ಮಂಗಳೂರು : ಇಂಡೋನೇಶಿಯಾದಲ್ಲಿ ನಡೆದ ಏಶಿಯನ್ ಕ್ರೀಡಾಕೂಟದಲ್ಲಿ ರಿಲೆಯಲ್ಲಿ ಬಂಗಾರದ ಪದಕ ಗಳಿಸಿ ರಾಜ್ಯ, ರಾಷ್ಟ್ರ, ಮಂಗಳೂರು ನಗರಕ್ಕೆ ಕೀರ್ತಿ ತಂದಿರುವ ಪೂವಮ್ಮ ಅವರಿಗೆ ಮಂಗಳೂರು ನಗರದಲ್ಲಿ ಸರಕಾರಿ ನಿವೇಶನ ಮತ್ತು ಒಂದು ಕೋಟಿ ರೂಪಾಯಿಯನ್ನು ಪ್ರೋತ್ಸಾಹಧನವಾಗಿ ನೀಡಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂವಮ್ಮ ಅವರನ್ನು ಸ್ವಾಗತಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ಪೂವಮ್ಮ ಅವರು ನಮ್ಮ ದೇಶ, ರಾಜ್ಯ, ಮಂಗಳೂರಿಗೆ ಕೀರ್ತಿ ತಂದ ಕ್ರೀಡಾಪಟು. ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ವಿವಿಧ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ನಡೆದ ಏಶಿಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದಾರೆ. ಅವರಿಗೆ ಮಂಗಳೂರು ನಗರದಲ್ಲಿ ಸರಕಾರಿ ನಿವೇಶನ ಕೊಡುವ ಮೂಲಕ ಸರಕಾರ ಅವರನ್ನು ಪ್ರೋತ್ಸಾಹಿಸಬೇಕು. ಪೂವಮ್ಮ ಕುಟುಂಬದವರು ನಾಲ್ಕು ವರ್ಷಗಳ ಹಿಂದೆಯೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಇನ್ನು ತಡ ಮಾಡದೇ ಆದಷ್ಟು ಬೇಗ ಪೂವಮ್ಮ ಅವರಿಗೆ ನಿವೇಶನ ಮಂಜೂರು ಮಾಡಬೇಕು ಎಂದು ಶಾಸಕರು ಹೇಳಿದ್ದಾರೆ.
ಪೂವಮ್ಮ ಅವರು ಮಾಡಿರುವ ಸಾಧನೆಯ ಹಿಂದೆ ಅಪಾರ ಶ್ರಮ ಅಡಗಿದೆ. ಅದನ್ನು ಪರಿಗಣಿಸಿ ಪೂವಮ್ಮ ಅವರಿಗೆ ಕನಿಷ್ಟ ಒಂದು ಕೋಟಿ ರೂಪಾಯಿಯನ್ನು ರಾಜ್ಯ ಸರಕಾರ ನೀಡಬೇಕು. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಉನ್ನತ ಸ್ಥಾನಕ್ಕೆ ಏರಿಸಲು ಪೂವಮ್ಮ ಅವರಿಗೆ ಇನ್ನಷ್ಟು ಸ್ಫೂರ್ತಿ ಸಿಕ್ಕಿದ್ದಂತೆ ಆಗುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ತಾವು ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ವೈಯಕ್ತಿಕವಾಗಿ ವಿನಂತಿಸುವುದಾಗಿ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.