ವ್ಯಾವಹಾರಿಕವಾಗಿ ಅತ್ಯಂತ ಲಾಭದಾಯಕ ಉದ್ದಿಮೆಯಾಗಿ ಹೊಮ್ಮಿದ್ದ ಅಣುಶಕ್ತಿ ಉತ್ಪಾದನೆ ಮತ್ತು ಮಾರಾಟದ ಕ್ಷೇತ್ರದಲ್ಲಿ 1971 ರ ವರೆಗೂ ಕೇವಲ ಅಮೇರಿಕಾ ಮತ್ತು ಸೋವಿಯತ್ ರಶಿಯಾಗಳಷ್ಟೇ ಏಕಸ್ವಾಮ್ಯವನ್ನು ಮೆರೆಯುತ್ತಿದ್ದವು. ಈ ಎರಡೂ ದೇಶಗಳ ನ್ಯೂಕ್ಲಿಯರ್ ಕಾರ್ಯಕ್ರಮಗಳಿಗೆ ಪೈಪೋಟಿ ನೀಡಲೆಂದೇ ಬ್ರಿಟಿಷ್, ಜರ್ಮನ್ ಮತ್ತು ಡಚ್ ಸರ್ಕಾರಗಳು ಒಟ್ಟಾಗಿ ಅಣುಶಕ್ತಿ ಕೇಂದ್ರಗಳನ್ನು ತಯಾರಿಸಿ ಮಾರಾಟ ಮಾಡುವ ಪಾಲುದಾರಿಕೆಯ ಒಂದು ಕಂಪನಿಯೊಂದನ್ನು ಹುಟ್ಟುಹಾಕಿದವು ಅದರ ಹೆಸರೇ URENCO. ಅದೇ ಸಮಯಕ್ಕೆ ನೆದರ್ಲ್ಯಾಂಡಿನಲ್ಲಿ Physical Dynamics Research Laboratory ಅಥವಾ FDO ಎಂದೂ ಕರೆಯಲಾಗುವ ಸಂಸ್ಥೆಯೊಂದನ್ನು ಡಚ್ ಸರ್ಕಾರದ ಅಧೀನದಲ್ಲಿ URENCOದ ಉಪಪಾಲುದಾರನಾಗಿ ತೆರೆಯಲಾಯಿತು. ಅಣುಶಕ್ತಿ ಉತ್ಪಾದನೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವ Centrifuge ಅಥವಾ ಕೇಂದ್ರಾಪಗಾಮಿ ಸಿಲಿಂಡರ್ಗಳ ಆಧುನಿಕ ವಿನ್ಯಾಸ ಮತ್ತು ನಿರ್ಮಾಣ FDO ನ ಮುಖ್ಯ ಕಾರ್ಯವಾಗಿತ್ತು.
ವಿದ್ಯುತ್ ಉತ್ಪಾದನೆಯಂತಹ ನಾಗರೀಕ ಉಪಯೋಗಕ್ಕಾಗಿಯೇ ಇರಲಿ ಅಥವಾ ಯುದ್ಧದಲ್ಲಿ ಉಪಯೋಗಿಸುವ ಪರಮಾಣು ಸಿಡಿತಲೆಗಳ ತಯಾರಿಗಾಗಿಯೇ ಇರಲಿ ಈ ಎರಡೂ ಉದ್ದೇಶಗಳಿಗೆ ಬಳಕೆಯಾಗುವ ಪ್ರಮುಖ ಕಚ್ಚಾಸಾಮಗ್ರಿಗಳೆಂದರೆ ಒಂದು ಪ್ಲುಟೋನಿಯಂ ಮತ್ತೊಂದು ಯುರೇನಿಯಂ. ಅದರಲ್ಲೂ ಕಚ್ಚಾ ಯುರೇನಿಯಂನ ಪುಷ್ಟಿಕರಣದ ನಂತರ ದೊರೆವ ಸಾರಭರಿತ ಯುರೇನಿಯಂ ಪರಮಘಾತಕ. ಕೆಲವೇ ಕಿಲೋಗ್ರಾಂ ತೂಗುವ ಇಂತಹ ಪುಷ್ಟ ಯುರೇನಿಯಂನ ಚಿಕ್ಕ ಉಂಡೆಯೂ ಇಡೀ ಭೂಮಂಡಲವನ್ನೇ ಹಲವಾರು ಬಾರಿ ಭಸ್ಮಮಾಡುವಷ್ಟು ತಾಕತ್ತಿರುವ ಪಾಶುಪತಾಸ್ತ್ರದಂತೆ. FDOನಲ್ಲಿ ತಯಾರಾಗುತ್ತಿದ್ದದ್ದು ಇಂತಹ ಪುಷ್ಠ ಯುರೇನಿಯಂನ ತಯಾರಿಗಾಗಿಯೇ ಬಳಕೆಯಾಗುವ ವೇಗದಿಂದ ತಿರುಗುವ ಶಕ್ತಿಯುಳ್ಳ ಅತಿ ಸುಧಾರಿತ Centrifugeಗಳು. ಇಂತಹ ಪುಷ್ಟ ಯುರೇನಿಯಂನ ತಯಾರಿ ಬರೀ ಒಂದೆರಡು Centrifugeಗಳಿಂದಾಗುವ ಕೆಲಸವಲ್ಲ. ಸರಣಿಯಲ್ಲಿ ಜೋಡಿಸಿರುವ ಸಾವಿರಾರು ಸಿಲಿಂಡರ್ಗಳು ಒಂದು ನಿರ್ದಿಷ್ಟ ವೇಗದಲ್ಲಿ ತಿರುಗುವ ಮತ್ತು ಒಂದು ನಿರ್ದಿಷ್ಟ ಪ್ರಮಾಣದ ರಾಸಾಯನಿಕ ಕ್ರಿಯೆಗಳ ನಂತರ ಮಾತ್ರ ದಕ್ಕುವ ಉತ್ಪನ್ನವದು.
1972ರಲ್ಲಿ FDO ಗೆ ಇಂತಹ ಅತಿ ಸುಧಾರಿತ ಕೇಂದ್ರಾಪಗಾಮಿ ಸಿಲಿಂಡರ್ಗಳನ್ನು ತಯಾರಿಸಲು ಪೂರಕವಾದ ಲೋಹಗಳ ಜ್ಞಾನವುಳ್ಳ ತಜ್ಞನೊಬ್ಬನ ಆವಶ್ಯಕತೆ ಕಂಡುಬಂತು. ಆ ಸ್ಥಾನವನ್ನು ತುಂಬಲು ಬಂದವನೇ 36 ವರ್ಷದ ಒಬ್ಬ ಪಾಕಿಸ್ತಾನಿ ವಿಜ್ಞಾನಿ. ಆದರೂ ಕಳೆದೊಂದು ದಶಕಕ್ಕಿಂತಲೂ ಹೆಚ್ಚು ಸಮಯವನ್ನು ಆತ ಜರ್ಮನಿ, ನೆದರ್ಲ್ಯಾಂಡ್ ನ ಯುನಿವರ್ಸಿಟಿಗಳಲ್ಲಿಯೇ ಲೋಹಶಾಸ್ತ್ರ (Metallurgy)ದ ಅದ್ಯಯನ ಮತ್ತು ಸಂಶೋಧನೆಗಳಲ್ಲೇ ಕಳೆದಿದ್ದ. ಡಚ್ ಮೂಲದ ಮಹಿಳೆ ಹೆಂಡ್ರಿನಾಳೊಡನೆ ಆತನ ಮದುವೆಯ ನಂತರವಂತೂ ಡಚ್ ಮತ್ತು ಜರ್ಮನಿ ಭಾಷೆಗಳನ್ನು ಬಲ್ಲ, ಕಲಬೆರಿಕೆಯ ಯುರೋಪಿಯನ್ನನೇ ಆಗಿದ್ದ. ಆತನೇ ಡಾ.ಅಬ್ದುಲ್ ಕದೀರ್ ಖಾನ್ ಅಥವಾ A.Q. ಖಾನ್.
ಖಾನ್ ಹುಟ್ಟಿದ್ದು ಅವಿಭಜಿತ ಭಾರತದ ಭೋಪಾಲ್ನಲ್ಲಿ 1936 ರ ಏಪ್ರಿಲ್ 27ರಂದು. ಆತನ ಹುಟ್ಟಿಗೆ ಒಂದು ವರ್ಷ ಮೊದಲಷ್ಟೇ ಆತನ ತಂದೆ ಅಬ್ದುಲ್ ಗಫೂರ್ ಖಾನ್ ತನ್ನ ಮಾಧ್ಯಮಿಕ ಶಾಲಾ ಶಿಕ್ಷಕನ ನೌಕರಿಯಿಂದ ನಿವೃತ್ತನಾಗಿದ್ದ. ನಿವೃತ್ತಿಯ ನಂತರದ ವೇಳೆಯನ್ನೆಲ್ಲ ಆತ ತೊಡಗಿಸಿದ್ದು ತನ್ನ ಕಿರಿ ಮಗನ ಬೆಳವಣಿಗೆ ಮತ್ತು ಆಲ್ ಇಂಡಿಯಾ ಮುಸ್ಲಿಂ ಲೀಗ್ ನ ಮುಂದಾಳುತ್ವ ವಹಿಸುವದರಲ್ಲಿ. ಸಹಜವಾಗಿಯೇ ಭಾರತ ಮತ್ತು ಹಿಂದೂ ದ್ವೇಷಗಳು ಬಾಲಕ ಅಬ್ದುಲ್ನಿಗೆ ತಂದೆಯಿಂದಲೇ ಪಿತ್ರಾರ್ಜಿತವಾಗಿ ದೊರೆತ ಬಳುವಳಿಯಾಗಿದ್ದವು. ಮುಂದೆ ಮುಸ್ಲಿಂ ಲೀಗಿನ ಮತಾಂಧತೆಗೆ ಮತ್ತು ಅದರ ಅಂಜಿಕೆಯಲ್ಲೇ ಬದುಕುತ್ತಿದ್ದ ಕಾಂಗ್ರೆಸ್ಸಿನ ಹೇಡಿತನಗಳ ಪರಿಣಾಮವಾಗಿ 1947ರಲ್ಲಿ ಭಾರತ ಎರಡು ಹೋಳಾಗಿ ಪಾಕಿಸ್ತಾನವೆಂಬ ಇಸ್ಲಾಮೀ ದೇಶವೊಂದು ಹುಟ್ಟಿದಾಗ ಗಫೂರ್ ಖಾನನ ಇಬ್ಬರು ಹಿರಿಯ ಗಂಡುಮಕ್ಕಳು ಮತ್ತು ಹೆಣ್ಣುಮಗಳೊಬ್ಬಳು ಪಾಕಿಸ್ತಾನದ ಕರಾಚಿಗೆ ಹೊರಟುನಿಂತರು.
ತಂದೆ ಗಫೂರನಿಗೆ ಕಿರಿಮಗನನ್ನು ಸಂಸ್ಕಾರವಂತನಾಗಿ ಮಾಡಲು ಆತ ಕಾಫಿರರ ಮಧ್ಯೆ ಹೆಚ್ಚು ಕಾಲಕಳೆಯುವುದು ಬೇಡವಾಗಿತ್ತು. ಹೀಗಾಗಿ ಅಬ್ದುಲ್ ತನ್ನ ಹೈಸ್ಕೂಲ್ ಶಿಕ್ಷಣ ಮುಗಿಯುವ ಹೊತ್ತಿಗೆ ಸಹೋದರರನ್ನು ಹಿಂಬಾಲಿಸಿ ಕರಾಚಿಗೆ ತೆರಳಿದ. 1952ರಲ್ಲಿ ಆತ ತೊರೆದದ್ದು ಭಾರತವನ್ನು ದೈಹಿಕವಾಗಿ ಮಾತ್ರ. ಹಿಂದುಸ್ತಾನದ ಕುರಿತಾದ ಕೀಳರಿಮೆ ಮತ್ತು ಹಿಂದೂಗಳ ವಿರುದ್ಧದ ಹೇವರಿಕೆಗಳು ಮಾತ್ರ ಆತನ ಮನದಲ್ಲಿ ಅದಾಗಲೇ ಶಾಶ್ವತವಾಗಿ ಮನೆಮಾಡಿದ್ದವು.
1950-60 ರ ದಶಕಗಳಲ್ಲಿ ಪಾಕಿಸ್ತಾನದ ಮಿಲಿಟರಿ ಮತ್ತು ಸರ್ಕಾರಗಳಿಗೆ ಪರಮವೈರಿ ಭಾರತವನ್ನು ಎಲ್ಲ ರಂಗಗಳಲ್ಲಿಯೂ ಹಿಂದಿಕ್ಕುವ ತನ್ನ ಯಾವತ್ತೂ ಪ್ರಿಯವಾದ ಕಾರ್ಯಕ್ರಮದ ಅಂಗವಾಗಿ ಅದರ ಎಳೆಯ ತಲೆಮಾರನ್ನು ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಗಳ ಕಾಲೇಜು, ಯುನಿವರ್ಸಿಟಿಗಳಿಗೆ ದಾಖಲಾಗುವಂತೆ ವಿದ್ಯಾರ್ಥಿವೇತನ ಕೊಟ್ಟು ಪ್ರೋತ್ಸಾಹಿಸುತ್ತಿದ್ದವು. ಇದರಿಂದ ಆ ದೇಶಕ್ಕೆ ಎರಡು ಉಪಯೋಗಗಳಿದ್ದವು :
1. ಉನ್ನತ ಶಿಕ್ಷಣಗಳಿಸಿದ ನುರಿತ ತಜ್ಞರ ತಯಾರಿ
2. ವಿದೇಶಿ ನೆಲಗಳಲ್ಲಿ ಪಾಕಿಸ್ತಾನದ ಪರವಾಗಿ ಮಾತನಾಡಬಲ್ಲ ಮತ್ತು ಬೇಕಾದಾಗ ಗೂಢಚಾರಿಕೆ ಸಹಿತ ಯಾವುದೇ ಕೆಲಸಕ್ಕೂ ಸನ್ನದ್ಧರಾದ ಖೂಳರ ಪಡೆಯ ತಯಾರಿ.
ಇಂತಹ ಅವಕಾಶವನ್ನು ಪಡೆದುಕೊಂಡು ಪಶ್ಚಿಮ ಜರ್ಮನಿಯ ಡ್ಯುಸೆಲ್ದೊರ್ಫ್ ಹಾರಿದ ಮೊದಲ ತಲೆಮಾರಿನವರಲ್ಲಿ ಅಬ್ದುಲ್ ಕದೀರ್ ಖಾನ್ ಕೂಡ ಒಬ್ಬ.
1972 ಮೇ 1 ನೇ ತಾರೀಖಿನಂದು ಆಮ್ಸ್ಟರ್ಡ್ಯಾಂನ FDO ಕಚೇರಿಯಲ್ಲಿ ಲೋಹತಜ್ಞನಾಗಿ ಕೆಲಸಕ್ಕೆ ಸೇರುವಲ್ಲಿಗೆ ಖಾನನ ಜೀವನದ ಮಹತ್ವದ ಅಧ್ಯಾಯವೊಂದು ತೆರೆದುಕೊಳ್ಳಲಿತ್ತು. ಕಚೇರಿಯ ಮೊದಲ ದಿನದಲ್ಲೇ ಆತ ಫ್ರಿಟ್ಸ್ ವೀರ್ಮನ್ ಎಂಬ ಡಚ್ ಛಾಯಾಗ್ರಾಹಕನ ಸ್ನೇಹ ಸಂಪಾದಿಸಿದ. ಪ್ರಿಟ್ಸ್ನ ಕಚೇರಿಯ ಫೋಟೊ ಸಂಗ್ರಹದಲ್ಲಿದ್ದ ವಿವಿಧ ಯಂತ್ರಗಳ, ಸಂರಚನೆಗಳ ಮತ್ತು ನಕಾಶೆಗಳ ಚಿತ್ರಗಳಲ್ಲಿ ಖಾನ್ ಗೆ ಎಲ್ಲಿಲ್ಲದ ಆಸಕ್ತಿ. ಮೊದಮೊದಲಿಗೆ ಮುಜುಗರ ಆಶ್ಚರ್ಯವೆನಿಸುತ್ತಿದ್ದರೂ ತನ್ನಂತಹ ಸಾಧಾರಣ ಫೋಟೋಗ್ರಾಫರ್ ಒಬ್ಬನ ಜೊತೆ ಮುಕ್ತವಾಗಿ ಬೆರೆಯುತ್ತಿದ್ದ ತಂತ್ರಜ್ಞನೊಬ್ಬನ ಸ್ನೇಹಕ್ಕೆ ಫ್ರಿಟ್ಸ್ ಮಾರುಹೋಗಿದ್ದ. ನಿಧಾನವಾಗಿ ಖಾನ್ ಫ್ರಿಟ್ಸ್ನ ಸಹಾಯದಿಂದ ತಾನೇ ಚಿತ್ರಗಳನ್ನು ತೆಗೆಯುವಷ್ಟು ಕುಶಲತೆ ಮತ್ತು ಸಲುಗೆ ಬೆಳೆಸಿಕೊಂಡ. ತನ್ನ ಸ್ವಂತ ಉಪಯೋಗಕ್ಕೆ ಹಳೆಯ ಕ್ಯಾಮೆರಾ ಒಂದನ್ನೂ ಸಂಪಾದಿಸಿದ.
ವೃತ್ತಿಯಲ್ಲಿ ತಾನೊಬ್ಬ ಮಧ್ಯಮಸ್ತರದ ಲೋಹತಜ್ಞನೇ ಆದರೂ ತನಗೆ ಬರುತ್ತಿದ ಡಚ್ ಮತ್ತು ಜರ್ಮನ್ ಭಾಷೆಗಳ ಸಹಾಯದಿಂದ ಅನುಭವದಲ್ಲಿಯೂ, ವೃತ್ತಿಸ್ತರಗಳಲ್ಲಿಯೂ ತನಗಿಂತ ಹಿರಿಯ ಅಧಿಕಾರಿಗಳ ಮತ್ತು ವೈಜ್ಞಾನಿಕರ ಸ್ನೇಹ ಸಂಪಾದಿಸಲು ಖಾನ್ ಶಕ್ತಿಮೀರಿ ಪ್ರಯತ್ನಮಾಡುತ್ತಿದ್ದ ಮತ್ತು ಸಾಕಷ್ಟು ಮಟ್ಟಿಗೆ ಅದರಲ್ಲಿ ಸಫಲನೂ ಆದ. ತನ್ನ ಇಂತಹ ಸ್ನೇಹದ ಬಲದಿಂದಲೇ ಕಚೇರಿಯ ಮತ್ತು ಪ್ರಯೋಗಶಾಲೆಯ ಅನೇಕ ನಿರ್ಬಂಧಿತ ವಿಭಾಗಗಳಿಗೂ ಪ್ರವೇಶವನ್ನೂ ಗಳಿಸಿದ.
ವಾಸ್ತವವಾಗಿ ಯುರೋಪಿನಲ್ಲಿ ಅದರಲ್ಲೂ ಸರ್ಕಾರಿ ಕಣ್ಗಾವಲಿನಲ್ಲಿರುವ ಇಂತಹ ಪ್ರಯೋಗಶಾಲೆಗಳಲ್ಲಿ ವಿದೇಶಿ ಮೂಲದ ಜನರು ಪ್ರವೇಶಗಳಿಸುವುದೇ ಕಠಿಣವೆನಿಸುತ್ತಿದ್ದಾಗ ಖಾನನ ಅನಿರ್ಬಂಧಿತ ಓಡಾಟಕ್ಕೆ ಆಸ್ಪದಕೊಟ್ಟಿದ್ದೇ ಅಲ್ಲಿನ ಸರ್ಕಾರಿ ಸಂಸ್ಥೆಗಳ ಮತ್ತು ಗುಪ್ತಚರ ವ್ಯವಸ್ಥೆಗಳ ವೈಫಲ್ಯದ ಮೊದಲ ಹಂತವಾಗಿತ್ತು. ಇಂತಹ ತಪ್ಪುಗಳಿಗೆ ಮುಂದೆ ಬರೀ ಡಚ್ ವೈಜ್ಞಾನಿಕ ಮತ್ತು ಗುಪ್ತಚರ ಸಂಸ್ಥೆಗಳಷ್ಟೇ ಅಲ್ಲ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ CIA ಮತ್ತು ಅಣ್ವಸ್ತ್ರ ಪ್ರಸರಣ ವಿರೋಧಿ ಪಡೆ IAEA ಗಳಂಥ ಸಂಸ್ಥೆಗಳ ಒಟ್ಟಾರೆ ನಿರ್ಲಕ್ಷ್ಯ ಮತ್ತು ವೈಫಲ್ಯಗಳೂ ಸೇರಿ ಮುಂದೊಂದು ದಿನ ಇಡೀ ವಿಶ್ವವನ್ನು ನಾಶದೆಡೆಗೆ ಸ್ವಲ್ಪಸ್ವಲ್ಪವಾಗಿಯೇ ಎಳಸುತ್ತಿದ್ದವು.
(ಸಶೇಷ..)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.