ಪೆರುವಾಜೆಯಲ್ಲಿ 94 ಸಿ ಹಕ್ಕು ಪತ್ರ ವಿತರಣೆ ಮತ್ತು ಅರಣ್ಯ ಇಲಾಖೆಯ ಕಟ್ಟಡ ಉದ್ಘಾಟನೆ
ಸುಳ್ಯ: ಕಸ್ತೂರಿ ರಂಗನ್ ವರದಿಯ ಅನುಷ್ಠಾನದ ಬಗ್ಗೆ ಅಧ್ಯಯನವನ್ನು ನಡೆಸಲಾಗಿದ್ದು ಕೃಷಿಕರಿಗೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಅವರು ಸುಳ್ಯ ತಾಲೂಕಿನ ಪೆರುವಾಜೆ ಶಾಲಾ ವಠಾರದಲ್ಲಿ ನಡೆದ ಸಮಾರಂಭದಲ್ಲಿ 64ಸಿ ಹಕ್ಕು ಪತ್ರ ವಿತರಣೆ ಮಾಡಿ, ಪೆರುವಾಜೆಯಲ್ಲಿ ಅರಣ್ಯ ಇಲಾಖೆಯ ಐದು ಗ್ರಾಮ ವ್ಯಾಪ್ತಿಯ ಬೆಳ್ಳಾರೆ ಶಾಖಾ ಉಪವಲಯ ಅರಣ್ಯಾಧಿಕಾರಿಗಳ ವಸತಿಗೃಹ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾ.ಪಂ. ಅನುದಾನದ ಮುಕ್ಕೂರು ಅಂಗನವಾಡಿ ಕೇಂದ್ರದ ಉದ್ಘಾಟನೆ ಹಾಗೂ ಕುಂಡಡ್ಕದಲ್ಲಿ ಮನೆ ನಿವೇಶನಕ್ಕೆ ಮೀಸಲಿಟ್ಟ ಸ್ಥಳದಲ್ಲಿ ನಿವೇಶನಕ್ಕೆ ಈ ಸಂದರ್ಭದಲ್ಲಿ ಅವರು ಚಾಲನೆ ನೀಡಿದರು.
ಡೀಮ್ಡ್ ಫಾರೆಸ್ಟ್ನ್ನು ಸರ್ವೆ ಮಾಡಿಸಿ ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಕುಮ್ಕಿ ಜಮೀನನ್ನು ರೈತರಿಗೆ ನೀಡುವ ಕಾರ್ಯ ಶೀಘ್ರದಲ್ಲೇ ಮಾಡಲಾಗುವುದು ಎಂದ ಸಚಿವರು ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿ ವಾಸ್ತವ್ಯವಿರುವ ಕುಟುಂಬಗಳಿಗೆ 64 ಸಿ ಹಕ್ಕುಪತ್ರ ನೀಡುವುದರೊಂದಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಜನರ ಶ್ರೇಯಾಭಿವೃದ್ಧಿಯನ್ನು ಮುಂದಿರಿಸಿ ರಾಜ್ಯ ಸರ್ಕಾರ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿ ಮಾಡಿದೆ ಎಂದು ರಮಾನಾಥ ರೈ ಹೇಳಿದರು.
ಬೆಳ್ಳಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಎಸ್.ಡಿ ವಿಠಲದಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಜಿ.ಪಂ. ಸದಸ್ಯೆ ಸರಸ್ವತಿ ಕಾಮತ್, ತಾ.ಪಂ. ಸದಸ್ಯ ಅನಿಲ್ ರೈ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಎಸ್. ಬಿಜ್ಜೂರು, ಪುತ್ತೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್, ಮಾಜಿ ಜಿ.ಪಂ ಸದಸ್ಯರಾದ ರಾಜೀವಿ ರೈ, ಚಂದ್ರಶೇಖರ ಕಾಮತ್, ಸುಳ್ಯ ತಹಶೀಲ್ದಾರ್ ಶ್ರೀನಿವಾಸ ಶೆಟ್ಟಿ, ಬೆಳ್ಳಾರೆ ಗ್ರಾ.ಪಂ. ಉಪಾಧ್ಯಕ್ಷೆ ಬೀಬಿ ಅಬ್ದುಲ್ಲಾ ಉಪಸ್ಥಿತರಿದ್ದರು.
ಪುತ್ತೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಸ್ವಾಗತಿಸಿ, ಪೆರುವಾಜೆ ಸ್ಪಂದನಾ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸಚಿನ್ರಾಜ್ ಶೆಟ್ಟಿ ವಂದಿಸಿದರು. ಬೆಳ್ಳಾರೆ ಉಪವಲಯ ಅರಣ್ಯಾಧಿಕಾರಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.