತಾನೆ. ಅಂತೂ ಇಂತೂ ಮಗು ಹಾಲು ಕುಡಿಯುತ್ತದೆ. ಸಾಯುವಂತಾದ ಮಗು ಬದುಕುತ್ತದೆ. ತಾನೂ ಕೂಡ ಹಿಂದೆ ಪುಣ್ಯಕೋಟಿ ಎಂಬ ಹಸುವಿನ ಹಾಲು ಕುಡಿದೇ ಬೆಳೆದಿದ್ದು ನೆನಪಾಗಿ, ಆ ಗ್ರಾಮದಲ್ಲೇ ಇರಲು ಮನು ಮನಸು ಮಾಡುತ್ತಾನೆ. ತಾನು ಮಾರಿದ್ದ ಗೋವುಗಳ ಹಿಂಪಡೆಯಲು ಹೋದಾಗ ಕಂಡ ಗೋವುಗಳ ಗುಂಪಲ್ಲಿ ತನ್ನ ಹಸುಗಳು ಯಾವುದು ಎಂಬುದು ತಿಳಿಯದೇ, ಅವುಗಳ ಹೆಸರು ಏನು ಎಂಬುದು ಹಾಗೂ ಅವುಗಳನ್ನು ಹೇಗೆ ಗುರುತಿಸಬೇಕು ಎಂಬ ಗೊಂದಲದಲ್ಲಿ “ಗಂಗೇ, ತುಂಗೇ, ..” ಎಂದು ಯಾವ ಯಾವುದೋ ಹೆಸರಿನಲ್ಲಿ ಕೂಗುತ್ತಾನೆ. ಆದರೆ ಯಾವ ಹಸುಗಳು ಅವನಿಗೆ ಓಗೊಡುವುದಿಲ್ಲ. ತನ್ನ ತಾಯಿಯನ್ನು ಗುರುತಿಸದೇ ಹೋದ ಮಗನಿಗೆ.. ಕಳೆದು ಹೋಗಿದ್ದ ಪುಣ್ಯಕೋಟಿ ಎಂಬ ಹಸು .. “ತಬ್ಬಲಿಯು ನೀನಾದೇ ಮಗನೇ..” ಎಂದು ಹೇಳಿಕೊಂಡಂತೆ ಚಿತ್ರದ ಕೊನೆಯಲ್ಲಿ ಭಾಸವಾಗುತ್ತದೆ. ಇದೊಂದು ಭಾವನಾತ್ಮಕ ಸಿನಿಮಾ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಗೋವಿನ ಮಹತ್ವ ಹಾಗೂ ಗೋಹತ್ಯೆ ಕುರಿತು ತಿಳಿಯಲು.
2. ಮೊನಚು ಮಾತುಗಳ ಪ್ರಭಾವ ಕುರಿತು ತಿಳಿಯಲು.
3. ಕುತಂತ್ರಗಳು ಗೆಳೆತನವನ್ನೂ ಹಗೆತನವನ್ನಾಗಿ ಬದಲಾಯಿಸುತ್ತದೆ. ಅದು ಹೇಗೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.