ಉಡುಪಿ: ವಿಶ್ವ ಹಿಂದು ಪರಿಷತ್ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ (ನ. 24, 25, 26) ಉಡುಪಿಯಲ್ಲಿ ನಡೆಯಲಿರುವ ಐತಿಹಾಸಿಕ ಧರ್ಮ ಸಂಸದ್ಗೆ ಸುತ್ತೂರು ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಸೇರಿದಂತೆ ಮಹಾಮಂಡಲೇಶ್ವರರು ಶುಕ್ರವಾರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ವೇದಿಕೆಯಲ್ಲಿ ವಿವಿಧ ರಾಜ್ಯಗಳ 90 ಸಂತರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ವಿಶ್ವಹಿಂದು ಪರಿಷತ್ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಸೇರಿದಂತೆ ಸಂಘಪರಿವಾರದ ಹಲವು ಮುಖಂಡರು ಉಪಸ್ಥಿತರಿದ್ದರು.
ವಿಕ್ರಮ ಧರ್ಮಸಂಸದ್ ಹಾಗೂ ಪಾಥೇಯಾ ಎರಡು ಸ್ಮರಣ ಸಂಚಿಕೆಯನ್ನು ಕರಾವಳಿಯ ಗಂಡುಕಲೆ ಯಕ್ಷಗಾನ ಮೂಲಕ ಅನಾವರಣ ಮಾಡಲಾಯಿತು. ಸ್ಮರಣ ಸಂಚಿಕೆಯನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಲೋಕಾರ್ಪಣೆ ಮಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮೂರು ದಶಕಗಳ ಬಳಿಕ ಉಡುಪಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಸಮ್ಮೇಳನದಲ್ಲಿ ರಾಮಮಂದಿರ ನಿರ್ಮಾಣ, ಗೋಸಂರಕ್ಷಣೆ ಹಾಗೂ ಗೋಸಂವರ್ಧನೆ ಯೋಜನೆಗಳು, ಮತಾಂತರ, ಸಾಮಾಜಿಕ ಸಾಮರಸ್ಯ, ಸಂಸ್ಕೃತಿಯ ರಕ್ಷಣೆ, ಅಸ್ಪೃಶ್ಯತೆ ಸೇರಿದಂತೆ ಇನ್ನಿತರ ಸಾಮಾಜಿಕ ಸುಧಾರಣೆ ಕುರಿತಂತೆ ಪ್ರಮುಖ ವಿಚಾರಗಳು ಚರ್ಚೆಯಾಗಿ ಅಭಿಪ್ರಾಯ ಮಂಡನೆ ನಡೆಯಲಿದೆ. ‘ಹಿಂದು ವೈಭವ’ ಪ್ರದರ್ಶಿನಿ ಪ್ರಮುಖ ಆಕರ್ಷಣೆಯಾಗಿರಲಿದೆ. ಭಾನುವಾರ ನ. 26 ರಂದು ಸಂತರ ನೇತೃತ್ವದಲ್ಲಿ ಶೋಭಾಯಾತ್ರೆಯು ನಡೆಯಲಿದೆ. ಅಂದು 4 ಗಂಟೆಗೆ ಬೃಹತ್ ಹಿಂದು ಸಮಾಜೋತ್ಸವ ನಡೆಯಲಿದ್ದು ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಧರ್ಮ ಸಂಸದ್ ಸಂದೇಶ ನೀಡಲಿದ್ದಾರೆ. ಉತ್ತರಪ್ರದೇಶದ ಗೋರಕ್ಷ ಪೀಠದ ಪೀಠಾಧ್ಯಕ್ಷರು ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರಿಂದ ಮುಖ್ಯ ಭಾಷಣ ಹಾಗೂ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ.
ಇಂದು (ನ. 24) ಮಧ್ಯಾಹ್ನ 3.30 ಕ್ಕೆ ಸಾಮೂಹಿಕ ಗೋಷ್ಠಿ ನಡೆಯಲಿದ್ದು ಶ್ರೀರಾಮ ಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣದ ಮುಂದಿನ ದಾರಿ ಮತ್ತು ಗೋಸಂರಕ್ಷಣೆ, ಗೋಸಂವರ್ಧನೆಗೆ ಯೋಜನೆಗಳು ಕುರಿತಂತೆ ಚರ್ಚೆಯಾಗಲಿದೆ.
ದೇಶದ ಮೂಲೆ ಮೂಲೆಯಿಂದ ಸಾಧು-ಸಂತರು ಉಡುಪಿಗೆ ಆಗಮಿಸಿದ್ದಾರೆ. ರಾಜಕೀಯ ಕ್ಷೇತ್ರದ ಗಣ್ಯರು, ಸಮಾಜದ ಪ್ರಮುಖರು ಸೇರಿದಂತೆ ಅನೇಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
1985 ರ ಧರ್ಮ ಸಂಸದ್ ಉಡುಪಿಯಲ್ಲಿ ನಡೆದ ನಂತರ ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಧರ್ಮಸಂಸದ್ ಇದಾಗಿದೆ. ಪ್ರಯಾಗದಲ್ಲಿ 2006 ರಲ್ಲಿ 11ನೇ ಧರ್ಮಸಂಸದ್ ನಡೆದಿದಿದ್ದು. ಇದೀಗ 11 ವರ್ಷಗಳ ನಂತರ 12 ನೇ ಧರ್ಮಸಂಸದ್ ಉಡುಪಿಯಲ್ಲಿ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.