ಅದು ಬಿಜಾಪುರ ಸುಲ್ತಾನನ ಆಸ್ಥಾನ. ಇಪ್ಪತ್ತಕ್ಕೂ ಹೆಚ್ಚು ಶೂರ ರಾಜರಿದ್ದಾರೆ, ಅಸಂಖ್ಯಾತ ಪರಾಕ್ರಮಿ ಸರದಾರರಿದ್ದಾರೆ. ಸುಲ್ತಾನನ ಪಕ್ಕದ ಆಸನದಲ್ಲಿ ಆತನ ಮಲತಾಯಿ ಉಲಿಯಾ ಬಡಿಯಾ ಬೇಗಂ ಆಸೀನಳಾಗಿದ್ದಾಳೆ. ನಟ್ಟ ನಡುವೆ ಒಂದು ಹಿರಿವಾಣ, ಅದರಲ್ಲಿ ವೀಳ್ಯ.. ಆಸ್ಥಾನವಾಗಿದ್ದರಿಂದ ಅಲ್ಲಿ ಗಂಭೀರತೆಯಿದೆ. ಆ ಕುದಿ ಮೌನವನ್ನು ಸೀಳುವಂತೆ ಉಲಿಯಾ ಬೇಗಂ ಹೂಂಕರಿಸಿದಳು.”ಆ ಬಂಡುಕೋರ ಶಿವಾಜಿಯನ್ನು ಹೆಡೆಮುರಿ ಕಟ್ಟುವ ಗಂಡಸರು ಯಾರಾದರೂ ಇದ್ದರೆ ಮುಂದೆ ಬಂದು ವೀಳ್ಯ ಸ್ವೀಕರಿಸಿ” ಒಂದು ಕ್ಷಣ ಅಲ್ಲಿ ನೆರೆದಿದ್ದವರಿಗೆ ಎದೆಬಡಿತ ನಿಂತ ಅನುಭವವಾಗಿರಲಿಕ್ಕೂ ಸಾಕು. ಶಿವಾಜಿ ಜೊತೆ ಸೆಣಸುವುದೆಂದರೆ ಸಾವನ್ನು ಆಹ್ವಾನಿಸಿದಂತೆ ಎನ್ನುವುದು ಅವರಿಗೆಲ್ಲರಿಗೂ ತಿಳಿದಿರುವ ವಿಷಯವೇ. ಬೇಗಂಳ ಸವಾಲನ್ನು ಯಾರೊಬ್ಬರೂ ಸ್ವೀಕರಿಸಲು ಸಿದ್ಧರಲ್ಲ. ಮತ್ತದೇ ಮೌನ. ಉಸಿರಾಟದ ಶಬ್ದ ಬಿಟ್ಟರೆ ಮತ್ತೇನೂ ಕೇಳಿಸದು. ಅಷ್ಟರಲ್ಲಿ ಸಭಿಕರ ಮಧ್ಯದಿಂದ ಆಜಾನುಬಾಹು ವ್ಯಕ್ತಿಯೊಬ್ಬ ನಡೆದು ಬರುತ್ತಿದ್ದರೆ ಭೂಮಿಯೇ ಕಂಪಿಸುತ್ತಿತ್ತು. ವೀಳ್ಯವನ್ನು ಸ್ವೀಕರಿಸಿ “ಶಿವಾಜಿಯನ್ನು ನಾನು ಹಿಡಿದು ತರುತ್ತೇನೆ” ಎಂದು ಘೋಷಿಸಿದ. ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಹಿಂದೊಮ್ಮೆ ಔರಂಗಜೇಬನಂಥ ಕ್ರೂರಿಯನ್ನೇ ಸಾವಿನ ಅಂಚಿಗೆ ತಂದು ನಿಲ್ಲಿಸಿದ್ದ ಮಹಾನ್ ಕುತಂತ್ರಿ, ಕಪಟಿ ಅಫಜಲಖಾನ್. ಖಾನನ ಮಾತಿನಿಂದ ಇಡೀ ಆಸ್ಥಾನದಲ್ಲಿ ಮಿಂಚಿನ ಸಂಚಾರವಾಯಿತು.
23 ಸಾವಿರ ಸೈನಿಕರು, ಸಾವಿರಾರು ಒಂಟೆ, ಆನೆಗಳ ಜೊತೆ ಶಿವಾಜಿ ಬೇಟೆಗೆ ಹೊರಟ ಖಾನನ ಕಿವಿಯಲ್ಲಿ ಬೇಗಂ ಹೇಳಿದಳು. “ಶಿವಾಜಿ ಅಷ್ಟು ಸುಲಭಕ್ಕೆ ಸಿಗುವ ವ್ಯಕ್ತಿಯಲ್ಲ, ಅವನನ್ನು ನಂಬಿಸಿ ಮೋಸದಿಂದ ಕೊಲ್ಲು”. ಬಹಳಷ್ಟು ತಯಾರಿ ಮಾಡಿಕೊಂಡು ಪ್ರಚಂಡ ಆತ್ಮ ವಿಶ್ವಾಸದಿಂದ ಹೊರಟ ಖಾನನ ಮನದ ಮೂಲೆಯಲ್ಲಿ ಒಂದು ಸಣ್ಣ ಅನುಮಾನ ಇದ್ದೇ ಇತ್ತು. ಅಷ್ಟರ ಮಟ್ಟಿಗೆ ಶಿವಾಜಿಯ ಆಟಗಳ ಬಗ್ಗೆ ಅವನೂ ಕೇಳಿದ್ದ. ಅಫಜಲಖಾನ್ ಸೈನ್ಯದೊಂದಿಗೆ ಬರುತ್ತಿರುವ ಸುದ್ದಿ ರಾಜಗಡ ತಲುಪಿತು. ಜೀಜಾಮಾತೆ ಸಣ್ಣಗೆ ನಡುಗಿ ಹೋದಳು. ಸ್ವರಾಜ್ಯದ ರಣವಿಕ್ರಮರೂ ಕೂಡ ಕಂಪಿಸಿದರು. ಮತ್ತೊಮ್ಮೆ ರಾಜಗಡದ ತುಂಬೆಲ್ಲ ಕರಾಳ ಛಾಯೆ.. ಆದರೆ ಶಿವಾಜಿಗೆ ಅದೇ ಆತ್ಮವಿಶ್ವಾಸ. ಭವಾನಿ ತನ್ನ ಕಾರ್ಯ ಪೂರ್ಣಗೊಳಿಸಲು ವಿಜಯದ ಮಾಲೆಯನ್ನು ತನ್ನ ಕೊರಳಿಗೇ ಹಾಕುವಳೆಂಬ ಅಚಲ ನಂಬಿಕೆ. ಇತ್ತ ಖಾನ್ ಬರುವಾಗ ಶಿವಾಜಿಯ ಕುಲದೇವತೆ ತುಳಜಾಮಾತೆಯ ದೇವಸ್ಥಾನಕ್ಕೆ ನುಗ್ಗಿ ಮೂರ್ತಿಯನ್ನು ಭಗ್ನಗೊಳಿಸಿದ. ಗೋ ಹತ್ಯೆ ಮಾಡಿ ರಕ್ತದಿಂದಲೇ ಭಗ್ನ ಮೂರ್ತಿಗೆ ಅಭಿಷೇಕ ಮಾಡಿದ. ಪಂಢರಾಪುರ, ಕೊಲ್ಲಾಪುರ ದೇವಸ್ಥಾನಕ್ಕೂ ದಾಳಿ ಇಟ್ಟ. ಗಡದಲ್ಲಿರುವ ಶಿವಾಜಿ ಕೆಳಗಿಳಿದು ಬಂದು ತನ್ನನ್ನು ಎದುರಿಸಬೇಕೆಂದು ಇಷ್ಟೆಲ್ಲ ಪ್ರಯತ್ನ ಪಟ್ಟರೂ ಶಿವಾಜಿಯ ಸದ್ದಿಲ್ಲ. ಈ ಎಲ್ಲ ಸುದ್ದಿಗಳೂ ರಾಜಗಡ ತಲುಪಿದರೂ ಶಿವಾಜಿ ಸೊಲ್ಲೆತ್ತಲಿಲ್ಲ. ತಂತ್ರಕ್ಕೆ ಪ್ರತಿತಂತ್ರ ಹೂಡುವುದರಲ್ಲಿ ಶಿವಾಜಿ ಎತ್ತಿದ ಕೈ. ಭಾವಾವೇಶಕ್ಕೆ ಒಳಗಾಗಿ ಸ್ವರಾಜ್ಯವನ್ನೇ ಬಲಿ ಕೊಡಲು ತಯಾರಿರಲಿಲ್ಲ. ಬದಲಾಗಿ ಖಾನನನ್ನೇ ಗಡ ಬುಡಕ್ಕೆ ತಂದು ಸಂಹರಿಸಲು ಯೋಜನೆಯೊಂದನ್ನು ಸಿದ್ಧಪಡಿಸುತ್ತಿದ್ದ ಶಿವಾಜಿ.
ಶಿವಾಜಿಯನ್ನು ಮೈದಾನಕ್ಕೆಳೆದು ತನ್ನ ತೋಳ್ಬಲ ತೋರಿಸಬೇಕೆಂದಿದ್ದ ಖಾನನ ಕನಸು ಈಡೇರಲಿಲ್ಲ. ಮುಂದೆ ಮಳೆಗಾಲ ಆರಂಭವಾಗುವುದರಿಂದ ಗಡದ ಮೇಲೇರಿ ಶಿವಾಜಿಯನ್ನು ಹುಡುಕಿ ಹಿಡಿಯುವುದು ಸುಲಭದ ಕೆಲಸವಾಗಿರಲಿಲ್ಲ. ಮತ್ತಾವ ಮಾರ್ಗ?
ಇದ್ದೇ ಇದೆಯಲ್ಲ ಸಂಧಾನದ ನಾಟಕವಾಡಿ ಅವನಾಗಿಯೇ ಕೆಳಗಿಳಿದು ಬರಬೇಕು. ಅದಕ್ಕಾಗಿ ರಾಯಭಾರಿಯೊಬ್ಬನ ಮೂಲಕ ಕೂಡಲೇ ಶರಣಾಗುವಂತೆ ಶಿವಾಜಿಗೆ ಪತ್ರ ಕಳಿಸಿಕೊಟ್ಟ. ಶಿವಾಜಿಯೂ ತನ್ನ ರಾಯಬಾರಿಯನ್ನು ಕಳಿಸಿದ ಜೊತೆಗೆ ಒಂದು ಪತ್ರ. ಶಿವಾಜಿ ಹೇಳಿದ್ದ “ಇಲ್ಲಿಯವರೆಗೆ ನಾನು ಮಾಡಿದ ಎಲ್ಲ ತಪ್ಪುಗಳನ್ನು ಮನ್ನಿಸಿರಿ. ಇನ್ನು ಮೇಲೆ ಪ್ರಾಮಾಣಿಕವಾಗಿ ಬಾದಶಹ ಹೇಳಿದಂತೆ ಕೇಳುತ್ತೇನೆ. ಖಾನಸಾಹೇಬರೆಂದರೆ ನಮಗೆ ಚಿಕ್ಕಪ್ಪನ ಸಮಾನ. ನೀವೇ ಗಡದ ಮೇಲೆ ಬಂದು ಕೈಹಿಡಿದು ಬಾದಶಹರಲ್ಲಿ ಕರೆದೊಯ್ಯಬೇಕು. ತಮ್ಮ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು” ಶಿವಾಜಿಯ ಭಯವನ್ನು ಕಂಡು ಅಫಜಲಖಾನ್ ಹಿರಿಹಿರಿ ಹಿಗ್ಗಿದ. ತನ್ನ ಬಾಹುಬಲದ ಬಗ್ಗೆ ಮತ್ತೊಮ್ಮೆ ಹೆಮ್ಮೆ ಎನಿಸಿತು ಅವನಿಗೆ. ಇವರಿಬ್ಬರ ಭೇಟಿಗೆ ವೇದಿಕೆ ಸಿದ್ಧವಾಯಿತು.
ಅಂದು ನವಂಬರ್ 10, 1659.. ಶಿವಾಜಿ – ಅಫಜಲಖಾನರು ಸಂಧಿಸುವ ದಿನ. ಸ್ವರಾಜ್ಯದ ಅಳಿವು ಉಳಿವನ್ನು ನಿರ್ಧರಿಸುವ ದಿನ. ಪ್ರತಾಪಗಡದ ಆಯಕಟ್ಟಿನ ಜಾಗದಲ್ಲಿ ಶಾಮಿಯಾನ ಹಾಕಲಾಯಿತು. ಇಬ್ಬರ ಕಡೆಯೂ ಹತ್ತು ಜನ ಸಶಸ್ತ್ರಧಾರಿಗಳನ್ನು ಕರೆತಂದು ಶಾಮಿಯಾನದಿಂದ ಸ್ವಲ್ಪ ದೂರ ನಿಲ್ಲಿಸಬೇಕೆಂದು ನಿರ್ಧರಿಸಲಾಯಿತು. ಇತ್ತ ಭೇಟಿಯ ಪ್ರತಿಯೊಂದು ತಯಾರಿಯನ್ನೂ ಶಿವಾಜಿಯೇ ನೋಡಿಕೊಂಡಿದ್ದ. ಯಾವ ಶಸ್ತ್ರ, ವಸ್ತ್ರ, ಶಿರಸ್ತ್ರಾಣ ಹಾಕಿಕೊಳ್ಳಬೇಕೆನ್ನುವುದರಿಂದ ಹಿಡಿದು ಪ್ರತಿಯೊಂದೂ ಯೋಜನಾಬದ್ಧ. ಆ ಸಮಯ ಬಂದೇ ಬಿಟ್ಟಿತು. ಅಂದುಕೊಂಡಂತೆ ಅಫಜಲಖಾನ್ ಶಾಮಿಯಾನ ಪ್ರವೇಶಿಸಿದ. ಭಯಗೊಂಡವರಂತೆ ನಟಿಸುತ್ತಿದ್ದ ಶಿವಾಜಿಯೂ ಬಂದ. ಶಿವಾಜಿಯನ್ನು ಕಂಡೊಡನೆ ಖಾನನೇ ಮುಂದೆ ಬಂದು ಕೈ ಚಾಚಿ ತಬ್ಬಿಕೊಂಡ. ಇಬ್ಬರ ಆಲಿಂಗನವಾಯಿತು. ಬರಬರುತ್ತ ಖಾನನ ಹಿಡಿತ ಬಿಗಿಯಾಗುತ್ತಿತ್ತು. ಶಿವಾಜಿಯ ಕುತ್ತಿಗೆಯನ್ನು ಕೈಯಿಂದ ಬಿಗಿಯತೊಡಗಿದ. ಮುಂದುವರೆದು ಗುಪ್ತ ಚೂರಿಯೊಂದನ್ನು ಹೊರದೆಗೆದ ಖಾನ್ ಶಿವಾಜಿಯ ಬೆನ್ನಿಗೆ ಇರಿದ. ನಿಲುವಂಗಿ ಒಳಗಿದ್ದ ಉಕ್ಕಿನ ಅಂಗಿ ತುಂಡಾಯಿತು. ತಕ್ಷಣ ಚುರುಕಾದ ಶಿವಾಜಿ ಸ್ವಲ್ಪವೂ ತಡ ಮಾಡದೇ ತನ್ನ ಕೈ ಬೆರಳಿಗೆ ಹಾಕಿಕೊಂಡಿದ್ದ ವ್ಯಾಘ್ರನಖಗಳನ್ನು ಖಾನನ ಹೊಟ್ಟೆಯ ಆಳಕ್ಕಿಳಿಸಿ ಕರುಳನ್ನೆ ಹೊರಗೆ ಹಾಕಿದ. ಸ್ವತಃ ಖಾನನಿಗೂ ಏನು ನಡೆಯುತ್ತಿದೆಯೆಂದು ಅರ್ಥವಾಗುವ ಮೊದಲೇ ಶಾಮಿಯಾನ ಪೂರ್ತಿ ರಕ್ತಸಿಕ್ತವಾಯಿತು. ಹೊರ ಬರುತ್ತಿದ್ದ ಕರುಳನ್ನು ಪುನಃ ಹೊಟ್ಟೆಗೆ ತುಂಬಿಕೊಳ್ಳುತ್ತ ಖಾನ್ ಹೊರಗೆ ಓಡಿದ. ಶಿವಾಜಿಯೂ ಅವನ ಹಿಂದೆಯೇ ಓಡಿ ತನ್ನ ಭವಾನಿ (ಖಡ್ಗದ ಹೆಸರು)ಯಿಂದ ಅವನ ತಲೆ ಕತ್ತರಿಸಿದ. ಅಣತಿ ದೂರದಲ್ಲಿದ್ದ ಸ್ವರಾಜ್ಯದ ಹತ್ತು ಜನ ಸೈನಿಕರು ಹತ್ತು ಮೊಗಲ್ ಸೈನಿಕರನ್ನು ಸಂಹರಿಸಿದರು. ಕೋಟೆಯ ಮೇಲಿನಿಂದ ಮೂರು ಸಲ ತೋಪು ಹಾರಿಸಲಾಯಿತು. ಪೂರ್ಣ ಸಿದ್ಧತೆಯೊಂದಿಗೆ ಹಿಂದಿನ ರಾತ್ರಿಯೇ ಮೊಗಲ್ ಸೈನ್ಯವನ್ನು ಸುತ್ತುವರಿದಿದ್ದ ನೇತಾಜಿ ಪಾಲಕರ್ ಹಸಿದಹುಲಿಯಂತೆ ಶತ್ರು ಪಾಳಯದ ಮೇಲೆರಗಿ ಧೂಳೆಬ್ಬಿಸಿದ. ಮಾನವರೂಪೀ ರಾಕ್ಷಸನ ಸಂಹಾರವಾಯಿತು. ಸ್ವರಾಜ್ಯದ ಮೇಲಿದ್ದ ಕಾರ್ಮೋಡ ಕರಗಿ ನೀಲಾಕಾಶ ಪ್ರಕಾಶಮಾನವಾಯಿತು.
Source : Wikipedia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.