ಅಮವಾಸ್ಯೆ-ಹುಣ್ಣಿಮೆ/ ಪ್ರತಿ 14 ದಿನಗಳಿಗೊಮ್ಮೆ ಉಪಟಳ/ ಸೂಜಿ, ಡಬ್ಬಣ, ಬ್ಲೇಡ್ ಚುಚ್ಟಿಟ್ಟ ಆಹಾರ
ಧಾರವಾಡ : ಅಮವಾಸ್ಯೆ-ಹುಣ್ಣಿಮೆಗಳ ರಾತ್ರಿ, ಪ್ರತಿ 14 ದಿನಗಳಿಗೊಮ್ಮೆ, ಮೂರು ದಾರಿ ಕೂಡುವ ಸ್ಥಳಗಳಲ್ಲಿ ಬಾಳೆ ಎಲೆ, ಮಡಿಕೆಗಳಿಗೆ ವಿಚಿತ್ರ ಅಲಂಕಾರ ಮಾಡಿ, ಅರಿಶಿಣ-ಕುಂಕುಮ ಭಯಾನಕವಾಗಿ ಸವರಿ, ವಿವಿಧ ಆಹಾರ ಪದಾರ್ಥಗಳಿಗೆ ಸೂಜಿ, ಡಬ್ಬಣ, ಹರಿತವಾದ ಚೂರಿ, ಬ್ಲೇಡ್ ಚುಚ್ಚಿರಿಸುವ ಕೆಟ್ಟ ಸಂಪ್ರದಾಯ ಈಗ ನಾಡಾಡಿ-ಬೀಡಾಡಿ ಮೇಯುವ ಮೂಕ ಪ್ರಾಣಿಗಳ ಬದುಕಿಗೆ ಸಂಚಕಾರ ತರುತ್ತಿದೆ.
ಮೂಢನಂಬಿಕೆಯ ಆಧಾರದಲ್ಲಿ, ನಿರೀಕ್ಷಿತ ದಿನಗಳಂದು ಮಾಟ-ಮಂತ್ರ, ತಂತ್ರ-ವಶೀಕರಣ, (ಬ್ಲ್ಯಾಕ್ ಮಾಜಿಕ್ ಮತ್ತು ವಿಚ್ ಕ್ರಾಫ್ಟ್) ಹೆಸರಿನಲ್ಲಿ ಬಾಳೆಹಣ್ಣು, ಕುದಿಸಿದ ಮೊಟ್ಟೆ, ಅನ್ನ, ನಿಂಬೆಹಣ್ಣು, ಕರಿ ಬಣ್ಣದ ಗೊಂಬೆ, ಕೋಳಿ, ಕೋಳಿ ಮಾಂಸದ ತುಣುಕುಗಳಿಗೆ ಹರಿತ ವಸ್ತುಗಳನ್ನು ಚುಚ್ಚಿ, ಕುಂಕುಮ ಸವರಿ ಇಡುತ್ತಿರುವ ಪರಿ ಭಯಹುಟ್ಟಿಸುವಂತಿದೆ.
ಕೇವಲ ಮೂರು ಚಿಟಿಕೆ ಉಪ್ಪು, ನಿಂಬೆ ಹಣ್ಣು ಮತ್ತು ಹಸಿ ಮೆಣಸಿನಕಾಯಿಗೆ ಸೀಮಿತವಾಗಿದ್ದ ಉಪಟಳ ಈಗ ಕನಿಷ್ಟ ಮೂರು ಜನ ಉಣ್ಣಬಹುದಾದಷ್ಟು ಆಹಾರ ಪದಾರ್ಥ, ನೂರಾರು ರೂಪಾಯಿ ಖರ್ಚಿಸಿ, ಈ ಕೇಡಿನ ಕೆಲಸಕ್ಕೆ ಕೆಲವರು ಮುಂದಾಗುತ್ತಿರುವುದು, ಪ್ರಜ್ಞಾವಂತ ನಾಗರಿಕರ ನಿದ್ದೆಗೆಡಿಸುತ್ತಿದೆ. ಯಾವ ವೈಜ್ಞಾನಿಕ ಹಿನ್ನೆಲೆ, ಆಚರಣೆಗೆ ಅರ್ಥ ಅಥವಾ ಕೇಡು ಸಾಧಿಸುವ ಈ ಪರಿ ಪೂಜೆ-ನಡೆ ಸಿದ್ಧವಾಗಿಲ್ಲವಾದರೂ, ತಿಳಿದಿರುವ ಮನುಷ್ಯರು ಕಂಡು-ಕಾಣದಿದ್ದಂತೆ ಈ ಸರಂಜಾಮುಗಳಿರುವ ಸ್ಥಳದಿಂದ ದೂರ ಹಾಯ್ದರೂ, ಹಸಿವಿನ ಕಾರಣ ಬೆಕ್ಕು, ನಾಯಿ, ಹಂದಿ, ಆಕಳು ಕೆಲವೊಮ್ಮೆ ಮತಿ ವಿಭ್ರಮಿತ ಭಿಕ್ಷುಕರೂ ಆಯ್ದು ತಿನ್ನುವ ಪರಿ ದಿಗಿಲು ಮೂಡಿಸುತ್ತಿದೆ. ಕುತೂಹಲ ತಾಳಿ ಮಕ್ಕಳೂ ಕೈಗೆತ್ತಿಕೊಳ್ಳಬಹುದು. ಬಾಯಿಗೂ ಹಾಕಬಹುದಲ್ಲ?
ಪೂಜೆಯ ಹೆಸರಲ್ಲಿ ಚುಚ್ಟಿಟ್ಟ ಹರಿತ ಪರಿಕರಗಳು ಮೇಯಲು ಬಂದು ಗಬಗಬ ತಿನ್ನುವ ಯಾವುದೇ ಪ್ರಾಣಿ, ಪಕ್ಷಿಗೆ ಅನಾಯಾಸವಾಗಿ ಬಾಯಿ, ಗಂಟಲು, ಅನ್ನನಾಳ, ಹೊಟ್ಟೆಗೆ ಚುಚ್ಚಿ ಸಾವು ತಂದರೆ, ದುರ್ದೈವದಿಂದ ಆಯ್ದು ಉಣ್ಣುವ ಮನುಷ್ಯರೂ ಆಹುತಿಯಾಗಬಹುದು. ಕೆಲವೊಂದು ಆಯ್ದ ಸ್ಥಳ ಮತ್ತು ಮೂರು ದಾರಿ ಕೂಡುವ ಖಾಯಂ ಪ್ರದೇಶಕ್ಕೆ ಸೀಮಿತವಾಗಿದ್ದ ಈ ಕುಕೃತ್ಯ ಈಗ ನಿಧಾನವಾಗಿ ಸಮೂಹಸನ್ನಿಯಂತೆ ಎಲ್ಲೆಡೆ ಹಬ್ಬುತ್ತಿದೆ.
ಹೀಗೆ ಮಾಡಬಹುದೇ?
ಅಕ್ಕ-ಪಕ್ಕದ ಮನೆಗಳಲ್ಲಿ ಅಳವಡಿಸಲಾಗಿರುವ ಸಿಸಿ-ಟಿವಿ ಕ್ಯಾಮೆರಾ ದ್ರಶ್ಯಾವಳಿಗಳ ಮೂಲಕ ಇಂತಹವರನ್ನು ಗುರುತಿಸಿ, ತಿಳಿ ಹೇಳಲು ಸಾಧ್ಯವಿದೆ. ಸ್ಥಳೀಯ ಬಡಾವಣೆಗಳಲ್ಲಿ ‘ಇಂಥಹವರು, ಹೀಗೆ ಮಾಡುವವರಿದ್ದಾರೆ’ ಎಂಬ ಮಾಹಿತಿಯೂ ದೊರಕುತ್ತದೆ. ಅಂಥವರಿಗೆ ಎಚ್ಚರಿಕೆ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ. ಮೇಲಾಗಿ, ಹೀಗೆ ಮಂತ್ರಿಸಿಟ್ಟ, ಪೂಜಿಸಿಟ್ಟ ಪರಿಕರ ಕಂಡವರು ನಾಶಪಡಿಸಲು ಕೂಡಲೇ ಕ್ರಮ ಕೈಗೊಳ್ಳಲು ಹೆದರಿಕೆ ಬಿಟ್ಟು ಮುಂದಾಗುವ ಮನೋಸ್ಥಿತಿ ಬೆಳೆಸಬೇಕಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಸಮುದಾಯ ಭವನ, ಸರ್ಕಾರೇತರ ಸ್ವಯಂ ಸೇವಾ ಸಂಘಟನೆ, ಸಂಘ-ಸಂಸ್ಥೆಗಳು, ಇಲಾಖೆಗಳು ಕೆಲವರ ಈ ಅನಾರೋಗ್ಯಕರ ಮತ್ತು ಅಪಾಯಕಾರಿ ನಡಾವಳಿ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಬೇಕಿದೆ. ತಕ್ಕ ಶಿಕ್ಷೆಯ ಬಗ್ಗೆಯೂ ಎಚ್ಚರಿಕೆ ಮೂಡಿಸಬೇಕಿದೆ.
ಬದುಕಿ, ಬದುಕಲು ಬಿಡುವ ಮನೋಸ್ಥಿತಿ ವೈಜ್ಞಾನಿಕವಾಗಿ ಒತ್ತುಕೊಟ್ಟು ಮೂಡಿಸಲು ತುರ್ತಾಗಿ ಸಾಂಘಿಕ ಪ್ರಯತ್ನದ ಅವಶ್ಯಕತೆ ಇದೆ. ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಹೌದು.
ಮಾಟ-ಮಂತ್ರ, ತಂತ್ರ-ವಶೀಕರಣ, ಮದ್ದು ಇತ್ಯಾದಿ ಅವೈಜ್ಞಾನಿಕ ಆಚರಣೆಗಳ ಬಗ್ಗೆ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕಗಳು, ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ ಜನ ಜಾಗೃತಿಗೆ ಯೋಜನೆ ರೂಪಿಸಬೇಕು. ಪೊಲೀಸರ ಸಹಕಾರದಲ್ಲಿ ಕಟ್ಟುನಿಟ್ಟಾಗಿ ಜಾರಿ ಗೊಳಿಸುವ ಪ್ರಯತ್ನ ಕೂಡಲೇ ಮಾಡಬೇಕು. ಸುಸಂಸ್ಕೃತ ಸಮಾಜದಲ್ಲಿ ಅನಾಗರಿಕ ಪದ್ಧತಿಯ ಆಚರಣೆಗಳಿಗೆ ಪೂರ್ಣವಿರಾಮ ಹಾಕಲೇ ಬೇಕು. ಕ್ರಿಯಾಶೀಲ ಗೆಳೆಯರು ಈ ನಿಟ್ಟಿನಲ್ಲಿ ಕೈಜೋಡಿಸಲು ಸಿದ್ಧರಿದ್ದಾರೆ.
– ಮುಕುಂದ ಮೈಗೂರ, ಕಾರ್ಯಾಧ್ಯಕ್ಷರು, ಕ್ರಿಯಾಶೀಲ ಗೆಳೆಯರು ಬಳಗ, ಧಾರವಾಡ.
ಇತರರಿಗೆ ಕೇಡನ್ನು ಬಯಸುವ, ದುರುದ್ದೇಶ ಪೂರ್ವಕ ಕೃತ್ಯ ಅಕ್ಷಮ್ಯ. ಪರಿಣಾಮದ ಅರಿವಿಲ್ಲದ ಕಂದಾಚಾರ ನಂಬಿದ ಕೆಲವರಿಂದ ಮಾತ್ರ ಹೀಗೆ ಆಗುತ್ತಿದೆ. ಹೀಗೆ ಮಾಡದಂತೆ ತಡೆಯಲು ಬಡಾವಣೆಯ ನಿವಾಸಿಗಳೇ ಅಂತಹವರ ಮೇಲೆ ಕಣ್ಣಿಟ್ಟು, ಎಚ್ಚರಿಸಬೇಕಿದೆ. ನಂತರವೂ ಮುಂದುವರೆದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲು ಸಾಧ್ಯವಿದೆ. ಮೌಢ್ಯ ನಿಷೇಧ ಕಾನೂನು ಅಡಿಯಲ್ಲಿರುವ ಪ್ರಾವಧಾನಗಳನ್ನು ಹೆಚ್ಚು ಪ್ರಚುರ ಪಡಿಸಿ, ಕ್ರಮ ನಿಶ್ಚಿತ ಎಂಬ ಹೆದರಿಕೆ ಹುಟ್ಟಿಸಿದಲ್ಲಿ ಮೂಕ ಪ್ರಾಣಿ, ಪಕ್ಷಿಗಳ ಜೀವಕ್ಕೆ ಈ ಕುಕೃತ್ಯದ ಎಡೆ ಎರವಾಗದಂತೆ ತಡೆಯಬಹುದು.
– ಪ್ರೊ. ಗಂಗಾಧರ ಕಲ್ಲೂರ, ವನ್ಯಜೀವಿಗಳ ಗೌರವ ಕ್ಷೇಮ ಪಾಲಕರು, ಧಾರವಾಡ ಜಿಲ್ಲೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.