ಉಡುಪಿ : ಸಾಸ್ತಾನ ಮಿತ್ರರು, ಗೀತಾನಂದ ಫೌಂಡೇಶನ್ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್(ರಿ) ಇವರ ಜಂಟಿ ಆಶ್ರಯದಲ್ಲಿ ಮಾರುತಿ ವಿಥಿಕಾದಲ್ಲಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಛೇರಿ ಮುಂಭಾಗ, ಡಿ. 29 ರಂದು ಹಮ್ಮಿಕೊಂಡ ಸಮಾರಂಭದಲ್ಲಿ, ಹಸಿರು ಅಭಿಯಾನ ಸೈಕಲ್ ರಥಯಾತ್ರೆಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿಯವರು, ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪರಿಸರವನ್ನು ಹಸಿರುಗೊಳಿಸುವ ಪ್ರಯತ್ನ ಸಾರ್ವಜನಿಕರಿಂದ ನಡೆಯಬೇಕೆಂದು ಕರೆ ನೀಡಿ, ಸಾಸ್ತನ ಮಿತ್ರರ ಪರಿಸರ ಕಾಳಜಿಯನ್ನು ಶ್ಲಾಘನೆ ಮಾಡಿದರು. ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಸಮಾಜಮುಖಿಯಾಗಿ ಮಾಡುವ ಕೆಲಸ ಕಾರ್ಯಗಳ ಗಮನಿಸುತ್ತ ಬಂದಿದ್ದೇನೆ. ತಕ್ಷಣವಾಗಿ ಅನಾಥರಿಗೆ ನಿರ್ಗತಿಕರಿಗೆ ಪುರ್ನವಸತಿ ಕೇಂದ್ರವನ್ನು ಉಡುಪಿಯಲ್ಲಿ ತೆರೆಯುವುದಾಗಿ ಜಿಲ್ಲಾಧಿಕಾರಿ ಅವರು ಭರವಸೆ ನೀಡಿದರು.
ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಅವರು ಹಸಿರು ಅಭಿಯಾನದ ಕರಪತ್ರವನ್ನು ಬಿಡುಗಡೆಗೊಳಿಸಿ, ಉದ್ದೇಶಿತ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅರಣ್ಯ ರಕ್ಷಕ ಸಂಘದ ಅಧ್ಯಕ್ಷರಾದ ದೇವರಾಜ್ ಪಾಣ ಅವರು, ರಸ್ತೆ ಬದಿಗಳಲ್ಲಿರುವ ಸಾಲು ಮರಗಳ ಬುಡದಲ್ಲಿ ಕಸದ ರಾಶಿ ಹಾಕಿ ಸುಡುವ ವಿಕೃತ ಕೆಲಸಗಳು ನಡೆಯುತ್ತಿವೆ ಎಂದು ತಮ್ಮ ಅತಿಥಿ ನುಡಿಯಲ್ಲಿ ವಿಷಾದ ವ್ಯಕ್ತಪಡಿಸಿದರು.
ಹಸಿರು ಅಭಿಯಾನದ ಸೈಕಲ್ ರಥಯಾತ್ರೆ ಸಂಕಲ್ಪಿಸಿರುವ ಸಾಸ್ತಾನ ಮಿತ್ರ ಬಳಗದ, ಪರಿಸರವಾದಿ ವಿನಯಚಂದ್ರ ಅವರು ಪ್ರಾಸ್ತಾವಿಕ ಮಾತುಗಳಲ್ಲಿ ಅಭಿಯಾನದ ಉದ್ಧೇಶದ ಬಗ್ಗೆ ಪ್ರಸ್ತಾಪಿಸಿದರು. ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲಪಾಡಿ, ಪ್ರೇಮಾನಂದ ಕಲ್ಮಾಡಿ, ರಾಘವೇಂದ್ರ ಪ್ರಭು ಕರ್ವಾಲು, ರವಿಕಿರಣ್, ಸಾಸ್ತಾನ ಮಿತ್ರ ಬಳಗದ ಸದಸ್ಯರು. ಶಿಕ್ಷಕ ಸುಕುಮಾರ್ ಶೆಟ್ಟಿಗಾರ್, ಮತ್ತಿತರರು ಉಪಸ್ಥಿತರಿದ್ದರು. ಸಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರು ಸ್ವಾಗತಿಸಿದರು. ಲೇಖಕ ತಾರಾನಾಥ್ ಮೇಸ್ತ ಶಿರೂರು ವಂದಿಸಿದರು. ಜ್ಯೋತಿ ಸಮಂತ್ ಅವರು ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರಿಗೆ ಗಿಡ ವಿತರಣೆಯೂ ನಡೆಯಿತು. ಕೃಷ್ಣಾ ಬಾಯಿ ವಾಸುದೇವ ಶೈಣೈ ಮೆಮೋರಿಯಲ್ ಕಾಲೇಜಿನ ಎನ್ ಎಸ್ ಎಸ್ ಶಿಬಿರಾರ್ಥಿಗಳಿಂದ, ರಾಷ್ಟ್ರಗೀತೆ ಗಾಯನದೊಂದಿಗೆ ಸಭಾ ಕಾರ್ಯಕ್ರಮ ಸಮಾಪನಗೊಂಡಿತು. ಬಳಿಕ ಹಸಿರು ಅಭಿಯಾನ ಸೈಕಲ್ ರಥಯಾತ್ರೆಯು ಕವಿ ಮುದ್ದಣ ಮಾರ್ಗದ ಮೂಲಕ ನಗರದಲ್ಲಿ ಜಾಗೃತಿ ಮೂಡಿಸುತ್ತ ಸಂಚರಿಸಿತು.
ಕೃಪೆ : ಸಾಸ್ತಾನ ಮಿತ್ರರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.