News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

125 ಕೋಟಿ ಜನರೂ ಒಂದು ಹೆಜ್ಜೆ ಮುಂದಿಟ್ಟರೆ…!

Nera-NoTa-226x300ಸ್ವಾತಂತ್ರ ದ ದಿನ ದೆಹಲಿಯ ಕೆಂಪುಕೋಟೆಯ ಮೇಲಿನಿಂದ ಪ್ರಧಾನ ಮಂತ್ರಿ ಮಾಡುವ ಭಾಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಇಡೀ ದೇಶ ಈ ಭಾಷಣವನ್ನು ಆಲಿಸಲು ಕಾತರದಿಂದ ಕಿವಿ ಅರಳಿಸಿ ಕುಳಿತಿರುತ್ತದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಭಾಷಣ ಅನಿವಾರ್ಯವಾಗಿ ಪೂರೈಸಬೇಕಾದ ವಿಧಿಯ ಮಟ್ಟಕ್ಕೆ ಇಳಿದಿತ್ತು. ಕಾಟಾಚಾರದ ಭಾಷಣ ಆದಾಗಿತ್ತು. ಪ್ರಧಾನಿಯ ಭಾಷಣವೆಂದರೆ ಪ್ರಚಲಿತ ವಿಷಯಗಳ ಬಗ್ಗೆ ಒಂದಿಷ್ಟು ಮಾತುಗಳು, ಕೆಲವು ಹೊಸ ಸ್ಕೀಮ್‌ಗಳ ಮತ್ತು ಕಾರ್ಯಕ್ರಮಗಳ ಘೋಷಣೆ, ಜಿಡಿಪಿ ಏರಿಳಿತ ಲೆಕ್ಕಾಚಾರ, ಇದುವರೆಗೆ ಮಾಡಿದ ಸಾಧನೆಗಳ ಅದೇ ಸವಕಲು ಪ್ರವರ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿತ್ತು. ಹಾಗಾಗಿ ಪ್ರಧಾನಿ ಭಾಷಣ ಕೇಳುವುದಕ್ಕೆ ದೇಶದ ಜನತೆಗೆ ಅಂತಹ ಆಸಕ್ತಿಯೇ ಉಳಿದಿರಲಿಲ್ಲ. ಜೊತೆಗೆ ಕಾರ್ಯದರ್ಶಿಗಳು ಬರೆದು ಕೊಟ್ಟ ಭಾಷಣವನ್ನು ಪ್ರಧಾನಿಯಾದವರು ಯಾಂತ್ರಿಕವಾಗಿ ಓದುತ್ತಿದ್ದುದರಿಂದ ಕೇಳುಗರಿಗೆ ಯಾವ ಸ್ಫೂರ್ತಿಯೂ ಉಕ್ಕುತ್ತಿರಲಿಲ್ಲ. ಅದರಲ್ಲೂ ಹಿಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಮಾತನಾಡಿದ್ದು ಏನೆಂಬುದೇ ಸ್ಪಷ್ಟವಾಗುತ್ತಿರಲಿಲ್ಲ. ಅವರ ತುಟಿಯಿಂದ ಶಬ್ದಗಳು ಹೊರಗೆ ಬರುತ್ತಿದ್ದವೇ ಹೊರತು ಆ ಶಬ್ದಗಳಿಗೆ ಜನಮನವನ್ನು ಸೆಳೆಯುವ ಆಕರ್ಷಣೆಯಾಗಲಿ, ರುಚಿಯಾಗಲಿ ಇರುತ್ತಿರಲಿಲ್ಲ.

ಈ ಬಾರಿ ಮಾತ್ರ ಹಾಗಾಗಿಲ್ಲ. ೬೮ನೇ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯ ಮೇಲಿನ ಪ್ರಧಾನಿ ಭಾಷಣದ ಗಮ್ಮತ್ತೇ ಬೇರೆ. ಕಾರ್ಯದರ್ಶಿಗಳು ಬರೆದುಕೊಟ್ಟ ಭಾಷಣ ಅದಾಗಿರಲಿಲ್ಲ. ತಮ್ಮ ಎಂದಿನ ಅಸ್ಖಲಿತ ಶೈಲಿಯಲ್ಲಿ ಸ್ವಯಂಸ್ಫೂರ್ತಿಯಿಂದ ಮಾಡಿದ ಬರೋಬ್ಬರಿ 65 ನಿಮಿಷಗಳ ಭಾಷಣ ಅದು. ಆ ಭಾಷಣ ದೇಶದ ಜನರ ಮನಸ್ಸನ್ನು ಮುಟ್ಟಿದೆ. ಹೃದಯವನ್ನು ತಟ್ಟಿದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಅಸಂಖ್ಯಾತ ಟ್ವೀಟ್‌ಗಳೇ ಸಾಕ್ಷಿ. ಇಂತಹ ಒಂದು ಭಾಷಣವನ್ನು ಕೆಂಪುಕೋಟೆಯಿಂದ ಕೇಳದೆ ವರ್ಷಗಳೇ ಆಯಿತಲ್ಲ ಎಂದು ಜನರು ಉದ್ಗರಿಸುವಷ್ಟು ಆ ಭಾಷಣ ಪ್ರಭಾವಶಾಲಿಯಾಗಿತ್ತು. ಪ್ರಧಾನಿಯವರ ಭಾಷಣ ಕೇಳಲು ವಿವಿಧ ರಾಷ್ಟ್ರಗಳ ಪ್ರತಿನಿಧಿಗಳಿಂದ ಪ್ರತಿ ವರ್ಷ ಸುಮಾರು 50-60 ಪಾಸ್‌ಗಳಿಗೆ ಬೇಡಿಕೆ ಬರುತ್ತಿತ್ತು. ಆದರೆ ಈ ವರ್ಷ ವಿದೇಶಿ ರಾಯಭಾರಿಗಳಿಂದ ಪಾಸ್‌ಗಳಿಗೆ ಬಂದ ಬೇಡಿಕೆಯ ಸಂಖ್ಯೆ 150! ಭಾರತದಲ್ಲಿ ಇರುವುದೇ 153 ರಾಷ್ಟ್ರಗಳ ಪ್ರತಿನಿಧಿಗಳು. ತಡವಾಗಿ ಬಂದ ಹಲವು ರಾಷ್ಟ್ರಗಳ ದೂತಾವಾಸ ಕಛೇರಿ ಸಿಬ್ಬಂದಿ ಸೀಟಿಲ್ಲದೆ ಪರದಾಡಿದರು. ಸಮಾರಂಭದ ಸ್ಥಳದಲ್ಲಿ ಭಾಷಣ ಕೇಳಿದವರ ಸಂಖ್ಯೆ 10 ಸಹಸ್ರಕ್ಕೂ ಹೆಚ್ಚು. ದೇಶಾದ್ಯಂತ ಟಿವಿ ನೇರಪ್ರಸಾರದ ಮೂಲಕ ಭಾಷಣ ಕೇಳಿದವರು ಕೋಟ್ಯಾಂತರ ಜನರು. ಪ್ರಧಾನಿಯೊಬ್ಬರ ಸ್ವಾತಂತ್ರ್ಯೋತ್ಸವದ ಭಾಷಣ ಕೇಳಲು ಈ ಪರಿಯ ಕುತೂಹಲ, ಆಸಕ್ತಿ ಹಿಂದೆಂದೂ ವ್ಯಕ್ತವಾಗಿರಲಿಲ್ಲ.

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ದೊಡ್ಡ ದೊಡ್ಡ ಸ್ಕೀಮ್‌ಗಳ ಘೋಷಣೆ ಮಾಡಲಿಲ್ಲ. ಜಿಡಿಪಿ ಏರಿಳಿತ ಲೆಕ್ಕಾಚಾರ ವಿವರಿಸಲಿಲ್ಲ. ದ್ವೇಷ ಕಾರುವ ಮಾತಿನ ಕಿಡಿಗಳನ್ನು ಉಗುಳಲಿಲ್ಲ. ಅವರ ಭಾಷಣದ ಪ್ರತಿ ಶಬ್ದದಲ್ಲೂ ಮಿಡಿಯುತ್ತಿದ್ದುದು ದೇಶದ ಅಭಿವೃದ್ಧಿಯ ಕುರಿತ ಪ್ರಾಮಾಣಿಕ ಕಾಳಜಿ. ಅವರು ಮಂಡಿಸಿದ್ದು ಅದಕ್ಕೆ ಪೂರಕವಾದ ಹಲವು ವಿಚಾರಗಳು. ಮೇಡ್ ಇನ್ ಇಂಡಿಯಾ ಪರಿಕಲ್ಪನೆ, ವಿದೇಶಿ ಬಂಡವಾಳಕ್ಕೆ ಆಹ್ವಾನ, ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ, ಮಹಿಳಾ ಸುರಕ್ಷೆ, ಬಡತನ ನಿವಾರಣೆಗೆ ಕೈ ಜೋಡಿಸಿ ಎಂದು ನೆರ ರಾಷ್ಟ್ರಗಳಿಗೆ ಕಿವಿ ಮಾತು, ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಕೋರಿಕೆ, ದೇಶಾದ್ಯಂತ ಸ್ವಚ್ಛತೆಗೆ ಆದ್ಯತೆ ಕೊಡಿ ಎಂಬ ಕರೆ, ಹೆಣ್ಣು ಮಕ್ಕಳಿಗಾಗಿ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸಿ ಎಂಬ ಸೂಚನೆ… ಹೀಗೆ ಮೋದಿ ಭಾಷಣದ ಒಟ್ಟಾರೆ ತಿರುಳು ದೇಶದ ಅಭಿವೃದ್ಧಿ ಕುರಿತೇ ಆಗಿತ್ತು. ಇದುವರೆಗೆ ನಡೆದಿರುವ ದ್ವೇಷದ ರಾಜಕೀಯ, ಪ್ರತ್ಯೇಕತಾ ಮನೋಭಾವ, ಭಯೋತ್ಪಾದನೆ ಎಲ್ಲದಕ್ಕೂ ವಿರಾಮ ಹೇಳಿ ಎಲ್ಲರೂ ಒಟ್ಟಾಗಿ ದೇಶ ಕಟ್ಟೋಣ ಎಂಬ ಮೋದಿಯವರ ಮಾತಿನಲ್ಲಿ ಎಂತಹ ಕಟ್ಟರ್ ವಿರೋಧಿಗೂ ತಪ್ಪು ಹುಡುಕಲು ಸಾಧ್ಯವಿರಲಿಲ್ಲ.

ಆದರೂ ಕಾಂಗ್ರೆಸ್ ಮತ್ತಿತರ ಮೋದಿ ವಿರೋಧಿಗಳು ಶೂನ್ಯ ಪ್ರಭಾವದ ಭಾಷಣ, ನಿರಾಸೆ ಮೂಡಿಸಿದ ಭಾಷಣ, ಹೊಸತೇನು ಇಲ್ಲದ ಭಾಷಣ, ಚುನಾವಣಾ ಭಾಷಣದ ಮುಂದುವರಿಕೆ ಮುಂತಾಗಿ ಲೇವಡಿ ಮಾಡಿರುವುದಕ್ಕೆ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ. ಅಂತಹ ಲೇವಡಿಯನ್ನು ಬಿಟ್ಟರೆ ವಿರೋಧಿಗಳಿಗೆ ಮೋದಿ ಭಾಷಣದಲ್ಲಿ ಗಂಭೀರವಾಗಿ ಟೀಕೆಗೆ ಒಳಗಾಗುವ ಯಾವುದೇ ಗಂಭೀರ ಸಂಗತಿಗಳು ದುರ್ಬಿನ್ ಹಾಕಿ ಹುಡುಕಿದರೂ ಸಿಗುವಂತಿರಲಿಲ್ಲ. `ನಾನಿಲ್ಲಿ ಒಬ್ಬ ಪ್ರಧಾನಿಯಾಗಿ ಬಂದಿಲ್ಲ, ಒಬ್ಬ ಪ್ರಧಾನ ಸೇವಕನಾಗಿ ನಿಮ್ಮ ಮುಂದೆ ನಿಂತಿದ್ದೇನೆ’ ಎಂಬ ಅವರ ಮೊದಲ ವಾಕ್ಯವೇ ಕೇಳುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತ್ತು. `ಬಹುಮತದಿಂದಲ್ಲ, ಆದರೆ ಎಲ್ಲರ ಸಹಮತದೊಂದಿಗೆ ಆಡಳಿತ ನಡೆಸಬೇಕೆಂಬುದು ನಮ್ಮ ಗುರಿ’ ಎಂಬ ಮಾತು ಯಾವ ವಿರೋಧಿಗೆ ತಾನೆ ಇಷ್ಟವಾಗುವುದಿಲ್ಲ? `ಶೌಚಾಲಯದ ಬಗ್ಗೆ , ಕಸ ನಿರ್ಮೂಲನೆಯ ಬಗ್ಗೆ ಈ ಕೆಂಪುಕೋಟೆಯ ಮೇಲೆ ನಿಂತು ಮಾತನಾಡಿದರೆ ಜನ ನನ್ನನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಬಡ ಕುಟುಂಬದಿಂದ ಬಂದವನು. ನನಗೆ ಶೌಚಾಲಯದ ಮಹತ್ವದ ಅರಿವಿದೆ. ಇಡೀ ದೇಶದಲ್ಲಿ ಶೌಚಾಲಾಯ ವ್ಯವಸ್ಥೆ ಜಾರಿಗೊಳ್ಳಲಿ ಎಂಬುದು ನನ್ನ ಅಭಿಲಾಷೆ. ನಮ್ಮ ಮಹಿಳೆಯರು ಶೌಚಕ್ಕಾಗಿ ಕತ್ತಲಾಗುವವರೆಗೆ ಕಾಯಬೇಕಾದ ದುಸ್ಥಿತಿ ಇನ್ನಾದರೂ ನಿಲ್ಲಲಿ. ಅವರ ಸುರಕ್ಷತೆಗಾಗಿ ಶೌಚಾಲಯ ವ್ಯವಸ್ಥೆಯನ್ನು ನಾವು ಮಾಡಲೇಬೇಕಿದೆ…’ ಎಂಬ ಕಳಕಳಿಯ ಮಾತನ್ನು ಧಿಕ್ಕರಿಸಲು ಯಾರಿಗೆ ತಾನೆ ಧೈರ್ಯ ಬರುತ್ತದೆ?

ಪ್ರಧಾನಿ ಮೋದಿ ಭಾಷಣದ ಕುರಿತು ಪ್ರತಿಕ್ರಿಯಾತ್ಮಕ ಲೇಖನ ಬರೆದ ಖ್ಯಾತ ಲೇಖಕಿ ಶೋಭಾ ಡೇ ಹೇಳಿದ್ದು: If even a single mother(or father) starts to think more deeply about bringing up a better son after listening to Modi’s speech, it will be a major triumph. If even a single rape is prevented  because of his message, it will be his biggest contribution to transforming India. ಅಂದಹಾಗೆ ಶೋಭಾ ಡೇ ಮೋದಿಯವರ ಅಭಿಮಾನಿಯೇನಲ್ಲ. ಆಗಾಗ ಅವರನ್ನು `ಕೋಮುವಾದಿ’, `ಸರ್ವಾಧಿಕಾರಿ’ ಇತ್ಯಾದಿಯಾಗಿ ನಿಂದಿಸಿದ ಲೇಖಕಿ!

ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಿ 68 ವರ್ಷಗಳ ದೀರ್ಘಕಾಲ ಗತಿಸಿದ್ದರೂ ಪ್ರಧಾನಿಯೊಬ್ಬರು ತಮ್ಮ ಭಾಷಣದಲ್ಲಿ ದೇಶಾದ್ಯಂತ ಶೌಚಾಲಯ ವ್ಯವಸ್ಥೆ ಕುರಿತು ಮಾತನಾಡಬೇಕಾಗಿ ಬಂದಿರುವುದು ನಮ್ಮ ಕೆಟ್ಟ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ. ಶೌಚಾಲಯ, ಸ್ವಚ್ಛತೆ – ಇವೆಲ್ಲ ಅನಿವಾರ್ಯ ಮೂಲಭೂತ ಸಂಗತಿಗಳು. ಆದರೆ ನಮ್ಮ ದೇಶದಲ್ಲಿ ಅದಕ್ಕೇ ತತ್ವಾರ! ಸ್ವಚ್ಛ ಭಾರತ, ಶೌಚಾಲಯಯುಕ್ತ ಭಾರತ ಈಗಲೂ ಕನಸಾಗಿಯೇ ಉಳಿದಿರುವುದು ದೇಶದ ದೌರ್ಭಾಗ್ಯ. ಶಾಲೆಗಳಲ್ಲೂ ಕೂಡ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲವೆಂದರೆ ನಾವು ಇಷ್ಟು ವರ್ಷಗಳ ಆಡಳಿತದಲ್ಲಿ ಕಡಿದು ಕಟ್ಟೆ ಹಾಕಿದ್ದರೂ ಏನು? ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಜಮ್ಮುಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ತಮಿಳುನಾಡು, ತೆಲಂಗಾಣ, ಪಶ್ಚಿಮಬಂಗಾಳ ಮೊದಲಾದ ರಾಜ್ಯಗಳ ಶಾಲೆಗಳಲ್ಲಿ ಈಗಲೂ ಬಾಲಕರಿಗೆ, ಬಾಲಕಿಯರಿಗೆ ಶೌಚಾಲಯಗಳ ವ್ಯವಸ್ಥೆ ತೀರಾ ಕಡಿಮೆ ಸಂಖ್ಯೆಯಲ್ಲಿದೆ. ಅಸ್ಸಾಂನ 50,186 ಶಾಲೆಗಳ ಪೈಕಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವ ಶಾಲೆಗಳು 6890, ಬಾಲಕರಿಗೆ ಪ್ರತ್ಯೇಕ ಶೌಚಾಲಯ ಇಲ್ಲದಿರುವ ಶಾಲೆ 16,255. ಪಶ್ಚಿಮ ಬಂಗಾಳದಲ್ಲಂತೂ 81,915 ಶಾಲೆಗಳ ಪೈಕಿ 13,608 ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯ ವ್ಯವಸ್ಥೆಯೇ ಇಲ್ಲ. ಬಹುತೇಕ ಶಾಲೆಗಳಲ್ಲಿ ಶೌಚಾಲಯವಿದೆ, ಆದರೆ ಅಲ್ಲಿ ಸ್ವಚ್ಛತೆಯೇ ಇಲ್ಲ. ಹೀಗಿರುವಾಗ ಇಂತಹ ಶಾಲೆಗಳಿಗೆ ಪಾಠ ಕಲಿಯಲು ಹೋಗಬೇಕೆಂದು ಮಕ್ಕಳಿಗೆ ಅನಿಸುವುದಾದರೂ ಹೇಗೆ?

ಇನ್ನು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳೇನೋ ಇವೆ. ಆದರೆ ಅವು ಬಳಕೆಗೆ ಖಂಡಿತ ಯೋಗ್ಯವಾಗಿರುವುದಿಲ್ಲ. ಸ್ವಚ್ಛತೆ ಅಲ್ಲಿರುವುದೇ ಇಲ್ಲ. ಶೌಚಾಲಯಗಳ ನಿರ್ವಹಣೆ ಬಹುತೇಕ ಕಡೆಗಳಲ್ಲಿ ಅತ್ಯಂತ ಕಳಪೆ. ಅಲ್ಲದೆ ಶೌಚಾಲಯದ ಗೋಡೆ ಮೇಲೆ ಕಿಡಿಗೇಡಿಗಳ ಅಶ್ಲೀಲ ಬರಹಗಳು ಬೇರೆ. ರೈಲ್ವೇ ನಿಲ್ದಾಣಗಳಲ್ಲಿ ರೈಲಿಗೆ ಕಾಯುವುದೆಂದರೆ ಅದೊಂದು ಯಮಯಾತನೆ. ಅದಕ್ಕೆ ಕಾರಣ ಹಳಿಗಳ ಮೇಲೆ, ಸುತ್ತಮುತ್ತ ಹರಡಿರುವ ಕೊಳಕು, ಗಲೀಜು, ದುರ್ನಾತ. ಹೀಗಿರುವುದಕ್ಕೆ ರೈಲ್ವೇ ಇಲಾಖೆಯೊಂದನ್ನೇ ದೂರುವುದು ತಪ್ಪಾಗುತ್ತದೆ. ಸ್ವಚ್ಛತೆ ಕಾಪಾಡಬೇಕಾದ ಪ್ರಯಾಣಿಕರೇ ಅದರ ಬಗ್ಗೆ ಮುತುವರ್ಜಿ ವಹಿಸದಿದ್ದರೆ ರೈಲ್ವೇ ಇಲಾಖೆ ಏನು ತಾನೆ ಮಾಡಲು ಸಾಧ್ಯ? ರೈಲಿನಲ್ಲಿ ತಾವು ತಿಂದ ತಿಂಡಿಯ ಚೂರುಗಳು, ಇನ್ನಿತರ ತ್ಯಾಜ್ಯವಸ್ತುಗಳನ್ನು ರೈಲ್ವೇ ಹಳಿಗಳ ಮೇಲೆ ಅಥವಾ ರೈಲು ಡಬ್ಬಿಯೊಳಗೆ ಎಸೆಯಬಾರದೆಂಬ ಕನಿಷ್ಠ ತಿಳಿವಳಿಕೆ ನಮ್ಮ ಜನರಿಗೆ ಇನ್ನೂ ಬಂದಿಲ್ಲ. ಬಾಯಿ ತುಂಬಾ ಕವಳ ಹಾಕಿದವರಿಗೆ ಅದನ್ನು ಎಲ್ಲೆಂದರಲ್ಲಿ ಉಗುಳಬಾರದೆಂಬ ಅರಿವು ಇಲ್ಲವೇ ಇಲ್ಲ. ಬಸ್ಸು, ರೈಲು ಅಥವಾ ಇನ್ನಿತರ ವಾಹನದೊಳಗೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ಅರಿವು ಕೂಡ ಇನ್ನೂ ಬಂದಿಲ್ಲ. ಪ್ರಧಾನಿ ಮೋದಿ ಸ್ವಚ್ಛ ಭಾರತದ ಬಗ್ಗೆ ಯಾಕೆ ತಮ್ಮ ಭಾಷಣದಲ್ಲಿ ಆಗ್ರಹಿಸಿದ್ದಾರೆ ಎಂಬುದನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾದ ಅಗತ್ಯವಿದೆ.

ಗಾಂಧೀಜಿ ಸ್ವಚ್ಛತೆಗೆ ತುಂಬಾ ಅಗ್ರಹ ನೀಡುತ್ತಿದ್ದರು. ಸ್ವಚ್ಛ ಬದುಕು, ಸ್ವಾಸ್ಥ್ಯಪೂರ್ಣ ಸಮಾಜ ಇರಬೇಕೆಂದು ಅವರು ಬಯಸಿದ್ದರು.ಮೋದಿ ಕೂಡ ಈಗ ಬಯಸುವುದು ಅದನ್ನೇ. ಮೊದಲು ನಾವು ಸ್ವಚ್ಛವಾಗಿರುವುದನ್ನು ಕಲಿತರೆ ನಮ್ಮ ಬದುಕು ಕೂಡ ಸ್ವಚ್ಛವಾಗಿರಬಲ್ಲದು. ಆದರೆ ಸ್ವಚ್ಛತೆಗೆ ಆದ್ಯತೆ ನೀಡುವುದನ್ನು ನಾವೆಲ್ಲರೂ ಕಲಿಯಬೇಕಷ್ಟೇ. ಚಿತ್ರದುರ್ಗದ ಮಲ್ಲಾಡಿ ಹಳ್ಳಿಗೆ ಶಾಲೆ ಶುರುಮಾಡಲೆಂದು ಬಂದ ರಾಘವೇಂದ್ರ ಸ್ವಾಮಿ ಮೊದಲು ಮಾಡಿದ ಕೆಲಸ – ಆ ಹಳ್ಳಿಯ ಪ್ರತಿಯೊಂದು ಮನೆಯ ಮುಂದೆ ಇದ್ದ ಕಸ ಗುಡಿಸಿ, ನೀರು ಚುಮುಕಿಸಿ ಸ್ವಚ್ಛಗೊಳಿಸಿದ್ದು. ಜನರು ಬೆಳಿಗ್ಗೆ ಏಳುವ ಮುನ್ನವೇ ಸ್ವಾಮೀಜಿ ಈ ಕೆಲಸ ಮಾಡುತ್ತಿದ್ದರು. ಜನರಿಗಂತೂ ಖುಷಿಯೋ ಖುಷಿ. ಒಂದಷ್ಟು ದಿನ ಈ ಕೆಲಸ ಮಾಡಿದ ಸ್ವಾಮೀಜಿ ಇನ್ನು ಮುಂದೆ ಜನರು ತಾವಾಗಿಯೇ ಮನೆಯ ಮಂದೆ ಗುಡಿಸಿ ಸ್ವಚ್ಛಗೊಳಿಸಿ ಕೊಳ್ಳುತ್ತಾರೆಂದು ಆಶಿಸಿದ್ದರು. ಹಾಗಾಗಿ ಅವರು ಒಂದೆರಡು ದಿನ ಅತ್ತ ಕಡೆ ಮುಖ ಹಾಕಲಿಲ್ಲ. ಆದರೆ ಜನರಿಗೆ ತಮ್ಮ ಮನೆಯ ಮುಂದೆ ಸ್ವಚ್ಛ ಮಾಡಲು ಸ್ವಾಮೀಜಿ ಏಕೆ ಬರಲಿಲ್ಲ ಎಂಬ ಪ್ರಶ್ನೆ ಕಾಡಿತೇ ಹೊರತು ತಮ್ಮ ಮನೆಯ ಮುಂದೆ ಸ್ವಚ್ಛತೆ ನಿರ್ವಹಿಸುವುದು ತಮ್ಮದೇ ಹೊಣೆ ಎಂದು ಅನಿಸಲಿಲ್ಲ. ಜನರ ಈ ಸೋಮಾರಿತನವನ್ನು ಕಂಡು ಸ್ವಾಮೀಜಿ ನಿರಾಶರಾಗದೆ ಇರಲು ಸಾಧ್ಯವೇ? ಜನರ ಮನೋಭಾವದಲ್ಲಿ ಮೂಲಭೂತ ಪರಿವರ್ತನೆ ಆಗದ ಹೊರತು ಸ್ವಚ್ಛ ಭಾರತ, ಶೌಚಾಲಯಯುಕ್ತ ಭಾರತದ ಕನಸು ನನಸಾಗಲು ಸಾಧ್ಯವಿಲ್ಲ.

ಪ್ರಧಾನಿ ಮೋದಿ ಅವರಂತೂ ಹೊಂಗನಸುಗಳನ್ನು ಬಿತ್ತಿದ್ದಾರೆ. ಆ ಹೊಂಗನಸುಗಳನ್ನು ನನಸುಗೊಳಿಸುವುದಕ್ಕೆ ಸರ್ಕಾರದ ಪ್ರಯತ್ನದ ಜೊತೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ. ಅದಕ್ಕಾಗಿ ದೇಶದ 125 ಕೋಟಿ ಜನರು ಒಂದು ಹೆಜ್ಜೆಯನ್ನು ಮುಂದಿಡಬೇಕು. ಅಷ್ಟನ್ನಾದರೂ ಮಾಡಲಾರೆವೆ?

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top