ಹಕ್ಕಿಗಳಲ್ಲ.. ಪಾತರಗಿತ್ತಿ.. ಜೇನ್ನೊಣಗಳಲ್ಲ.. ಬಣ್ಣದ ಪ್ಲಾಸ್ಟಿಕ್ ಚೀಲಗಳೇ ಇಲ್ಲಿ ಹಾರಾಡುತ್ತವೆ!
ಧಾರವಾಡ : ಎಲೆ ಬಣ್ಣದಲ್ಲಿ ಬೆರೆತು, ಮರೆಯಾಗಿ ಕುಳಿತು ಶ್ರಾವ್ಯವಾಗಿ ಮಂದ್ರ ಸ್ವರದಲ್ಲಿ ಹಾಡುತ್ತಿತ್ತು ಸುಂದರ ಕಾಪರ್ಸ್ಮಿತ್ ಬಾರ್ಬೆಟ್. ಆ ಹಕ್ಕಿ ಕೆಳಗೆ ನಮ್ಮನ್ನು ನೋಡಿ ಕ್ಷಣ ಅವಕ್ಕಾಯಿತು. ’ತನ್ನನ್ನು ನೋಡಲು’ ಬೆಳ್ಳಂಬೆಳಗ್ಗೆ ಚಳಿಯಲ್ಲಿ ಬಂದವರು ಇದ್ದಕ್ಕಿಂತೆ ’ಕಸ ಹೆಕ್ಕಲು’ ಆರಂಭಿಸಿದ ಪರಿ ಕಂಡು!
ಈ ದೃಶ್ಯ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯೋದ್ಯಾನದ್ದು! 1963ರಲ್ಲಿ ಜನ್ಮ ತಳೆದ, 40 ಎಕರೆ ವಿಸ್ತಾರದಲ್ಲಿ ಹರಡಿದೆ ‘ಬೊಟಾನಿಕಲ್ ಗಾರ್ಡನ್’. ಇಡೀ ಉತ್ತರ ಕರ್ನಾಟಕದಲ್ಲಿಯೇ ಅಪರೂಪದ್ದು ಎಂಬ ಖ್ಯಾತಿ ಪಡೆದ ಈ ಸಸ್ಯೋದ್ಯಾನ ಸಮುದ್ರ ಮಟ್ಟದಿಂದ 830 ಮೀಟರ್ ಎತ್ತರದಲ್ಲಿದೆ. 170 ಕುಟುಂಬಗಳಿಗೆ ಸೇರಿದ ಹೂವಿನ ಗಿಡಗಳು, 1.300 ಅತ್ಯಂತ ವಿಶಿಷ್ಟ ಪ್ರಜಾತಿಯ ಗಿಡ-ಸಸ್ಯ ಮತ್ತು 150 ವಿಧದ ಅಪರೂಪದ ಸಸ್ಯ ಸಂಕುಲ ಇಲ್ಲಿದೆ.
ಪುಟ್ಟ ನರ್ಸರಿಯಲ್ಲಿ ಬೋನ್ಸಾಯ್ ಸೇರಿದಂತೆ ಅಪರೂಪದ ಅಲಂಕಾರಿಕ ಗಿಡಗಳು, ಔಷಧೀಯ ಸಸ್ಯಗಳು ಸಹ ಹೇರಳವಾಗಿವೆ. ‘ಬೊಟಾನಿಕ್ ಗಾರ್ಡನ್ಸ್ ಕಾನ್ಸರ್ವೇಶನ್ ಇಂಟರನ್ಯಾಶನಲ್’ (ಬಿಜಿಸಿಐ), ಮತ್ತು ’ಇಂಡಿಯನ್ ಬೊಟಾನಿಕ್ ಗಾರ್ಡನ್ಸ್ ನೆಟ್ವರ್ಕ್’ (ಐಬಿಜಿಎನ್) ಸದಸ್ಯತ್ವ ಪಡೆದ ಪ್ರತಿಷ್ಠಿತ ಉದ್ಯಾನ ಕವಿವಿ ಸಸ್ಯೋದ್ಯಾನ. ಹಾಗಾಗಿ ಇದು ಸಸ್ಯ ಮತ್ತು ಪಕ್ಷಿ ಕಾಶಿ!
ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಹಕ್ಕಿಗಳ ಸುಗ್ಗಿ ಕಾಲಕ್ಕೆ ಅನುಗುಣವಾಗಿ ನೇಚರ್ ರಿಸರ್ಚ್ ಸೆಂಟರ್ ಧಾರವಾಡ, ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರ ಸಂಘ ಹುಬ್ಬಳ್ಳಿ ಸೇರಿದಂತೆ ಅನೇಕ ಪರಿಸರಾಸಕ್ತ ಸ್ವಯಂಸೇವಾ ಸಂಘಟನೆಗಳೊಂದಿಗೆ ತಜ್ಞರು ಪಕ್ಷಿ ವೀಕ್ಷಣೆ, ಗಣತಿ, ದಾಖಲೆ, ಛಾಯಾಗ್ರಹಣ ಮತ್ತು ಹಕ್ಕಿಗಳ ಬದುಕಿನ ವಿಶೇಷ ಖಾಸಗಿ ಕ್ಷಣಗಳನ್ನು ಆಸ್ವಾದಿಸಲು ಕಿರಿಯರಿಗೆ ಮಾರ್ಗದರ್ಶನ ನೀಡುವ ’ಕಾಶಿ’.
ಪ್ರತಿ ಬಾರಿ ಇಲ್ಲಿಗೆ ಹೋದಾಗ, ಪಕ್ಷಿ ವೀಕ್ಷಣೆ ನಮಗೆ ಮುಖ್ಯವಾಗದೇ ನಾಲ್ಕಾರು ಗೋಣಿಚೀಲ ಹಿಡಿದು ಕಸ ಹೆಕ್ಕುವ ಪರಿಸ್ಥಿತಿ ಬಂದೊದಗುತ್ತಿದೆ. ಹತ್ತಾರು ನಮೂನಿ ಗುಟಿಖಾ-ತಂಬಾಕು, ಅಡಿಕೆ ಚೀಟು, ಸಿಗರೇಟ್, ಬೀಡಿ, ಚುಟ್ಟಾ ಪ್ಯಾಕ್-ಬಡ್ಸ್, ಸಾರಾಯಿ ಬಾಟಲಿಗಳ ಒಡೆದ ಚೂರುಗಳ ಕೊಂಪೆ, ಬಾಟಲಿಗಳ ರಾಶಿ, ಕುಡಿವ ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿ, ತಂಪು ಮತ್ತು ಬಿಸಿ ಪಾನೀಯದ ಟೆಟ್ರಾ ಪ್ಯಾಕ್ಗಳು, ತಿಂದು ಅಲ್ಲಲ್ಲಿ ಬಿಸಾಡಿದ ಆಹಾರದ ಪೊಟ್ಟಣ, ಬೇಕಾಬಿಟ್ಟಿ ಹಾರಾಡುವ ಬಣ್ಣದ ಪ್ಲಾಸ್ಟಿಕ್ ಚೀಲಗಳ ತ್ಯಾಜ್ಯ, ಇಸ್ಪೀಟ್ ಎಲೆ, ಗರ್ಭನಿರೋಧಕಗಳು, ಸೂಜಿ ಸಮೇತ ಸಿರೀಂಜ್ಗಳು, ಅಲ್ಲಲ್ಲಿ ಬಯಲಿನಲ್ಲಿ ಮಲ-ಮೂತ್ರ ವಿಸರ್ಜಿಸಿದ ಕುರುಹು, ಗಟಾರು, ಒಳಚರಂಡಿ ನೀರು ಸಹ ಉದ್ಯಾನದಲ್ಲಿ ಒಸರಿ ಗಬ್ಬೆದ್ದು ನಾರುವ ಪರಿಸ್ಥಿತಿ, ಇಂತಹ ಕಸದ ಕೊಂಪೆಯಲ್ಲಿ ಪಕ್ಷಿ ವೀಕ್ಷಣೆ ಸಹ್ಯವಾಗಲು ಸಾಧ್ಯವೇ?
ಉದ್ಯಾನ ಪಕ್ಕದ ಸಿಬ್ಬಂದಿ ವಸತಿ ಗೃಹದ ಕೆಲ ಮಹಿಳೆಯರು ದ್ವಿಚಕ್ರ ವಾಹನದ ಮೇಲೆ ಉರುವಲಿಗಾಗಿ ಸಸ್ಯೋದ್ಯಾನದಿಂದ ಕಟ್ಟಿಗೆ ಸಾಗಿಸುತ್ತಿದ್ದ ಕೊಡಲಿ ಸಮೇತ ದೃಶ್ಯ ಸರ್ಕಸ್ಗೆ ಸಮವಾಗಿತ್ತು! ಶಾಲ್ಮಲಾ ಹಾಸ್ಟೆಲ್ ಹಾದಿಯ ವಸತಿ ಗೃಹದ ನಿವಾಸಿಗಳು ಚೆಲ್ಲಿದ ಕಸದ ರಾಶಿ ಹಾರಿ ಸಸ್ಯೋದ್ಯಾನದ ಅಂದಗೆಡಿಸುತ್ತಿದ್ದರೆ, ಬಿಸಾಡಿದ ಮುಸುರೆ, ಅಳಿದುಳಿದ ಆಹಾರಕ್ಕಾಗಿ ಹಂದಿ-ನಾಯಿಗಳ ಕಚ್ಚಾಟ ಚುಮುಚುಮು ಬೆಳಕು ಹರಿಯುವ ಹೊತ್ತಲ್ಲೇ ನೆಮ್ಮದಿ ಕೆಡಿಸುತ್ತದೆ.
ಪಕ್ಷಿ ವೀಕ್ಷಣೆಗೆಂದು ಬಂದ ಹತ್ತು ಮಕ್ಕಳು ಗೋಣಿಚೀಲ ಹಿಡಿದು, ಸಸ್ಯೋದ್ಯಾನದ ಕೇವಲ ಕಿರು ದಾರಿಯಲ್ಲಿ ಸಾಗಿ ಕೇವಲ ಒಂದು ಗಂಟೆಯಲ್ಲಿ ಎಲ್ಲ ಚೀಲಗಳನ್ನು ತ್ಯಾಜ್ಯಗಳಿಂದ ತುಂಬಿ-ತುಳುಕಿಸಿದರು! ಇಬ್ಬರು ಮಕ್ಕಳು ಮೈಮರೆತು ನಡೆದ ಪರಿಣಾಮ ಪಾದಕ್ಕೆ ಒಡೆದ ಗಾಜಿನ ಚೂರು ಚುಚ್ಚಿ ರಕ್ತ ಸೋರಿದ್ದೂ ಆಯ್ತು.
ವಿಶ್ವವಿದ್ಯಾಲಯ ಮಟ್ಟದಲ್ಲಿ ಓದುವ ವಿದ್ಯಾರ್ಥಿಗಳಂತೂ ಸಸ್ಯೋದ್ಯಾನ ಪರಿಸರದಲ್ಲಿ ಹೀಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳಲಾರರು. ವಾಯು ವಿಹಾರಕ್ಕೆಂದು ಬರುವ ಹಿರಿಯರು ಹೀಗೆ ಮಾಡಲಾರರು. ಕೆಲವು ಅಪವಾದಗಳಿರಬಹುದು. ಹೊರಗಿನವರು ಇಷ್ಟೆಲ್ಲ ಸರಂಜಾಮುಗಳೊಂದಿಗೆ ಸುಲಭವಾಗಿ ಕವಿವಿ ಆವರಣ ಪ್ರವೇಶಿಸಿ, ಹಗಲು ಮತ್ತು ರಾತ್ರಿ ಹೊತ್ತು ಗಬ್ಬೆಬ್ಬಿಸಿ ಹೋಗುತ್ತಿದ್ದಾರೆ ಎಂಬುವುದು ನಂಬಲು ಕಷ್ಟ. ಕಾರಣ, ಉದ್ಯಾನಕ್ಕೆ ಖಾಸಗಿ ಭದ್ರತಾ ಸಿಬ್ಬಂದಿ ಕಾವಲಿದ್ದಾರೆ.
ಕನಿಷ್ಟ 80ರಷ್ಟು ಹಕ್ಕಿಗಳನ್ನು ನಾವು ಯಾವುದೇ ದಿನ ಈ ಉದ್ಯಾನದಲ್ಲಿ ಗುರುತಿಸಿ ದಾಖಲಿಸಿದ ಉದಾಹರಣೆಗಳಿವೆ. 145 ಪಕ್ಷಿ ಪ್ರಜಾತಿ ಇಲ್ಲಿ ಕಂಡ ದಾಖಲೆ ನಮ್ಮ ಬಳಿ ಇದೆ. ಇಂದು ಕಸ-ಕೊಂಪೆಯಲ್ಲಿ ಬದುಕಬಲ್ಲ ಬೆರಳೆಣಿಕೆಯಷ್ಟು ಪಕ್ಷಿಗಳು ಇಲ್ಲಿ ಕಣ್ಣಿಗೆ ರಾಚುತ್ತವೆ. ಯಾವ ಹಂತದಲ್ಲಿ ಮತ್ತು ಯಾರ ಈ ಮಟ್ಟದ ಉದಾಸೀನ ಕ್ಷಮ್ಯ? ಉದ್ಯಾನ ಉಳಿಸಿಕೊಳ್ಳಲು ಮನಸ್ಸಿದ್ದಂತಿಲ್ಲ. ಅಲ್ಲಿಯೂ ಕಾಂಕ್ರೀಟ್ ಕಟ್ಟಡಗಳನ್ನು ತಲೆಎಬ್ಬಿಸಲು ಇದು ಪೂರ್ವ ಪೀಠಿಕೆ ಇದ್ದಂತಿದೆ. ಕಸವೇ ಕಸುವಾಗುವ ಮೊದಲು ಸಂಬಂಧಪಟ್ಟವರು ಈ ಅನಿಸಿಕೆಗಳನ್ನು ಸುಳ್ಳಾಗಿಸಲು ಮೈಕೊಡವಿ ಚಿತ್ತ ಹರಿಸುವರೇ?
ಉದ್ಯಾನವನ್ನು ಒಪ್ಪಂದದ ಮೇರೆಗೆ ಖಾಸಗಿಯವರಿಗೆ ವಹಿಸುವುದು ಈ ಹಂತದಲ್ಲಿ ಉಚಿತ. ತಾಳಿಕೆ ಮತ್ತು ಬಾಳಿಕೆಬರುವಷ್ಟು ಧಾರಣಾ ಶಕ್ತಿ ಗಳಿಸಿದ ಮೇಲೆ, ಕವಿವಿ ಮತ್ತೆ ತನ್ನ ಸುಪರ್ದಿಗೆ ಸಸ್ಯೋದ್ಯಾನ ಪಡೆಯಬಹುದು. ಸ್ವತಃ ನಿರ್ವಹಣೆ ಸಿಬ್ಬಂದಿ ಕೊರತೆಯಿಂದ ಕಷ್ಟವಾಗಿದೆ ಮತ್ತು ಸದ್ಯ ಇದ್ದವರಿಂದಲೇ ಎಲ್ಲ ಕೆಲಸ ಅಸಾಧ್ಯ ಎಂಬುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಸಾಮುದಾಯಿಕ ಸಹಭಾಗಿತ್ವ ಪಡೆದು ಉದ್ಯಾನ ಅಭಿವೃದ್ಧಿ ಪಡಿಸಲು ಕವಿವಿ ಮನಸ್ಸು ಮಾಡಬೇಕು. ತಜ್ಞರ ಸಮಿತಿ ನೇಮಿಸಲು ಮನಸ್ಸು ಮಾಡಬೇಕು.
– ಶ್ರೀ ಮುಕುಂದ ಮೈಗೂರ, ರಾಜೀವ್ ಗಾಂಧಿ ಪರಿಸರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪರಿಸರ ತಜ್ಞ, ಧಾರವಾಡ.
ಕವಿವಿ ಬೊಟಾನಿಕಲ್ ಗಾರ್ಡನ್ ಧಾರವಾಡಕ್ಕೇ ಮೆರಗು. ಅಧ್ಯಯನ ಮತ್ತು ಕ್ಷೇತ್ರ ಕಾರ್ಯಕ್ಕೆ ವಿಶಿಷ್ಠ ಆಕರ. ಸದ್ಯದ ಪರಿಸ್ಥಿತಿ ದಯನೀಯ. ಬೇಡವಾದ ಕೆಲಸಗಳೇ ಇಲ್ಲಿ ಜಾಸ್ತಿ. ಉದ್ಯಾನದ ಪಾವಿತ್ರ್ಯ ಕಾಯುವ ಕೆಲಸ ತುರ್ತಾಗಿ ಆಗಬೇಕು. ಅನವಶ್ಯಕ ಮತ್ತು ಅನಗತ್ಯ ಜನ-ದನ ಪ್ರವೇಶ ಇಲ್ಲಿ ನಿರ್ಬಂಧಿಸಬೇಕು. ಜೀವಿ ವೈವಿಧ್ಯ ಕಾಯುವ ದೃಷ್ಟಿಯಿಂದಲೂ ಇದು ಮಹತ್ವದ ಹೆಜ್ಜೆ. ನೀರಿನ ವ್ಯವಸ್ಥೆ ಆದ್ಯತೆಯಾಗಬೇಕು.
– ಶ್ರೀ ಆರ್.ಜಿ. ತಿಮ್ಮಾಪೂರ, ಪಕ್ಷಿ ತಜ್ಞ, ಪರಿಸರವಾದಿ, ಧಾರವಾಡ.
ನಾನು ಬೆಳಗ್ಗೆ ವಾಯು ವಿಹಾರಕ್ಕೆ ಹೋದಾಗ ವಾರಕ್ಕೊಮ್ಮೆ ಕೈಲಾದಷ್ಟು ಕಸ ಎತ್ತಿ ಬರುತ್ತೇನೆ. ಮತ್ತೇ ಅದೇ ಹಾಡು. ಅಲ್ಲಲ್ಲಿ ಕಸ ಹಾಕಲು ತೊಟ್ಟಿಗಳ ವ್ಯವಸ್ಥೆ ಉದ್ಯಾನದಲ್ಲಿ ಮಾಡಬೇಕು. ಭದ್ರತಾ ಸಿಬ್ಬಂದಿ ಕಣ್ಗಾವಲು ಬಿಗಿಯಾಗಬೇಕು. ನಮ್ಮೆಲ್ಲರ ಸಾಂಘಿಕ ಪ್ರಯತ್ನ ಉದ್ಯಾನಕ್ಕೆ ಜೀವದಾನ. ನಾವೇ ಶ್ರಮದಾನ ಮಾಡಿ ಒಂದು ಬಾರಿ ಇಡೀ ಉದ್ಯಾನವನ್ನು ತ್ಯಾಜ್ಯ ಮುಕ್ತಗೊಳಿಸೋಣ. ವಿವಿಧ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಎನ್ಸಿಸಿ, ಎನ್ಎಸ್ಎಸ್ ಸ್ವಯಂ ಸೇವಕರು, ಪರಿಸರ ಪ್ರೇಮಿಗಳು ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಈ ಕೆಲಸ ಕೈಗೆತ್ತಿಕೊಂಡರೂ, ನಮ್ಮ ಸಸ್ಯೋದ್ಯಾನ ಮತ್ತೆ ಹಸಿರುಟ್ಟು ಕ್ಯಾಂಪಸ್ಗೆ ಜೀವದಾಯಿಯಾಗುತ್ತದೆ.
– ಶ್ರೀ ಪಂಡಿತ ಮುಂಜಿ, ಗಿನ್ನಿಸ್ ದಾಖಲೆಯ ಪರಿಸರ ಪ್ರೇಮಿ, ಧಾರವಾಡ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.