ವಸಾಹತುಶಾಹಿ ಪರಂಪರೆಯನ್ನು ದಾಟಿ ಮುಂದುವರಿಯುತ್ತಿರುವ ನಮ್ಮ ಭಾರತ ಇದೀಗ ಜಾಗತಿಕ ವ್ಯಾಪಾರೀ ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಒಡ್ಡಿಕೊಂಡು ಹೊಸ ಹೊಸ ಆವಿಷ್ಕಾರಗಳು, ನವೀನ ತಂತ್ರಜ್ಞಾನಗಳು ಹಾಗೂ ಅತ್ಯುತ್ತಮ ತಾಂತ್ರಿಕ ಕಲ್ಪನೆಗಳೊಂದಿಗೆ ಪ್ರಪಂಚದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸುತ್ತಿದೆ.
ಅದು ಹದಿನೇಳನೇ ಶತಮಾನದ ವಸಾಹತು ಶಾಹೀ ವಿಸ್ತರಣೆಯಿರಬಹುದು, ಹದಿನೆಂಟನೆಯ ಶತಮಾನದಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿಯಿರಬಹುದು, ಹತ್ತೊಂಬತ್ತನೇ ಶತಮಾನದ ಮಹಾ ಯುದ್ಧ ಅಥವಾ ಶೀತಲ ಸಮರವಿರಬಹುದು, ಅಥವಾ ಇಪ್ಪತ್ತನೆಯ ಶತಮಾನದಲ್ಲಿ ವಿವಿಧ ದೇಶಗಳಲ್ಲಿ ನಡೆದ ಏಕೀಕರಣ ಅಥವಾ ವಿಭಜನೆಗಳಿರಬಹುದು, ಎಲ್ಲದಕ್ಕೂ ಒಂದು ವಿಷಯ ಥಳುಕು ಹಾಕಿಕೊಂಡಿದೆ. ಅದೆಂದರೆ ವ್ಯಾಪಾರ ಮತ್ತು ಅದರಿಂದ ಗಳಿಸಬಹುದಾದ ಲಾಭ. ವ್ಯಾಪಾರವು ಅಗಾಧ ವಸಾಹತುಶಾಹೀ ಆಡಳಿತದಲ್ಲಿ ಊಹಿಸಲೂ ಆಗದ ಫಲಿತಾಂಶಗಳ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದರೂ ಸೈನ್ಯಗಳು ತಮ್ಮದಲ್ಲದ ಭೂಮಿಯಲ್ಲಿ ಯುದ್ಧ ಮಾಡಿ ವಸಾಹತೀಕರಣಗೊಳಿಸುತ್ತಿದ್ದುದರ ಹಿಂದೆ ಕೂಡಾ ಇದೇ ವಾಣಿಜ್ಯ ಉದ್ದೇಶವೇ ಕೆಲಸ ಮಾಡಿದೆ. ಅಂದು ಒಂದು ಪ್ರದೇಶವನ್ನು ಕಳೆದುಕೊಂಡರೂ ಇನ್ನೊಂದು ಪ್ರದೇಶವನ್ನು ಗೆಲ್ಲಬೇಕು ಎನ್ನುವ ಆ ಕ್ರಮಗಳ ಹಿಂದೆ ಇದ್ದ ಬಲವಾದ ಕಾರಣವೇ ಇನ್ನೊಂದು ಮೂಲವನ್ನು ತಮ್ಮ ಸಾಮ್ರಾಜ್ಯದ ಆರ್ಥಿಕತೆಗೆ ಸೇರಿಸಿಕೊಳ್ಳಬೇಕೆನ್ನುವುದಾಗಿತ್ತು.
(PHOTO :ಸೈಕಲ್ ತಯಾರಿಕಾ ಕಂಪೆನಿಯಾಗಿದ್ದ ಭಾರತದ ಹೀರೊ ಇದೀಗ ಪ್ರಪಂಚದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿ)
ಈಗ ಆಧುನಿಕ ಕಾಲವಾದ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಏನಾಗುತ್ತಿದೆ ಎನ್ನುವುದನ್ನು ಒಮ್ಮೆ ನೋಡೋಣ. ಅಮೆರಿಕಾ ಮತ್ತದರ ಮಿತ್ರ ರಾಷ್ಟ್ರಗಳು ಅಂತರ ರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದ Bretton Woods institutions (ವರ್ಲ್ಡ್ ಬ್ಯಾಂಕ್, IMF ಇತ್ಯಾದಿ)ಗಳು ಕ್ರಮೇಣ ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳತೊಡಗಿವೆ. ಪ್ರತಿಯೊಂದು ವ್ಯಾಪಾರವೂ ತನ್ನದೇ ಆದ ಕೆಲವು ನಿರ್ಬಂಧಗಳನ್ನು ಹೊಂದಿವೆ.ಅಂತಹಾ ನಿರ್ಬಂಧಗಳನ್ನು ಪಾಲಿಸುವ ವಿಚಾರದಲ್ಲಿ ಜಗತ್ತಿನ ಶಕ್ತಿ ಶಾಲೀ ರಾಷ್ಟ್ರಗಳೇ ನಿರ್ಣಾಯಕ ಪಾತ್ರ ವಹಿಸುತ್ತವೆ. ಭಾರತ ತನ್ನ ರೈತರ ಜೀವನೋಪಾಯಗಳ ಉನ್ನತಿಗಾಗಿ ಕೈಗೊಂಡ ಹಲವು ಮಹತ್ತ್ವದ ಕಾರ್ಯಗಳನ್ನು ಕೂಡಾ ಅದೇ ನಿರ್ಬಂಧಗಳಡಿಯಲ್ಲಿ ತಡೆಯೊಡ್ಡಲಾಗಿದೆ. ಆದರೆ ಟ್ರಂಪ್ ಆಡಳಿತಕ್ಕೂ ಉದ್ಯೋಗಗಳ ರಕ್ಷಣೆಯ ಹೆಸರಿನಲ್ಲಿ ನಡೆಯುವ ಅಂತಹಾ ಸ್ವಘೋಷಿತ ಕ್ರಮಗಳನ್ನು ಮರು ಪರಿಶೀಲಿಸುವ ಇಚ್ಛೆಯಿದ್ದಂತಿಲ್ಲ.
ಜಾಗತೀಕರಣವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಭಾರತೀಯ ನವ ನಾಗರೀಕತೆ
ಯೋಗ ದಿನ ಭಾರತದ ಪ್ರಾಚೀನ ಆಚರಣೆಗಳಿಗೆ ಮರಳಿ ವೈಭವವನ್ನು ತಂದುಕೊಟ್ಟಿತು. ಇದೀಗ ನಮ್ಮ ಯೋಗಕ್ಕೆ ಒಂದು ದೊಡ್ಡ ಅಂತರರಾಷ್ಟ್ರೀಯ ಮಾರುಕಟ್ಟೆ ಸೃಷ್ಟಿಯಾಗಿದೆ. ಯೋಗ ತರಬೇತುದಾರರು, ಯೋಗ ಶಿಕ್ಷಣ, ಯೋಗ ಪುಸ್ತಕಗಳು, ವಿಡಿಯೋಗಳು… ಹೀಗೆ ಇವೆಲ್ಲವೂ ಯೋಗ ಸಂಬಂಧಿ ಉದ್ಯೋಗಗಳಿಗೆ ಪ್ರಪಂಚದಾದ್ಯಂತ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿವೆ. ಯೋಗ ಉದ್ಯಮವೆನ್ನುವ ಹೊಸಾ ಉದ್ಯಮವಲಯವೊಂದು ಸ್ಥಾಪನೆಯಾಗುತ್ತಿರುವ ಮತ್ತು ಯೋಗ ಟೂರಿಸಂ ಹೆಸರಿನಲ್ಲಿ ಮತ್ತೊಂದು ವಿಧದ ಪ್ರವಾಸೋದ್ಯಮವು ಬೆಳೆಯುತ್ತಿರುವುದನ್ನೂ ತಡೆಯಲಾಗದು. ಅಮೇರಿಕನ್ ವೇದ ಎನ್ನುವ ಪುಸ್ತಕದ ಲೇಖಕ ಫಿಲಿಪ್ ಗೋಲ್ಡ್ ಬರ್ಗ್ ಅವರು ವಿವರಿಸುವಂತೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯೋಗ ಭಾರೀ ಸಂಖ್ಯೆಯ ಕುಟುಂಬಗಳ ಬದುಕಿನಲ್ಲಿ ಕ್ರಾಂತಿಯನ್ನೇ ಮಾಡಿದೆ.
GII ನಲ್ಲಿ ನಮ್ಮ ಭಾರತ
2018 ರ ಗ್ಲೋಬಲ್ ಇನ್ನೋವೆಟಿವ್ ಇಂಡೆಕ್ಸ್ (GII) ಬಿಡುಗಡೆಗೊಳಿಸಿದ ಮೋಸ್ಟ್ ಇನ್ನೋವೆಟಿವ್ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 57 ನೇ ಸ್ಥಾನವನ್ನು ಪಡೆದಿದೆ. ಕಳೆದ ವರ್ಷ 60 ನೇ ಸ್ಥಾನದಲ್ಲಿದ್ದ ಭಾರತ ಇದೀಗ ಮೂರು ಸ್ಥಾನಗಳ ಮೇಲೇರಿದೆ. 2015 ರಲ್ಲಿ 81ನೇ ಸ್ಥಾನದಲ್ಲಿದ್ದ ನಮ್ಮ ದೇಶ ನಿರಂತರವಾಗಿ ತನ್ನ ಸ್ಥಾನದಲ್ಲಿ ಮೇಲೇರುತ್ತಲೇ ಬಂದಿದೆ. ಈ ಮಧ್ಯೆ 2017 ರಲ್ಲಿ 22ನೇ ಸ್ಥಾನದಲ್ಲಿದ್ದ ಚೀನಾ ಈ ವರ್ಷ 17 ನೇ ಸ್ಥಾನಕ್ಕೇರಿದೆ. ಪ್ಯಾರಿಸ್ ಮೂಲದ Cornell University ಹಾಗೂ ಜಿನೇವಾದಲ್ಲಿರುವ World Intellectual Property Organisation (WIPO)ಗಳು ಜಂಟಿಯಾಗಿ ಗ್ಲೋಬಲ್ ಇನ್ನೋವೆಟಿವ್ ಇಂಡೆಕ್ಸ್ (GII) ಬಿಡುಗಡೆಗೊಳಿಸುತ್ತವೆ. GII 126 ವಿವಿಧ ಆರ್ಥಿಕ ಮಾನದಂಡಗಳನ್ನು ಬಳಸಿ 80 ವಿವಿಧ ಸೂಚಕಗಳನ್ನು ಆಧಾರವಾಗಿಟ್ಟುಕೊಂಡು ಈ ಶ್ರೇಯಾಂಕಗಳನ್ನು ನೀಡುತ್ತಾ ಬಂದಿದೆ.
ಇದು GII ಹನ್ನೊಂದನೆಯ ಆವೃತ್ತಿಯಾಗಿದ್ದು ಆವಿಷ್ಕಾರಗಳ ಬಳಕೆ ಹಾಗೂ ಅವುಗಳ ಪ್ರೋತ್ಸಾಹಕ್ಕೆ ಸಂಬಂಧಪಟ್ಟಂತೆ ವಿವಿಧ ದೇಶಗಳ ಸರ್ಕಾರಗಳಿಗೆ ನೀತಿಗಳನ್ನು ರೂಪಿಸಲು ಇದು ಒಂದು ನಂಬಿಕಾರ್ಹ ಮೂಲವಾಗಿ ಬಳಕೆಯಾಗುತ್ತಿದೆ.
ನಮ್ಮ ಆಯುರ್ವೇದ ಉತ್ಪನ್ನಗಳು ಅಭಿವೃದ್ಧಿ ಹೊಂದಿದ ದೇಶಗಳ ಅನೇಕ ಅಡಚಣೆಗಳ ನಡುವೆಯೂ ತಮ್ಮ ಯಶಸ್ಸನ್ನು ದಾಖಲಿಸುತ್ತಿವೆ. ಚೀನಾದ ಹರ್ಬಲ್ ಉತ್ಪನ್ನಗಳಿಗೆ ಚೀನಾ ಸರ್ಕಾರವು ಅತ್ಯಂತ ದೊಡ್ಡ ಮಟ್ಟದಲ್ಲಿ ಬೆಂಬಲಿಸುತ್ತಿದೆ.ಆದರೂ ನಮ್ಮ ಆಯುರ್ವೇದ ಉತ್ಪನ್ನಗಳು ಎಲ್ಲಾ ಮಾರುಕಟ್ಟೆಯ ಒತ್ತಡಗಳನ್ನೂ ಮೀರಿ ತಮ್ಮ ಸ್ಥಾನವನ್ನು ಕಂಡುಕೊಂಡಿವೆ. ಇದೀಗ ಯುನಿಲಿವರ್, ಕೋಲ್ಗೆಟ್ ಅಥವಾ ಇತರ ಯಾವುದೇ ಬಹುರಾಷ್ಟ್ರೀಯ ಕಂಪನಿಗಳೂ ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಆಯುರ್ವೇದ ಉತ್ಪನ್ನಗಳನ್ನೇ ತಮ್ಮ ಮಾರಾಟದ ತಂತ್ರಗಾರಿಕೆಯಾಗಿ ಬಳಸಿಕೊಳ್ಳಬೇಕಾದ ಹಂತಕ್ಕೆ ಭಾರತದ ಆಯುರ್ವೇದ ಶಕ್ತಿ ಬೆಳೆದುನಿಂತಿದೆ. ವಿದೇಶೀ ಉತ್ಪನ್ನಗಳಿಗೆ ಮಾರುಹೋಗುವ ದಿನಗಳು ಇದೀಗ ಕಳೆದುಹೋಗಿವೆ. ಈಗೇನಿದ್ದರೂ ಬಹುರಾಷ್ಟ್ರೀಯ ಕಂಪನಿಗಳೇ ಸ್ಥಳೀಯತೆಯನ್ನು, ಸ್ಥಳೀಯ ಆವಿಷ್ಕಾರಗಳನ್ನು ಬಳಸಿಕೊಳ್ಳುವ ಕಾಲ.
ಕೃತಕ ಬುದ್ಧಿಮತ್ತೆ ಅಥವಾ artificial Intelligence (AI) ಆಧುನಿಕ ಭಾರತದ ಮುಂದಿನ ಬಹುದೊಡ್ಡ ಕ್ಷೇತ್ರವಾಗಿ ಹೊರ ಹೊಮ್ಮಲಿದೆ. ನಮ್ಮ ದೇಶದ ದೊಡ್ಡ ಮೆಟ್ರೋ ನಗರವಿರಬಹುದು ಅಥವಾ ಸಣ್ಣ ಪಟ್ಟಣಗಳಿರಬಹುದು;ಎಲ್ಲವೂ ಇದೀಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಆವಿಷ್ಕಾರಗಳಲ್ಲಿ ತೊಡಗಿವೆ. ಹುಟ್ಟು ಪ್ರತಿಭಾವಂತರು ಉತ್ಪಾದನಾ ವಲಯ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಸೇವಾ ಕ್ಷೇತ್ರ, ಹೊಸ ಹೊಸ ಉತ್ಪಾದನೆಗಳ ಅಭಿವೃದ್ಧಿ ಸೇರಿದಂತೆ ಎಲ್ಲಾ ವಲಯಗಳಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆವಿಷ್ಕಾರಗಳ ಮೂಲಕ ತಾವು ಹುಟ್ಟಿ ಬೆಳೆದ ಕುಟುಂಬಗಳಿಗೆ, ದೇಶಕ್ಕೆ ಗೌರವ ತಂದುಕೊಡುತ್ತಿದ್ದಾರೆ.
ಜ್ಞಾನದ ಜೊತೆಗೆ ಆವಿಷ್ಕಾರೀ ಭಾರತ
ಮೊದಲ ಸಂಪೂರ್ಣ ವಿದ್ಯುತ್ ಚಾಲಿತ ಕಾರು REWA ನಮ್ಮ ಭಾರತದ ಆವಿಷ್ಕಾರ. ಪ್ರಪಂಚದ ಅತ್ಯಂತ ಕಡಿಮೆ ಬೆಲೆಯ ಹಾಗೂ ತಾಂತ್ರಿಕವಾಗಿ ಅತ್ಯಂತ ಸಮರ್ಥ ಕಾರುಗಳು ಇದೀಗ ಭಾರತದಲ್ಲೇ ನಿರ್ಮಾಣವಾಗುತ್ತಿವೆ. ಸಾಕಷ್ಟು ಕಾರುಗಳು ಇದೀಗ ತಮ್ಮದೇ ಆದ ಹೊಸಾ ವಿಸ್ತೃತ ಮಾರುಕಟ್ಟೆಯನ್ನು ಕಂಡುಕೊಂಡಿವೆ. ಭಾರತದ ಸಾಧಾರಣ ಸೈಕಲ್ ಉತ್ಪಾದನಾ ಕಂಪನಿಯು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿ ಬೆಳೆದಿದೆ ಮತ್ತು ಇದೀಗ ವಿದೇಶಗಳಲ್ಲೂ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದೆ.ಇದುವೇ ಕೈಗಾರಿಕಾ ಕ್ರಾಂತಿಗೆ ನಮ್ಮ ಭಾರತೀಯರ ಕೊಡುಗೆ.
ಬಿಪಿಒಗಳು ಮತ್ತು ಸಾಫ್ಟ್ವೇರ್ ಅಭಿವೃದ್ಧಿ ಇವೆಲ್ಲವೂ ಭಾರತೀಯರ ಅತ್ಯುತ್ತಮ ಜಾಗತಿಕ ಪರಿಜ್ಞಾನದ ಹೆಗ್ಗುರುತಾಗಿದೆ. ಇವೆಲ್ಲವೂ ಭಾರತ ಸರ್ಕಾರದ ಒತ್ತಾಸೆಯಿಲ್ಲದಿದ್ದ ಸಂದರ್ಭದಲ್ಲೇ ಯಶಸ್ವಿಯಾಗಿದ್ದವು. ಅಸಮರ್ಪಕ ಮೂಲ ಸೌಕರ್ಯಗಳ ನಡುವೆಯೂ ಭಾರತೀಯ ಕಂಪನಿಗಳು ಜಗತ್ತಿನ ಬುದ್ಧಿಮತ್ತೆಯ ಮಾರುಕಟ್ಟೆಯಲ್ಲಿ ತಮ್ಮದೇ ಸ್ಥಾನವನ್ನು ಗಳಿಸಿಕೊಂಡವು.
ಹಿಂದೂ ತತ್ವಶಾಸ್ತ್ರದಲ್ಲಿ ಹೇಳಲಾದ “ಬುದ್ಧಿ” ಅಥವಾ ಜ್ಞಾನವನ್ನು ಇಂದಿನ ಭಾರತವು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಿದೆ ಎಂದೇ ಹೇಳಬಹುದು.
ಹಾಸ್ಪಿಟಾಲಿಟಿ ವಲಯದಲ್ಲಿ ಭಾರತೀಯರು ಜಾಗತಿಕವಾಗಿ ಮಹತ್ವದ ಕೊಡುಗೆಯನ್ನು ನೀಡುತ್ತಿದ್ದಾರೆ. ಅಥಿತಿ ಸತ್ಕಾರವೆನ್ನುವುದು ಈ ದೇಶದ ಸಂಸ್ಕೃತಿಯಲ್ಲೇ ಬೆರೆತುಹೋಗಿದೆ. ವಿವಿಧ ಧರ್ಮ, ನಂಬಿಕೆಗಳ ಜನರಿಗೆ ಭಾರತವು ಆಶ್ರಯಾತಿಥ್ಯ ನೀಡುವ ಮೂಲಕ ಭಾರತವು ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಶುಶ್ರೂಷಕ ವೃತ್ತಿಯವರಿಂದ ಹಿಡಿದು ಹೋಟೆಲ್ ಸಿಬ್ಬಂದಿಗಳು, ಅಡುಗೆಯವರು, ವಾಹನ ಚಾಲಕರು ಸೇರಿದಂತೆ ಎಲ್ಲಾ ಸೇವಾ ವಿಭಾಗಗಳಲ್ಲೂ ಭಾರತೀಯರು ಜಾಗತಿಕ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ತಮ್ಮ ದುಡಿಮೆಯಲ್ಲಿನ ದೊಡ್ಡ ಮೊತ್ತವನ್ನು ವಿದೇಶೀ ವಿನಿಮಯ ರೂಪದಲ್ಲಿ ಇಲ್ಲಿನ ತಮ್ಮ ಕುಟುಂಬಗಳಿಗೆ ಕಳಿಸುವ ಮೂಲಕ ತಮ್ಮ ತಾಯ್ನೆಲಕ್ಕೊಂದು ಗೌರವಯುತ ಸ್ಥಾನ ನೀಡುತ್ತಾ ಬಂದಿದ್ದಾರೆ.
ಚೀನಾ ತನ್ನ ಎಂದಿನ ಆಕ್ರಮಣಕಾರೀ ನೀತಿಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಬೃಹತ್ ಔಷಧ ವ್ಯಾಪಾರ ಮತ್ತದರ ಮಧ್ಯವರ್ತಿ ಮಾರುಕಟ್ಟೆಯ ಮೇಲೆ ಈಗಾಗಲೇ ಪ್ರಭುತ್ವ ಸಾಧಿಸಿದೆ. ಅಮೆರಿಕಾ ಮತ್ತು ಯುರೋಪ್ಗಳು ವಿವಿಧ ಔಷಧ ಉತ್ಪನ್ನಗಳ ಮೇಲಿನ ತಮ್ಮ ಹಕ್ಕು ಸ್ವಾಮ್ಯಗಳನ್ನು (patent) ಬಳಸಿಕೊಳ್ಳುತ್ತಾ ರೋಗಿಗಳಿಂದ ಹಣವನ್ನು ಹೀರುತ್ತಿವೆ. ಆದರೆ ಈ ವಿಚಾರದಲ್ಲಿ ಭಾರತ ತನ್ನದೇ ಆದ ಮಾಧ್ಯಮ ಧ್ಯೇಯವೊಂದನ್ನು ಅಳವಡಿಸಿಕೊಂಡಿದೆ. ಭಾರತವು ಹಲವಾರು ಔಷಧ ಉತ್ಪನ್ನಗಳನ್ನು ಹಾಗೂ ಕಾರ್ಯ ವಿಧಾನಗಳನ್ನು ಸಂಶೋಧಿಸಿದ್ದರೂ ಆಧುನಿಕ ಹಕ್ಕು ಸ್ವಾಮ್ಯಗಳ ಕಲ್ಪನೆಯನ್ನು ಮೀರಿ ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯುತ್ತಿದೆ. ಪೇಟೆಂಟ್ ಅವಧಿ ಮುಗಿದ ಜೆನೆರಿಕ್ ಔಷಧ ಉತ್ಪನ್ನಗಳನ್ನು ಈಗಾಗಲೇ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಒದಗಿಸುವ ಹಾಗೂ ತಮ್ಮ ನವೀನ ಸಂಶೋಧನೆಗಳಿಗಾಗಿ ಬಳಸಿಕೊಳ್ಳುವ ಕೆಲಸವನ್ನು ಈಗಾಗಲೇ ಮುಂದುವರಿದ ರಾಷ್ಟ್ರಗಳೂ ಕೂಡಾ ಮಾಡುತ್ತಿದ್ದು ಭಾರತವೂ ಆ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
Source : organiser.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.