ಕಾರ್ಕಳ: ಸಮುದಾಯದ ಬದ್ಧತೆಯನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಪರಸ್ಪರ ಒಬ್ಬರಿಗೊಬ್ಬರು ನಂಬಿಕೆಯನ್ನಿರಿಸಿ ಕಾರ್ಯನಿರ್ವಹಿಸಿದಾಗ, ಸಾಮಾಜಿಕ ಕಳಕಳಿಯನ್ನು ಮೆರೆಯಲು ಸಾಧ್ಯವಾಗುತ್ತದೆ. ವೃದ್ದಾಶ್ರಮದ ಚಿಂತನೆಗಳಿಗಿಂತ ಮುನ್ನ ನಾವೆಲ್ಲರೂ ಹಿರಿಯರನ್ನು ಗೌರವಿಸಿ, ಹೆತ್ತವರನ್ನು ಚೆನ್ನಾಗಿ ನೋಡಿಕೊಂಡಲ್ಲಿ ಈ ವೃದ್ದಾಶ್ರಮದ ಪರಿಕಲ್ಪನೆಗೆ ಮಹತ್ವ ನೀಡಬೇಕಾಗಿಲ್ಲ ಎಂದು ಮಂಗಳೂರು ವಿವಿಯ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ವಿ.ಶೆಣೈ ಹೇಳಿದರು.
ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಸರಸ್ವತಿ ಮಂಜುನಾಥ ಪೈ ಸಭಾಭನದಲ್ಲಿ ಭಾನುವಾರ ಆಯೋಜಿಸಲಾದ ಕಾರ್ಕಳ ತಾಲೂಕು ಮಟ್ಟದ ಬೃಹತ್ ಜಿಎಸ್ಬಿ ಸಾಮಾಜಿಕ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳೇ ಬೇರು ಹೊಸ ಚಿಗುರು ಎಂಬಂತೆ ಹಿರಿಯರು, ಕಿರಿಯರು ಒಂದಾಗಿ ಸಮುದಾಯದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.
ಕಾರ್ಕಳ ಶ್ರೀ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು ಸಮವೇಶವನ್ನು ಉದ್ಘಾಟಿಸಿ, ಜಿಎಸ್ಬಿ ಸಮುದಾಯವು ಸುಸಂಸ್ಕೃತರು. ಪ್ರತಿಯೊಂದು ಕ್ಷೇತ್ರದಲ್ಲೂ ಮಾರ್ಗದರ್ಶನ ನೀಡುವಂತಹ ಸಾಮರ್ಥ್ಯ ಹೊಂದಿದವರು. ಅಂತಹ ಸಮಾಜವು ಒಗ್ಗೂಡಿ ಕಾರ್ಯನಿರ್ವಹಿಸಲು ಇಂತಹ ಸಮಾವೇಶಗಳು ಸಹಕಾರಿಯಾಗಬಲ್ಲುವುದು ಎಂದರು. ನಾವು ನಿರ್ವಹಿಸುವ ಕಾರ್ಯದಲ್ಲಿ ಸಮಾಜದ ಎಲ್ಲರನ್ನು ಸಂತೃಪ್ತರನ್ನಾಗಿಸಲು ಸಾಧ್ಯವಿಲ್ಲ. ಸಮಾಜಕ್ಕೆ ಪೂರಕವಾಗಿ ಸ್ಪಂದಿಸುವ ಮೂಲಕ ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ಚಿಂತನೆಯನ್ನು ನಾವೆಲ್ಲರೂ ಒಗ್ಗೂಡಿ ಮಾಡಬೇಕಾಗಿದೆ ಎಂದರು.
ಉಡುಪಿ ಹನುಮಾನ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಪಾಂಗಾಳ ವಿಲಾಸ್ ನಾಯಕ್ ಮಾತನಾಡಿ, ಪಾರಂಪರಿಕ ಉದ್ಯೋಗದಲ್ಲಿ ಸಿಗುವ ಸಂತಸ ಖಾಸಗಿ ಉದ್ಯೋಗದಲ್ಲಿಲ್ಲ. ಪ್ರಸ್ತುತ ಹಿರಿಯರು ಮತ್ತು ಕಿರಿಯರ ನಡುವೆ ನಿರ್ಮಾಣವಾಗಿರುವ ಅಂತರವನ್ನು ದೂರ ಮಾಡುವ ಪ್ರಯತ್ನವಾಗಬೇಕಾಗಿದೆ. ನಮ್ಮ ಜಿಲ್ಲೆಯಲ್ಲಿ ಬ್ಯಾಂಕಿಂಗ್, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಜಿಎಸ್ಬಿ ಸಮುದಾಯವು ಹಾಕಿದ ಅಡಿಪಾಯವು ಇತರ ಸಮಾಜದ ಅಭಿವೃದ್ದಿಗೂ ಸಹಕಾರಿಯಾಗಿರುವುದನ್ನು ಅವರು ಇಲ್ಲಿ ಸ್ಮರಿಸಿದರು.
ಮಂಗಳೂರು ವಿಶೇಷ ವಿತ್ತ ವಲಯದ ಇನ್ಫ್ರಾಸ್ಟ್ರಕ್ಚರ್ ಪಾಲುದಾರ, ಉದ್ಯಮಿ ಕಾಂಜರಕಟ್ಟೆ ಕೆ.ಸಿ.ಕಾಮತ್ ಮಾತನಾಡಿ, ಅಭಿಪ್ರಾಯ ಬೇಧ ಎಲ್ಲೆಡೆ ಸಹಜ. ಅವೆಲ್ಲವನ್ನು ಸರಿದೂಗಿಸಿ ಮುನ್ನಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಜಿಎಸ್ಬಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ, ಅಧ್ಯಕ್ಷ ಸತೀಶ್ ಹೆಗ್ಡೆ ಕೋಟ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಮಹಿಳಾ ಪ್ರತಿನಿಧಿ ರಾಧಾ ವಿ.ಶೆಣೈ, ವೆಂಕಟೇಶ್ ಬಾಳಿಗ, ಡಾ. ದೇವದಾಸ್ ಪೈ, ಸರ್ವೋತ್ತಮ ಕಾಮತ್, ರಮಾನಾಥ ಶೆಣೈ, ಗುಂಡುರಾಯ ನಾಯಕ್, ದೇವದಾಸ್ ಪ್ರಭು, ಪ್ರಭಾಕರ್ ನಾಯಕ್, ರಾಮಕೃಷ್ಣ ನಾಯಕ್, ಸುಧೀಶ್ ಶೆಣೈ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮ್ಮೇಳಾನಾಧ್ಯಕ್ಷ ದಂಪತಿಯನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ಮಂಗಳೂರಿನ ಖ್ಯಾತ ಲೆಕ್ಕಪರಿಶೋಧಕ ಜಿ.ನಂದಗೋಪಾಲ ಶೆಣೈ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸತೀಶ್ ಹೆಗ್ಡೆ ಕೋಟ ಪ್ರಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಪೈ ವಂದಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಿದ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಜಿಎಸ್ಬಿ ಹಿತರಕ್ಷಣಾ ವೇದಿಕೆಯು ಹಮ್ಮಿಕೊಂಡ ಜನಪರ ಯೋಜನೆಗಳಿಂದ ಆ ಸಮುದಾಯದ ಅಭಿವೃದ್ದಿಗೆ ಹೊಸ ಚಿಂತನೆಗಳು ಆರಂಭಗೊಂಡಿರುವುದು ಶ್ಲಾಘನೀಯ ಎಂದರು. ಶಾಸಕರ ಜತೆ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಹಾವೀರ ಹೆಗ್ಡೆ ಭಾಗವಹಿಸಿದ್ದರು.
ಡಯಾಲಿಸ್ ಯಂತ್ರ ಕೊಡುಗೆ :
ಸಭೆಯಲ್ಲಿ ಭಾಗವಹಿಸಿದ ಜಿ.ನಂದಗೋಪಾಲ ಶೆಣೈ ಅವರು 6.50 ಲಕ್ಷ ರೂ. ವೆಚ್ಚದ ಡಯಾಲಿಸಿಸ್ ಯಂತ್ರವನ್ನು ಜಿಎಸ್ಬಿ ಹಿತರಕ್ಷಣಾ ವೇದಿಕೆಯ ಮೂಲಕ ಕೊಡುಗೆಯಾಗಿ ನೀಡಲಿದ್ದು, ಅದಕ್ಕೆ ಬೇಕಾದ ಸ್ಥಳಾವಕಾಶವನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಶಾಸಕರು ಒದಗಿಸಿಕೊಡುವಂತೆ ಮನವಿ ಮಾಡಿದರು. ಅವರಿಗೆ ಮನವಿಗೆ ಶಾಸಕರು ಸ್ಪಂದಿಸುವ ಭರವಸೆ ನೀಡಿದರು.
ವೈಭವದ ಶೋಭಯಾತ್ರೆ
ಸಮಾವೇಶದ ಪೂರ್ವಭಾವಿಯಾಗಿ ವೈಭವದ ಶೋಭಯಾತ್ರೆ ನಡೆಯಿತು. ಪೂರ್ವಾಹ್ನ ೯ ಗಂಟೆಗೆ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಳದಲ್ಲಿ ವಿಶೇಷ ದೇವತಾ ಪ್ರಾರ್ಥನೆ ನಡೆಯಿತು. ಬಳಿಕ ಶ್ರೀ ವೆಂಕಟರಮಣ ದೇವಸ್ಥಾನದಿಂದ ಸಮಾವೇಶ ನಡೆಯಲಿರುವ ಶ್ರೀ ಬಿ. ಮಂಜುನಾಥ ಪೈ ಸಭಾಭವನದವರೆಗೆ ಬೃಹತ್ ಶೋಭಾಯಾತ್ರೆಯು ಸಾಗಿಬಂತು. ಕಾರ್ಕಳ ತಾಲೂಕಿನ ಮೂಲೆ ಮೂಲೆಗಳಿಂದ ಆಗಮಿಸಿದ ಸುಮಾರು 5 ಸಾವಿರಕ್ಕೂ ಮಿಕ್ಕಿದ ಜಿಎಸ್ಬಿ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.