ಗಾಯತ್ರಿ ಆರ್ಟ್ಸ್ ಸಂಸ್ಥೆಯಿಂದ ಕಾಶೀನಾಥ್ ರವರು 1978 ರಲ್ಲಿ ತಾವೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿತ್ತಾರೆ. ಅಷ್ಟೇ ಅಲ್ಲದೇ ಸತ್ಯನಾರಾಯಣ, ದೊಡ್ಡಯ್ಯ ಹಾಗೂ ದತ್ತಾತ್ರೇಯ ಅವರೊಂದಿಗೆ ಸೇರಿ ನಿರ್ಮಾಣದ ಜವಬ್ದಾರಿ ಹೊರುತ್ತಾರೆ. ಬಿ.ಸಿ.ಗೌರಿಶಂಕರ್ ರವರ ಛಾಯಾಗ್ರಹಣ, ಎಲ್.ವೈದ್ಯನಾಥನ್ ರವರ ಸಂಗೀತವಿರುತ್ತದೆ. ಕಥಾಪ್ರಧಾನವಾದ ಈ ಚಿತ್ರದಲ್ಲಿ ಎಂ.ವಿ.ವಾಸುದೇವರಾವ್, ಸುರೇಶ್ ಹೆಬ್ಳಿಕರ್, ಶೋಭ, ಶ್ರೀಲಲಿತ, ಕಾಮಿನಿಧರನ್, ಸುಂದರ್ ಕೃಷ್ಣ ಅರಸ್, ಮೋಹನ್, ಅರವಿಂದ ಹಾಗೂ ಮಾಸ್ಟರ್ ಪ್ರಕಾಶ್ ರವರು ಮುಖ್ಯ ಭೂಮಿಕೆಯಲ್ಲಿದ್ದಾರೆ.
ರಾಜ್ಯ ಪ್ರಶಸ್ತಿಯನ್ನು ಅತ್ತ್ಯುತ್ತಮ ಚಿತ್ರಕಥೆಗಾಗಿ(ಕಾಶೀನಾಥ್) ಹಾಗೂ ಅತ್ಯುತ್ತಮ ಬಾಲನಟ (ಮಾಸ್ಟರ್ ಪ್ರಕಾಶ್) ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕೌಟುಂಬಿಕ ಮೌಲ್ಯಗಳ ಕುರಿತು ಹೇಳುತ್ತಿದ್ದ ಸಾಮಾಜಿಕ ಕಳಕಳಿಯ ಕಥೆಗಳೇ ಬಹಳವಾಗಿ ಸಿನಿಮಗಳಾಗಿ ಬರುತ್ತಿದ್ದ ಕಾಲವದು. ಅಷ್ಟೇ ಅಲ್ಲದೇ ಪೌರಾಣಿಕ, ಭಕ್ತಿ ಪ್ರಧಾನ ಸಿನಿಮಾಗಳಿಗೂ ಕೊರತೆಯಿರದ ಕಾಲವದು. ಅಂತಹ ಕಾಲಮಾನದಲ್ಲಿ ಬೇರೆಯದೇ ಆಯಾಮದಲ್ಲಿ ಈ ಸಿನಿಮಾ ಕರೆದೊಯ್ಯಿತು. ಬೆಚ್ಚಿಬೀಳಿಸುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಬರೆದು, ಅದನ್ನು ತೆರೆಮೇಲೆ ತಂದು ಪ್ರೇಕ್ಷಕ ಪ್ರಭು ತದೇಕಚಿತ್ತದಿಂದ ಕೊನೆಯವರೆಗೂ ಕುಳಿತುಕೊಳ್ಳುವಂತೆ ಮಾಡುತ್ತದೆ. ಈ ಥರಹದ ಥ್ರಿಲ್ಲರ್ ಕತೆಗಳಲ್ಲಿ ಇಂಪಾದ ಸಂಗೀತವಿರುವುದಿಲ್ಲ ಹಾಗೂ ಹಾಡುಗಳೂ ಇರುವುದಿಲ್ಲ. ಆದರೆ ಈ ಸಿನಿಮಾ ಅದಕ್ಕೆ ಅಪವಾದ. ಇಲ್ಲೊಂದು ನವಿರಾದ ಪ್ರೇಮಕಥೆ, ಇಂಪಾದ ಎರಡು ಹಾಡು. ಆ ಹಾಡುಗಳು ಈವತ್ತಿಗೂ ಜನಪ್ರಿಯ.
ಕಥೆ:
ಹಸಿರು ಕಾನನದ ಮೌನವೇ ಮನೆ ಮಾಡಿರಲು, ಅಲ್ಲೊಂದು ಗುಂಡಿನ ಶಬ್ದ, ಆ ಶಬ್ದಕ್ಕೆ ಬೆಚ್ಚಿ ಬಾನಿಗೆ ಹಾಡುವ ಬೆಳ್ಳಕ್ಕಿಗಳ ಗುಂಪು. ಈ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಆ ಶಬ್ದ ಕೇಳಿ ಅಲ್ಲಿಗೆ ಕಟ್ಟಿಗೆ ರಂಗ (ಅರವಿಂದ್) ಅಲ್ಲೊಂದು ಹೆಣ ಕಂಡದ್ದಾಗಿ ಊರೆಲ್ಲಾ ಸುದ್ದಿ ಮಾಡಿ, ಅವರನ್ನೆಲ್ಲಾ ಕರೆತರುವಷ್ಟರಲ್ಲಿ ಅಲ್ಲೊಂದು ಹಂದಿಯ ಹೆಣವಿರುತ್ತದೆ. ಆದರೆ ಅವ ಹೇಳಿದ ಹೆಣವಾಗಿ ಬಿದ್ದ ವ್ಯಕ್ತಿಯು ಮಾತ್ರ ನಾಪತ್ತೆಯಾಗಿದ್ದ. ಒಂದು ಎಸ್ಟೇಟ್ ಸುತ್ತಮುತ್ತಲಿನಲ್ಲೇ ಕಥೆ ಸುತ್ತುತ್ತದೆ. ಸಿನಿಮಾ ಮುಗಿಯುವ ಹಂತಕ್ಕೆ ಬಂದಾಗಲೂ ಕಥೆಯ ಪಾತ್ರಗಳು ಬೇರೆಬೇರೆಯಾಗಿಯೇ ಕಾಣುತ್ತವೆ. ಆ ಎಸ್ಟೇಟ್ ನ ಮಾಲೀಕನ ಮಗನಾದ ಶ್ಯಾಮ್ (ಕೋಕಿಲ ಸಿನಿಮಾ ಖ್ಯಾತಿಯ ಮೋಹನ್) ನಾಪತ್ತೆಯಾದವ. ಆತನ ಮಲತಾಯಿ (ಶ್ರೀಲಲಿತ) ಈತನ ನಡುವಳಿಕೆ ಹಾಗೂ ದುಂದುವೆಚ್ಚಕ್ಕೆ ಬೇಸತ್ತಿರುತ್ತಾಳೆ. ತನ್ನ ಹಾಗೂ ಪರಿಮಳ ಎಸ್ಟೇಟ್ ಮಾಲೀಕನ ನಡುವಿನ ಸಂಬಂಧದ ಗುಟ್ಟು ರಟ್ಟಾಗದಿರಲಿ ಎಂದು ಅವನು ಕೇಳಿದಾಗಲೆಲ್ಲ ಹಣ ಕೊಡುತ್ತಾಳೆ.
ತಾಯಿ (ಕಾಮಿನಿಧರನ್) ಹಾಗೂ ಮಗಳು ಕುಸುಮ (ಶೋಭ) ಅವರದು ಮತ್ತೊಂದು ಕುಟುಂಬ. ಆ ಕುಟುಂಬದ ಆಪ್ತ ಬಂಟನಾಗಿ ರಂಗಯ್ಯ (ಎಂ.ವಿ.ವಾಸುದೇವರಾವ್). ಅವರದು ಕೂಡ ಅದೆಂತದೋ ಸಮಸ್ಯೆ. ಆದರೆ ಯಾರ ಬಳಿಯೂ ಹೇಳಿಕೊಳ್ಳದ ಹಾಗೂ ಹೆಚ್ಚಾಗಿ ಬೆರೆಯದ ಕುಟುಂಬ. ರಂಗಯ್ಯ ಕೂಡ ಅಷ್ಟೇ ಗಾಂಭೀರ್ಯ. ಆತ ಯಾರೊಂದಿಗೂ ಹೆಚ್ಚು ಮಾತನಾಡದೇ, ಚಿತ್ರದುದ್ದಕ್ಕೂ ಪ್ರೇಕ್ಷಕನ ಕಣ್ಣಿಗೆ ಅನುಮಾನ ಬರುವಂತೆ ನಡೆದುಕೊಳ್ಳುತ್ತಾನೆ. ಈ ರಂಗಯ್ಯನ ಮೊಮ್ಮಗನಾದ ಏಳೆಂಟು ವರ್ಷ ಪ್ರಾಯದ ಪುಟ್ಟ (ಮಾಸ್ಟರ್ ಪ್ರಕಾಶ್) ಕುಸುಮಳೊಂದಿಗೆ ಹೆಚ್ಚಾಗಿ ಬೆರೆಯುತ್ತಾನೆ. ಸದಾ ಆಕೆಯ ಜೊತೆಯೇ ಇರುತ್ತಾನೆ.
ಹೀಗೆ ನಾಪತ್ತೆಯಾದ ಶ್ಯಾಮ್ ಕೊಲೆಯಾಗಿರಬಹುದೆಂದು ಮೊದಲು ತನಿಖೆಗಾಗಿ ಬಂದ ಪೋಲಿಸರು ಅನುಮಾನಿಸುತ್ತಾರೆ ಅಷ್ಟೇ. ಕಟ್ಟಿಗೆ ರಂಗ ಚಿಕ್ಕಯ್ಯನವರ ಹೆಣ ನೋಡಿದೆ ಎಂದು ಸುದ್ದಿ ಹಬ್ಬಿಸಿದ ಸ್ವಲ್ಪ ದಿನಗಳೊಳಗಾಗಿ ಆತನ ಗೆಳೆಯ ಎಂದು ಹೇಳಿಕೊಂಡು ಪ್ರಕಾಶ (ಸುರೇಶ್ ಹೆಬ್ಳೀಕರ್) ಅಲ್ಲಿಗೆ ಬರುತ್ತಾನೆ. ನಾಪತ್ತೆಯಾದ ಗೆಳೆಯನ ಬರುವಿಕೆಗಾಗಿ ಕಾಯುತ್ತಾ ಈ ಅನುಮಾನ ಪ್ರಕರಣದ ಕುರಿತು ಸತ್ಯಾಂಶ ಹುಡುಕುವ ಪ್ರಯತ್ನ ಮಾಡುತ್ತಾನೆ. ಈ ಪ್ರಯತ್ನದಲ್ಲಿ ಇರುವಾಗಲೇ ಕುಸುಮಳನ್ನು ಪ್ರೀತಿಸುತ್ತಾನೆ. ಗುಂಡಿನ ಶಬ್ದಕ್ಕೆ ಬೆಚ್ಚಿಬೀಳುವ ಕುಸುಮಳ ನೋವಿನ ಹಿಂದಿನ ಸತ್ಯವನ್ನು ತಿಳಿಯುತ್ತಾನೆ. ಕೊನೆಗೂ ಆಕೆಯದೇನೂ ತಪ್ಪಿಲ್ಲ ಎನ್ನುವುದು ಸಾಬೀತಾಗುತ್ತದೆ. ಆಕೆ ಇನ್ನೊಬ್ಬರ ಮಗಳು (ಸುಂದರ್ ಕೃಷ್ಣ ಅರಸ್ ) ಎಂಬ ಸತ್ಯ ರಂಗಯ್ಯನಿಂದ ಆಕೆಗೆ ಗೊತ್ತಾಗುತ್ತದೆ. ಒಮ್ಮೆ ಕುಸುಮಾಳನ್ನು ಬಲಾತ್ಕಾರ ಮಾಡುವ ಸಮಯದಲ್ಲಿ ಆಕೆಯ ತಂದೆ (ಸುಂದರ್ ಕೃಷ್ಣ ಅರಸ್) ಅವನಿಗೆ ಗುಂಡಿಟ್ಟು ಕೊಲೆ ಮಾಡಿರುತ್ತಾನೆ. ಕೊನೆಗೆ ಸಾಕ್ಷ್ಯಾಧಾರಗಳು ಇಲ್ಲದೇ ಈ ಕೇಸ್ ಕೊನೆಯಾಗುತ್ತದೆ ಹಾಗೂ ಪ್ರೀತಿಸಿದ ಜೋಡಿಗಳು ಒಂದಾಗಿ ಕಥೆಯೂ ಸುಖಾಂತ್ಯಗೊಳ್ಳುತ್ತದೆ.
ಇಂತಹ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಪಿ.ಆರ್.ರಾಮದಾಸ್ ನಾಯ್ಡು ರವರು ಬರೆದ “ಈ ನಾಡ ಅಂದ, ಈ ಸೊಬಗೇ ಚಂದ” ಎಂಬ ಗೀತೆಯನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಹಾಗೂ “ಸವಿನೆನಪುಗಳು ಬೇಕು” ಎಂಬ ಗೀತೆಯನ್ನು ವಾಣಿ ಜಯರಾಂ ರವರು ಹಾಡಿದ್ದಾರೆ. ಈ ಹಾಡುಗಳು ಈವತ್ತಿಗೂ ಜನಪ್ರಿಯ. ಈ ಸಿನಿಮಾದಲ್ಲಿ ಸುರೇಶ್ ಹೆಬ್ಳೀಕರ್, ಎಂ.ವಿ.ವಾಸುದೇವರಾವ್, ಮಾಸ್ಟರ್ ಪ್ರಕಾಶ್, ಶ್ರೀಲಲಿತಾ, ಕಾಮಿನಿಧರನ್ ಹಾಗೂ ಅರವಿಂದ್ (ಖ್ಯಾತ ಗಾಯಕಿ ಮಾನಸ ಹೊಳ್ಳ ರವರ ತಂದೆ) ರವರ ನಟನೆ ಅದ್ಬುತವಾಗಿದೆ.
ಮುಂದೆ ತೊಂಭತ್ತರ ದಶಕದಲ್ಲಿ ಭಾರಿ ಸುದ್ದಿ ಮಾಡಿದ್ದ “ಶ್” ಎಂಬ ಸಿನಿಮಾ ಕೂಡ ಹೀಗೆ ಸಸ್ಪೆನ್ಸ್ ಥ್ರಿಲ್ಲರ್ ನಿಂದ ಸುದ್ದಿ ಮಾಡಿತ್ತು. ಆ ಸಿನಿಮಾ ನಿರ್ದೇಶಕರಾದ ಉಪೇಂದ್ರ ರವರು ಇವರ ಶಿಷ್ಯನಾಗಿದ್ದಕ್ಕೂ, ಗುರುವಿಗೆ ಗೌರವ ಹೆಚ್ಚಿಸಿದ ಕೀರ್ತಿ ಉಪೇಂದ್ರ ಅವರದ್ದು. ಅದೇನೇ ಇರಲಿ, ಸಾಧ್ಯವಾದಲ್ಲಿ ಈ ಸಿನಿಮಾ ನೋಡಿ, ಒಂದು ರೋಚಕ ಅನುಭವ ಈ ಸಿನಿಮಾ ನೀಡುತ್ತದೆ.
ಸಿನಿಮಾ ನೋಡಲೇಬೇಕೆಂಬುದಕೆ ಕಾರಣಗಳು:
1. ಒಂದು ಕೆಟ್ಟ ಕೆಲಸ ತಂದುಕೊಡುವ ಕರ್ಮ ಫಲದ ಕುರಿತು ತಿಳಿಯಲು.
2. ಕುಟುಂಬಕ್ಕೆ ಹಿರಿಯರ ಅಗತ್ಯ ಎಷ್ಟಿದೆ ಎಂಬುದನ್ನು ತಿಳಿಯಲು.
3. ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ ಗೀಳಿನ ಮಂದಿ ಈ ಸಿನಿಮಾ ನೋಡಲೇಬೇಕು.
4. ಇದಲ್ಲದೇ ಇಂದಿನ ಪೀಳಿಗೆಯವರು ಇಂತಹ ಅಪರೂಪದ ಈ ಸಿನಿಮಾ ನೋಡಲೇಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.