ಬೆಳ್ತಂಗಡಿ: ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭವಾಗಿ ರೈತರಿಗೆ ಹೆಚ್ಚಿನ ಪ್ರಯೊಜನವಾಗಿದೆ. ಹಿಂದೆ ಸರಕಾರ ರೈತರು ಅನಾಹುತಕ್ಕೊಳಗಾದಲ್ಲಿ ಅರ್ಧಾಂಶ ಪರಿಹಾರ ನೀಡುತ್ತಿದ್ದು, ಅದನ್ನು ಈಗಿನ ಸರಕಾರ ದುಪ್ಪಟ್ಟುಗೊಳಿಸಿದೆ. ಬೆಳ್ತಂಗಡಿ ಎ.ಪಿ.ಎಂ.ಸಿ.ಯ ಅಭಿವೃದ್ಧಿ ಕಾಮಗಾರಿಗೆ 2.5ಕೋ. ರೂ. ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದ್ದು ಶೀಘ್ರ ಮಂಜೂರಾತಿಗೆ ಪ್ರಯತ್ನಿಸುತ್ತೇನೆ. ರೈತರು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಶನಿವಾರ ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ರೈತ ಸಂಜೀವಿನಿ ಅಪಘಾತ ವಿಮೆಯಡಿ ಎರಡು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹೆಚ್. ಕೆ. ಕೃಷ್ಣ ಮೂರ್ತಿ ಮಾತನಾಡಿ ಇದುವರೆಗೆ 108ಪ್ರಕರಣಗಳಲ್ಲಿ 26.60 ಲಕ್ಷ ಪರಿಹಾರ ನೀಡಲಾಗಿದೆ. ಸರಕಾರ ರೈತರು ಕೃಷಿ ಕೆಲಸದಲ್ಲಿ ನಿರತರಾಗಿರುವಾಗ ಮೃತ ಪಟ್ಟರೆ 50 ಸಾವಿರ ನೀಡುತ್ತಿದ್ದು, ಇದನ್ನು 75ಸಾವಿರ ರೂ.ಗಳಿಗೆ ಏರಿಸಿದೆ. ಅಂಗವೈಕಲ್ಯ ಉಂಟಾದರೆ ಇದರ ಪರಿಹಾರವನ್ನು 2 ಪಟ್ಟು ಹೆಚ್ಚಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಳಾಲು ಸುರುಳಿ ಮನೆ ನಿವಾಸಿ ಲಕ್ಷ್ಮಣ ಗೌಡ ಎಂಬವರು ಮರದಿಂದ ಬಿದ್ದಿದ್ದು, 30 ಸಾವಿರ ಹಾಗೂ ಕಲ್ಲೇರಿ ಉರುವಾಲು ಮುಂಡೆಚ್ಚಿ ನಿವಾಸಿ ನಳಿನಾಕ್ಷಿ ಎಂಬವರು ತೋಟದಲ್ಲಿ ಅಡಿಕೆ ಹೆಕ್ಕುವಾಗ ಆಕಸ್ಮಿಕವಾಗಿ ಕಾಲುಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದು ಇವರಿಗೆ 75ಸಾವಿರ ರೂ. ಪರಿಹಾರ ಚೆಕ್ ವಿತರಿಸಲಾಯಿತು.
ಎಪಿಎಂಸಿ ಅಧ್ಯಕ್ಷ ಧರಣೇಂದ್ರ ಕುಮಾರ್, ಉಪಾಧ್ಯಕ್ಷ ಲಕ್ಷ್ಮಣ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಾಮಚಂದ್ರ ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.