ಜೀವನ ಏಳು ಬೀಳುಗಳ ಅನಿಶ್ಚಿತ ನಡುಗೆ, ಇಂದಿನ ಸಂತೋಷ, ಇಂದಿನ ದುಃಖ ಯಾವುದೂ ಶಾಶ್ವತವಲ್ಲ, ಹುಟ್ಟಿ ಸಾಯುವವರೆಗೂ ಬಂದ ಸವಾಲುಗಳನ್ನು ಎದುರಿಸಿ ಬದುಕಬೇಕಾಗಿರುವುದು ಮಾನವನ ಅನಿವಾರ್ಯತೆ.
ಮಣಿಪುರದ ಮಯೋರಿ ಎನ್ನುವ ಮಹಿಳೆಯ ಬದುಕಲ್ಲೂ ಕಾರ್ಮೋಡದ ಕಗ್ಗತ್ತಲು ತುಂಬಿತ್ತು, ಪತಿಯಿಂದ ಪರಿತ್ಯಕ್ತಳಾದ ಆಕೆ 10 ತಿಂಗಳ ಹಸುಗೂಸಿನೊಂದಿಗೆ ಸುಂದರ ಜೀವನವನ್ನು ಕಟ್ಟಿಕೊಳ್ಳುವ ಕನಸು ಕಂಡಿದ್ದಳು. ಆದರೆ ಯಾವಾಗ ತನ್ನ ಮಗು ಅನಾರೋಗ್ಯಕ್ಕೀಡಾಯಿತೋ ಆಕೆಯ ಕನಸಿನ ಅರಮನೆಯೂ ಕುಸಿಯಲಾರಂಭಿಸಿತು.
ತನ್ನ ಮುದ್ದಾದ ಮಗಳು ರಚೆಲ್ಳನ್ನು ಬದುಕಿಸಿಕೊಳ್ಳಬೇಕೆಂಬ ಗುರಿಯೊಂದಿಗೆ ಆಕೆ ನೇರವಾಗಿ ಬೆಂಗಳೂರಿಗೆ ಬಂದಿಳಿದಳು. ಮಣಿಪಾಲ್ ಆಸ್ಪತ್ರೆಯಲ್ಲಿ ಮಗುವನ್ನು ತೋರಿಸಿದಾಗ ಅದರ ಶ್ವಾಸಕೋಶದಲ್ಲಿ ದ್ರವವಿರುವುದು ಪತ್ತೆಯಾಯಿತು. ಮಗುವಿಗೆ ದೊಡ್ಡದಾದ ಸರ್ಜರಿಯೊಂದರ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದಾಗ ಮಯೋರಿಗೆ ಆಕಾಶವೇ ಕುಸಿದಂತಾಯಿತು. ಸರ್ಜರಿಗೆ ತಗಲುವ ವೆಚ್ಚ 1.45 ಲಕ್ಷ ರೂಪಾಯಿ. ಆದರೆ ಅಷ್ಟೊಂದು ಹಣ ಹೊಂದಿಸುವುದು ಬಡ ಕುಟುಂಬದ ಆಕೆಗೆ ಸಾಧ್ಯವಿರಲಿಲ್ಲ.
ಮಗುವನ್ನು ಉಳಿಸಿಕೊಳ್ಳಲು ತನ್ನಿಂದಾದ ಪ್ರಯತ್ನ ಮುಂದುವರೆಸಿದ ಆಕೆ, ಸ್ಥಳಿಯ ಮಣಿಪುರ ಸಂಸ್ಥೆಯನ್ನು ಸಂಪರ್ಕಿಸಿದಳು, ಆ ಸಂಸ್ಥೆ ಆಕೆಯನ್ನು ಮಣಿಪುರಿ ಮೂಲದ ಗೌರವಾನ್ವಿತ ವ್ಯಕ್ತಿ, ಮುಂಬಯಿ ಆದಾಯ ತೆರಿಗೆ ಕಮಿಷನರ್ ಲಕ್ಸನ್ ಅವರಿಗೆ ಪರಿಚಯಿಸಿತು, ಅವರು ತಮಗೆ ಬೆಂಗಳೂರಿನಲ್ಲಿ ಪರಿಚಯವಿರುವ ವ್ಯಕ್ತಿಗಳನ್ನು ಮಯೋರಿ ಅವರಿಗೆ ಪರಿಚಯಿಸಿದರು. ಈ ವೇಳೆ ಮಯೋರಿಯ ಸಂಪರ್ಕಕ್ಕೆ ಸಿಕ್ಕವರೇ ಸಿಎ ಆಗಿರುವ ಬಾಲಕೃಷ್ಣ ರೈ. ಆಕೆಯೊಂದಿಗೆ ಮಾತನಾಡಿ ಆಕೆಯ ಕಷ್ಟವನ್ನು ಅರಿತುಕೊಂಡ ರೈ ತಮ್ಮ ಸೋದರಳಿಯ, ಸಾಮಾಜಿಕ ಕಾರ್ಯಕರ್ತನೂ ಆಗಿರುವ ಗಿರೀಶ್ ಆಳ್ವರೊಂದಿಗೆ ಈ ಬಗ್ಗೆ ಚರ್ಚಿಸಿದರು.
ಬಳಿಕ ಗಿರೀಶ್ ತನ್ನ ಸಾಮಾಜಿಕ ಜಾಲತಾಣ ಸ್ನೇಹಿತರೊಂದಿಗೆ ಮಾತನಾಡಿ ತಾಯಿ ಮಗಳಿಗೆ ಸಹಾಯ ಮಾಡುವ ಬಗ್ಗೆ ಚರ್ಚೆ ನಡೆಸಿ ’ಸೇವ್ರಚೆಲ್’ ಎಂಬ ಆನ್ಲೈನ್ ಅಭಿಯಾನವನ್ನು ಆರಂಭಿಸಿದರು. ಟ್ವಿಟರ್ನಲ್ಲಿ ಜುಲೈ 29ರಂದು ಈ ಅಭಿಯಾನ ಆರಂಭಗೊಂಡಿತು, ಮಿಲಾಪ್.ಆರ್ಗ್ ಮೂಲಕವೂ ಹಣ ಸಂಗ್ರಹ ಮಾಡಲು ಮುಂದಾದರು. ಕೇವಲ 24 ಗಂಟೆಯೊಳಗೆ ರೂ.1.7ಲಕ್ಷ ರೂಪಾಯಿ ಸಂಗ್ರಹವಾಯಿತು ಇಷ್ಟು ಮೊತ್ತ ರಚೆಲ್ ಸರ್ಜರಿಗೆ ಸಾಕಾಗಿತ್ತು, ಸರ್ಜರಿ ನಡೆಯಿತು ರಚೆಲ್ ಗುಣಮುಖಲಾದಳು.
ಈ ಅಭಿಯಾನದ ಬಗ್ಗೆ ತಿಳಿದುಕೊಂಡ ಮಣಿಪುರ ಸಿಎಂ ಬಿರೆನ್ ಸಿಂಗ್ ಅವರೂ ರೂ.30 ಸಾವಿರ ಧನ ಸಹಾಯ ಮಾಡಿದರು, ಅಲ್ಲದೇ ತಾಯಿ ಮಗುಮಣಿಪುರಕ್ಕೆ ವಾಪಾಸ್ಸಾಗಲು ವ್ಯವಸ್ಥೆ ಮಾಡಿಕೊಟ್ಟರು, ಮಣಿಪಾಲ್ ಆಸ್ಪತ್ರೆಯವರೂ ರೂ.20 ಸಾವಿರದಷ್ಟು ರಿಯಾಯಿತಿ ನೀಡಿದರು. ಸರ್ಜರಿ ನಂತರದ ಮಗುವಿನ ವೈದ್ಯಕೀಯ ವೆಚ್ಚಕ್ಕೂ ಸಾಕಾಗುವಷ್ಟು ಹಣ ಸಂಗ್ರಹವಾಯಿತು. ಅಭಿಯಾನ ನಡೆಸಿದ ತಂಡ ಮಯೋರಿ ಅವರಿಗೆ ಉದ್ಯೋಗ ನೀಡುವಂತೆಯೂ ಸಿಎಂ ಅವರಲ್ಲಿ ಮನವಿ ಮಾಡಿಕೊಂಡಿದೆ. ಇದಕ್ಕೆ ಓಗೊಟ್ಟು ಇಂಫಾಲದಲ್ಲಿನ ಸಿಎಂ ಕಛೇರಿಯನ್ನು ಸಂಪರ್ಕಿಸುವಂತೆ ಸರ್ಕಾರದ ಸಿಬ್ಬಂದಿಗಳು ಆಕೆಗೆ ತಿಳಿಸಿದ್ದಾರೆ.
ಈಗ ಮಯೋರಿ ಬಾಳಲ್ಲಿ ಆವರಿಸಿದ್ದ ಕಾರ್ಮೋಡ ತಿಳಿಯಾಗಿ ಬೆಳಕು ಮೂಡಿದೆ, ತನಗೆ ದೊರೆತ ಅಪೂರ್ವ ಬೆಂಬಲ ಆಕೆಯನ್ನು ಪುಳಕಿತಗೊಳಿಸಿದೆ.
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣವೊಂದು ಯಾವ ರೀತಿಯಲ್ಲಿ ಮನುಷ್ಯನ ಜೀವನಕ್ಕೆ ಸಹಕಾರಿಯಾಗಬಲ್ಲದು, ಹೇಗೆ ಉತ್ತಮ ಕಾರ್ಯಕ್ಕೆ ಜನರನ್ನು ಪ್ರೇರೇಪಿಸಬಲ್ಲದು ಎಂಬುದನ್ನು ಈ ಘಟನೆ ತೋರಿಸಿಕೊಟ್ಟಿದೆ. ಮಣಿಪುರದ ತಾಯಿ ಮಗುವಿಗೆ ಬೆಂಗಳೂರಿನಲ್ಲಿ ಜೀವದಾನ ಸಿಕ್ಕಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಗಳು ಸದಾ ಹೇಳುವಂತೆ, ಮಾನವೀಯತೆ ಧರ್ಮ, ರಾಜ್ಯಗಳ ಭಿನ್ನತೆಗಿಂತಲೂ ಮಿಗಿಲಾದುದು, ಇದನ್ನು ಬೆಂಗಳೂರು ದಾನಿಗಳು, ಮಣಿಪುರದ ಸಿಎಂ ಪಾಲಿಸಿದ್ದಾರೆ. ಸಮಾಜದಲ್ಲಿ ಸಕರಾತ್ಮಕ ಬದಲಾವಣೆ ತರಿಸಲು ಸಾಮಾಜಿಕ ಜಾಲತಾಣವನ್ನು ಪ್ರಭಾವಶಾಲಿ ಅಸ್ತ್ರವನ್ನಾಗಿ ಇಲ್ಲಿ ಬಳಸಿಕೊಂಡಿರುವುದು ಮಾದರಿ ಕಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.