ಲಿಂಗಾಯತರನ್ನು ಪ್ರತ್ಯೇಕ ಧರ್ಮೀಯರನ್ನಾಗಿ ಮಾಡಬೇಕೆನ್ನುವ ಕೆಲವರ ಕನಸು ಬಹುತೇಕ ನುಚ್ಚು ನೂರಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯ ಸಮಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮವೇ ಪ್ರಮುಖ ಪ್ರಚಾರದ ವಸ್ತುವಾಗಿತ್ತು. ಯಾರೇನೇ ಹೇಳಿದರೂ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಹಿಂದೆ ರಾಜಕೀಯ ಪಕ್ಷವೊಂದರ ಬೆಂಬಲವಿದ್ದಿದ್ದು ಯಾರೊಬ್ಬರೂ ಅಲ್ಲಗಳೆಯಲಾಗದು.
ಆದರೆ ಚುನಾವಣೆ ಮುಗಿಯುತ್ತಿದ್ದಂತೆಯೇ ಎಲ್ಲ ಅಂದಾಜುಗಳೂ ತಲೆಕೆಳಗಾಗಿವೆ.ಯಾವ ಪಕ್ಷ ಪ್ರತ್ಯೇಕತೆಗೆ ಬೆಂಬಲಿಸಿತ್ತೋ ಆ ಪಕ್ಷಕ್ಕೆ ಮತದಾರ ಪ್ರಭು ಚೇತರಿಸಿಕೊಳ್ಳಲಾಗದಂತಹಾ ಹೊಡೆತ ನೀಡಿದ್ದಾನೆ. ಒಂದು ಪಕ್ಷದ ಮತಬ್ಯಾಂಕ್ ಒಡೆಯುವ ಉದ್ದೇಶದಿಂದಲೇ ಧರ್ಮ ಒಡೆಯುವ ಕೆಲಸಕ್ಕೆ ಸರ್ಕಾರ ಕೈ ಹಾಕಿತ್ತು ಎನ್ನುವ ಆರೋಪವೇ ಆ ಪಕ್ಷಕ್ಕೆ ಮುಳುವಾದಂತಿದೆ. ಜನರಿಗೆ ಅದೊಂದು ಭಾವನಾತ್ಮಕ ವಿಚಾರವಿರಬಹುದು,ಆದರೆ ರಾಜಕಾರಣಿಗಳಿಗೆ ಅದೊಂದು ಕೇವಲ ಗೆಲುವು ಸಾಧಿಸುವ ಸಾಧನವಾಗಿತ್ತು ಎನ್ನುವುದಕ್ಕೆ ಪೂರಕವಾದ ಹೇಳಿಕೆಗಳು ಚುನಾವಣೆಯ ನಂತರದಲ್ಲಿ ಒಂದರ ಹಿಂದೊಂದರಂತೆ ಹೊರಬೀಳುತ್ತಿವೆ.
ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದ ಎಂ.ಬಿ.ಪಾಟೀಲ್, ಬಸವರಾಜ ರಾಯರೆಡ್ಡಿ, ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ವಿನಯ ಕುಲಕರ್ಣಿ ಅವರ ಪೈಕಿ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಗೆದ್ದಿದ್ದರೆ ಉಳಿದ ಇಬ್ಬರು ಸೋತಿದ್ದಾರೆ. ಹೋರಾಟದ ಉತ್ತುಂಗದಲ್ಲಿದ್ದಾಗ ಮುಂದಿನ ಮುಖ್ಯ ಮಂತ್ರಿ ಎನ್ನುವಂತೆ ಕೂಡಾ ಬಿಂಬಿತವಾಗಿದ್ದ ಎಂ.ಬಿ.ಪಾಟೀಲರಿಗೆ ಇದುವರೆಗೆ ಕನಿಷ್ಠ ಮಂತ್ರಿಯಾಗುವ ಅವಕಾಶ ಕೂಡಾ ದೊರೆತಿಲ್ಲ!
“ಶಿಕ್ಷಣ ಸಚಿವರಾಗಿ ಕೆಲಸ ಮಾಡುವ ಆಸೆ ಇದೆ” ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದ ಪ್ರತ್ಯೇಕ ಧರ್ಮ ಹೋರಾಟದ ರೂವಾರಿಗಳಲ್ಲೊಬ್ಬರಾಗಿದ್ದ ವಿಧಾನ ಪರಿಷತ್ತಿನ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಇದುವರೆಗೂ ಸಚಿವ ಸಂಪುಟದಿಂದ ದೂರವೇ ಇಡಲಾಗಿದೆ. ಅಷ್ಟೇ ಅಲ್ಲದೆ ಇದೀಗ ವಿಧಾನ ಪರಿಷತ್ನಲ್ಲಿ ಸಭಾಪತಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಕೊನೇ ಕ್ಷಣದಲ್ಲಿ ನಿರಾಸೆ ಮೂಡಿಸಲಾಗಿದೆ. “ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ನಾವು ಹೋರಾಟ ಮಾಡಿದ್ದು ದೊಡ್ಡ ಅಪರಾಧವಾಗಿದೆ, ಹೀಗಾಗಿ ನನಗೆ ಸಚಿವ ಸ್ಥಾನ ಕೈತಪ್ಪಿದೆ” ಎಂದು ಅವರು ಹಿಂದೊಮ್ಮೆ ಮಾಧ್ಯಮಗಳೆದುರು ಹೇಳಿಕೆಯನ್ನೂ ನೀಡುವ ಮೂಲಕ ತಮ್ಮ ತಪ್ಪನ್ನು ಮನ್ನಿಸಬೇಕೆನ್ನುವ ಧಾಟಿಯಲ್ಲಿ ಅವರು ಮಾತನಾಡಿದ್ದಾರೆ.
ಅದಾದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದ ಪ್ರಭಾವೀ ನಾಯಕ ಹಾಗೂ ಜಲಸಂಪನ್ಮೂಲ ಸಚಿವ ಶ್ರೀಯುತ ಡಿ.ಕೆ.ಶಿವಕುಮಾರ್ ಅವರೂ “ಪ್ರತ್ಯೇಕ ಲಿಂಗಾಯತ ಧರ್ಮ ರಚನೆ ಕುರಿತು ಹೋರಾಡಿ ನಾವು ತಪ್ಪು ಮಾಡಿದ್ದೇವೆ,ನಮ್ಮ ಸರ್ಕಾರದಿಂದ ದೊಡ್ಡ ತಪ್ಪಾಯಿತು, ದಯಮಾಡಿ ನಮ್ಮನ್ನು ಕ್ಷಮಿಸಿ” ಎಂದು ರಾಜ್ಯದ ಜನತೆ ಬಳಿ ಬಹಿರಂಗವಾಗಿ ಕ್ಷಮೆ ಯಾಚಿಸುವ ಮೂಲಕ ಪ್ರತ್ಯೇಕ ಧರ್ಮದ ಹಿಂದಿದ್ದ ಬಲವಾದ ರಾಜಕೀಯ ಶಕ್ತಿಯೊಂದು ಕುಸಿದುಬಿದ್ದಂತಾಗಿತ್ತು.
ಮಾಜಿ ಮುಖ್ಯಮಂತ್ರಿಗಳಾದ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷರೂ ಆದ ಸಿದ್ಧರಾಮಯ್ಯನವರ “ಲಿಂಗಾಯತ ಧರ್ಮ ಮಾಡಿ.. ಲಿಂಗಾಯತ ಧರ್ಮ ಮಾಡಿ.. ಎಂದು ಕೆಲವರು ಗಂಟು ಬಿದ್ದಿದ್ದರಿಂದ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇನೆಯೇ ಹೊರತೂ ಅದರಲ್ಲಿ ನನಗೇನೂ ಆಸಕ್ತಿಯಿರಲಿಲ್ಲ, ಇನ್ನು ಮುಂದೆ ಲಿಂಗಾಯತ ಧರ್ಮದ ವಿಚಾರವನ್ನು ಮಾತನಾಡುವುದೇ ಇಲ್ಲ” ಎನ್ನುವಂತಹಾ ರೀತಿಯ ಹೇಳಿಕೆಯೊಂದಿಗೆ ಪ್ರತ್ಯೇಕ ಲಿಂಗಾಯತ ಧರ್ಮದ ಹಿಂದಿನ ಸಂಪೂರ್ಣ ರಾಜಕೀಯ ಶಕ್ತಿ ಬಿದ್ದಂತಾಯಿತು.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆಪಿಸಿಸಿ ಅಧ್ಯಕ್ಷರಾದ ಶ್ರೀಯುತ ದಿನೇಶ್ ಗುಂಡೂರಾವ್ ಅವರು “ಸದ್ಯ ಪ್ರತ್ಯೇಕ ಧರ್ಮ ವಿಚಾರ ಲಿಂಗಾಯತ ಸಮುದಾಯಕ್ಕೂ ಕೇಂದ್ರ ಸರ್ಕಾರಕ್ಕೂ ಬಿಟ್ಟ ವಿಚಾರ, ಪ್ರತ್ಯೇಕ ಧರ್ಮ ನಮ್ಮ ಸರ್ಕಾರದ ಕಾರ್ಯಕ್ರಮ ಅಲ್ಲ” ಎಂದು ಹೇಳುವ ಮೂಲಕ ಕೇವಲ ಪಕ್ಷಕ್ಕಷ್ಟೇ ಅಲ್ಲದೆ ಸರ್ಕಾರಕ್ಕೂ ಆ ವಿಚಾರ ಇನ್ನು ಮುಂದೆ ಸಂಬಂಧವೇ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ರವಾನಿಸಿದ್ದಾರೆ.
ಇದೀಗ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಕೊಡಲು ಕೇಂದ್ರ ಸರ್ಕಾರ ಒಂದಷ್ಟು ಸಾಕಾರಣಗಳನ್ನು ನೀಡಿ ನಿರಾಕರಿಸಿದೆ. ಲಿಂಗಾಯತ-ವೀರಶೈವಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟವಾಗಿ ತಳ್ಳಿಹಾಕುವುದರೊಂದಿಗೆ, ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಭಾರಿ ಸದ್ದು ಮಾಡಿದ್ದ ಲಿಂಗಾಯತ ಧರ್ಮ ಸ್ಥಾಪನೆ ಹೋರಾಟಕ್ಕೆ ಬಹುತೇಕ ತೆರೆ ಬಿದ್ದಂತಾಗಿದೆ.
ಇದೆಲ್ಲದರ ನಡುವೆ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದರೂ ಅದರ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯನ್ನೇ ಮಾಡಬಾರದು ಎನ್ನುವ ತೀರ್ಮಾನಕ್ಕೆ ರಾಜ್ಯ ಸಚಿವ ಸಂಪುಟ ಬಂದಿದೆಯೆನ್ನುವ ಸುದ್ದಿಗಳು ವರದಿಯಾಗಿವೆ. ಕೇಂದ್ರದ ಶಿಫಾರಸಿನ ಕುರಿತು ಮತ್ತೆ ಚರ್ಚೆಗೆ ಮುಂದಾದರೆ ಲೋಕಸಭೆ ಚುನಾವಣೆಯಲ್ಲಿ ಕೂಡಾ ಸೋಲು ಖಚಿತ ಎಂಬುದು ಬಹುತೇಕ ಸಚಿವರ ಅನಿಸಿಕೆ. ಪಕ್ಷದ ಪಾಲಿಗೆ ಅದೊಂದು ಮುಗಿದ ಅಧ್ಯಾಯ ಎಂದು ಸಚಿವರೊಬ್ಬರು ಹೇಳಿರುವುದಾಗಿಯೂ ಮಾಧ್ಯಮವೊಂದು ವರದಿ ಮಾಡಿದೆ.
ಒಟ್ಟಾರೆ ಹೇಳುವುದಾದರೆ ಕೆಲವೇ ತಿಂಗಳ ಹಿಂದೆ ದೇಶದಾದ್ಯಂತ ದೊಡ್ಡ ಸುದ್ದಿ ಮಾಡಿದ್ದ ಪ್ರತ್ಯೇಕ ಧರ್ಮ ಇದೀಗ ಯಾರಿಗೂ ಬೇಡದ ಕೂಸಾಗಿದೆ. ಯಾವುದೇ ರಾಜಕೀಯ ಪಕ್ಷದ, ಯಾವುದೇ ಸರ್ಕಾರದ ಬೆಂಬಲವಿಲ್ಲದ ಸಂದರ್ಭದಲ್ಲಿ ಮಾತೆ ಮಹಾದೇವಿ ಮುಂತಾದ ಕೆಲವೇ ಕೆಲವು ಹೋರಾಟಗಾರರು ಆ ಕೂಸನ್ನು ಹೇಗೆ ಜೋಪಾನ ಮಾಡುತ್ತಾರೆ ಎನ್ನುವುದೇ ಇದೀಗ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.