ಶ್ರೀ ಶ್ರೀನಿವಾಸ ಚಿತ್ರಾಲಯ ಸಂಸ್ಥೆಯಿಂದ ಬಿ.ಎ.ಅರಸುಕುಮಾರ್ ರವರು 1967 ರಲ್ಲಿ ಚಿತ್ರಕಥೆಯನ್ನು ಬರೆದು, ನಿರ್ದೇಶನ ಹಾಗೂ ನಿರ್ಮಾಣದ ಹೊಣೆ ಹೊತ್ತುತ್ತಾರೆ. ಬಿ.ಎನ್.ಹರಿದಾಸ್ ರವರ ಛಾಯಾಗ್ರಹಣ, ರಾಜನ್-ನಾಗೇಂದ್ರರವರ ಸಂಗೀತವಿರುತ್ತದೆ. ಚಿ.ಉದಯಶಂಕರ್ ಹಾಗೂ ವಿಜಯ ನರಸಿಂಹರವರ ಸಾಹಿತ್ಯವಿದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ರಾಜ್ ಕುಮಾರ್, ಕಲ್ಪನಾ, ಉದಯ್ ಕುಮಾರ್, ಶೈಲಶ್ರೀ, ಪಂಡರೀಬಾಯಿ, ಬಾಲಕೃಷ್ಣ ಹಾಗೂ ನರಸಿಂಹರಾಜುರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ಅತ್ತ್ಯುತ್ತಮ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ, ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ (ರಾಜ್ ಕುಮಾರ್) ಎಂಬ ರಾಜ್ಯ ಪ್ರಶಸ್ತಿಗಳನ್ನು ಪಡೆದ ಸಿನಿಮಾವಿದು. ಈ ಸಿನಿಮಾದಲ್ಲಿನ ಒಂದಷ್ಟು ಅಂಶಗಳೆಂದರೆ 60-70ರ ದಶಕದಲ್ಲಿ ಮಾರಕ ರೋಗವಾದ ಕುಷ್ಠರೋಗದ ಬಗ್ಗೆ ಸಮಾಜದಲ್ಲಿದ್ದ ತಪ್ಪು ತಿಳುವಳಿಕೆಯನ್ನು ಸರಿಪಡಿಸಲು ನಿರ್ದೇಶಕರು ಪ್ರಯತ್ನಿಸಿರುವುದು ಹಾಗೂ ಬದುಕಿನ ವಾಸ್ತವತೆಯ ಸೂಕ್ಷ್ಮತೆ ಅರಿಯದೇ, ಜನರ ಮೂಢತೆಯನ್ನು ಬಂಡವಾಳ ಮಾಡಿಕೊಂಡಂತ ಕೆಲವು ಪಂಡಿತರು, ಜ್ಯೋತಿಷಿಗಳ ಮಾತಿಗಳಿಂದ ಸಂಸಾರಗಳಲ್ಲಿ ಆಗುವ ನೋವು, ಜನರಿಗಾಗುವ ಮಾನಸಿಕ ಹಿಂಸೆ ಇವುಗಳ ಮೇಲೆಯೂ ಬೆಳಕನ್ನು ಚೆಲ್ಲಿದ್ದಾರೆ. ಈ ಸಿನಿಮಾದಲ್ಲಿ “ಓಡುವ ನದಿ ಸಾಗರವ ಸೇರಲೇಬೇಕು” ಹಾಗೂ “ನೀ ನಡೆವ ಹಾದಿಯಲ್ಲಿ, ನಗೆ ಹೂ ಬಾಡದಿರಲಿ” ಎಂಬ ಗೀತೆಗಳು ಇಂದಿಗೂ ಜನಪ್ರಿಯ.
ಕಥೆ:
ಲತಾ (ಶೈಲಶ್ರೀ) ಎಂಬಾಕೆ ಮೂರು-ನಾಲ್ಕು ಚಂದದ ಕಾಲೇಜು ಹುಡುಗಿಯರೊಂದಿಗೆ ಸೇರಿ, “ಡೂ.. ಡೂ.. ಡೂ.. ಬಸವಣ್ಣ” ಎಂಬ ಹಾಡು ಹಾಡುತ್ತಾ, ಕುಣಿಯುತ್ತಾ ಆನಂದ್ (ರಾಜ್ ಕುಮಾರ್) ನನ್ನು ರೇಗಿಸುವ ಹಾಡಿನೊಂದಿಗೆ ಸಿನಿಮಾ ಆರಂಭವಾಗುತ್ತದೆ. ಪಿ.ಬಿ.ಶ್ರೀನಿವಾಸ್ ಹಾಗೂ ಎಲ್.ಆರ್.ಈಶ್ವರಿ ಅವರ ದನಿಯೊಂದಿಗೆ ಈ ಗೀತೆ ಒಳ್ಳೆಯ ಮಜವನ್ನು ನೀಡುತ್ತದೆ. ಲತಾ ಹಾಗೂ ಆನಂದ್ ಒಂದೇ ಕಾಲೇಜಿನಲ್ಲಿ ಓದುತ್ತಿರುತ್ತಾರೆ. ಅಲ್ಲದೇ ಇಬ್ಬರೂ ಸಂಬಂಧಿಗಳು. ತಾಯಿ ಇಲ್ಲದ ತಬ್ಬಲಿಯಾದ ಅಣ್ಣನ ಮಗಳಾದ ಲತಾಳನ್ನು ತನ್ನ ಮಗನಾದ ಆನಂದನೊಟ್ಟಿಗೆ ಆನಂದನ ತಾಯಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾಳೆ. ಆನಂದ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿ, ರಾಮಾಪುರ ಎಂಬ ಗ್ರಾಮಕ್ಕೆ ತಾಲ್ಲೂಕು ಅಭಿವೃದ್ಧಿ ಅಧಿಕಾರಿಯಾಗಿ ಹೋಗುತ್ತಾನೆ. ಅಲ್ಲಿ ತನ್ನ ಸ್ನೇಹಿತನ (ಉದಯ್ ಕುಮಾರ್) ಮನೆಯಲ್ಲಿಯೇ ಊಟ ವಸತಿ ಸೌಲಭ್ಯ ಸಿಗುತ್ತದೆ.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದ ಹಳ್ಳಿಗೆ ಒಂದಷ್ಟು ಸೌಲಭ್ಯಗಳನ್ನು ಕೊಡಿಸುವಲ್ಲಿ, ಗ್ರಾಮೀಣ ಭಾಗದ ಜನರಲ್ಲಿ ಒಂದಷ್ಟು ಸರಕಾರಿ ಯೋಜನೆಗಳ ಅರಿವು ಮೂಡಿಸುವಲ್ಲಿ ಸಫಲನಾಗುತ್ತಾನೆ. ಈ ಮಧ್ಯೆ ಸ್ನೇಹಿತನ ತಂಗಿಯಾದ ಸೀತಾ (ಕಲ್ಪನಾ)ಳ ಮೇಲೆ ಮನಸಾಗುತ್ತದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಾರೆ. ಸೀತಾಳ ತಂದೆಗೆ ಪಂಡಿತರ (ಬಾಲಕೃಷ್ಣ) ಮೇಲೆ ತುಂಬಾ ನಂಬಿಕೆ ಹಾಗೂ ಗೌರವ. ಅದೆಷ್ಟೇ ಸಂಕಷ್ಟದ ಪರಿಸ್ಥಿತಿ ಇದ್ದರೂ ಸರಿ, ಪಂಡಿತರ ಮಾತು ಮೀರುತ್ತಿರಲಿಲ್ಲ. ಸೀತಾಳ ತಾಯಿ ಖಾಯಿಲೆಯಿಂದ ನರಳಿದರೂ ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸದೇ ಪಂಡಿತರ ಮಾತಿನಂತೆಯೇ ಮನೆಯಲ್ಲಿಯೇ ಆ ಮದ್ದು ಈ ಮದ್ದು ಎಂದು ಪ್ರಯೋಗಾತ್ಮಕ ಚಿಕಿತ್ಸೆ ಮಾಡಿಸುತ್ತಿರುವುದೇ ಇದಕ್ಕೆ ಪೂರಕ.
ಆನಂದನ ತಾಯಿ, ತನ್ನ ಅಣ್ಣನ ಮಗಳಾದ ಲತಾಳನ್ನೇ ಆನಂದನಿಗೆ ಮದುವೆ ಮಾಡಬೇಕು ಎಂಬ ಆಸೆ ಇರುತ್ತದೆ. ಈ ಕಾರಣದಿಂದಾಗಿ ಸೀತೆಯನ್ನು ತನ್ನ ಸೊಸೆಯನ್ನಾಗಿ ಮಾಡಿಕೊಳ್ಳಲು ಆಕೆ ಒಪ್ಪುವುದಿಲ್ಲ. ಆದರೂ ಆನಂದನ ಒತ್ತಾಯಕ್ಕೆ ಮಣಿಯುತ್ತಾಳೆ. ಈ ನಡುವೆ ಆಕೆ ಕುಷ್ಠರೋಗಕ್ಕೆ ತುತ್ತಾಗುತ್ತಾಳೆ. ಆಗಿನ ಕಾಲಮಾನಕ್ಕೆ ಕುಷ್ಟರೋಗವು ಒಂದು ಭಯಂಕರ, ಮಾರಕ ರೋಗವಾಗಿ ಹಾಗೂ ವಾಸಿ ಮಾಡಲು ಸಾಧ್ಯವಾಗದ ರೋಗವೆಂದು ಸಮಾಜದಲ್ಲಿ ಒಂದು ಭಯ ಸೃಷ್ಠಿ ಮಾಡಿರುತ್ತದೆ. ಇದೇ ಭಯದ ನೆರಳಿನಲ್ಲಿ ಸೀತಾ ಕೂಡ, ಆನಂದನ ಮೇಲಿನ ಪ್ರೀತಿಯನ್ನು ತ್ಯಾಗ ಮಾಡಲು ಸಿದ್ಧಳಾಗುತ್ತಾಳೆ. ಕುಷ್ಠರೋಗ ವಾಸಿಯಾಗುತ್ತೆ ಅನ್ನೋ ನಂಬಿಕೆಯಿಂದ ವರುಷಗಳವರೆಗೆ ಆನಂದನು ಸೀತೆಗಾಗಿ ಕಾಯುತ್ತಿರುತ್ತಾನೆ. ವರುಷಗಳವರೆಗೂ ಮದುವೆಯಾಗದೇ ಇದ್ದ ಆನಂದನನ್ನು ಕಂಡು, ಆತನ ತಾಯಿ ಮಾನಸಿಕ ಖಿನ್ನತೆಯಿಂದ ಬಳಲುತ್ತಾಳೆ. ಅಲ್ಲದೇ ಒಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸುತ್ತಾಳೆ. ಆಗ ಆನಂದನು ತಾಯಿಯ ಬಲವಂತಕ್ಕೆ ಲತಾಳನ್ನು ಮದುವೆಯಾಗಲು ಒಪ್ಪುತ್ತಾನೆ.
ಈ ನಡುವೆ ಕುಷ್ಠರೋಗದಿಂದ ಗುಣಮುಖಳಾದ ಸೀತೆ ತನ್ನ ಮನೆಗೆ ವಾಪಾಸ್ಸು ಹೋಗುತ್ತಾಳೆ. ಬಹಳ ದಿನದಿಂದ ಖಾಯಿಲೆಯಿಂದ ನರಳುತ್ತಿದ್ದ ಸೀತೆಯ ತಾಯಿ ಕೊನೆಯುಸಿರೆಳೆಯುತ್ತಾಳೆ. ಸೀತೆಯು ತನ್ನ ತಾಯಿಯ ಸಾವಿಗೂ, ತನ್ನ ಕಾಯಿಲೆಗೂ, ತನ್ನ ಕುಟುಂಬದ ಏಳಿಗೆಯಾಗದಿರಲು ಕಾರಣಳೆಂದು, ಆಕೆಯ ಜಾತಕವೇ, ಗ್ರಹಗತಿಗಳ ಫಲವೇ ಆಕೆಯಿಂದ ಇಷ್ಟೆಲ್ಲಾ ಅನಾಹುತವಾಗುತ್ತಿರುವುದು ಎಂದು ಪಂಡಿತರು ಚುಚ್ಚುಮಾತುಗಳಿಂದ ಆಕೆಯ ಮನ ನೋಯಿಸುತ್ತಾರೆ. ಇದರಿಂದ ಮನನೊಂದ ಆಕೆ ಆತ್ಮಹತ್ಯೆಗೆ ಪ್ರಯತ್ನಿಸಲು ಕೊನೆಗೆ ಮನ ಬದಲಿಸಿಕೊಂಡು ಬಂದ ಆನಂದನ ತಾಯಿ, ಲತಾ ಹಾಗೂ ಆನಂದ್ ಆಕೆಯನ್ನು ತಡೆದು ನಿಲ್ಲಿಸಿ, ಆನಂದ್-ಸೀತಾ ಮದುವೆ ಮಾಡುತ್ತಾರೆ. ಅಲ್ಲಿಗೆ ಸಿನಿಮಾ ಮುಗಿಯುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ದೈಹಿಕ ಖಾಯಿಲೆಯ ಸಮಯದಲ್ಲಿ ಇರಬೇಕಾದ ಮಾನಸಿಕ ಸ್ಥೈರ್ಯದ ಕುರಿತು ತಿಳಿಯಲು.
2. ಮೂಢನಂಬಿಕೆ ಹಾಗೂ ವಾಸ್ತವದ ನಡುವಿನ ಅಂತರ ಕುರಿತು ತಿಳಿಯಲು.
3. ಜೀವನದಲ್ಲಿ ಪ್ರೀತಿ ಹೇಗೆ ಪಾತ್ರ ನಿರ್ವಹಿಸುತ್ತೆ ಎನ್ನುವುದನ್ನು ತಿಳಿಯಲು ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.