ಗಣೇಶ ಮೂರ್ತಿ ಜಲಮೂಲಗಳಲ್ಲಿ ವಿಸರ್ಜನೆಯ ಸಮಸ್ಯೆ-ಸಮಾಧಾನ / ಗಬ್ಬೆದ್ದು ನಿಂತ ಬಾವಿ
ಧಾರವಾಡ : ನಮ್ಮ ಶೈಕ್ಷಣಿಕ ಕೇಂದ್ರ ಧಾರವಾಡ ನಗರದ ಅಂದಾಜು 400 ಸಾರ್ವಜನಿಕ ಗಣೇಶ ವಿಗ್ರಹ, 2000 ದಷ್ಟು ಮನೆಗಳಲ್ಲಿ ಪ್ರತಿಷ್ಠಾಪಿತ ಗಣಪತಿ ಮೂರ್ತಿಗಳು ಹೊಸಯಲ್ಲಾಪುರದ ನುಚ್ಚಂಬ್ಲಿ ಬಾವಿಯಲ್ಲಿ ವರ್ಷವಾರು ವಿಸರ್ಜಿಸಲ್ಪಡುತ್ತವೆ. ಹಾಗೆಯೇ, ಪ್ರತಿ ವರ್ಷ ಕನಿಷ್ಠ ಒಬ್ಬ ತನ್ನ ಬೇಜವಾಬ್ದಾರಿ ನಡವಳಿಕೆಯಿಂದ ಜೀವ ತೆತ್ತು, ಉತ್ಸವಕ್ಕೊಂದು ಶೋಕಕಳೆ ತರುತ್ತಾನೆ!
ಹಾಗೆ ವಿಸರ್ಜಿಸಲ್ಪಟ್ಟ ಕಳೆದ ವರ್ಷದ ಎಲ್ಲ ನಮೂನೆಯ ಗಣಪತಿಗಳ ಅವಶೇಷಗಳನ್ನು ಒಂದು ವರ್ಷದ ಬಳಿಕ ಈಗ ಬಾವಿಯಿಂದ ಎತ್ತಿ, ಗಬ್ಬೆದ್ದು ನಾರುವ ನೀರನ್ನು ಪಂಪ್ ಬಳಸಿ ಹೊರ ಹಾಕಿ, ಸ್ವಚ್ಛಗೊಳಿಸುವ ಪ್ರಯತ್ನ ಮಹಾನಗರ ಪಾಲಿಕೆ ಏಕಾಂಗಿಯಾಗಿ ಮಾಡುತ್ತದೆ! ಕಾರಣ, ಗಣೇಶ ವಿಸರ್ಜನೆಗೆ ವ್ಯವಸ್ಥೆಗೊಳಿಸುವ ಹೊಣೆ ಪಾಲಿಕೆಯದ್ದು!
ಅಂದ ಹಾಗೆ, ಗಟಾರು ನೀರು ಸೇರಿ ಒಳ ಚರಂಡಿ ಸದೃಷ ಗಬ್ಬೆದ್ದು ನಾರುವ ನುಚ್ಚಂಬ್ಲಿ ಬಾವಿಯ ಕೊಳೆತ ತ್ಯಾಜ್ಯವನ್ನು ಎತ್ತಿ ಹಾಕಲು ಜನರಿಲ್ಲ. ಗುತ್ತಿಗೆದಾರರೂ ಈ ಕೆಲಸಕ್ಕೆ ಮುಂದೆ ಬರುವುದಿಲ್ಲ. ಕಾರಣ, ಹಣ ಕನಿಷ್ಟ ನಿಗದಿಯಾಗಿದೆ. ಯಂತ್ರ ಬಳಸುವ ಬಗ್ಗೆ ಪಾಲಿಕೆಯ ಚುಕ್ಕಾಣಿ ಹಿಡಿದವರು ಯೋಚಿಸಿದಂತೆ ತೋರುವುದಿಲ್ಲ.
ಹೀಗೆ, ಅಳೆದೂ ತೂಗಿ, ಮತ್ತೆ ಈ ಬಾರಿ 90 ಸಾವಿರ ರೂಪಾಯಿಗೆ ಸ್ವಚ್ಛತೆಯ ಕಾರ್ಯದ ಗುತ್ತಿಗೆ ವಹಿಸಲಾಗಿದೆ. ಹೊಟ್ಟೆ ತೊಳೆಸುವ ವಾಸನೆಯ ಮಧ್ಯೆ ೫-೬ ಜನರೊಂದಿಗೆ ಯಾವುದೇ ಸುರಕ್ಷತಾ ಪರಿಕರ, ಮುಖ, ಕೈ, ಕಾಲು ಕವಚಗಳಿಲ್ಲದೇ ‘ಗಣೇಶ’ನ ಮೇಲೆ ಭಾರ ಹಾಕಿ, ಕಳೆದ ಮೂರು ದಿನಗಳಿಂದ ಸ್ವಚ್ಛತೆ ಕೈಗೊಳ್ಳುತ್ತಿದ್ದಾರೆ. ಬರುವ ಒಂದು ವಾರದಲ್ಲಿ ಪೂರ್ಣ ಬಾವಿ ಸ್ವಚ್ಛಗೊಳ್ಳುವ ಅಶಾಭಾವ ಅವರ ಮುಖಂಡನದ್ದು.
ವರ್ಷ ಪೂರ್ತಿ ಕೊಳೆಯಿಸುವ ಸಂಪ್ರದಾಯ!
ಕಳೆದ ವರ್ಷದ ವಿಸರ್ಜಿತ ಗಣೇಶನ ಅವಯವ, ಬಿದರಿನ ಆಧಾರಗಳು, ಕಬ್ಬಿಣದ ಸರಳುಗಳು, ಕಟ್ಟಿಗೆಯ ಫಳಿ, ಜೊತೆಗೆ ಕರಗದೇ ಉಳಿದ ಅಲಂಕಾರಿಕ ವಸ್ತುಗಳು, ಕೆಲ ಪಿಓಪಿ ಗಣೇಶ ಮತ್ತು ವಸ್ತುಗಳು ಹಾಗೆಯೇ ಉಳಿದು, ಹೇಗೆ ಹಬ್ಬದ ಮೂಲ ಆಶಯವನ್ನೇ ಕಳೆದಿದ್ದೇವೆ ಎಂಬುದರ ಕುರುಹುಗಳಾಗಿ ಗೋಚರಿಸುವ ಪರಿ ನಮ್ಮ ನೆಮ್ಮದಿ ಕದಡುತ್ತದೆ. ಪೂಜೆಗೆ, ಅಸ್ಥಿ ವಿಸರ್ಜನೆಗೆ, ಪೂಜಾ ಸಾಮಗ್ರಿ ವಿಲೇಗೆ ಬಳಸಿದ ಗಿಡಗೆ, ಮಡಿಕೆ ಹೀಗೆ.. ಪಟ್ಟಿ ನಿಲ್ಲಿವುದಿಲ್ಲ. ಗುತ್ತಿಗೆ ಕಂಡಿಷನ್ ಪ್ರಕಾರ, ಈ ಬಾರಿ ವಿಸರ್ಜಿತ ಗಣಪತಿಗಳನ್ನು 30 ದಿನಗಳೊಳಗೆ ಎತ್ತಿ, ಮತ್ತೆ ಸ್ವಚ್ಛಗೊಳಿಸುವ ಪ್ರಾವಧಾನವಿಲ್ಲ! ಹಾಗೊಂದು ವೇಳೆ ಈ ಕರಾರು ಹಾಕಿದಲ್ಲಿ, ಸ್ವಚ್ಛಗೊಳಿಸಲು ಗುತ್ತಿಗೆದಾರರು ಮುಂದೆ ಬರುವುದಿಲ್ಲ.. ಅಂತೆ!
ಕೋಳಿಕೆರೆ ಎಂಬ ತ್ಯಾಜ್ಯ ಗುಂಡಿ ಬಾವಿಗೆ ಆಸರೆ!
ಇನ್ನು ಬಾವಿಯ ನೀರು ಪಕ್ಕದ ಕೋಳಿ ಕೆರೆಯ ಪರಿಣಾಮವಾಗಿ, ಊರಿನ ಗಟಾರು ನೀರು ಕೆರೆ ಉದರ ತುಂಬುವುದರಿಂದ, ಬಾವಿಯ ಸೆಲೆಗಳಲ್ಲಿ ಮಿಳಿತವಾಗಿ, ಸಾಬೂನಿನ ನೊರೆ ಬಣ್ಣಕ್ಕೆ ತಿರುಗಿ ಗಬ್ಬೆದ್ದು ನಾರುತ್ತ ಬಾಯಿಯಲ್ಲಿ ಒಸರುತ್ತದೆ. ಅಲ್ಲಿನ ಪುಟ್ಟ ಮೀನುಗಳಿಗೆ ಆಮ್ಲಜನಕದ ಕೊರತೆಯುಂಟಾಗಿದೆ. ಅರೆ ಜೀವವಾಗಿ ಕೆಲವು ಈಜುತ್ತಿದ್ದರೆ, ಬಹುತೇಕ ಸತ್ತು ಮೇಲೆಯೇ ತೇಲುತ್ತಿವೆ. ಹೇಗೆ ನಮ್ಮ ಹಬ್ಬದಾಚರಣೆಯ ಪರಿ, ಅಮಾನವೀಯತೆಯ ಪರಾಕಾಷ್ಠೆ ತಲುಪಿ, ಸಣ್ಣ ಬಾವಿಯೊಂದರ ಜೈವಿಕ ಚಕ್ರವನ್ನೇ ಹೇಗೆ ಹಾಳು ಗೆಡವಿದೆ ಎಂದು ಅಭ್ಯಸಿಸಲು ಉತ್ತಮ ಮಾದರಿ -ಸ್ಪೆಸಿಮನ್ ನುಚ್ಚಂಬ್ಲಿ ಬಾವಿ! ಕಾರಣ, ಈ ಮೊದಲು ಅದು ಕುಡಿಯುವ ನೀರಿನ ಬಾವಿ. ಕಾಲಾನಂತರ ಕೇವಲ ಬಳಕೆ ನೀರಿನ ಬಾವಿ. ಈಗ, ಕೇವಲ ವಿಗ್ರಹ ವಿಸರ್ಜನೆ ಗುಂಡಿ!
ಸದ್ಯ ಮತ್ತೆ ಈ ಬಾರಿಯ ಸಾರ್ವಜನಿಕ ಗಣೇಶಂದಿರ ವಿಸರ್ಜನೆಗೆ ತಾತ್ಕಾಲಿಕವಾಗಿ ಈ ಬಾವಿಯನ್ನು ಅಣಿಗೊಳಿಸಲಾಗುತ್ತಿದೆ. ಸ್ಥಳೀಯ 9ನೇ ವಾರ್ಡ್ನ ಪಾಲಿಕೆ ಸದಸ್ಯ ಶಂಕರ ಶೇಳಕೆ ಅವರ ಪ್ರಕಾರ, ಇಡೀ ಬಾವಿಯ ಹೂಳೆತ್ತಿಸಿ, ಹೊಲಸು ತೊಳಸಿ-ಬಳಸಿ, ಆವರಣಕ್ಕೆ ಸುತ್ತಲೂ ಸುಣ್ಣ-ಬಣ್ಣ ಹಚ್ಚಿಸಿ, ಹತ್ತಾರು ಟ್ಯಾಂಕರ್ ಶುದ್ಧ ನೀರು ಬಾವಿಗೆ ಹಾಕಿಸಿ, ಕ್ಲೋರಿನ್ ಸೇರಿಸಿ, ಸೂಕ್ತ ರಕ್ಷಣಾ ಬೇಲಿ ನಿರ್ಮಿಸಿ, ಗಣ್ಯರಿಂದ ಗಂಗಾ ಪೂಜೆ ನೆರವೇರಿಸುವ ಯೋಜನೆ ಇದೆ. ಪಿಓಪಿ ಮೂರ್ತಿಗಳ ವಿಸರ್ಜನೆಗೆ ಈ ಬಾವಿಯಲ್ಲಿ ಅವಕಾಶವಿಲ್ಲ ಎಂದು ಮಾಹಿತಿ ನೀಡಿದರು.
ಪರಿಹಾರವೇನು?
ಈ ಪರಿಯಲ್ಲಿ ಹಬ್ಬದ ಆಚರಣೆ ಬೇಕೆ ಎಂದು ನಾವು ಪ್ರಜ್ಞಾವಂತರು ಚಿಂತಿಸಬೇಕು. ವಯಕ್ತಿಕವಾಗಿ ಗಣೇಶ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಿದವರು ಮನೆಯಲ್ಲೇ ಬಕೆಟ್ನಲ್ಲಿ ವಿಸರ್ಜಿಸಿ, ಒಂದು ದಿನದ ಬಳಿಕ ಮನೆಯ ಅಂಗಳದ ಗಿಡ ಅಥವಾ ಉದ್ಯಾನಕ್ಕೆ ಹಾಕುವ ಮನಸ್ಸು ಮಾಡಬೇಕು. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು, ಮಣ್ಣಿನ ಗಣಪತಿಯನ್ನು ಪೆಂಡಾಲ್ ಆವರಣದಲ್ಲೇ ಟಾರ್ಪಾಲಿನ್ ಬಳಸಿ ಕೇವಲ 2 ಗಂಟೆಯ ಅವಧಿಯಲ್ಲಿ ಕರಗಿಸಿ, ಮಣ್ಣನ್ನು ದೇವಸ್ಥಾನದ ಆವರಣದ ಹೂಕುಂಡಗಳಿಗೆ ಹಾಕಬಹುದು. ಈ ಬಾರಿ, ಕೆಲಗೇರಿಯ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಯವರು ಪರಿಸರ ಸ್ನೇಹಿ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಅವರ ನೇತೃತ್ವದಲ್ಲಿ ಈ ಬಗ್ಗೆ ಪ್ರಾತ್ಯಕ್ಷಿಕೆ ಹಮ್ಮಿಕೊಂಡಿದ್ದಾರೆ.
ಯಾವುದೇ ರೀತಿಯ ಪಿಓಪಿ, ಪ್ಲಾಸ್ಟಿಕ್ ಮತ್ತು ಫೈಬರ್ ಅಲಂಕಾರಿಕ ವಸ್ತುಗಳನ್ನು ಬಳಸದೇ ಹಬ್ಬ ಆಚರಿಸುವ ಬಗ್ಗೆ, ಪಟಾಕಿ ಮತ್ತು ಡಾಲ್ಬಿ ಸೌಂಡ್ ಸಿಸ್ಟಿಮ್ ಪರಿಮಿತ ಮಿತಿ ಮೀರಿ ಬಳಸದಂತೆ ಎಚ್ಚರಿಕೆ ಮತ್ತು ತಿಳಿವಳಿಕೆ ಮೂಡಿಸಲು ಹಾಗೂ ಟ್ರ್ಯಾಕ್ಟರ್ಗಳಲ್ಲಿ 8 ಬ್ಯಾರೆಲ್ಗಳನ್ನಿಟ್ಟುಕೊಂಡು ಮಾಳಮಡ್ಡಿಯ ತುಂಬೆಲ್ಲ 5ನೇ ದಿನ ಸಂಚರಿಸಿ, ಮನೆ ಬಾಗಿಲಿನಿಂದ ಪೂಜಿತ ಮಣ್ಣಿನ ಗಣೇಶನನ್ನು ಸಂಗ್ರಹಿಸಲು ಯೋಜಿಸಿದ್ದಾರೆ. ಮಾರನೇ ದಿನ ಬ್ಯಾರೆಲ್ಗಳಲ್ಲಿ ಸಂಗ್ರಹಿತ ಮಣ್ಣನ್ನು ಸಮುದಾಯ ಉದ್ಯಾನಕ್ಕೆ ಹಾಕಲು ಪರಿಸರ ಸ್ವಯಂಸೇವಕರು ಸಿದ್ಧರಾಗಿದ್ದಾರೆ.
ಇನ್ನು ಮೊದಲನೇ ದಿನ, 3ನೇ ದಿನ, 7, 9 ಹಾಗೂ 11ನೇ ದಿನ ವಿಸರ್ಜನೆಗೊಳ್ಳುವ ಗೃಹ ಮೂರ್ತಿಗಳ ಸಂಗ್ರಹಣೆಗೆ ನಗರದ ಬಾಕಿ ಸ್ವಯಂಸೇವಾ ಸಂಸ್ಥೆಗಳು ಕೈಜೋಡಿಬಹುದು. ಸಾಲೆ, ಕಾಲೇಜು, ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ಮೃತ್ತಿಕೆಗಳ ವಿಸರ್ಜನೆಗೆ ಆವರಣದಲ್ಲೇ ವ್ಯವಸ್ಥೆಗೊಳಿಸಿ, ಉದ್ಯಾನಗಳಿಗೆ ಫಲವತ್ತಾದ ಮಣ್ಣಾಗಿ ಬಳಸಿಕೊಳ್ಳಬಹುದು. ಪಾಲಿಕೆ, ಜಿಲ್ಲಾಡಳಿತ, ಜಲ ಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಸಂಬಂಧಿತ ಇಲಾಖೆಗಳು, ಖಾಸಗಿಯವರು ವಾಹನಗಳನ್ನು ಒದಗಿಸಿ, ವಿಗ್ರಹ ಸಂಗ್ರಹಣೆಗೆ ವ್ಯವಸ್ಥೆ ಮಾಡಬಹುದು. ತನ್ಮೂಲಕ ಜಲ ಮೂಲಗಳ ಮಾಲಿನ್ಯ ತಡೆಯಲು ಪ್ರಜ್ಞಾಪೂರ್ವಕ ಪ್ರಯತ್ನಿಸಬಹುದು.
ಅಳಿದುಳಿದು ಗಬ್ಬೆದ್ದು ನಾರುತ್ತಿರುವ ಬಡಾವಣೆಯ ಬಾವಿ, ಗಟಾರು ಸದೃಷ ಪುಷ್ಕರಣಿ, ಹೊಲಸು ಹೊಂಡಗಳಲ್ಲಿ ಪೂಜಿತ ಗಣಪನನ್ನು ವಿಸರ್ಜಿಸುವ ಬದಲು, ಸ್ವಚ್ಛವಾದ 10 ಲೀಟರ್ ನೀರಿನಲ್ಲಿ ಕರಗಿಸಿ, ಮನೆ ಅಂಗಳದ ಹೂದೋಟಕ್ಕೆ ಬಳಸಿಕೊಳ್ಳುವ ವಿವೇಕ ನಾವು ಮೆರೆದರೆ, ಹಬ್ಬಕ್ಕೂ, ಆಚರಣೆಗಳಿಗೂ ಒಂದು ಅರ್ಥ. ಪರಿಸರ ಸ್ನೇಹಿ ನಡಾವಳಿಗೆ ವಿವೇಚನೆಯ ಮುನ್ನುಡಿ. ತಪ್ಪಿದರೆ .. ಚಿತ್ರಗಳನ್ನೊಮ್ಮೆ ನೋಡಿ..
ಮಣ್ಣಿನ ಗಣಪ, ಬೀಜ ಗಣೇಶ, ವೃಕ್ಷ ಗಣಪತಿ ಹೀಗೆ ಥರಹೇವಾರಿ ಹೆಸರಿನಿಂದ ಅತ್ಯಂತ ಪರಿಸರ ಸ್ನೇಹಿಯಾಗಿ ಗಣೇಶೋತ್ಸವ ಆಚರಿಸುವ ಬಗ್ಗೆ ಎಲ್ಲೆಡೆ ಚಿಂತನೆ ನಡೆದಿದೆ. ಜನರೂ ಕೈ ಜೋಡಿಸಬೇಕು. ವ್ಯವಸ್ಥೆ ನಿರ್ಮಿಸುವುದು ಸರಳ. ನಿರ್ಮಿತ ವ್ಯವಸ್ಥೆಯ ನಿರ್ವಹಣೆ ಸಮಸ್ಯೆ. ಹಾಗಾಗಿ, ಜಲ ಮೂಲಗಳಲ್ಲಿ ಈ ಬಾರಿ ಮನೆಗಳಲ್ಲಿ ಪ್ರತಿಷ್ಠಾಪಿತ ವಿಗ್ರಹಗಳ ವಿಸರ್ಜನೆ ಬೇಡ.
– ಉದಯ ಯಂಡಿಗೇರಿ, ಸಾಮಾಜಿಕ ಕಾರ್ಯಕರ್ತ, ಕಿರಾಣಿ ವರ್ತಕ, ಧಾರವಾಡ.
ಪಾಲಿಕೆ ನಿಗದಿ ಪಡಿಸಿದ ಬಾವಿಯಲ್ಲಿ ವಿಸರ್ಜನೆಗೂ ಸಾರ್ವಜನಿಕರು ಮುಂದಾಗುವುದು ಬೇಡ. ಮನೆ ಅಂಗಳದಲ್ಲೇ ವಿಸರ್ಜಿಸುವ ಮನಸ್ಸು ಮಾಡೋಣ. ಕೆಲ ಖಾಸಗಿ ಬಾವಿಗಳ ಮಾಲಿಕರು 20 ರಿಂದ 50 ರೂಪಾಯಿ ಶುಲ್ಕ ವಿಧಿಸಿ, ಮೂರ್ತಿಗಳ ವಿಸರ್ಜನೆಗೆ ಅನುವು ಮಾಡಿಕೊಡುವ ಪರಿಪಾಠ ಕೆಲ ಬಡಾವಣೆಗಳಲ್ಲಿದೆ. ಅವರೂ ಕೂಡ ಈ ಬಾರಿ ಅವಕಾಶ ನೀಡದೇ, ತಮ್ಮ ಮನೆಯ ಗಣೇಶನನ್ನೂ ಬಕೇಟಿನಲ್ಲಿ ವಿಸರ್ಜಿಸಿ ಪೌರ ಪ್ರಜ್ಞೆ ಮೆರೆಯಲಿ.
– ಮಂಜುನಾಥ ಹಿರೇಮಠ, ಪರಿಸರ ಸ್ನೇಹಿ ಮೂರ್ತಿಕಾರ, ಕೆಲಗೇರಿ, ಧಾರವಾಡ.
ಪ್ರತಿ ವರ್ಷ ಕನಿಷ್ಠ 1 ರಿಂದ 3 ಜನರ ತನಕ ನುಚ್ಚಂಬ್ಲಿ ಬಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಅಸುನೀಗಿದ ಉದಾಹರಣೆಗಳಿವೆ. ಮೂಲತಃ ಈಜಾಟಕ್ಕೆ ಹೆಸರುವಾಸಿಯಾದ ಈ ಬಾವಿಯಲ್ಲಿ, ಕಬ್ಬಿಣದ ಸರಳುಗಳಿಗೆ ಸಿಲುಕಿ ಸತ್ತವರ ಸಂಖ್ಯೆ ಬಹಳ. ಸಾಕಷ್ಟು ಮುಂಜಾಗ್ರತಾ ಕ್ರಮ ಪಾಲಿಕೆ, ಪೊಲೀಸ್ ಇಲಾಖೆ, ಸ್ವಯಂ ಸೇವಕರು ಕೈಗೊಂಡರೂ ಹುಂಬತನ ಮೆರೆದು ಪ್ರಾಣ ಕಳೆದುಕೊಳ್ಳುವವರಿದ್ದಾರೆ. ಹಬ್ಬದ ಉತ್ಸಾಹ, ವಿಸರ್ಜನೆ ವೇಳೆ ಶೋಕಾಚರಣೆಯಾಗದಿರಲಿ. ಒಂದೇ ಬಾವಿ ಮೀಸಲಿರುವುದರಿಂದ ಸಂಕ್ಷಿಪ್ತ ವಿಸರ್ಜನೆಗೆ ಸಾರ್ವಜನಿಕರು ಒತ್ತು ನೀಡಿ, ಸಹಕರಿಸಲಿ.
– ಶಂಕರ ಶೇಳಕೆ, 9 ನೇ ವಾರ್ಡ್ ಪಾಲಿಕೆ ಸದಸ್ಯ, ಧಾರವಾಡ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.