ಬಿಡುಗಡೆಗೆ ಕಾತರಿಸಿರುವ ರೆಕ್ಕೆಯ ಮಿತ್ರರು / ಸಾಕುವವರ ಉಮ್ಮೇದಿಗೆ ಬಂಧನ ಭಾಗ್ಯ
ಧಾರವಾಡ : ವನ್ಯಜೀವಿ ಸಂರಕ್ಷಣಾ ಕಾಯ್ದೆ (53) 1972ರ ಪ್ರಕಾರ, ದೇಶದ ಎಲ್ಲ ಪ್ರಾಣಿ-ಪಕ್ಷಿಗಳು ಸರ್ಕಾರದ ಆಸ್ತಿ. ಅವುಗಳನ್ನು ಬಂಧಿಸುವ, ಪಂಜರದಲ್ಲಿ ಸಾಕುವ, ಹಿಂಸಿಸುವ, ಚಿಕಿತ್ಸೆ ನೀಡುವ ಯಾವ ಅಧಿಕಾರವೂ, ಶಾಸನಬದ್ಧವಾಗಿ ನೇಮಕಗೊಂಡ ಅಧಿಕಾರಿ ಹೊರತು ಪಡಿಸಿ, ಶ್ರೀ ಸಾಮಾನ್ಯರಿಗೆ ಇಲ್ಲ.
ನಮ್ಮ ದೇಶದ ಯಾವುದೇ ಹಕ್ಕಿಗಳನ್ನು ಬಂಧಿಸಿ, ಖರೀದಿಸಿ, ಪಂಜರದೊಳಿಟ್ಟು ಸಾಕುವಂತಿಲ್ಲ. ಪ್ರಾಣಿ ಹಿಂಸೆ ತಡೆ (ಪ್ರಾಣಿ ಬಂಧನ) ನಿಯಮಗಳು, 1972ರ ಅಡಿ, ಮತ್ತು 1979ರ ಗೆಝೆಟ್ ಪ್ರಕಟಣೆಯಂತೆ, ಮಾರಾಟಕ್ಕೆ, ವಿದೇಶಕ್ಕೆ ರಫ್ತು ಮಾಡಲು ಅಥವಾ ಸಾಕಲು ಶ್ರೀಸಾಮಾನ್ಯರು ಬಂಧಿಸುವಂತಿಲ್ಲ. ಪೊಲೀಸ್, ಮಿಲಿಟರಿ ಅಥವಾ ರಕ್ಷಣಾ ಪಡೆಗಳಿಂದ ದೇಶದ ಬಾಹ್ಯ ಮತ್ತು ಆಂತರಿಕ ಸುರಕ್ಷತೆಗಾಗಿ, ವೈಜ್ಞಾನಿಕ ಸಂಶೋಧನೆಗಳಿಗಾಗಿ ಅಥವಾ ಶೈಕ್ಷಣಿಕ ಉದ್ದೇಶಕ್ಕಾಗಿ ನಿಗದಿತ ಪ್ರಯೋಗಾಲಯ ಮತ್ತು ಮೃಗಾಲಯಗಳಲ್ಲಿ ತರಬೇತಿ ಪಡೆದ ಅಧಿಕಾರಿಗಳು, ವೈದ್ಯರ ಪಾಲಕತ್ವದಡಿ ಸರ್ಕಾರ ಬಂಧಿತ ಪ್ರಾಣಿ-ಪಕ್ಷಿಯ ಬದುಕಲು ಯೋಗ್ಯ ವಾತಾವರಣ ನಿರ್ಮಿಸಿ, ಇಡಬಹುದು.
ಆದರೆ, ಅವುಗಳ ಮಾನ-ಪ್ರಾಣ ರಕ್ಷಣೆಯ ಹೊಣೆ ನಮ್ಮೆಲ್ಲರದ್ದು. ಪ್ರಾಣಿ-ಪಕ್ಷಿಗಳು ತಮ್ಮ ಹಕ್ಕನ್ನು ಸಾಕ್ಷೀಕರಿಸುವ ಪ್ರಜ್ಞೆ ಅಥವಾ ಕರ್ತವ್ಯ ನಿಭಾವಣೆಯ ಜ್ಞಾನ ಹೊಂದಿಲ್ಲದ ಕಾರಣ, ಅವುಗಳ ಬದುಕುವ ಮೂಲಭೂತ ಹಕ್ಕನ್ನು ಗೌರವಿಸುವ ಸಾಂವಿಧಾನಿಕ ಹೊಣೆ ಮನುಷ್ಯರಿಗೆ ವರ್ಗಾಯಿಸಲ್ಪಟ್ಟಿದೆ. ಇದು ಕೇವಲ ಅರಣ್ಯ ಇಲಾಖೆಯ ವನ್ಯ ಜೀವಿ ಸಂರಕ್ಷಣಾ ವಿಭಾಗದ ಕೆಲಸವಲ್ಲ. ನಾಗರಿಕ ಪರಿಸರ ಸ್ವಯಂ ಸೇವಕರಾಗಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಅವುಗಳ ಹಿತ ಕಾಯುವ ಸಂಕಲ್ಪ ಮಾಡಬೇಕಿದೆ.
ಹಕ್ಕಿಗಳು ಅಲಂಕಾರಿಕ ವಸ್ತುಗಳಲ್ಲ!
ಕಾರಣ, ಮನೆಯ ವಾಸ್ತು, ಗೃಹ ಅಲಂಕಾರ, ಮಕ್ಕಳ ಬೇಡಿಕೆ, ಒಣ ಪ್ರತಿಷ್ಠೆ, ಮನುಷ್ಯತ್ವದ ಪ್ರದರ್ಶನ, ನಾನೂ ಪರಿಸರ ಕಾರ್ಯಕರ್ತ.. ಎಂಬೆಲ್ಲ ನೆಪಗಳನ್ನು ಮುಂದೆ ಮಾಡಿ, ವಿದೇಶದಿಂದ ಆಮದಾದ ಪ್ರಾಣಿ ಪಕ್ಷಿಗಳನ್ನು ಸಾಕಲು ಮೊದಲು ಮಾಡುವ ನಾವು (ಈ ಬಗ್ಗೆ ನಮ್ಮ ನೆಲದ ಕಾನೂನು ಏನೂ ಹೇಳುವುದಿಲ್ಲ!) ಕ್ರಮೇಣ, ದೇಶಿ ಪಕ್ಷಿ-ಪ್ರಾಣಿಗಳನ್ನು ತಂದು ಸಾಕಲು ಆರಂಭಿಸುತ್ತೇವೆ. ಸ್ಥಳೀಯ ಬೇಟೆಗಾರರ ಸಹಾಯದಿಂದ ಸ್ವಚ್ಛಂದ ಪಕ್ಷಿಗಳ ಬಂಧನವಾಗುತ್ತದೆ. ‘ಪೆಟ್ ಶಾಪೀ’ಯಲ್ಲಿ ಹಗಲೇ ಅವುಗಳ ಮಾರಾಟ ಮತ್ತು ಖರೀದಿ ರಾಜಾರೋಷವಾಗಿ ನಡೆಯುತ್ತದೆ.
ಇತ್ತೇಚೆಗೆ ನೇಚರ್ ರಿಸರ್ಚ್ ಸೆಂಟರ್ ಸ್ವಯಂ ಸೇವಕರ ತಂಡ ಹಳಿಯಾಳ ರಸ್ತೆಯ ಮಾವಿನಕೊಪ್ಪ ಕೆರೆಗೆ ಪಕ್ಷಿ ವೀಕ್ಷಣೆಗೆ ತೆರಳಿದಾಗ, ಜಂಗಲ್ ಪ್ಯಾಟ್ರಿಜ್ (ಕೌಜಗ, ಗೌಜಗ) ಹೆಣ್ಣು ಪಕ್ಷಿ ಬಂಧಿಸಿ ಕೆರೆಯ ಜೌಗು ಪ್ರದೇಶದಲ್ಲಿ ಇಡಲಾಗಿತ್ತು. ಸುತ್ತಲೂ ಮತ್ತೆ ಹತ್ತಾರು ‘ಟ್ರ್ಯಾಪ್ ಬಲೆ’ ಹೆಣೆಯಲಾಗಿತ್ತು. ಹೀಗೆ ಮಾಡಿದ್ದ ಸ್ಥಳೀಯ ವ್ಯಕ್ತಿಯ ದರ್ಶನವೂ ಆಯಿತು. ಅವನ ಬಳಿ ೨೦ಕ್ಕೂ ಹೆಚ್ಚು ಹೆಣ್ಣು ಕೌಜುಗಗಳಿವೆ. ಅವುಗಳ ಸಂತಾನಾಭಿವೃದ್ಧಿಗೆ ಗಂಡು ಪಕ್ಷಿಯ ಅವಶ್ಯಕತೆ ಇದೆ. ಈ ಹೆಣ್ಣು ಹಕ್ಕಿಯನ್ನು ಮುಂದುಮಾಡಿ, ಗಂಡನ್ನು ಆಕರ್ಷಿಸಿ ಬಂಧಿಸುವ ಪ್ರಯತ್ನ ಅವನದು!
ಇದೇ ಪಕ್ಷಿ, ‘ಗುಡ್ ಪಾಟಿಂಗ್ ಬರ್ಡ್’ ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಡುತ್ತದೆ. ಮಾಂಸ ಬಲು ರುಚಿ, ಕಾಮಾಸಕ್ತಿ ಹೆಚ್ಚಿಸುತ್ತದೆ. ಪಾರ್ಶ್ವವಾಯು ಪೀಡಿತರಿಗೆ ಔಷಧಿ.. ಹೀಗೆ. ಅವುಗಳ ಬಂಧಿಸಿ ತಂದು, ಪೇಟೆಯಲ್ಲಿ ಮಾರಾಟ, ಖರೀದಿ, ಮಾಂಸ ಮಾರಾಟವೂ ಸೂಪರ್ ಮಾರ್ಕೆಟ್ ಹಿಂಬದಿಯ ಹಜರತ್ ಟಿಪ್ಪು ಸುಲ್ತಾನ್ ಮಾರ್ಗದ ಕೋಳಿ ಮಾಂಸದ ಅಂಗಡಿಗಳಲ್ಲಿ ನಡೆಯುತ್ತದೆ. ಬೇಟೆಯನ್ನು ಮೈಗೂಡಿಸಿಕೊಂಡಿರುವ ಗೋಸಾವಿಗಳು, ಚಿಕ್ಕಲಿಗರು ಲಕ್ಷ್ಮೀಸಿಂಗನ ಕೆರೆ, ತೇಜಸ್ವಿನಗರ, ಸಾರಸ್ವತಪುರ (ಸರಸ್ವತಿಪುರ) ಭಾಗಗಳಲ್ಲಿ ಮನೆಯ ಮುಂದೆ ಅತ್ಯಂತ ಪುಟ್ಟ ಪಂಜರದಲ್ಲಿ ಬಂಧಿಸಿ ತೂಗು ಬಿಟ್ಟಿರುವ ದೃಶ್ಯ ಕಾಣಬಹುದು.
ಇದೇ ಪರಿಸ್ಥಿತಿ, ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕೊಳ್ಳ, ಗುಡ್ಡ ಸವರಿದ ನಿಸರ್ಗ ಬಡಾವಣೆ, ಹನುಮಂತನಗರ ಭಾಗಗಳಲ್ಲಿ ಕಾಡು ಮೊಲಗಳನ್ನು ಬಂಧಿಸಲು, ಕ್ಲಚ್ ಕೇಬಲ್ ಬಳಸಿ ನಿರ್ಮಿಸಿದ ಉರುಳು ಬೆಳಗ್ಗೆ ವಾಕಿಂಗ್ ಹೋದವರ ಕಾಲಿಗೂ ತೊಡರಬಹುದು! ಇದು ತಿಳಿಯದವರ ನಡೆ.
ಇನ್ನು ತಿಳಿದವರ ನಡಾವಳಿ..
ನಮ್ಮ ಧಾರವಾಡದ ಬಹುತೇಕ ಬಡಾವಣೆಗಳಲ್ಲಿ ಗಿಳಿ, ಪ್ಯಾರಾಕೀಟ್ ಮತ್ತು ರೋಸ್ ರಿಂಗ್ಡ್ ಪ್ಯಾರಾಕೀಟ್ ಬ್ಯಾಟರಿ ಕೇಜ್ಗಳಲ್ಲಿ ಸಾಕಿದವರಿದ್ದಾರೆ. ಹಳದಿ ಹೂ ಗುಬ್ಬಿ -ಪರ್ಪಲ್ ರಂಪ್ಡ್ ಸನ್ ಬರ್ಡ್ ವಿದ್ಯಾಗಿರಿ ಮತ್ತು ಸತ್ತೂರು ಕಾಲೋನಿಯ ಕೆಲ ಮನೆಗಳಲ್ಲಿ ಮುಂದೆಯೇ ತೂಗು ಬಿಟ್ಟಿದ್ದಾರೆ. ಲವ್ ಬರ್ಡ್ಸ್ ಜೊತೆ ಇಂಡಿಯನ್ ಸ್ಪಾಟೆಡ್ ಮುನಿಯಾ ಪಂಜರದೊಳು ಬಂಧಿಸಿ ಇಟ್ಟವರಿದ್ದಾರೆ. ಕರ್ನಾಟಕದ ರಾಜ್ಯ ಪಕ್ಷಿ ನೀಲಕಂಠ, ಇಂಡಿಯನ್ ರೋಲರ್, ಜಂಗಲ್ ಮತ್ತು ನಗರದ ಮೈನಾ, ಗ್ರೇ ಹಾರ್ನ್ಬಿಲ್, ಜಂಗಲ್ ಫೌಲ್ – ಕಾಡು ಹುಂಜ ಸಾಕಿಕೊಂಡವರಿದ್ದಾರೆ. ಕಾಯ್ದೆ ಅಡಿ ಇದು ಸಂಪೂರ್ಣ ನಿಷಿದ್ಧ. ಶಿಕ್ಷಾರ್ಹ, ದಂಡನೀಯ ಅಪರಾಧವೂ. ಮೊದಲಿಗೆ, ಎಫ್ಓಸಿ – ಫಾರೆಸ್ಟ್ ಆಫೆನ್ಸಿಸ್ ಕೇಸ್ ನಂತರ ಎಫ್ಐಆರ್ – ಪೊಲೀಸ್ ಪ್ರಕರಣ ದಾಖಲೆಯಾಗಬಹುದು.
ಕ್ರಮಕ್ಕೆ ಸಿದ್ಧತೆ
ಬರುವ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ, ನೇಚರ್ ರಿಸರ್ಚ್ ಸೆಂಟರ್ ಸಹಯೋಗದಲ್ಲಿ ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಈ ಕುರಿತು ಸಮೀಕ್ಷಾ ಕಾರ್ಯ ಯೋಜಿಸಲಾಗಿದೆ. ಇನ್ನೂ 13 ದಿನ ಬಾಕಿ ಇರುವಾಗಲೇ ಈ ತಿಳಿವಳಿಕೆ ಪ್ರಕಟಣೆ ಹೊರಡಿಸಲಾಗಿದೆ. ಹೀಗೆ, ಸ್ವಚ್ಛಂದ ಬಾನಾಡಿಗಳನ್ನು ಬಂಧಿಸಿಟ್ಟವರು ಕೂಡಲೇ ಬಿಡುಗಡೆಗೊಳಿಸಿ ಅವುಗಳಿಗೆ ಸ್ವಾತಂತ್ರ್ಯ ಕರುಣಿಸುವಂತೆ ಮನವಿ ಮಾಡುತ್ತಿದ್ದೇವೆ.
ಈಗಾಗಲೇ ಮಾದರಿ ಸಮೀಕ್ಷೆ ಪೂರ್ಣಗೊಂಡಿದೆ. ಎರಡನೇ ಹಂತದ ಪ್ರಾಯೋಗಿಕ ಮನೆ-ಮನೆಯ ಸಮೀಕ್ಷೆಯ ವೇಳೆ ಹಾಗೊಂದು ಬಾರಿ ಸ್ವದೇಶಿ ಪಕ್ಷಿಗಳನ್ನು ಬಂಧಿಸಿ ಪಂಜರದೊಳಕ್ಕೆ ಇಟ್ಟಿದ್ದು, ಕಂಡುಬಂದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಗ್ರಹಿತ ಸಾಕ್ಷಿಗಳ ಸಮೇತ ವರದಿ ಸಲ್ಲಿಸಲು ಯೋಜಿಸಲಾಗಿದೆ. ದಯವಿಟ್ಟು, ಮಾನವೀಯತೆ ದೃಷ್ಟಿಯಿಂದ ಪಕ್ಷಿಗಳನ್ನು ಕೂಡಲೇ ಸಮೀಪದ ಕಾಡಿನಲ್ಲಿ ಬಿಡುಗಡೆಗೊಳಿಸುವಂತೆ, ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸುಪರ್ದಿಗೆ ವಹಿಸುವಂತೆ ಕೋರುತ್ತಿದ್ದೇವೆ.
ವಿಶ್ವಾಸವಿದೆ.
ಅವಳಿ ನಗರದ ‘ಪೆಟ್ ಶಾಪೀ’ ಮಾಲೀಕರಿಗೂ ಈ ಬಗ್ಗೆ ತಿಳಿವಳಿಕೆ, ಅರಿವು ಮೂಡಿಸುವ ಕೆಲಸವಾಗಬೇಕಿದೆ. ಸ್ವದೇಶಿ ತಳಿಯ ವನ್ಯ ಸಂಪತ್ತಿನ ಖರೀದಿ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧ. ಜನರೂ ಕೂಡ ತಮ್ಮ ಸ್ವಾತಂತ್ರ್ಯ ಪ್ರೀತಿಸುವಂತೆ, ಅವುಗಳ ಸ್ವಚ್ಛಂದ ಬದುಕನ್ನು ಕಸಿದು, ಅನುಭವಿಸುವ ಪ್ರಯತ್ನ ಮಾಡಬಾರದು. ಮಕ್ಕಳಿಗೆ ಪಕ್ಷಿ ವೀಕ್ಷಣೆ ಕಲಿಸಲು ಶಾಲೆ-ಕಾಲೇಜುಗಳು ಮನಸ್ಸು ಮಾಡಲಿ. ಮನವಿ ರೂಪದ ಈ ಎಚ್ಚರಿಕೆಗೆ ಪ್ರಾಜ್ಞರಾದ ಅವರು ಸ್ಪಂದಿಸುವ ವಿಶ್ವಾಸ ನಮಗಿದೆ.– ಪ್ರೊ. ಗಂಗಾಧರ ಕಲ್ಲೂರ, ವನ್ಯ ಜೀವಿಗಳ ಗೌರವ ಕ್ಷೇಮಪಾಲಕರು, ಧಾರವಾಡ ಜಿಲ್ಲೆ.
ಪರ್ಯಾಯ ವ್ಯಸವ್ಥೆ ಬೇಕು.
ಗಿಳಿ ಸಾಕಿಕೊಂಡು ರಸ್ತೆ ಬದಿಗೆ ಭವಿಷ್ಯ ಹೇಳುತ್ತ ಅಷ್ಟೋ-ಇಷ್ಟೋ ಗಳಿಸುವ ‘ಕುರ್ರ ಮಾಮಾ’ ಎನ್ನಲಾಗುವ ಬಡ ತಳ ಸಮುದಾಯದ ಜನರಿದ್ದಾರೆ. ಅತ್ಯಂತ ಪುಟ್ಟ ಪಂಜರದ ಒಳಗೆ ಗಿಳಿಯ ಬದುಕು ಅಕ್ಷರಶಃ ನರಕ. ಆದರೆ, ಕೂಡಲೇ ಆ ಗಿಳಿಯನ್ನು ಅವರಿಂದ ಕಸಿದಿದ್ದೇ ಆದರೆ, ಅನ್ನವನ್ನೇ ಕಿತ್ತುಕೊಂಡಂತೆ. ಅವರಿಗೆ ಪರ್ಯಾಯ ಉದ್ಯೋಗ, ಕೌಶಲ್ಯ ವೃದ್ಧಿ ಪಡಿಸುವ ತರಬೇತಿ ಕೊಡಿಸಿ, ಕಟ್ಟುನಿಟ್ಟಾಗಿ ಕ್ರಮ ಅನುಷ್ಠಾನಗೊಳಿಸಬೇಕು. ಕರಡಿ ಕುಣಿಸುತ್ತಿದ್ದ ಸಮುದಾಯಕ್ಕೆ ಪುನರ್ವಸತಿ ಕಲ್ಪಿಸಲು ಸರ್ಕಾರವೇ ಈ ಹಿಂದೆ ಯೋಜನೆ ರೂಪಿಸಿತ್ತು. ಆದರೆ, ಬಂಧಿಸಿ, ಸಾಕಲು ಹವಣಿಸುವವರಿಗೆ ರಿಯಾಯಿತಿ ಬೇಡ.– ಪಂಚಯ್ಯ ಹಿರೇಮಠ, ಅಧ್ಯಕ್ಷರು ನೇಚರ್ ರಿಸರ್ಚ್ ಸೆಂಟರ್, ಧಾರವಾಡ.
ನಾವೂ ಕೈಜೋಡಿಸುತ್ತೇವೆ..
ಪ್ರಾಣಿ-ಪಕ್ಷಿಗಳ ಬಂಧನ, ಸಾಕಾಣಿಕೆ, ಹಿಂಸೆ, ಚಿಕಿತ್ಸೆ ಮತ್ತು ಪುನರ್ವಸತಿ.. ಆದಿ, ಅಂತ್ಯಗಳಿಲ್ಲದ ಸತತ ಕಾರ್ಯಾಚರಣೆ. ಅವುಗಳ ಬದುಕಿನಲ್ಲಿ ನಾವು ಮೂಗು ತೂರಿಸುವ, ಕೈಯಾಡಿಸುವ ಪ್ರವೃತ್ತಿ, ವಿಕ್ಷಿಪ್ತ ಮನೋಭಾವ ದೂರಾಗುವ ವರೆಗೆ ಈ ಪರಿಸ್ಥಿತಿಗೆ ಕೊನೆ ಇಲ್ಲ. ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗಗಳೂ ಕೂಡ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ, ಈ ಬಗ್ಗೆ ಸೂಕ್ತ ತಿಳಿವಳಿಕೆ ಮೂಡಿಸಲು ಸಾಧ್ಯವಿದೆ.
– ಡಾ. ಧೀರಜ್ ವೀರನಗೌಡರ, ಪರಿಸರ ಕಾರ್ಯಕರ್ತ, ಪ್ರಾಣಿಶಾಸ್ತ್ರಜ್ಞ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.