ನಾನು ಮರೆತೇನು ಹ್ಯಾಂಗ ನಿಮ್ಮನ್ನ; ಬಿಟ್ಟು ಹೊರಟರೂ ಕೂಡ ಇನ್ನ?
’ನಿವೃತ್ತಿಯ ಸೌಖ್ಯ’ ದಲ್ಲಿ ಡಾ.ವಾಮನ್ ದತ್ತಾತ್ರೇಯ ಬೇಂದ್ರೆ ಅವರು ಬರೆದು-ಕೊಂಡ ಸಾಲುಗಳಿವು!
ತನ್ನ ತಂದೆ ವರಕವಿ ‘ಅಂಬಿಕಾತನಯದತ್ತ’ ರಿಂದ ‘ಸಂ.ವಾ.ದ’ ಕಾವ್ಯನಾಮವನ್ನು ಪಡೆದ ವಾಮನ ಬೇಂದ್ರೆ ಅವರು ನಮ್ಮನ್ನು ಅಗಲಿ ಈಗ ವರ್ಷಪೂರ್ತಿ. (ಸೆ.28, 2016 ಗುರುವಾರ).
ಬರ್ರಿ ಬರ್ರಿ ನೀವು ಒಳಗೆ ಬನ್ರಿ
ಬೇಂದ್ರೆ ಇನ್ನಿಲ್ಲ ಅನ್ನಬ್ಯಾಡಿರಿ
ಬಟ್ಟಲ ಸಕ್ಕರೆಯಾಗಿ ಸಿಹಿ ಹಂಚತಾನ
ಮನಸ್ಸಿದ್ದರೆ ಕೈ ಹಾಕಿ.. – ಡಾ.ವಾಮನ ಬೇಂದ್ರೆ.
ಯಾರೇ, ‘ಶ್ರೀ ಮಾತಾ’ಕ್ಕೆ ದ.ರಾ.ಬೇಂದ್ರೆ ಅವರ ಅಭಿಮಾನಿಗಳು ಬರಲಿ, ಮಕ್ಕಳಿದ್ದರೆ ಪೆಪ್ಪರ್ಮೆಂಟ್, ದೊಡ್ಡವರಿಗೆ ಚಿಟಿಕೆ ಸಕ್ಕರೆ ಮತ್ತು ಒಂದು ಲೋಟ ನೀರು ಹಿಡಿದುಕೊಂಡು ಸ್ವಾಗತಿಸುತ್ತಿದ್ದ, ಡಾ. ವಾಮನ್ ಬೇಂದ್ರೆ ಅವರು ಇನ್ನಿಲ್ಲ ಎಂಬ ‘ಶೂನ್ಯ’ ಈಗಲೂ ನಮ್ಮನ್ನು ಕಾಡುತ್ತದೆ. ‘ಬಾಳಣ್ಣ’ ಅವರ ಸಿಹಿ ಬೀಳ್ಕೊಡುಗೆ ನೆನಪಾದಾಗಲೊಮ್ಮೆ.. ನನ್ನ ತಾಯಿ.. ‘ಕಿಟೆಲ್ ಕಾಲೇಜಿನಲ್ಲಿ ನಮಗೆ ಕನ್ನಡ ಭಾಷೆ ಕಲಿಸಿದ ಅಧ್ಯಾಪಕರು ಡಾ. ವಾಮನ ಬೇಂದ್ರೆ’ ಅಂದ ಮಾತು ಸ್ಮೃತಿ ಪಟಲದ ಮೇಲೆ ಮೂಡುತ್ತದೆ.
ಬೇಂದ್ರೆ ಅಜ್ಜ ಅವರಿಗೆ ದತ್ತ ಕಂಡ ‘ಶ್ರೀ ಮಾತಾ’ ಹಿಂದಿನ ಔದುಂಬರ ಮರ, ಹತ್ತಾರು ಮರಗಳ ನೆರಳು-ತಂಪು, ಗಿಳಿ, ಕೋಗಿಲೆಗಳ ಹಾಡು, ಮಂಗಗಳ ಹಿಂಡು, ಉದುರಿದ ಹಣ್ಣೆಲೆಗಳ ಚರಪರ ಸದ್ದು.. ಆಶ್ರಮದಂತೆ ಕಾಣಿಸುತ್ತದೆ. ಬಾಳಣ್ಣ ಅವರು ದೊಡ್ಡ ಮನಸ್ಸು ಮಾಡಿ, ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ಗೆ ಸ್ವತಃ ನೀಡಿದ ತಮ್ಮ ಖಾಸಗಿ ಜಾಗೆಯಲ್ಲಿ ತಲೆ ಎತ್ತಿದ ಭವನ ಗಮನ ಸೆಳೆಯುತ್ತದೆ.
ಶಂ.ಬಾ. ಜೋಶಿ ಅವರು ತೀರಿ (ಸೆ.27)ಕ್ಕೆ 26 ವರ್ಷ ಸಂದುತ್ತವೆ. ಸೆ. 28, ಈ ದಿನದ ವಿಶೇಷವೆಂದರೆ, ಡಾ. ವಾಮನ್ ಹುಟ್ಟಿದ ಮತ್ತು ನಿಧನ ಹೊಂದಿದ ತಾರೀಖು ಕೂಡ ಒಂದೇ! ಲೋಕದ ವ್ಯಾಪಾರ ಮುಗಿಸಿದಾಗ ಅವರಿಗೆ 82 ವರ್ಷ ವಯಸ್ಸಾಗಿತ್ತು. (28ನೇ ಜುಲೈ, 1935 ಜನ್ಮ ಸ್ಥಳ: ಹಾವೇರಿ ಜಿಲ್ಲೆ ರಾಣೇಬೆನ್ನೂರು.)
ಈಗ ಎಲ್ಲರೂ ನುಡಿ ನಮನ ಸಲ್ಲಿಸುವವರೇ..! ನಡೆ ನಮನ ಸಲ್ಲಿಸುವವರು ಬೇಕಾಗಿದ್ದಾರೆ..! ಅವ್ಯವಸ್ಥಿತ ಪಾಕಶಾಲೆಯಲ್ಲಿ ಹಸಿ ಸೌದೆಯ ಹೊಗೆಯನುಂಡು ಬಾಳಿದ ಹಿರಿಯ ಬಗ್ಗೆ ತಿಳಿಯುವ ಎಲ್ಲ ಮಾರ್ಗಗಳೂ ಈಗ ಮುಚ್ಚುತ್ತಿವೆ. ಕಾರಣ, ನಮ್ಮ ಪೀಳಿಗೆಗೆ ಸೌಕರ್ಯ ಅತಿಯಾಗಿ ಒದಗಿ ಬಂದಿದ್ದೂ ಒಂದು!
ಕ್ರಮೇಣ, ನಮ್ಮ ತಿಳಿವಳಿಕೆ ಮತ್ತು ನಡವಳಿಕೆಯ ಮಧ್ಯೆ ಈಗ ಅಗಾಧ ಕಂದರ ಏರ್ಪಡುತ್ತಿದೆ. ಇಂತಹ ಕಾಲಘಟ್ಟದಲ್ಲಿ, ನಡೆ-ನುಡಿಯಲ್ಲಿ ಅಷ್ಟೇ ನಿಷ್ಠುರತೆ ಸಂಪಾದಿಸಿದ್ದ, ‘ವಾಮನ’ ಹೆಸರಿನ ಮತ್ತು ಆಕಾರದ ಈ ಶಕ್ತಿ, ಕನ್ನಡಕ್ಕೆ 2ನೇ ಜ್ಞಾನಪೀಠ ಗಳಿಸಿಕೊಟ್ಟ ವರಕವಿ ಬೇಂದ್ರೆ ಅವರ ನಿಜಾರ್ಥದ ಉತ್ತರದಾಯಿ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಂಸ್ಥಾಪಕ ಸದಸ್ಯತ್ವ ಆಯಾಚಿತವಾಗಿ ಒಲಿದಾಗ, ಸ್ಥಿತಪ್ರಜ್ಞನಂತೆ ನಡೆದುಕೊಂಡವರು. ಟೀಕೆ-ಟಿಪ್ಪಣಿಗಳಿಗೆ ನಿರ್ಲಿಪ್ತತೆ ಉತ್ತರವಾಗಿಸಿದವರು. ‘ಮಾಡು-ಮಾತಾಡಬೇಡ’ ಎಂಬುದು ಅವರ ನಡೆಯಾಗಿತ್ತು. ಇಂದು ಈ ಗುಣ ನಮ್ಮ ಸಮಕಾಲೀನರಲ್ಲಿ ಎಷ್ಟು ಜನಕ್ಕೆ ಸಿದ್ಧಿಸಿದೆ?
ಹೆಸರು ಮಾತ್ರ ವಾಮನ!
ಕವಿ, ಲೇಖಕ, ಬಾನುಲಿ ನಾಟಕಕಾರ, ರೂಪಕ ರಚಯಿತಾ, ವಿಮರ್ಶಕ ಹಾಗೂ ಭಾಷಾಂತರಕಾರ. ಅಧ್ಯಯನ ಮತ್ತು ಅಧ್ಯಾಪನ ಅವರಿಗೆ ತಪಸ್ಸಾಗಿತ್ತು. ಕನ್ನಡ ಮತ್ತು ಮರಾಠಿ ಸಾಹಿತ್ಯ-ಸಾಹಿತಿಗಳ ಮಧ್ಯದ ಅಪರೂಪದ ಕೊಂಡಿ ಡಾ.ವಾಮನ್ ಆಗಿದ್ದರು. ಇದು ಭಾಷೆ-ಗಡಿಗಳನ್ನು ಮೀರಿದ ನಿಜಾರ್ಥದಲ್ಲಿ ಏಕಾತ್ಮ ಮಾನವತಾವಾದ.
ಪುಣೆ ವಿಶ್ವವಿದ್ಯಾಲಯಕ್ಕೆ ಅವರು ಪಿಎಚ್ಡಿ ಪದವಿಗಾಗಿ ಸಲ್ಲಿಸಿದ ಪ್ರಬಂಧ – ಲಕ್ಷ್ಮೀಶನ ಜೈಮಿನಿ ಭಾರತ; ಒಂದು ಅಧ್ಯಯನ, ಮಹತ್ವದ ಆಕರ ಗ್ರಂಥಗಳಲ್ಲಿ ಒಂದು. ಲಕ್ಷ್ಮೀಶನ ದೇವನೂರು ಸಮಿತಿ ನೀಡಿದ ಸುವರ್ಣ ಪದಕ ಕಿರೀಟಸ್ಥ. ಇಷ್ಟು ಆಳ ಅಧ್ಯಯನ, ಆಕರ ಸಾಗರ, ಒಮದು ಪಟ್ಟಿಗೆ ಜೀರ್ಣಿಸಿಕೊಳ್ಳಲಾಗದ ಹೂರಣ ಅವರ ಕತೃತ್ವ ಶಕ್ತಿಗೆ ಸಾಕ್ಷಿ.
‘ಕೋಸಲಾ’ ಕಾದಂಬರಿ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಗಳಿಸಿದ್ದ, ಡಾ. ವಾಮನ್ ಅವರು, ಕನ್ನಡ ಮತ್ತು ಮರಾಠಿ ಬಾಂಧವ್ಯಕ್ಕಾಗಿ ಮುಂಬೈನ ಪ್ರತಿಷ್ಠಿತ ವರದರಾಜ ಆದ್ಯ ಪ್ರಶಸ್ತಿ ಅವರನ್ನರಿಸಿ ಬಂದಿತ್ತು! ಮಹಾರಾಷ್ಟ್ರದ ಪಾರಂಪರಿಕ ಜಾನಪದ ಕಲೆ ಕುರಿತ ಸರೋಜಿನಿ ಬಾವರ್ ಅವರ ಮೇಲಿನ ಕೃತಿಗೆ ರಾಜ್ಯ ಸಾಹಿತ್ಯ ಅಕಾದೆಮಿ ಪುಸ್ತಕ ಬಹುಮಾನ ಪಡೆದ ಹಿರಿಮೆ ಅವರದ್ದು.
ಸಾಂಗ್ಲಿಯ ವೆಲ್ಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಭಾಷೆಯ ಅಧ್ಯಾಪಕರಾಗಿ ಸೇವೆ ಆರಂಭಿಸಿದ, ಡಾ. ವಾಮನ್ ಬೇಂದ್ರೆ, ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಕಿರಿಯ ಕಾಲೇಜಿನಲ್ಲಿ ಹಾಗೂ ಕಿಟೆಲ್ ಕಲಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ 33 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದವರು, ‘ಬಾಳಾ’.
ಕರುಳ ಬಳ್ಳಿಯ ಸಂಬಂಧಕ್ಕೆ ಹೊಸ ಭಾಷ್ಯ
ಜಗತ್ತಿನ ಶ್ರೇಷ್ಠ ಭಾವ ಕವಿಗಳಲ್ಲಿ ಒಬ್ಬರಾದ, ಡಾ. ದ.ರಾ. ಬೇಂದ್ರೆ ಅವರ ಮಗನಾಗಿ, ಅವರ ಸಾಹಿತ್ಯ ಮತ್ತು ಶ್ರೇಷ್ಠತೆಯ ಪ್ರಭಾವದಿಂದ ಹೊರಬಂದು, ಸ್ವಂತಿಕೆಯ ಆತ್ಮಬಲದ ಮೇಲೆ ತನ್ನದೇ ಆದ ವಿಶಿಷ್ಠ ಛಾಪು ಮೂಡಿಸಿದ ಡಾ. ವಾಮನ್, ಬಹುತೇಕ ಸಾಹಿತಿಯೋರ್ವನ ಎಲ್ಲ ಭೌತಿಕ ವಾರಸುದಾರಿಕೆಗೆ ಹಾತೊರೆಯುವ ಸಂತಾನಗಳ ಮಧ್ಯೆ, ತಂದೆಯ ಸಾಹಿತ್ಯದ ಅಭಿಮಾನದ ಓದುಗನಾಗಿ, ವರಕವಿ ದ.ರಾ.ಬೇಂದ್ರೆ ಅವರ ಸಮಗ್ರ ಸಾಹಿತ್ಯ ಸಂಪುಟ ಮತ್ತು ಬೇಂದ್ರೆ ಅವರ ಜೀವನ ಮಹಾಕಾವ್ಯ ಔದುಂಬರ ಗಾಥೆ 17 ಸಂಪುಟಗಳಲ್ಲಿ ಸಂಪಾದಿಸಿದ್ದು, ಕರುಳ ಬಳ್ಳಿಯ ಸಂಬಂಧಕ್ಕೆ ಭಾಷ್ಯ ಬರೆದಂತಿದೆ.
ಡಾ. ವಾಮನ್, ಔದುಂಬರ ಗಾಥೆ ಸೇರಿದಂತೆ, ವರಕವಿ ಬೇಂದ್ರೆ ಅವರ ರಚನೆಗಳನ್ನು ಪುನಃ ಸಂಪಾದಿಸಿ ಪ್ರಕಟಿಸುವ ಹಂತದಲ್ಲಿ, ರಚನೆಯ ಅರ್ಥ, ಸಂದರ್ಭ, ಅಡಿ ಟಿಪ್ಪಣಿ ಮತ್ತು ಮೌಲಿಕ ವಿಮರ್ಶೆ ದಾಖಲಿಸಿದ್ದು, ವಿಶ್ವವಿದ್ಯಾಲಯವೊಂದರ ಅಧ್ಯಯನಾಂಗ ಮತ್ತು ಪ್ರಸಾರಾಂಗ ಇದು ವರೆಗೂ ಮಾಡದಿರುವ ಕೆಲಸ.
‘ಬೇಂದ್ರೆ ರಂಗ ಸಂಗೀತ ಪರಂಪರೆ’
ಪಶ್ಚಿಮ ಬಂಗಾಳದಲ್ಲಿ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಸ್ಮತಿಯಲ್ಲಿ, ‘ರವೀಂದ್ರ ಸಂಗೀತ ಪರಂಪರಾ’ ಪ್ರಚಲಿತವಿದೆ. ಇದೇ ಮಾದರಿಯಲ್ಲಿ, ‘ಬೇಂದ್ರೆ ಸಂಗೀತ ಪರಂಪರೆ’ ಆರಂಭಿಸುವ ಮಹದಾಸೆ ಡಾ. ವಾಮನ್ ಅವರಲ್ಲಿತ್ತು. ವರಕವಿ ದ.ರಾ. ಬೇಂದ್ರೆ ಅವರು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಹೊಂದಿದ್ದ ಅಪಾರ ಮತ್ತು ಆಳ ಜ್ಞಾನದ ಫಲವಾಗಿ ಕನ್ನಡದಲ್ಲಿ ರಚಿಸಿಟ್ಟ ‘ಚೀಜ್’ ಹಾಗೂ ‘ಬಂದಿಶ್’ಗಳ ಸಮೇತ, ಅಪ್ಪ ಬೇಂದ್ರೆ ಅವರ ಕೃತಿಗಳನ್ನು ಸಂಗೀತಕ್ಕೆ ಅಳವಡಿಸಿ, ಮನೆ-ಮನಗಳಿಗೆ ತಲುಪಿಸಬೇಕೆಂಬ ತುಡಿತ ಅವರಲ್ಲಿ ಪ್ರಾಮಾಣಿಕವಾಗಿ ಮನೆ ಮಾಡಿತ್ತು. ಈ ಬಗ್ಗೆ ಯೋಚಿಸಲು ಮತ್ತು ಯೋಜಿಸಲು ನಮಗೆ ಸಕಾಲ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗುವುದು ಅವರಿಗೆ ಸಲ್ಲಿಸುವ ‘ನಡೆ ನಮನ.’
ವಿ.ವಿ. ಶಿರವಾಡಕರ್ ಮರಾಠಿಯಲ್ಲಿ ರಚಿಸಿದ ಸುಪ್ರಸಿದ್ಧ ನಾಟಕ ‘ನಟ ಸಾಮ್ರಾಟ್’. ಕನ್ನಡಕ್ಕೆ ಭಾವಾನುವಾದ ಮಾಡಿದ ಡಾ. ವಾಮನ್ ಬೇಂದ್ರೆ ಅವರು, ನಟ ಸಾಮ್ರಾಟ ನಾಟಕ, ಏಣಗಿ ಬಾಳಪ್ಪ ಹಾಗೂ ಏಣಗಿ ನಟರಾಜ ಅವರ ಪ್ರಧಾನ ಭೂಮಿಕೆಯಲ್ಲಿ ಮೂಡಿಬಂದಾಗ, ಅನುರಣಿಸಿದ ಕಂಪನ ಇನ್ನೂ ನಾಟಕಾಸಕ್ತರ ಭಾವದಲ್ಲಿ ಸ್ಥಾಯಿಯಾಗಿದೆ ಎಂದು ನೆನಪಿಸಿಕೊಳ್ಳುತ್ತಾರೆ ಆಕಾಶವಾಣಿಯ ಹಿರಿಯ ಕಾರ್ಯಕ್ರಮ ನಿರ್ವಾಹಕ ಹಾಗೂ ನಟ ಅನಿಲ್ ದೇಸಾಯಿ.
ಹಿರಿಯ ಉದ್ಘೋಷಕ ಡಾ. ಶಶಿಧರ ನರೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಬೇಂದ್ರೆ ರೂಪಕ’, ಹಾಗೂ ಹಿರಿಯ ನಟ ಅನಂತ ದೇಶಪಾಂಡೆ ಅವರ ‘ಬೇಂದ್ರೆ ದರ್ಶನ’ ಏಕ ವ್ಯಕ್ತಿ ಪ್ರದರ್ಶನಗಳ ಹಿಂದೆ, ಡಾ. ವಾಮನ್ ಬೇಂದ್ರೆ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದ್ದರು. ವರಕವಿ ಬೇಂದ್ರೆಯಾಗಿ ಅದ್ಭುತ ಅಭಿನಯ-ಅನುಕರಣೆ ಸಾಧಿಸಿದ ಅನಂತ ದೇಶಪಾಂಡೆ ಅವರಿಗೆ, ಶಾಲು ಹೊದಿಸಿ, ಮಾಲೆ ಹಾಕಿ .. ‘ಅನಂತ ಅಣ್ಣಾನ.. ನಿನ್ನೊಳಗ ನೋಡ್ದೆ’ ಅಂದು, ಅಪ್ಪಿಕೊಂಡು ಪಾದಕ್ಕೆರಗಿ ಡಾ. ವಾಮನ್ ಬೇಂದ್ರೆ ನಮಸ್ಕರಿಸಿದಾಗ ಸಭಾಂಗಣದಲ್ಲಿ ಆನಂದ ಭಾಷ್ಪ.
2014 ರಲ್ಲಿ ಡಾ. ವಾಮನ್ ಅವರಿಗೆ 80 ತುಂಬಿದಾಗ, ಡಾ. ಶ್ಯಾಮಸುಂದರ ಬಿದರಕುಂದಿ ಅವರ ಸಂಪಾದಕತ್ವದಲ್ಲಿ ಸಂ.ವಾ.ದ ಸಂಪದ ಅಭಿನಂದನ ಗ್ರಂಥ ಸಮರ್ಪಿಸಲಾಗಿದೆ. ವರ್ಷಾಂತಿಕದ ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವ ಮತ್ತು ಕೃತಿತ್ವ ದರ್ಶಿಸುವ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಡಾ. ಶ್ಯಾಮಸುಂದರ ಬಿದರಕುಂದಿ ಕರ್ಣಧಾರತ್ವದ ಧಾರವಾಡದ ಬೇಂದ್ರೆ ಟ್ರಸ್ಟ್ ಹಾಗೂ ಹುಬ್ಬಳ್ಳಿ ಕೆ.ಎಸ್. ಶರ್ಮಾ ಸಾರಥ್ಯದ ಬೇಂದ್ರೆ ಸಂಶೋಧನಾ ಸಂಸ್ಥೆ ಆಯೋಜಿಸಿವೆ.
‘ಬರೀ ಬೆಂದ್ರ ಬೇಂದ್ರೆ ಆಗೂದುಲ್ಲೋ ತಮ್ಮಾ.. ಸುಟ್ಟು ಬೂದಿ ಆಕ್ಕಿ.. ಜೀವನಾನುಭವದೊಳಗ ಮಾಗಬೇಕು ಅಂದೆ..’ ಅಂಬಿಕಾತನಯದತ್ತರ ನಿಜಾರ್ಥದ ಉತ್ತರದಾಯಿತ್ವ ಸಂಪಾದಿಸಿದ್ದ, 82 ವಸಂತಗಳನ್ನು ಸವಿದು-ಸವೆದ ಡಾ. ವಾಮನ ನಿಜಕ್ಕೂ ಅವಧೂತ ಸಂಪನ್ನ ಬೇಂದ್ರೆ. ಅವರನ್ನು ನೆನೆಯೋಣ. ಮುಂದಿನ ಪೀಳಿಗೆಗೆ ಪರಿಚಯಿಸೋಣ. ಕಾರಣ, ಈಗ ವಾಮನ ಬಾಳಣ್ಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.