ರಾಜ್ಯದಲ್ಲಿ ಸ್ತ್ರೀ ಶಕ್ತಿ ಯೋಜನೆಯಡಿ ಹುಟ್ಟಿಕೊಂಡಿರುವ ಸಂಘಟನೆಗಳು ಭಾರೀ ಪ್ರಮಾಣದಲ್ಲಿ ವೃದ್ಧಿಯಾಗಿವೆ. ಹಳ್ಳಿಗಳು, ಪಟ್ಟಣಗಳು, ನಗರಗಳು ಎನ್ನದೆ ಎಲ್ಲಾ ಕಡೆಗಳಲ್ಲೂ ಸ್ತ್ರೀ ಶಕ್ತಿ ಸಂಘಟನೆಗಳು ರೂಪುಗೊಂಡು ತಮ್ಮ ಕಾರ್ಯಗಳನ್ನು ನಿಭಾಯಿಸುತ್ತಿವೆ.
ಆದರೆ ಯಾವಾಗ ಸ್ತ್ರೀ ಶಕ್ತಿ ಗುಂಪುಗಳ ಸಂಖ್ಯೆ 50 ಲಕ್ಷದ ಗಡಿ ದಾಟಿತೋ, ಆಗ ಆ ಸಂಘಟನೆಗಳ ಇನ್ನೊಂದು ಉಪಯೋಗ ಕೂಡಾ ರಾಜ್ಯದ ಜನರ ಗಮನ ಸೆಳೆಯತೊಡಗಿತು.
ಸ್ತ್ರೀ ಶಕ್ತಿ ಒಕ್ಕೂಟಗಳು ಜನ್ಮ ತಳೆದ ನಿಜವಾದ ಉದ್ದೇಶವೇ ಮರೆತು ಹೋಗುವಷ್ಟರ ಮಟ್ಟಿಗೆ ರಾಜಕಾರಣಿಗಳು ಆ ಸಂಘಟನೆಗಳನ್ನು ಬಳಸಿಕೊಳ್ಳತೊಡಗಿದರು. ಚುನಾವಣೆಯ ಸಮಯದಲ್ಲಿ ತಮ್ಮ ಪರ ಪ್ರಚಾರ ಮಾಡಲು ಕಾರ್ಯಕರ್ತರ ಕೊರತೆಯಿಂದ ಬಳಲುತ್ತಿದ್ದ ರಾಜಕೀಯ ಪಕ್ಷಗಳಿಗೆ ಈ ಸ್ತ್ರೀ ಶಕ್ತಿ ಸಂಘಟನೆಗಳು ಆಶಾದಾಯಕವಾಗಿ ಕಾಣಿಸತೊಡಗಿದವು. ಆಗ ಶುರುವಾಗಿದ್ದೇ ಅಸಲಿ ಆಟ!
1960 ರ ಅಧಿನಿಯಮದಂತೆ ನೋಂದಾಯಿಸಲ್ಪಟ್ಟಿರುವ ಸ್ತ್ರೀ ಶಕ್ತಿ ಒಕ್ಕೂಟಗಳ ಮೇಲೆ ಬಹುತೇಕ ಕಡೆಗಳಲ್ಲಿ ಸ್ಥಳೀಯ ರಾಜಕೀಯ ನಾಯಕರುಗಳೇ ಪರೋಕ್ಷ ಹಿಡಿತ ಸಾಧಿಸಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಅದರಲ್ಲೂ ಚುನಾವಣೆಗಳ ಸಂದರ್ಭದಲ್ಲಿ ತಮ್ಮ/ಪಕ್ಷದ ಪರವಾಗಿ ಮತದಾರರ ಮನವೊಲಿಸಲು ಸ್ತ್ರೀ ಶಕ್ತಿ ಸಂಘಗಳನ್ನು ಅವರುಗಳು ಬಳಸಿಕೊಳ್ಳಲು ಪ್ರಾರಂಭ ಮಾಡಿದ ನಂತರವಂತೂ ಕೋಟಿ ಕೋಟಿ ಹಣ ಕೈ ಬದಲಾಗತೊಡಗಿತು. ಎಷ್ಟೋ ಕಡೆಗಳಲ್ಲಿ ಅದೇ ಉದ್ದೇಶಕ್ಕಾಗಿಯೇ ಸ್ತ್ರೀ ಶಕ್ತಿ ಸಂಘಗಳು ಹುಟ್ಟಿಕೊಂಡು ನೋಂದಾಯಿತಗೊಂಡವು. ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರು ಗುಂಪು ಗುಂಪಾಗಿ ರಾಜಕಾರಣಿಗಳ ಮನೆಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಹೋಯಿತು.
ಮಹಿಳಾ ಸಬಲೀಕರಣದ ದೃಷ್ಟಿಯಿಂದ ಸ್ಥಾಪನೆಯಾದ ಸ್ತ್ರೀ ಶಕ್ತಿ ಒಕ್ಕೂಟಗಳನ್ನು ಇಂತಹಾ ರಾಜಕೀಯಗಳಿಂದ ದೂರವಿರಿಸಲು ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.
ಇಲಾಖೆಯ ಸಹಭಾಗಿತ್ವದಲ್ಲಿ ನೋಂದಣಿಗೊಂಡ ಸ್ತ್ರೀ ಶಕ್ತಿ ಒಕ್ಕೂಟಗಳ ಕಾರ್ಯ ನಿರ್ವಹಣೆ ಕುರಿತು ಬೈಲಾಗೆ ಹೊಸಾ ನಿಬಂಧನೆ ಸೇರಿಸಲು ಆದೇಶಿಸಿದೆ.ಸ್ತ್ರೀ ಶಕ್ತಿ ಸಂಘಗಳ ಅಧ್ಯಕ್ಷರು/ಪದಾಧಿಕಾರಿಗಳು ಯಾವುದೇ ರಾಜಕೀಯ ಪಕ್ಷದ ಪರ ಕೆಲಸ ನಡೆಸಬಾರದು ಮತ್ತು ಯಾವುದೇ ಪಕ್ಷದ ಪ್ರತಿನಿಧಿಗಳಾಗಿದ್ದರೆ ಅಂತಹವರು ಸ್ತ್ರೀ ಶಕ್ತಿ ಒಕ್ಕೂಟಗಳನ್ನು ಪ್ರತಿನಿಧಿಸಲು ಅವಕಾಶ ಇರುವುದಿಲ್ಲವೆನ್ನುವ ಅಂಶವನ್ನು ಬೈಲಾದಲ್ಲಿ ನವೀಕರಿಸಬೇಕೆಂದು ಸೂಚಿಸಿದೆ.
ಅಷ್ಟೇ ಅಲ್ಲದೆ ಒಕ್ಕೂಟದವರು ತಮ್ಮ ಬೈಲಾ ತಿದ್ದುಪಡಿ ಮಾಡಿಕೊಂಡು ಅದರ ಪ್ರತಿಯನ್ನು ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಬೇಕು ಎಂದು ಕೂಡಾ ಆದೇಶಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆ ಮೂಲಕ ನಗರಸಭೆ, ಪುರಸಭೆ ಮುಂತಾದ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದುಕೊಂಡೇ ಸ್ತ್ರೀ ಶಕ್ತಿ ಸಂಘಗಳನ್ನು ಮುನ್ನಡೆಸುತ್ತಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಇಲಾಖೆ ದೊಡ್ಡ ಶಾಕ್ ನೀಡಿದೆ.
ಒಟ್ಟಿನಲ್ಲಿ ಸರ್ಕಾರದ ಅನುದಾನ ಬಳಸಿಕೊಂಡು ನಡೆಯುತ್ತಿರುವ ಮಹತ್ವದ ಸ್ತ್ರೀ ಶಕ್ತಿ ಯೋಜನೆಯು ಯಾವುದೇ ರಾಜಕೀಯ ಪಕ್ಷಗಳ ತೆಕ್ಕೆಗೆ ಜಾರಿಹೋಗದಂತೆ ತಡೆಯಲು ಈ ಆದೇಶ ಅತ್ಯಂತ ಸಹಕಾರಿಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.