ಮುಂಬಯಿ: ನಾವು ಇಂದು ಪಡುವ ಪರಿಶ್ರಮ ಮುಂದೊಂದು ದಿನ ಉತ್ತಮ ಫಲವನ್ನೇ ನೀಡುತ್ತದೆ ಎಂಬ ಮಾತಿದೆ. ಈ ಮಾತು ಪುಣೆಯ ಶಿಕ್ಷಕರ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿದೆ.
ಸುಮಾರು 2003ನೇ ಇಸವಿಯಲ್ಲಿ ಶಿಕ್ಷಕರಾಗಿದ್ದ ಪಿಟಿ ಶಿಂಧೆ ಅವರು ಮಹಾರಾಷ್ಟ್ರದ ಪುಣೆಯಲ್ಲಿನ ತನ್ನ ಗ್ರಾಮದ ನಿವಾಸಿಗಳನ್ನು ವಿಶೇಷ ಸಂದರ್ಭಗಳಲ್ಲಿ ಗಿಡ ನೆಡುವಂತೆ ಹುರಿದುಂಬಿಸಿದರು. ಇದರ ಫಲವಾಗಿ ಇಂದು ಅವರ ರನ್ಮಾಲ ಗ್ರಾಮದ ಚಿತ್ರಣವೇ ಬದಲಾಗಿದೆ. ಬರಪೀಡಿತಗೊಂಡಿದ್ದ ಆ ಗ್ರಾಮ ಇದು ಹಸಿರಿನಿಂದ ಕಂಗೊಳಿಸುತ್ತಿದೆ.
ಶಿಂಧೆ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ಇಲ್ಲಿ ಸುಮಾರು 2 ಲಕ್ಷ ಗಿಡಗಳನ್ನು ನೆಡಲಾಗಿದೆ. ಯಾರದಾದರು ಮನೆಯಲ್ಲಿ ಹುಟ್ಟು ಹಬ್ಬ ಇದ್ದರೆ ಗ್ರಾಮಸ್ಥರು ‘ಜನ್ಮ ವೃಕ್ಷ’ವನ್ನು ಉಡುಗೊರೆ ನೀಡುತ್ತಾರೆ. ಮರಣವಾದರೆ ‘ಸ್ಮೃತಿ ವೃಕ್ಷ’, ಮದುವೆಯಾದರೆ ‘ಶುಭ ಮಂಗಳ್ ವೃಕ್ಷ’, ವಿಶೇಷ ಸಂದರ್ಭದಲ್ಲಿ ‘ಆನಂದ್ ವೃಕ್ಷ’ವನ್ನು ಈ ಗ್ರಾಮದಲ್ಲಿ ಉಡುಗೊರೆಯಾಗಿ ನೀಡುವ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.
ನೆಟ್ಟ ಗಿಡಗಳೆಲ್ಲವೂ ಇಂದು ಸಮೃದ್ಧವಾಗಿ ಬೆಳೆದು ನಳನಳಿಸುತ್ತಿವೆ. ಹೆಚ್ಚಿನ ಮರಗಳು ಫಲ ನೀಡುತ್ತಿವೆ. ಅಲ್ಲದೇ ಇವುಗಳ ಕಾರಣದಿಂದ ನೀರಿನ ಸಮಸ್ಯೆಯೂ ನೀಗಿ ಬರಗಾಲ ದೂರವಾಗಿದೆ.
ಇದೀಗ ರನ್ಮಾಲವನ್ನು ಮಾದರಿಯನ್ನಾಗಿಕೊಂಡೇ ಮಹಾರಾಷ್ಟ್ರದಾದ್ಯಂತ ಜುಲೈ 1ರಿಂದ 31ರವರೆಗೆ 13 ಕೋಟಿ ಗಿಡ ನೆಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.