ಪ್ರಗತಿಪರರೆಂದು ಹೇಳಿಕೊಳ್ಳುವವರು 2015ರಲ್ಲಿ (ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ) ಮೊತ್ತ ಮೊದಲ ಬಾರಿಗೆ ಮಹಿಷ ದಸರಾ ಎನ್ನುವ ಹೊಸ ಸಂಪ್ರದಾಯವೊಂದನ್ನು ಹುಟ್ಟು ಹಾಕಿ, ಅಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪುತ್ಥಳಿಯ ಮುಂದೆ ಬ್ರಾಹ್ಮಣರನ್ನು, ಹಿಂದೂಗಳನ್ನು, ಹಿಂದೂ ದೇವರುಗಳನ್ನು, ಕೆಲವು ನಿರ್ದಿಷ್ಟ ರಾಜಕೀಯ ಪಕ್ಷಗಳನ್ನು ಬಯ್ಯುವ ಕೆಲಸವನ್ನು ಪ್ರಾರಂಭಿಸಿದರು.
“ಮಹಿಷ ದಸರಾ ಆಚರಿಸುವ ಪ್ರಗತಿಪರರ ವಾದದ ಪ್ರಕಾರ ಮಹಿಷಾಸುರ ಒಬ್ಬ ರಾಕ್ಷಕನಲ್ಲ, ಆತನೊಬ್ಬ ಬೌದ್ಧ ದೊರೆ. ಆ ಬೌದ್ಧ ದೊರೆಯೇ ಈ ದೇಶದ ಮೂಲ ನಿವಾಸಿಗಳ ರಕ್ಷಕ. ಆತನನ್ನು ಚಾಮುಂಡಿ ಎನ್ನುವ ಹೆಣ್ಣು ಮೋಸದಿಂದ ಕೊಂದು ಹಾಕಿದಳು. ಅದಕ್ಕೆ ಕುಮ್ಮಕ್ಕು ಕೊಟ್ಟಿದ್ದು ಪುರೋಹಿತಶಾಹಿಗಳು.”
ಮಹಿಷಾಸುರ ಇತಿಹಾಸದಲ್ಲಿ ಈ ನಾಡಿನ ದೊರೆಯಾಗಿ ನಮ್ಮನ್ನಾಳಿದ್ದೇ ನಿಜವಾಗಿದ್ದರೆ ಒಂದಷ್ಟಾದರೂ ದಾಖಲೆಗಳು ಇರಲೇ ಬೇಕಲ್ಲವೇ? ಅದೇ ದೃಷ್ಟಿಯಿಂದ ಒಂದು ಪೌರಾಣಿಕ ಕಥೆಯನ್ನು ಇತಿಹಾಸವನ್ನಾಗಿ ಬದಲಾಯಿಸಿ ಅದಕ್ಕೆ ಪೂರಕವಾಗಿ ತಮ್ಮದೇ ಆದ ಕೆಲವು ಕಥೆಗಳನ್ನು ಸೃಷ್ಟಿಸಿ ಪ್ರಚಾರ ಮಾಡುತ್ತಿರುವ ಪ್ರಗತಿಪರರಿಗೆ NEWS13 ಹತ್ತು ಪ್ರಶ್ನೆಗಳನ್ನು ಕೇಳಿತ್ತು. ದಾಖಲೆ ಸಮೇತ ಉತ್ತರಿಸುವವರಿಗೆ ಒಂದು ಸಣ್ಣ ಬಹುಮಾನವನ್ನು ಕೂಡಾ ಘೋಷಿಸಿತ್ತು.
ಆ ಪ್ರಶ್ನೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯೂ ಆಯಿತು. ಆದರೆ ಆ ಪ್ರಶ್ನೆಗಳಿಗೆ ನಿಜವಾಗಿಯೂ ಉತ್ತರ ನೀಡಬೇಕಾಗಿದ್ದ ಪ್ರಗತಿಪರರಲ್ಲಿ ಒಬ್ಬರೂ ಕೂಡಾ ಉತ್ತರಿಸಲು ಬರಲೇ ಇಲ್ಲ. ಕಾರಣ ಸ್ಪಷ್ಟ. ಆ ಕಥೆಗಳೆಲ್ಲವೂ ಈ ಮೂರು ವರ್ಷಗಳಲ್ಲಿ ತಮಗೆ ತೋಚಿದಂತೆ ತಾವೇ ಹೆಣೆದ ಕಥೆಗಳೇ ಹೊರತೂ ಅವುಗಳನ್ನು ನಿಜವೆಂದು ಸಾಬೀತುಪಡಿಸಲು ಅವರಲ್ಲಿ ಯಾವ ದಾಖಲೆಗಳೂ ಇರಲೇ ಇಲ್ಲ!
ಹಾಗಾದರೆ ನಾವೇ ಒಂದಷ್ಟು ಸತ್ಯಗಳನ್ನು ಹುಡುಕೋಣ ಎಂದು ಹೊರಟಾಗ ಸಿಕ್ಕಿದ ಅವರ ಅಷ್ಟೂ ಕಥೆಗಳೂ ಒಂದಕ್ಕೊಂದು ಸಂಬಂಧವೇ ಇರದಂತಿದ್ದವು. ಸಂಪೂರ್ಣ ದ್ವಂದ್ವದಿಂದ ಕೂಡಿದ್ದವು. ಪ್ರಗತಿಪರರು, ಸಂಶೋಧಕರಲ್ಲ, ಒಬ್ಬ ಐದನೇ ತರಗತಿಯ ಹುಡುಗನೂ ಕೂಡಾ ಬರೆಯಲಾರದಂತಹಾ ಕನಿಷ್ಠ ತಿಳುವಳಿಕೆಯ ಕಥೆಗಳಾಗಿದ್ದವು!
ಒಬ್ಬರು ಹೇಳುವ ಕಥೆಯ ಪ್ರಕಾರ ಸಾಮ್ರಾಟ ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕೋಸ್ಕರ ಮಹಾದೇವ ಎನ್ನುವವರನ್ನು ಮಹಿಷ ಮಂಡಲಕ್ಕೆ ಕಳುಹಿಸುತ್ತಾನೆ. ಹಾಗೆ ಆ ಮಹಾದೇವ ಎನ್ನುವ ಬೌದ್ಧ ಭಿಕ್ಕುವೆ ಮಹಿಷಾಸುರ ಎಂದೂ, ಆ ಮಹಿಷಾಸುರನ ಹೆಸರಿನಿಂದಲೇ ಮೈಸೂರು ಎನ್ನುವ ಹೆಸರು ಬಂದಿತೆಂದೂ ಹೇಳಲಾಗಿದೆ. ಬೌದ್ಧ ಭಿಕ್ಕು ಮಹಾದೇವನ ಹೆಸರು ಮಹಿಷಾಸುರ ಎಂದು ಬದಲಾಗಿದ್ದು ಯಾವಾಗ ಎಂದು ಕೇಳಿದರೆ ಬಹುಷಃ ಅವರಲ್ಲಿ ಉತ್ತರವಿಲ್ಲ.ಹಾಗೆಯೇ ಮೊದಲೇ ಈ ಪ್ರಾಂತ್ಯಕ್ಕೆ ಮಹಿಷ ಮಂಡಲ ಎನ್ನುವ ಹೆಸರಿದ್ದಿರುವಾಗ ಮಹಿಷ ಮಂಡಲಕ್ಕೆ ಬಂದ ಮಹಾದೇವನ ಹೆಸರು ಮಹಿಷಾಸುರ ಎಂದು ಬದಲಾಗಬಹುದೇ ಹೊರತೂ ಅವನಿಂದ ಊರಿನ ಹೆಸರು ಮಹಿಷ ಮಂಡಲ-ಮಹಿ ಸೂರು-ಮೈಸೂರು ಎಂದು ಬದಲಾಗಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗಳೂ ಕೇವಲ ಪ್ರಶ್ನೆಗಳಾಗಿಯೇ ಉಳಿಯುತ್ತವೆ.
ಹಾಗೆ ಮೈಸೂರನ್ನಾಳುತ್ತಿದ್ದ ಮಹಿಷಾಸುರನನ್ನು ಆರ್ಯರು ಸಂಚು ಹೂಡಿ ಕೊಲ್ಲಲು ಪ್ರಯತ್ನಿಸಿದರು ಮತ್ತು ಹಾಗೆ ಅವನನ್ನು ಕೊಲ್ಲಲು ಚಾಮುಂಡಿ ಎನ್ನುವ ಆ ಬೌದ್ಧ ಭಿಕ್ಕುವಿನ ಆಸ್ಥಾನದ ನರ್ತಕಿಯನ್ನು ಬಳಸಿಕೊಂಡರು ಎಂದೂ ಕಥೆ ಹೇಳುತ್ತಾರೆ ಮತ್ತು ಆಕೆ ಹಾಲಿಗೆ ವಿಷವನ್ನು ಹಾಕಿ ಆತನನ್ನು ಕೊಂದಳು ಎನ್ನುವ ವಿವರಣೆಯನ್ನೂ ಕೊಡುತ್ತಾರೆ. ಬೌದ್ಧ ಧರ್ಮದ ಪ್ರಚಾರ ಮಾಡಲು ಮಹಿಷ ಮಂಡಲಕ್ಕೆ ಬಂದ ಮಹಾದೇವ ಭಿಕ್ಕು ತನ್ನ ಆಸ್ಥಾನದಲ್ಲಿ ನರ್ತಕಿಯರನ್ನು ಇಟ್ಟುಕೊಳ್ಳುತ್ತಾನೆಯೇ? ಬೌದ್ಧರೂ ಹೆಣ್ಣನ್ನು ಭೋಗದ ವಸ್ತುವಾಗಿಯೇ ಇಟ್ಟುಕೊಂಡಿದ್ದರೇ ಎನ್ನುವುದನ್ನು ನಾವು ನಿಜವಾದ ಬೌದ್ಧ ಗುರುಗಳಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಕ್ಕೀತೆ ಹೊರತೂ ಈ ಪ್ರಗತಿಪರರಿಂದಂತೂ ಉತ್ತರ ಸಿಗಲಾರದು.
ಅವರದ್ದೇ ಇನ್ನೊಂದು ಕರಪತ್ರದಲ್ಲಿ ಆತನು ಮಹಿಷ ಮಂಡಲದ ಮಹಿಷ ವಂಶದ ಮಹಿಷಾಸುರ ಎಂದು ಹೇಳಲಾಗಿದೆ. ಆ ಮಹಿಷಾಸುರನೇ ತನ್ನ ರಾಜ್ಯಕ್ಕೆ ಬೌದ್ಧ ಭಿಕ್ಕು ಮಹಾದೇವನನ್ನು ಕರೆಸಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಿಸಿದನು ಎಂದು ಹೇಳಲಾಗಿದೆ. ಇರುವ ಇಪ್ಪತ್ತು ಜನರಲ್ಲೇ ಒಬ್ಬರು ಆತ ಸಾಮ್ರಾಟ ಅಶೋಕನು ಕಳುಹಿಸಿದ ಮಹಾದೇವನೆನ್ನುವ ಬೌದ್ಧ ಭಿಕ್ಕು ಎಂದರೆ ಇನ್ನೊಬ್ಬರು ಅವನು ಮಹಿಷ ಮಂಡಲದ ಮಹಿಷ ವಂಶದಲ್ಲೇ ಹುಟ್ಟಿದ ದೊರೆ ಎನ್ನುತ್ತಾರೆ! ಸಾಮ್ರಾಟ ಅಶೋಕನ ಕಾಲದ ಇತಿಹಾಸವನ್ನು ಹೇಳುತ್ತಾ ಹೇಳುತ್ತಾ ಒಮ್ಮಿಂದೊಮ್ಮೆಲೇ “ಮಹಿಷಾಸುರನ ತಾಯಿಗೆ ಇಂದ್ರ ದೇವನು ಬಲವಂತವಾಗಿ ಗರ್ಭ ಪಾತವಾಗುವಂತೆ ಮಾಡುತ್ತಾನೆ,ಇಂದ್ರನಿಂದ ತಪ್ಪಿಸಿಕೊಂಡ ಮಹಿಷಿ ಮಹಿಷಾಸುರನಿಗೆ ಜನ್ಮ ನೀಡುತ್ತಾಳೆ,ಅದೇ ಮಹಿಷಾಸುರ ದೇವತೆಗಳೊಂದಿಗೆ ಯುದ್ಧ ಮಾಡಿ ಜಯಗಳಿಸುತ್ತಾನೆ” ಎನ್ನುತ್ತಾರೆ! ಅಂದರೆ, ಸಾಮ್ರಾಟ ಅಶೋಕನ ಕಾಲದಲ್ಲೇ ಇಂದ್ರ ದೇವನೂ ಈ ಭೂಮಿಯ ಮೇಲಿದ್ದ ಎನ್ನುವುದನ್ನು ಇನ್ನು ನಿಶ್ಚಿಂತೆಯಿಂದ ಪಠ್ಯಪುಸ್ತಕಗಳಲ್ಲಿ ಸೇರಿಸಿ ನಮ್ಮ ಮಕ್ಕಳಿಗೆ ಪಾಠ ಮಾಡಬಹುದು.
ಕೆಲವರು “ಚಾಮುಂಡಿ ಎನ್ನುವ ಆರ್ಯರಿಂದ ನಿಯೋಜಿತಗೊಂಡ ಹೆಂಗಸು ಸತತ ಎಂಟು ದಿನಗಳ ಕಾಲ ಮಹಿಷಾಸುರನನ್ನು ಕೊಲ್ಲಲು ಪ್ರಯತ್ನಿಸಿ ಒಂಭತ್ತನೆಯ ದಿವಸ ಅವನನ್ನು ಕೊಲ್ಲುವಲ್ಲಿ ಯಶಸ್ವಿಯಾಗುತ್ತಾಳೆ. ಅದನ್ನೇ ಪುರೋಹಿತಶಾಹಿಗಳು ನವರಾತ್ರಿ ಎಂದು ಆಚರಿಸಲು ಪ್ರಾರಂಭಿಸಿದರು” ಎನ್ನುವ ಆರೋಪ ಮಾಡಿದರೆ ಅವರಲ್ಲೇ ಇನ್ನು ಕೆಲವರು ಇತಿಹಾಸ ಕಾಲದಲ್ಲಿದ್ದ “ಮಹಿಷಾಸುರ ತನ್ನ ಶತ್ರುಗಳಾಗಿದ್ದ ದೇವತೆಗಳನ್ನು ಸೋಲಿಸಿದ ನಂತರ ದಶ ದಿಕ್ಕುಗಳಲ್ಲೂ ಸಂತೋಷ ಮೇಳೈಸಿ ದಸರಾ ಹಬ್ಬವಾಯಿತು” ಎನ್ನುತ್ತಾರೆ!
ಅವರಲ್ಲಿ ಇಷ್ಟೆಲ್ಲಾ ದ್ವಂದ್ವಗಳಿರುವುದರಿಂದಲೇ ನಾವು ಅವರಿಗೆ ಹತ್ತು ಪ್ರಶ್ನೆಗಳನ್ನು ಕೇಳಿದ್ದು. ಇತಿಹಾಸ ಯಾವುದು,ಪುರಾಣ ಯಾವುದು ಎನ್ನುವುದೇ ಗೊತ್ತಿಲ್ಲದಂತೆ ನಟಿಸುತ್ತಿರುವ ಅವರಿಂದ ಉತ್ತರ ನಿರೀಕ್ಷಿಸಲು ಹೇಗೆ ತಾನೇ ಸಾಧ್ಯ?
ಆದರೆ ಈ ಮಹಿಷ ದಸರಾ ಆಚರಣೆಯ ಹಿಂದೆ ಬೇರೆಯೇ ಉದ್ದೇಶವಿದ್ದಂತಿದೆ. ಹಿಂದೂಗಳ ನಂಬಿಕೆಗಳನ್ನು ಹಾಳು ಮಾಡಲೇ ಬೇಕೆನ್ನುವ ಕೆಲವು ಅದೃಶ್ಯ ಶಕ್ತಿಗಳು ಇದರ ಹಿಂದೆ ಕೆಲಸ ಮಾಡುತ್ತಿರುವಂತಿದೆ. ಯಾವುದೋ ರಾಜಕೀಯ ಪಕ್ಷವೂ ಅವರ ಜೊತೆ ಕೈ ಜೋಡಿಸಿರುವಂತಿದೆ. ಆದ್ದರಿಂದಲೇ ಯಾವ ಪ್ರಶ್ನೆಗಳಿಗೂ ಅವರು ಆಧಾರ ಸಹಿತ ಉತ್ತರ ನೀಡುತ್ತಿಲ್ಲ. ಬದಲಾಗಿ ಪ್ರಶ್ನಿಸಿದವರ ಮೈ ಮೇಲೆ ಏರಿ ಹೋಗುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮುಂತಾದವುಗಳನ್ನು ಮಾತ್ರ ಮಾಡುತ್ತಿದ್ದಾರೆ. ಇನ್ನೂ ಒಂದು ಗಂಭೀರ ವಿಚಾರವೆಂದರೆ ಇಲ್ಲಿ ಮಹಿಷ ದಸರಾ ಪ್ರಾರಂಭವಾದ ಬೆನ್ನಲ್ಲೇ ಕೇಂದ್ರಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಇನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ಎಡಪಂಥೀಯ ವಿದ್ಯಾರ್ಥಿಗಳು ಮಹಿಷಾಸುರನ ಹುತಾತ್ಮ ದಿನಾಚರಣೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಚರಿಸಿ ದುರ್ಗಾ ಮಾತೆಯನ್ನು ವೇಶ್ಯೆ ಎಂದು ಕರೆಯುವ ಮೂಲಕ ದೇಶದಾದ್ಯಂತ ಗಲಭೆ ರೂಪಿಸುವ ಸಂಚು ನಡೆಸಲಾಗುತ್ತದೆ. ಬಹುಶಃ ಅವರ ನಿಜವಾದ ಉದ್ದೇಶವೇ ಅದು.
ಬೇಕಿದ್ದರೆ ಗಮನಿಸಿ;
ಮಹಿಷ ದಸರಾ ಪ್ರಾರಂಭವಾದಂದಿನಿಂದ ಇಂದಿನವರೆಗೂ ಆ ಕಾರ್ಯಕ್ರಮಗಳಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದಂತಹಾ ವಿಚಾರಗಳನ್ನೇ ಎತ್ತಿಕೊಳ್ಳಲಾಗುತ್ತಿದೆ. ಮಹಿಷನ ಇತಿಹಾಸವನ್ನು ತಿಳಿಸಬೇಕಾದವರು ಹಿಂದೂಗಳೂ ದನದ ಮಾಂಸ ತಿನ್ನುತ್ತಿದ್ದರು, ದೇವರುಗಳ ಲೈಂಗಿಕ ರಹಸ್ಯ… ಎನ್ನುವಂತಹಾ ಪ್ರಚೋದನಾಕಾರಿ ಸಾಹಿತ್ಯಗಳನ್ನು ಹೊರತರುತ್ತಿದ್ದಾರೆ. ಚಾಮುಂಡೇಶ್ವರಿಯ ಪೂಜೆ ಮಾಡುವವರೇ ಗಾಂಧಿಯನ್ನು ಹತ್ಯೆ ಮಾಡಿದ್ದು, ಗೌರಿಯನ್ನು ಹತ್ಯೆ ಮಾಡಿದ್ದು ಎನ್ನುವಂತಹಾ ಹೇಳಿಕೆಗಳನ್ನು ನೀಡಿ ಕೋಟ್ಯಂತರ ಆಸ್ತಿಕರ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ. ಹರಿಯನ್ನು ನಂಬಿ ಕೆಡಬೇಡಿ, ದೇವರ ಫೋಟೋಗಳನ್ನು ಎಸೆಯಿರಿ ಎನ್ನುವ ಹೇಳಿಕೆ ಕೊಡುತ್ತಾ ಕೋಟ್ಯಂತರ ಹಿಂದೂಗಳ ಧಾರ್ಮಿಕ ನಂಬಿಕೆಯ ವಿರುದ್ಧದ ತಮ್ಮ ಅಸಹಿಷ್ಣುತೆಯನ್ನು ಹೊರ ಹಾಕುತ್ತಿದ್ದಾರೆ. ಸಾರ್ವಜನಿಕರ ಸಹಭಾಗಿತ್ವವಿಲ್ಲದೆ ನಡೆಯುವ ಅಂತಹಾ ಕಾರ್ಯಕ್ರಮಗಳಲ್ಲಿ ಕೇವಲ ಬುದ್ಧಿಜೀವಿಗಳು, ಪ್ರಗತಿಪರರು ಮತ್ತು ಅವರ ಒಂದಷ್ಟು ಬೆಂಬಲಿಗರು ಮಾತ್ರವೇ ಇದ್ದರೂ ಅವೆಲ್ಲವನ್ನೂ ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತದೆ. ಒಂದು ಪಕ್ಷದ ಪರ ಪ್ರಚಾರ ಮಾಡಲು ಹಣ ಪಡೆದು ನಿಯೋಜನೆಗೊಂಡವರಂತೆ ರಾಮ ರಾಜ್ಯ ನಮಗೆ ಬೇಕಾಗಿಲ್ಲ, ರಾಮ ರಾಜ್ಯ ಕಟ್ಟುವವರಿಗೆ ಓಟು ಹಾಕಬೇಡಿ ಎನ್ನುವ ಮೂಲಕ ಇನ್ನೊಂದು ಪಕ್ಷದ ವಿರುದ್ಧ ಭಾಷಣ ಪರೋಕ್ಷವಾಗಿ ಭಾಷಣ ಮಾಡುತ್ತಾರೆ!
ಪಕ್ಷ ಎಂದ ಕೂಡಲೇ ನೆನಪಾಯಿತು. ಈ ವರ್ಷದ ಮಹಿಷ ದಸರಾ ವೇದಿಕೆಯಲ್ಲೇ ಕೇಳಿಬಂದಂತೆ ಆ ಕಾರ್ಯಕ್ರಮಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಮಾಡಿದ್ದು ಒಂದು ರಾಷ್ಟ್ರೀಯ ಪಕ್ಷದ ಹಿರಿಯ ನಾಯಕರು. ಮತ್ತು ಮುಂದೆಯೂ ಅದಕ್ಕೆ ಖರ್ಚಾಗುವ ಅಷ್ಟೂ ಹಣವನ್ನೂ ನಾನೇ ಭರಿಸುತ್ತೇನೆ ಅನ್ನುವ ಆಶ್ವಾಸನೆಯನ್ನೂ ಅವರು ನೀಡಿದ್ದಾರಂತೆ!
ಈಗ ಮಹಿಷಾಸುರ, ದುಷ್ಟ ಚಾಮುಂಡಿ, ಪುರೋಹಿತಶಾಹಿ, ಜೆ ಎನ್ ಯು, ರಮಾನಾಥ ಕೋವಿಂದ್, ಅವರಿಗೆ ಓಟು ಹಾಕಬೇಡಿ….. ಈ ಎಲ್ಲಾ ಚುಕ್ಕೆಗಳನ್ನೂ ಸೇರಿಸಿ. ನಿಮಗೊಂದು ಸ್ಪಷ್ಟ ಚಿತ್ರಣ ಸಿಕ್ಕಿದರೂ ಸಿಕ್ಕಬಹುದು.
ಇಷ್ಟೆಲ್ಲಾ ಹೇಳಿದ ಮೇಲೂ ನಮ್ಮ ಪ್ರಶ್ನೆಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಒಂದು ವೇಳೆ ನಮ್ಮ ಎಲ್ಲಾ ಪ್ರಶ್ನೆಗಳಿಗೂ ಐತಿಹಾಸಿಕ ದಾಖಲೆ ಸಮೇತ ಯಾರಾದರೂ ನಿಖರವಾಗಿ ಉತ್ತರಿಸಿದ್ದೇ ಆದರೆ ಮಹಿಷಾಸುರನನ್ನೂ ನಮ್ಮ ರಾಜನೆಂದು ಒಪ್ಪಿಕೊಳ್ಳಲು ಯಾವ ಹಿಂಜರಿಕೆಯೂ ಇಲ್ಲ. ಏಕೆಂದರೆ “ರಾಜಾ ಪ್ರತ್ಯಕ್ಷ ದೇವತಾ” ಎನ್ನುವ ಪೂರ್ವಜರ ನುಡಿಯನ್ನು ಪಾಲಿಸಿಕೊಂಡು ಬಂದವರು ನಾವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.