ಧಾರವಾಡ : ನಮ್ಮ ನಾಲಗೆ 10 ಸಾವಿರ ರುಚಿಗಳನ್ನು ಆಸ್ವಾದಿಸುವ ಸ್ವಾದಕೋಶ ಹೊಂದಿದೆ. ರುಚಿ ಕಟ್ಟುವ ರಾಸಾಯನಿಕಗಳ ಬಳಕೆಯಿಂದ, ಆರೋಗ್ಯದ ವೈದ್ಯಕೀಕರಣ ಮುನ್ನೆಲೆಗೆ ಬಂದಿದೆ. ನಮ್ಮ ಸಮಾಜ ಆರೋಗ್ಯವಂತವಾಗದೇ, ರೋಗ ಸಹಿಷ್ಣುವಾಗುವ ಗುಣ ಬೆಳೆಸಿಕೊಳ್ಳುತ್ತಿದೆ. ಹೀಗಾಗಿ, ನಮ್ಮ ಆಹಾರ ಪದ್ಧತಿ ಬದಲಾಗಬೇಕಿದೆ ಎಂದು ಆಹಾರ ತಂತ್ರಜ್ಞಾನಿ, ಚಿಂತಕ ಮತ್ತು ಅಂಕಣಕಾರ ಬೆಂಗಳೂರಿನ ಕೆ.ಸಿ. ರಘು ಅಭಿಪ್ರಾಯಪಟ್ಟರು.
ಸೆಂಟರ್ ಫಾರ್ ಡೆವಲಪ್ಮೆಂಟಲ್ ಸ್ಟಡೀಸ್ -ಸಿಡಿಎಸ್ ಧಾರವಾಡ, ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಸರ್ ಎಂ. ವಿಶ್ವೇಶ್ವರಾಯಾ ಸಭಾಂಗಣದಲ್ಲಿ, ಇಂದು (ಸೆ. 20 ಬುಧವಾರ) ಆಯೋಜಿಸಿದ್ದ, ‘ಆಹಾರದ ರಾಜಕೀಯ’ ಕುರಿತು ವಿಶೇಷ ಉಪನ್ಯಾಸ ನೀಡಿ, ಜಾಗತಿಕ ಮಟ್ಟದಲ್ಲಿ ಆಹಾರದ ವಿಷಯದಲ್ಲಿ ವಿಜ್ಞಾನದ ದುರ್ಬಳಕೆಯಾಗುತ್ತಿದೆ ಎಂದರು.
ರಸ ಮತ್ತು ರುಚಿಯಿಂದ ವಂಚಿತವಾಗುತ್ತಿರುವ ಪೀಳಿಗೆ ರೂಪುಗೊಳ್ಳುತ್ತಿದೆ. ಸಮಗ್ರ ಆಹಾರ ಸೇವಿಸುವ ಪರಿಕಲ್ಪನೆ ಹೊರಟು ಹೋಗುತ್ತದೆ. ಜಾಹಿರಾತುಗಳ ಮನಮುಟ್ಟುವ ಸೃಜನಶೀಲ ಅಭಿವ್ಯಕ್ತಿಗೆ ಸೋತು, ಜೀವದಾಯಕವಲ್ಲದ ಆಹಾರ ಸೇವನೆ ಹೆಚ್ಚುತ್ತಿದೆ ಎಂದು ಕೆ.ಸಿ. ರಘು ಹೇಳಿದರು.
ಪ್ರತಿಯೊಂದು ಮನೆ ತನ್ನ ಹಿರೀಕರ ಜಾಣ್ಮೆ ಆಧರಿಸಿ ‘ಆಹಾರ ನಕಾಶೆ’ ಸಿದ್ಧಪಡಿಸಬಹುದು. ಪಾರಂಪರಿಕ ‘ಆಹಾರ ಸಂಸ್ಕೃತಿ’ಯೊಂದನ್ನು ಪುನಃ ಕಟ್ಟಿಕೊಳ್ಳಬಹುದು. ತೂಕ ಮಾಡಿ ತಿನ್ನುವ ಪರಿಗಿಂತ, ಉಣ್ಣುವ ದಿನಿಸು ಸಮಗ್ರವಾಗಿರುವಂತೆ ನೋಡಿಕೊಳ್ಳುವ ಸದವಕಾಶ ಇದೆ. ಪಚನ ಸಂಬಂಧಿ ರೋಗ, ಬೊಜ್ಜು ಸೇರಿದಂತೆ ಮನೋ-ದೈಹಿಕ ಕಾಯಿಲೆಗಳಿಗೆ ಮನೆಯ ಪಾಕಶಾಲೆಯೇ ಉತ್ತರ ಒದಗಿಸಬಲ್ಲದು. ಊಟ ಬಲ್ಲವ ನಿರೋಗಿ ಎಂದು ಕೆ.ಸಿ. ರಘು ನುಡಿದರು.
‘ಬ್ರೇನ್ ವಾಷ್’ ಮತ್ತು ‘ಬ್ರ್ಯಾಂಡ್ ವಾಷ್’ ಎಂಬ ಎರಡು ಸಿದ್ಧಾಂತಗಳ ಬಗ್ಗೆ ಉಲ್ಲೇಖಿಸಿದ ಕೆ.ಸಿ. ರಘು, ಜಿಡಿಪಿಯ 1.5%, ಪ್ರತಿಯೊಬ್ಬ ತನ್ನ ಗಳಿಕೆಯ ೩.೫% ಹಾಗೂ ಒಟ್ಟು 7.5 ಲಕ್ಷ ಕೋಟಿ ರೂಪಾಯಿಗಳನ್ನು ಚಿಕಿತ್ಸೆ-ಆರೋಗ್ಯ ಪಾಲನೆಗಾಗಿ ಸರ್ಕಾರ ವ್ಯಯಿಸುವಂತಾಗಿದೆ. ಜಾಗತಿಕವಾಗಿ 110 ಕೋಟಿ ಜನ ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಶೇ.22 ರಷ್ಟು ಭಾರತೀಯರಲ್ಲಿ ಬೊಜ್ಜಿನ ಕಾಯಿಲೆಗಳು ಚಿಕಿತ್ಸೆಯ ಹಂತ ಮೀರುತ್ತಿವೆ ಎಂದು ಕಳವಳ ವ್ಯಕ್ತ ಪಡಿಸಿದರು.
‘ಸ್ಟ್ಯಾಂಡರ್ಡೈಸೇಷನ್’ ಅಗತ್ಯವಿಲ್ಲ. ಜೋಳ ತಿನ್ನುವವರಿಗೆ ಅಕ್ಕಿ, ಬೇಳೆ ತಿನ್ನುವವರಿಗೆ ಟೊಮೆಟೊ ಒದಗಿಸುವುದು ಆಹಾರ ಸಂಸ್ಕೃತಿಯ ಮೇಲೆ ನೇರ ಹಲ್ಲೆ. ಸಂಪೂರ್ಣ ಶುದ್ಧೀಕರಿಸುವುದು ಎಂದರೆ ‘ಜಂಕ್’ ಎಂದೇ ಅರ್ಥ. 15 ಸಾವಿರ ವರ್ಷಗಳ ಬೆವರಿನ ಫಲ ಸಿರಿ ಧಾನ್ಯಗಳು. ಕೇವಲ ಕಳೆದ 40 ವರ್ಷಗಳಲ್ಲಿ ಈ ಜಾಣ್ಮೆ, ಪಾಕ ಪ್ರಾವಿಣ್ಯ ನಾವು ಕಳೆದುಕೊಂಡು, ಅಕ್ಕಿ, ಗೋದಿ ಮತ್ತು ಮೈದಾಕ್ಕೆ ಅಂಟಿಕೊಳ್ಳುವಂತಾಗಿದ್ದು ದುರಂತ ಎಂದು ಕೆ.ಸಿ. ರಘು ಎಚ್ಚರಿಸಿದರು.
ಹಂದಿ, ಕೋಳಿ, ಮೀನು ಮತ್ತು ಕುರಿ ಸಾಕಣೆಯಲ್ಲಿ ಪ್ರಾಣಿಗಳ ಪೋಷಣೆಯ ವಿವಿಧ ಹಂತಗಳಲ್ಲಿ ಆಂಟಿಬಯೋಟಿಕ್ಗಳ ಬಳಕೆ ಈಗ ಹಿಂದೆಂದಿಗಿಂತಲೂ ಹೆಚ್ಚಿದೆ. ‘ಫ್ಯಾಟ್ ಟ್ಯಾಕ್ಸ್’ ವಿಧಿಸುವ ಮಟ್ಟಿಗೆ ಕೊಬ್ಬಿಸಲು ಪಶು ಆಹಾರ ಪೋಷಕಾಂಶಗಳಿಂದ ತುಂಬಿಸಲಾಗುತ್ತಿದೆ. ಮಾಂಸಾಹಾರಿಗಳು ಎಚ್ಚರವಹಿಸಬೇಕಾದ ಅವಶ್ಯಕತೆ ಇದೆ. ಆಹಾರದಲ್ಲಿ ಯಾವುದೂ ನಿಯಮಿತವಾಗದಂತೆ ನಾವು ನೋಡಿಕೊಳ್ಳಬೇಕು ಎಂದು ತಜ್ಞ ಕೆ.ಸಿ. ರಘು ಮನವಿ ಮಾಡಿದರು.
ಮಾಲತಿ ದಿವಾಕರ ಪ್ರಾರ್ಥಿಸಿದರು. ಸಿಡಿಎಸ್ ಸಂಚಾಲಕ ದಿವಾಕರ ಹೆಗಡೆ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು. ಸಿಡಿಎಸ್ ಸಂಯೋಜಕ ಹರ್ಷವರ್ಧನ ಶೀಲವಂತ ವೇದಿಕೆಯ ಮೇಲಿದ್ದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಡಾ. ಮಾಲತಿ ಪಟ್ಟಣಶೆಟ್ಟಿ, ಸಿ.ಯು. ಬೆಳ್ಳಕ್ಕಿ, ಡಾ. ಪರಾಗ ಮೆಳವಂಕಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಕೆ.ಸಿ. ರಘು ಅವರ ಸಂಕ್ಷಿಪ್ತ ಪರಿಚಯ :
ಹೆಸರಾಂತ ಆಹಾರ ತಂತ್ರಜ್ಞಾನಿ. ಆಹಾರ ಮತ್ತು ಪೌಷ್ಟಿಕತೆ ಕುರಿತ ಪಾಕ್ಷಿಕವನ್ನು ದಶಕಗಳಿಂದ ಸಂಪಾದಿಸುತ್ತಿರುವ ಖ್ಯಾತ ಸಂಪಾದಕ. ಸಿಟಿ ಟುಡೇ ಪತ್ರಿಕೆಗೆ ವಿಜ್ಞಾನ ವಿಷಯವಾಗಿ, ಆರೋಗ್ಯ ವಿಷಯವಾಗಿ ಕನ್ನಡದ ಬಹುತೇಕ ದಿನ ಪತ್ರಿಕೆಗಳಿಗೆ ಅಂಕಣ ಬರೆದು, ಶ್ರೀಸಾಮಾನ್ಯರಿಗೆ ಆಹಾರ ಮತ್ತು ಆರೋಗ್ಯ ಕುರಿತಾಗಿ ತಿಳಿವಳಿಕೆ ಮೂಡಿಸುತ್ತಿರುವ ಸಾಮಾಜಿಕ ಕಳಕಳಿಯ ವಿಜ್ಞಾನಿ. ವಂಶಪಾರಂಪರ್ಯ ಖಾಯಿಲೆ ‘ಜೆನೆಟಿಕ್ ಡಿಸ್ಆರ್ಡರ್ಸ’ ಗಳಿಗೆ, ವಿಶೇಷ ವೈದ್ಯಕೀಯ ಆಹಾರ ಪದ್ಧತಿ ಸಿದ್ಧ ಪಡಿಸಿ, ಸಾವಯವ ಆಹಾರ ಪದಾರ್ಥ ಬಳಸಿ ಔಷಧ ರೂಪದಲ್ಲಿ ಆಹಾರ ಕ್ರಮ ರೂಪಿಸಿದ ಹೆಗ್ಗಳಿಕೆ ಶ್ರೀ ಕೆ.ಸಿ. ರಘು ಅವರದ್ದು. ಹೆಚ್ಚಿನ ಮಾಹಿತಿಗೆ ಮಿಂಚಂಚೆ: kcraghu1965@gmail.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.