ಮನುಜ ತನ್ನ ಹುಟ್ಟಿನಿಂದ ಎಷ್ಟು ಬೆಳೆಗಳನ್ನು ಬೆಳೆದು ತನ್ನ ಕೃಷಿಗೆ ಉಪಯೋಗಿಸುತ್ತಿದ್ದಾನೆಯೋ, ಎಷ್ಟು ಪ್ರಾಣಿಗಳನ್ನು ತನ್ನ ಕೃಷಿ ಹಾಗೂ ದೈನಂದಿನ ಅನಕೂಲಕ್ಕೆ ಪಳಗಿಸಿ ಉಪಯೋಗಿಸುತ್ತಿದ್ದಾನೆಯೋ, ಅವೆಲ್ಲವನ್ನು ನಾವು ಗಣನೆಗೆ ತಗೆದುಕೊಂಡರೆ, ಅವನು ಅರಣ್ಯಲ್ಲಿರುವ ಕೇವಲ 10% ಸಸ್ಯ ಹಾಗೂ ಪ್ರಾಣಿ ಸಂಕುಲಗಳ ಮಾಹಿತಿ ಹೊಂದಿದ್ದಾನೆ ಎಂದೇ ಅರ್ಥ. ಮಾನವನಿಗೆ ಅರಣ್ಯದಲ್ಲಿರುವ ಇನ್ನೂ 90% ಜೀವಿಸಂಕುಲದ ಪರಿಚಯ ಆಗಬೇಕಿದೆ. ಹೀಗಾಗಿ, ಅರಣ್ಯ ಎಂಬುವುದು, ಒಂದು ದೇಶದ ನಿಜವಾದ ನೈಸರ್ಗಿಕ ಸಂಪತ್ತು. ಇದನ್ನು ನಮ್ಮ ಭಾರತ ದೇಶದಲ್ಲಿ ದಿನ ನಿತ್ಯ ಕುಗ್ಗಿಸುತ್ತಾ ಬಂದಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಅರಣ್ಯಗಳು ಉಳಿಯಬೇಕಾದರೆ ಸಸ್ಯ ಮತ್ತು ಪ್ರಾಣಿ ಸಂಕುಲದ ಪಾತ್ರ ಬಹುಮುಖ್ಯ. ಆದ್ದರಿಂದ ಇಂದಿನ ಯುವಜನಾಂಗ ಅರಣ್ಯದ ಮಹತ್ವವನ್ನು ತಿಳಿದು ಅದರ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಧಕ್ಕೆಯಾಗದಂತೆ ತಮ್ಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕೆಂದು ಧಾರವಾಡದ ಮುಖ್ಯ ಅರಣ್ಯ ಸಂರಕ್ಷಕರಾದ ಶ್ರೀ ಟಿ.ವಿ. ಮಂಜುನಾಥ ನೇಚರ್ ರಿಸರ್ಚ್ ಸೆಂಟರ್ ಮತ್ತು ನೇಚರ್ ಫಸ್ಟ್ ಇಕೋ ವಿಲೇಜ್ ಜಂಟಿಯಾಗಿ ಧಾರವಾಡದ ಆರ್.ಕೆ.ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ’ಅರಣ್ಯದಲ್ಲಿ ಜೀವಿ-ವೈವಿಧ್ಯತೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದ ಉದ್ಘಾಟಕರಾಗಿ ನೆರೆದಂತಹ ವಿದ್ಯಾರ್ಥಿಗಳಿಗೆ ಈ ಕರೆಯನ್ನು ನೀಡಿದರು. ಅಷ್ಟೇ ಅಲ್ಲದೇ, ಅರಣ್ಯದಲ್ಲಿ ಒಂದು ಹುಲ್ಲುಕಡ್ಡಿಯಿಂದ ಹಿಡಿದು ಹುಲಿಯವರೆಗೂ ಇರುವ ಜೀವಿ-ಸಂಕುಲಕ್ಕೆ ತನ್ನದೇ ಆದ ಕೊಡುಗೆ ಇದೆ. ಹುಲಿಯೂ ಸಹಿತ ಹುಲ್ಲು ಕಡ್ಡಿಯನ್ನು ತಿನ್ನುತ್ತದೆ ಆದರೆ ಜಿಂಕೆಯ ಮೂಲಕ. ಒಂದು ಆನೆ ಒಂದು ದಿನಕ್ಕೆ, 150 ಕೆ.ಜಿ ಆಹಾರ, 200 ಲೀಟರ್ ನೀರು ಸೇವಿಸುವುದನ್ನಷ್ಟೇ ಅಲ್ಲದೇ, ಒಂದು ವರ್ಷದಲ್ಲಿ ಅದು 500ಕ್ಕೂ ಹಚ್ಚು ಸಸ್ಯ ಸಂಕುಲವನ್ನು ತನ್ನ ಆಹಾರದಲ್ಲಿ ಉಪಯೋಗಿಸಿರುತ್ತದೆ. ಅದರ ಮಲಮೂತ್ರ ಅರಣ್ಯದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ನಮ್ಮ ದೇಶದಲ್ಲಿ ಹರಿಯುವ ಎಲ್ಲ ನದಿಗಳ ಉಗಮ ಆಗುವುದು ಈ ಅರಣ್ಯಗಳಲ್ಲಿಯೇ. ಉತ್ತಮ ಮಳೆ ಆಗಲು, ಆಮ್ಲಜನಕದ ಉತ್ಪಾದನೆ ಮಾಡಲು ಅರಣ್ಯದಲ್ಲಿರುವ ಮರಗಳದ್ದು ಅಮೂಲ್ಯವಾದ ಪಾತ್ರ. ಹಾಗೆಯೇ, ಚಲಿಸಲು ಬಾರದ ಈ ಮರಗಳ ಪರಾಗಸ್ಪರ್ಶ ಕ್ರಿಯೆಯಾಗಲು, ಅವುಗಳ ಬೀಜದ ಪ್ರಸರಣವಾಗಲೂ ಹಾಗೂ ಮರಗಳಿಗೆ ಬೇಕಾದ ಪೋಷಕಾಂಶಗಳನ್ನು ನೀಡುವಲ್ಲಿ ಪ್ರಾಣಿ ಹಾಗೂ ಪಕ್ಷಿ ಸಂಕುಲದ ಪಾತ್ರ ಅತ್ಯಗತ್ಯ. ಹೀಗಾಗಿ ಮನುಜನ ಉಳಿವಿಗೆ ಅತಿ ಅಗತ್ಯವಾದ ಅರಣ್ಯ ಉಳಿಯಲು ಸಸ್ಯ ಹಾಗೂ ಪ್ರಾಣಿ ಸಂಕುಲವನ್ನು ನಶಿಸದಂತೆ ಕಾಯ್ದುಕೊಂಡು ಹೋಗುವುದು ಎಲ್ಲರ ಪ್ರಮುಖ ಗುರಿಯಾಗಬೇಕೆಂದು ನೆರೆದಂತಹ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ತಿಳಿಸಿದರು.
ನೇಚರ್ ಫಸ್ಟ್ ಇಕೋ ವಿಲೇಜಿನ ಸಂಸ್ಥಾಪಕರಾದ ಶ್ರೀ ಪಿ.ವಿ.ಹಿರೇಮಠ ಮಾತನಾಡಿ ಕೇವಲ 25 ವರ್ಷಗಳ ಹಿಂದೆ 37% ಇದ್ದ ಭಾರತದ ಅರಣ್ಯ ಸಂಪತ್ತು, ಪ್ರಸಕ್ತ ವರ್ಷ 20% ಗೆ ಇಳಿದಿದ್ದು, 25 ವರ್ಷಗಳ ಹಿಂದೆ ಧಾರವಾಡ ಜಲ್ಲೆಯಲ್ಲಿ ಆಗುತ್ತಿದ್ದ 1200 ಮಿ.ಮಿ. ಮಳೆಯೂ ಈ ಪ್ರಸಕ್ತ ವರ್ಷ 500 ಮಿ.ಮಿ. ಗೂ ಕಡಿಮೆಯಾಗಿದ್ದು, ಹೀಗೆ ನಮ್ಮ ಅರಣ್ಯ ಸಂಪತ್ತನ್ನು ನಾವು ನಾಶ ಪಡಿಸುತ್ತ ಹೋದಲ್ಲಿ ನಾವು ಮರಭೂಮಿಯನ್ನು ನೋಡಲು, ದೂರದ ರಾಜ್ಯಕ್ಕೆ ಹೋಗುವ ಅವಷ್ಯಕತೆ ಇಲ್ಲ ಎಂದು ಬಹು ಮಾರ್ಮಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ನೇಚರ್ ರಿಸರ್ಚ್ ಸೆಂಟರ್ನ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ ಬೈರಪ್ಪನವರ ಹಾಗೂ ಆರ್.ಕೆ. ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜಶ್ರೀ ಎಚ್.ಎಸ್. ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ನೇಚರ್ ರಿಸರ್ಚ್ ಸೆಂಟರ್ನ ಕಾರ್ಯದರ್ಶಿ ಪ್ರಕಾಶ ಗೌಡರ ನಿರೂಪಿಸಿದರೆ, ಖಜಾಂಚಿ ಡಾ. ಧೀರಜ್ ವೀರನಗೌಡರ ಪರಿಚಯ ಹಾಗೂ ಸಹ ಕಾರ್ಯದರ್ಶಿ ಅನೀಲ ಅಳ್ಳೊಳ್ಳಿ ವಂದಿಸಿದರೆ, ವಿದ್ಯಾರ್ಥಿನಿಯರಾದ ಕುಮಾರಿ ಪ್ರಿಯಾಂಕ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.