ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಶಾರದಾ ಸಮೂಹ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಅತ್ಯಂತ ಸಂಭ್ರಮೊಲ್ಲಾಸದಿಂದ ಆಚರಿಸಲಾಯಿತು. ತಲಪಾಡಿಯ ಶಾರದಾ ವಿದ್ಯಾನಿಕೇತನ ವಸತಿ ಶಾಲೆಯ ಹರಿದಾಸ ವೇದಿಕೆಯಲ್ಲಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕರು ಉಪಸ್ಥಿತ ಗಣ್ಯರೊಡಗೂಡಿ ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟನೆಗೈದರು.
ಪ್ರತಿ ವರ್ಷದಂತೆ ಶಿಕ್ಷಣ ಕ್ಷೇತ್ರದಲ್ಲಿ ಸುಧೀರ್ಘ ಕಾಲ ಸೇವೆಗೈದ ಸಾಧಕರಾದ ಶಿಕ್ಷಕರಿಗೆ ಸನ್ಮಾನ ಹಾಗೂ ಗೌರವಾರ್ಪಣೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು. ಉಳ್ಳಾಲದ ಭಾರತ್ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಶ್ರೀ ವಾಸುದೇವ ರಾವ್, ಮಂಗಳೂರಿನ ಕೆನರಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಪಿ. ಅನಂತಕೃಷ್ಣ ಭಟ್, ಸೈಂಟ್ ಆಗ್ನೆಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಿಕೆ ಪ್ರೊ| ಎಸ್. ನಾಗವೇಣಿ ಶೆಟ್ಟಿ, ಹಾಗೂ ಹಿರಿಯ ನಿವೃತ್ತ ಚಿತ್ರಕಲಾ ಅಧ್ಯಾಪಕ ಶ್ರೀ ಜಿ.ಆರ್. ಉಪಾಧ್ಯಾಯರನ್ನು ವಿದ್ಯಾಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿಗಳು ಹಾಗೂ ಉಪಸ್ಥಿತ ಗಣ್ಯರು ಶಾಲು ಹೊದೆಸಿ, ಹಾರಾರ್ಪಣೆಗೈದು, ಫಲ-ಪುಷ್ಪವಿತ್ತು, ಸ್ಮರಣಿಕೆ ನೀಡಿ ಅಭಿನಂದನಾ ಪತ್ರ ಸಮರ್ಪಣೆಯೊಂದಿಗೆ ಗೌರವಿಸಿತು. ಶಾರದಾ ವಿದ್ಯಾನಿಕೇತನ ಪಿ.ಯು. ಕಾಲೇಜಿನ ಪ್ರಾಂಶುಪಾಲ ಶ್ರೀ ವಿನಾಯಕ ಬಿ. ಜಿ., ಶಾರದಾ ಡೆ-ಬೋರ್ಡಿಂಗ್ ಪ್ರಾಂಶುಪಾಲೆ ಶ್ರೀಮತಿ ಲತಾ ರೈ, ಶುಭೋದಯ ವಿದ್ಯಾಲಯ ಪ್ರಾಂಶುಪಾಲೆ ಶ್ರೀಮತಿ ಜಯಶ್ರೀ ಪೈ, ಶಾರದಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಶ್ರೀ ಮಹಬಲೇಶ್ವರ ಭಟ್, ಶಾರದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶ್ರೀ ಕಬ್ಬಿನಾಲೆ ಬಾಲಕೃಷ್ಣ ಭಾರಧ್ವಾಜ್ರವರು ಸನ್ಮಾನಿತರ ಕುರಿತಾದ ಅಭಿನಂದನಾ ಪತ್ರಗಳನ್ನು ಈ ಸಂದರ್ಭದಲ್ಲಿ ವಾಚಿಸಿದರು.
ಶಿಕ್ಷಕ ವೃತ್ತಿಯೆಂದರೆ ಅತ್ಯಂತ ಪರಿಶ್ರಮದಿಂದ ಕೂಡಿದ ವೃತ್ತಿಯಾಗಿದ್ದು, ತರಗತಿಯಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಹಾಗೂ ಯಶಸ್ವಿಯಾಗಿ ತರಗತಿಯನ್ನು ನಿರ್ವಹಿಸುವ ಬಗ್ಗೆ ನಿತ್ಯ ಚಿಂತನೆಗೈಯುವ, ಅಧ್ಯಯನಶೀಲತೆಯನ್ನು ಅವಲಂಬಿಸಿದ ಈ ವೃತ್ತಿಯಿಂದಾಗಿ ಶಿಕ್ಷಕರು ನಿವೃತ್ತಿಯ ಬಳಿಕವೂ ಸಮಾಜದಲ್ಲಿ ಆದರಣೀಯರಾಗಿರುತ್ತಾರೆ ಎಂಬುದಾಗಿ ಶ್ರೀ ವಾಸುದೇವ ರಾವ್ ಸನ್ಮಾನವನ್ನು ಸ್ವೀಕರಿಸಿ ತಮ್ಮ ವೃತ್ತಿ ಜೀವನದ ಅನುಭವಗಳನ್ನು ವಿವರಿಸಿದರು.
ವೃತ್ತಿಯ ಮೇಲೆ ನಿಷ್ಠೆ ಹಾಗೂ ಪ್ರೀತಿ, ದುಡಿಯುವ ಸಂಸ್ಥೆಯೊಂದಿಗೆ ತಾದ್ಯಾತ್ಮಕತೆ, ಸತತ ಅಧ್ಯಯನಶೀಲತೆ, ವಿದ್ಯಾರ್ಥಿಗಳ ಜತೆ ಅತ್ಯಂತ ಪ್ರೀತಿಯ ಹಾಗೂ ಸ್ನೇಹಪೂರ್ಣ ನಡವಳಿಕೆ ಎಂಬ ಪಂಚಾಂಗದ ಅಧಾರದ ಮೇಲೆ ಶಿಕ್ಷಕ ವೃತ್ತಿಯ ಯಶಸ್ಸು ಅವಲಂಭಿಸಿದೆ. ಇದರ ಜತೆ ರಾಷ್ಟ್ರ ಚಿಂತನೆ ಹಾಗೂ ಸೇವಾ ಭಾವನೆಗೆ ವಿದ್ಯಾರ್ಥಿಗಳನ್ನು ಪ್ರಚೋದಿಸುವುದು ಕೂಡಾ ಶಿಕ್ಷಕನ ಕರ್ತವ್ಯವಾಗಿದೆ ಎಂಬುದಾಗಿ ಡಾ| ಪಿ. ಅನಂತಕೃಷ್ಣ ಭಟ್ ಅವರು ಸನ್ಮಾನವನ್ನು ಸ್ವೀಕರಿಸಿ ತಮ್ಮ ಜೀವನಾನುಭವವನ್ನು ಹಂಚಿಕೊಂಡರು.
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಅತ್ಯಂತ ಸವಾಲುಗಳನ್ನು ಎದುರಿಸಬೇಕಾಗಿರುವುದರಿಂದ ಶಿಕ್ಷಕರು ವೃತ್ತಿ ಪ್ರೀತಿಯೊಂದಿಗೆ ತಮ್ಮ ಲಕ್ಷ ಸಾಧನೆಗೆ ಹೆಚ್ಚು ಗಮನ ನೀಡಬೇಕು ಎಂಬುದಾಗಿ ಪ್ರೊ| ನಾಗವೇಣಿ ಶೆಟ್ಟಿಯವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪರಮ ಧರ್ಮವಾಗಿದೆ ಎಂಬುದಾಗಿ ಹಿರಿಯ ಚಿತ್ರಕಲಾ ಶಿಕ್ಷಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತರಾಗಿರುವ ಶ್ರೀ ಜಿ.ಆರ್. ಉಪಾಧ್ಯಾಯ ಗೌರವಾರ್ಪಣೆ ಸ್ವೀಕರಿಸಿ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹೇಳಿದರು. ತಾವು ಬರೆದ ಕೃತಿಯನ್ನು ವಿದ್ಯಾ ಸಂಸ್ಥೆಗೆ ಸಮರ್ಪಿಸಿದರು.
ಶಿಕ್ಷಕ ವೃತ್ತಿಯ ಪಾವಿತ್ರ್ಯಕ್ಕೆ ಪೀಠಾಧಿಪತಿಗಳಾದ ಸಾಧು-ಸನ್ಯಾಸಿಗಳು ತಲೆಬಾಗಿ ಗೌರವಿಸುತ್ತಾರೆ ಎಂಬುದಾಗಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ, ಶಾರದಾ ವಿದ್ಯಾ ಸಂಸ್ಥೆಗಳ ವಿಶ್ವಸ್ಥರೂ ಆದ ಶ್ರೀ ಪ್ರದೀಪ ಕುಮಾರ ಕಲ್ಕೂರ ಅವರು ಪರಮಪೂಜ್ಯ ಶ್ರೀ ಪೇಜಾವರ ವಿಶ್ವೇಶತೀರ್ಥರು ತಮ್ಮ ಪ್ರಾಥಮಿಕ ತರಗತಿಯ ಗುರುಗಳನ್ನು ಕಂಡಾಗ ಪ್ರತಿಕ್ರಿಯಿಸಿದ್ದನ್ನು ಉಲ್ಲೇಖಿಸಿ ಶಿಕ್ಷಕ ವೃತ್ತಿಯ ಶ್ರೇಷ್ಠತೆಯನ್ನು ಈ ಸಂದರ್ಭ ಕೊಂಡಾಡಿದರು.
ಭಗವಂತನ ವರಪ್ರಸಾದದಂತಿರುವ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಗುಣ ನಿರ್ಮಾಣ ಮಾಡುವ, ಸಂಸ್ಕಾರ ನೀಡಿ ಸರಿದಾರಿಗೆ ತರುವ, ಅವರಲ್ಲಿ ಬದಲಾವಣೆ ತರುವ ಪವಿತ್ರ ವೃತ್ತಿ ಶಿಕ್ಷಕರದ್ದಾಗಿದೆ. ಈ ಸಮಾಜದಲ್ಲಿ ಪರಿವರ್ತನೆ ತರಲು ನಮ್ಮ ಸಂಸ್ಕೃತಿಯ ಅರಿವನ್ನು ಮೂಡಿಸಲು ಶಿಕ್ಷಕರು ನಿಷ್ಠೆಯಿಂದ ಪ್ರಯತ್ನಿಸಬೇಕು ಆಗ ಮಾತ್ರ ಭಾರತ ಜಗದ್ಗುರುವೆನಿಸಲು ಸಮರ್ಥವಾಗಲಿದೆ ಎಂಬುದಾಗಿ ಸಭಾಧ್ಯಕ್ಷತೆ ವಹಿಸಿದ ಪ್ರೊ| ಎಂ.ಬಿ.ಪುರಾಣಿಕರು ಶಿಕ್ಷಕರಲ್ಲಿ ವಿನಂತಿಸಿದರು.
ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಶ್ರೀ ಎಚ್. ಸೀತಾರಾಮ್, ಶಾರದಾ ವಿದ್ಯಾನಿಕೇತನ ವಸತಿ ಶಾಲೆಯ ಆಡಳಿತಾಧಿಕಾರಿ ಶ್ರೀ ವಿವೇಕ ತಂತ್ರಿ, ಎಸ್.ಕೆ.ಡಿ.ಬಿ. ಅಸೋಶಿಯೇಶನ್ನಿನ ಕಾರ್ಯಾರ್ಶಿ ಶ್ರೀ ಸುಧಾಕರ ರಾವ್ ಪೇಜಾವರ, ಶಾರದಾ ಆಯುರ್ಧಾಮದ ವೈದ್ಯಾಧಿಕಾರಿ ಡಾ| ರವಿಗಣೇಶ್ ಅದೇ ರೀತಿ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರುಗಳು ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾ ವಿದ್ಯಾನಿಕೇತನ ಪ್ರಾಂಶುಪಾಲೆ ಶ್ರೀಮತಿ ಸುಷ್ಮಾ ದಿನಕರ್ ಸ್ವಾಗತಿಸಿದರು. ಶಾರದಾ ವಿದ್ಯಾಲಯದ ಉಪ-ಪ್ರಾಂಶುಪಾಲ ಶ್ರೀ ದಯಾನಂದ ಕಟೀಲ್ ಕಾರ್ಯಕ್ರಮ ನಿರ್ವಹಣೆಗೈದರು. ಶಾರದಾ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ. ಮಡಿ ಧನ್ಯವಾದವಿತ್ತರು.
ಶಾರದಾ ಸಮೂಹ ವಿದ್ಯಾ ಸಂಸ್ಥೆಗಳಿಗೆ ಒಳಪಟ್ಟ ಎಲ್ಲಾ ಶಿಕ್ಷಕ-ಶಿಕ್ಷಕಿಯರ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನ ನೀಡಿ ಎಲ್ಲರನ್ನೂ ರಂಜಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.