ದೇಶದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಚರ್ಚೆಗಳಾಗುತ್ತಿವೆ. ಬಲಪಂಥೀಯ ವಿರೋಧಿಗಳ ಅಥವಾ ಎಡಪಂಥೀಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ ಎನ್ನುವ ಆಕ್ರೋಶಗಳು ಕೇಳಿಬರುತ್ತಿವೆ. ಬಹುತೇಕ ಎಲ್ಲಾ ಸಾಹಿತ್ಯ ಸಂವಾದಗಳಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ಬಗ್ಗೆ ಚರ್ಚೆಗಳಾಗುತ್ತಿವೆ. ಅಷ್ಟೇ ಅಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆಯೆನ್ನುವ ಕೆಲವರ ಅಭಿಪ್ರಾಯಗಳನ್ನಿಟ್ಟುಕೊಂಡು ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆ ಎನ್ನುವ ಮಾತುಗಳನ್ನೂ ನಿತ್ಯವೂ ಕೇಳುತ್ತಿದ್ದೇವೆ.
ಹಾಗಾದರೆ ನಿಜಕ್ಕೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯಲಾಗುತ್ತಿದೆಯೇ, ಅವರಿಂದ ಬಲಪಂಥೀಯರೆನ್ನಿಸಿಕೊಳ್ಳುವವರಿಗೆ ಅವರಿಗಿಂತಲೂ ಹೆಚ್ಚು ಅಭಿವ್ಯಕ್ತಿ ಸ್ವಾತಂತ್ರ್ಯವಿದೆಯೇ, ದೇಶದಲ್ಲಿ ನಿಜಕ್ಕೂ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆಯೇ ಎನ್ನುವ ಬಗ್ಗೆ ಸ್ವಲ್ಪ ವಿಶ್ಲೇಷಿಸಿದರೂ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುವ ಸತ್ಯಗಳೇ ಬೇರೆ.
ಯಾವ ಎಡಪಂಥೀಯರು ತಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎನ್ನುತ್ತಿದ್ದಾರೋ ಅದೇ ಎಡಪಂಥೀಯವಾದಿಗಳಿಗೆ ಸರ್ಕಾರೀ ಕಾರ್ಯಕ್ರಮಗಳು, ಸರ್ಕಾರೀ ಅನುದಾನಿತ ಸಮ್ಮೇಳನಗಳು, ಖಾಸಗಿ ಹಾಗೂ ಸಾರ್ವಜನಿಕ ಸಂವಾದ ಕಾರ್ಯಕ್ರಮಗಳು, ಸುದ್ದಿವಾಹಿನಿಯಲ್ಲಿನ ಚರ್ಚೆಗಳು… ಹೀಗೆ ಎಲ್ಲಾ ಕಡೆಯಲ್ಲಿಯೂ ತಮ್ಮ ಅಭಿಪ್ರಾಯ ಮಂಡಿಸಲು ಮುಕ್ತ ಸ್ವಾತಂತ್ರ್ಯ ಸಿಗುತ್ತಿದೆ. ಹಿಂದೂ ನಂಬಿಕೆಗಳ ವಿರುದ್ಧ ಮಾತನಾಡಲು ಎಲ್ಲ ರೀತಿಯ ಅವಕಾಶ ಮಾಡಿಕೊಡಲಾಗುತ್ತಿದೆ. ಸ್ವತಃ ಸರ್ಕಾರೀ ನೌಕರಿಯಲ್ಲಿರುವ ಪ್ರೊಫೆಸರಗಳಿಗೂ ಕಾನೂನು ವ್ಯಾಪ್ತಿ ಮೀರಿ ಬಹಿರಂಗ ಹೇಳಿಕೆಗಳನ್ನು ನೀಡಲು ಅವಕಾಶಗಳನ್ನೊದಗಿಸಿಕೊಡಲಾಗುತ್ತಿದೆ. ಶಂಕಿತ ನಕ್ಸಲ್ ಬೆಂಬಲಿಗರ ಪರ ವಕಾಲತ್ತು ವಹಿಸಲು ಕೂಡಾ ಅವಕಾಶ ಸಿಗುತ್ತಿದೆ. ಅಷ್ಟೇ ಏಕೆ? ಸರ್ಕಾರೀ ಅನುದಾನಿತ ಸಮ್ಮೇಳನಗಳಲ್ಲೇ ಚುನಾವಣಾ ಪ್ರಚಾರ ಭಾಷಣ, ಜಾತಿನಿಂದಕ ಭಾಷಣಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಂತಹಾ ಸಾಕಷ್ಟು ಉದಾಹರಣೆಗಳಿವೆ. ಆದರೆ ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಬೊಟ್ಟು ಮಾಡಿ ತೋರಿಸುತ್ತಿರುವ ಬಲಪಂಥೀಯರಿಗೆ ಮಾತ್ರ ಇಲ್ಲಿ ಯಾವ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ!
ಇದೇ ಆಗಸ್ಟ್ ನಲ್ಲಿ ಆಯೋಜನೆಯಾಗಿದ್ದ ಪಾಂಡಿಚೇರಿ ಸಾಹಿತ್ಯ ಉತ್ಸವ ಇದಕ್ಕೊಂದು ಒಳ್ಳೆಯ ಉದಾಹರಣೆ. Alliance Francaise ಎನ್ನುವ ಸಂಸ್ಥೆ ಕೂಡಾ ಆ ಉತ್ಸವದ ಒಂದು ಸಹಯೋಗಿ ಸಂಸ್ಥೆಯಾಗಿತ್ತು. ಆದರೆ ಆ ಸಾಹಿತ್ಯ ಉತ್ಸವದ ಆಯೋಜನೆಯಲ್ಲಿ ಮತ್ತು ಪಾಲ್ಗೊಳ್ಳುವವರಲ್ಲಿ ಬಲಪಂಥೀಯರು ಅಥವಾ ಬಲಪಂಥೀಯ ಬೆಂಬಲಿಗರೇ ಹೆಚ್ಚಾಗಿದ್ದಾರೆ ಎಂದು ಆರೋಪಿಸಿ ಆ ಸಾಹಿತ್ಯ ಉತ್ಸವವನ್ನೇ ನಡೆಸಕೂಡದು ಎಂದು ಎಡಪಂಥೀಯ ಗುಂಪುಗಳು ಹೋರಾಟಕ್ಕಿಳಿದವು. ಪತ್ರಿಕಾ ಗೋಷ್ಠಿ ಕರೆದು ಒತ್ತಡ ಹಾಕಲಾಯಿತು. Alliance Francaise ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ಕಾರ್ಯಕ್ರಮದ ಸಹಯೋಗದಿಂದ ಹಿಂದೆ ಸರಿಯುವಂತೆ ಬೆದರಿಕೆಯೊಡ್ಡಲಾಯಿತು. ಇದು ಕೇವಲ ಅವರ ಅಸಹಿಷ್ಣುತೆಯನ್ನು ಮಾತ್ರ ತೋರಿಸುವುದಿಲ್ಲ, ಬದಲಾಗಿ ತಮ್ಮ ಸಿದ್ಧಾಂತಕ್ಕೆ ವಿರುದ್ಧವಿರುವ ಯಾವುದನ್ನೇ ಆಗಲೀ,ಯಾರನ್ನೇ ಆಗಲೀ ಬಾಯಿ ಮಚ್ಚಿಸಲು ಯಾವ ಹಂತದವರೆಗೆ ಬೇಕಾದರೂ ಹೋಗಬಲ್ಲರು ಎನ್ನುವುದನ್ನೂ ತೋರಿಸುತ್ತದೆ. ಆಶ್ಚರ್ಯವೆಂದರೆ ಹಾಗೆ ತಮ್ಮ ಸಿದ್ಧಾಂತಕ್ಕೆ ವಿರುದ್ಧವಿರುವವರನ್ನು ಬಾಯಿ ಮುಚ್ಚಿಸುತ್ತಿರುವವರೇ ತಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎಂದು ಹೇಳುತ್ತಾ ತಮ್ಮನ್ನು ತಾವು ಬಲಿಪಶುಗಳೆನ್ನುವಂತೆ ಬಿಂಬಿಸಿಕೊಳ್ಳುತ್ತಿರುವುದು! ಇಲ್ಲಿ ನಿಜವಾದ ಬಲಿಪಶುಗಳು ಮತ್ತೆ ಮತ್ತೆ ಇವರ ಕೈಗಳಿಂದ ಬಲಿಪಶುಗಳಾಗುತ್ತಲೇ ಇದ್ದಾರೆ!
ಕರ್ನಾಟಕದ ಕೆಲವು ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ, ಹಿಂದೂ ದೇವರುಗಳನ್ನು,ಆಚಾರ ವಿಚಾರಗಳನ್ನು ನಿತ್ಯವೂ ಅತ್ಯಂತ ಹೀನವಾಗಿ ನಿಂದಿಸುವ ಕೆಲವು ಪ್ರಗತಿಪರರು ಸರ್ಕಾರೀ ರಕ್ಷಣೆಯಲ್ಲಿ ಸುಭದ್ರವಾಗಿದ್ದಾರೆ. ಆದರೆ ಸಂವಾದವೊಂದರಲ್ಲಿ ಅನ್ಯ ಧರ್ಮದ ವಿಚಾರವಾಗಿ ಕೇವಲ ಒಂದೇ ಒಂದು ವಾಕ್ಯ ಮಾತನಾಡಿದ್ದಕ್ಕಾಗಿ ಸಂತೋಷ್ ತಮ್ಮಯ್ಯ ಎನ್ನುವ ಪತ್ರಕರ್ತರೊಬ್ಬರನ್ನು ಮಧ್ಯರಾತ್ರಿಯಲ್ಲಿ ಬಂಧಿಸಿ ಎಳೆದೊಯ್ಯಲಾಗುತ್ತದೆ.
ಸುದ್ದಿವಾಹಿನಿಯ ಚರ್ಚೆಯೊಂದರಲ್ಲಿ ಒಂದೇ ಒಂದು ವಾಕ್ಯ ತಪ್ಪಾಗಿ ಮಾತನಾಡಿದ್ದಾರೆನ್ನುವ ಕಾರಣಕ್ಕೆ ಮಾಜಿ ವಿಧಾನಪರಿಷತ್ ಸದಸ್ಯರೊಬ್ಬರ ವಿರುದ್ಧ ತೀವ್ರ ಹೋರಾಟಗಳು ನಡೆಯುತ್ತವೆ. ಮಹಾ ನಗರಗಳೇ ಬಂದ್ ಆಗುತ್ತವೆ. ಆದರೆ ಹಿಂದೂಗಳ ವಿರುದ್ಧ,ಹಿಂದೂ ದೇವರುಗಳ ವಿರುದ್ಧ,ಕೆಲವು ಜಾತಿಗಳ ವಿರುದ್ಧ ಇಲ್ಲಿ ಯಾರು ಏನು ಬೇಕಾದರೂ ಮಾತಾಡಬಹುದಾದಷ್ಟು ಸ್ವಾತಂತ್ರ್ಯವಿದೆ. ಪ್ರತಿ ದಿನವೂ ಪತ್ರಿಕೆಗಳ ಲೇಖನಗಳಲ್ಲಿ,ಸುದ್ದಿವಾಹಿನಿಗಳ ಚರ್ಚೆಗಳಲ್ಲಿ ಹಾಗೆ ನಿಂದಿಸುವುದು ಅತೀ ಸಾಮಾನ್ಯ ಸಂಗಾತಿಯಾಗಿ ಹೋಗಿದೆ.
ಗೌರಿ ಲಂಕೇಶ್, ಕಲ್ಬುರ್ಗಿ ಮುಂತಾದ ವಿಚಾರವಾದಿಗಳ ಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವ ವಿಚಾರಗಳನ್ನು ತನಿಖೆಗೂ ಮೊದಲೇ ಎಡಪಂಥೀಯರು ತಮಗೆ ತೋಚಿದ ಸಂಘಟನೆಗಳ ವಿರುದ್ಧ ಬೊಟ್ಟು ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. ಸಂಶಯದ ಮೇಲೆ ಬಂಧಿತರಾದವರ ಪರ ಯಾರಾದರೂ ಸಣ್ಣ ಅನುಕಂಪ ತೋರಿಸುವ ಸ್ವಾತಂತ್ರ್ಯ ಕೂಡಾ ಅವರ ವಿರುದ್ಧ ಸಿದ್ಧಾಂತಿಗಳಿಗೆ ಇಲ್ಲ.
ಆದರೆ ನಕ್ಸಲ್ ಪರ ಸಹಾನುಭೂತಿ ಹೊಂದಿರುವ, ಪ್ರಧಾನಿ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವವರ ಪರ ನಿಂತು ಮಾತನಾಡುವ, ಅವರನ್ನು ಚಿಂತಕರು, ಕವಿಗಳು ಎಂದು ಕರೆಯುವ, ಎಲ್ಲಾ ರೀತಿಯಲ್ಲೂ ಸಮರ್ಥಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯವೂ ಯಾರು ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೋ. ಅವರಿಗಿದೆ!
ಎಡಪಂಥೀಯರು ಶತಾಯಗತಾಯ ವಿರೋಧಿಸುತ್ತಾ ಬಂದ “ಆಳ್ವಾಸ್ ನುಡಿಸಿರಿ” ಎನ್ನುವ ಸಮ್ಮೇಳನದ ಅಧ್ಯಕ್ಷತೆಯನ್ನು ಎಡಪಂಥೀಯರೊಬ್ಬರಿಗೆ ನೀಡಿ, ಅವರಿಗೆ ಆ ವೇದಿಕೆಯ ಮೂಲಕ ತಮ್ಮ ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಎಡಪಂಥೀಯವಾದಿಗಳು ಅಂತಹಾ ಸಮ್ಮೇಳನಗಳ ವಿರುದ್ಧ ಹೋರಾಟ ಮಾಡುತ್ತಾರೆಯೇ ಹೊರತೂ ತಾವು ಸಂಘಟಿಸುವ ಅಂತಹಾ ಸಮ್ಮೇಳನಗಳಲ್ಲಿ ತಮ್ಮ ವಿರುದ್ಧ ಸಿದ್ಧಾಂತಿಗಳಿಗೆ ಅಧ್ಯಕ್ಷತೆಯಿರಲಿ, ಕನಿಷ್ಠ ಸಭಾಸದರಾಗಿ ಭಾಗವಹಿಸುವ ಅವಕಾಶ ಕೂಡಾ ನೀಡಲಾರವು.
ಈಗ ಹೇಳಿ, ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ನಿಜಕ್ಕೂ ಯಾರಿಗಿಲ್ಲ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.