ನವಾಜ್ ಷರೀಫ್ ನಂತರದ ಕಥೆಗಳು
ಪಾಕಿಸ್ಥಾನದ ಪ್ರಧಾನಿ ಅಲ್ಲಿನ ಕೋರ್ಟ್ ಆದೇಶದಂತೆ ಕುರ್ಚಿ ಬಿಟ್ಟು ಹೊರಟಿರುವಾಗ, ಭಾರತೀಯ ಮಾಧ್ಯಮಗಳಲ್ಲಿ ಎರಡು ಸುದ್ಧಿಗಳು ಗಮನ ಸೆಳೆಯುತ್ತಿದೆ.
ಮೊದಲನೇ ವರ್ಗ ಷರೀಫ್ರ ನಿರ್ಗಮನ ನೆರೆಮನೆಯಲ್ಲಿ ಭಾರತದ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ಹಾಗೆ ಶೋಕಿಸುತ್ತಿವೆ. ಮುಷರಫ್ ಘೋಷಿಸಿದ್ದ ಕಾರ್ಗಿಲ್ ಯುದ್ದಕ್ಕೆ ಷರೀಫ್ರ ಸಮ್ಮತಿ ಇದ್ದಿರಬಹುದು ಅಂದುಕೊಂಡಾಗ, ಉಗ್ರ ಬುರ್ಹಾನ್ ವಾನಿಯನ್ನು ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರನೆಂದು ವಿಶ್ವಸಂಸ್ಥೆಯಲ್ಲಿ ನಿಂತು ಭಾಷಣ ಮಾಡಿದ್ದನ್ನು ನೆನೆದಾಗ ಷರೀಫ್ ಭಾರತಕ್ಕೆ ಸ್ನೇಹಿತ ಹೇಗೆ ಅನ್ನೋ ನಿಲುವಿಗೆ ಬರವುದು ಕಷ್ಟ. ಮೋದಿಯವರ ತಾಯಿಗೆ ಸೀರೆ ಕಳಿಸಿದ್ದು ಬಿಟ್ಟರೆ ಷರೀಫ್ರ ಷರೀಫಿತನ ನನಗಿನ್ನೂ ಕಂಡಿಲ್ಲ.
ಎರಡನೇ ವರ್ಗ, ಪಾಕಿಸ್ಥಾನದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಧಾನಿಯೇ ರಾಜೀನಾಮೆ ಕೊಡಬೇಕಾಯಿತು. ಆಹಾ! ಎಂತ ಪ್ರಜಾಪ್ರಭುತ್ವ. ಭಾರತದಲ್ಲಿ ಅಂತ ಕಾಲ ಯಾವಾಗ ಬರುತ್ತೆ ಅಂತಿದ್ದಾರೆ.
ಹೀಗೆ ಹೇಳೋರು UPA ಅವಧಿಯಲ್ಲಿ ಲಕ್ಷ-ಲಕ್ಷ ಕೋಟಿಯಷ್ಟು ಹಗರಣ ನಡೆದಾಗ ಶಿಕ್ಷೆಯ ಮಾತಾಡಲಿಲ್ಲ ಅನ್ನುವುದು ಎಷ್ಟು ಸತ್ಯವೋ ಹಾಗೆ ಸ್ವಾತಂತ್ರ್ಯ ನಂತರ ಪಾಕಿಸ್ಥಾನದಲ್ಲಿ ಯಾವೊಬ್ಬ ಪ್ರಧಾನಿಯೂ ಪೂರ್ಣಾವಧಿ ಪೂರೈಲಿಸಲಿಲ್ಲ ಅನ್ನೋದು ಅಷ್ಟೇ ಸತ್ಯ. ಪಾಕಿಸ್ಥಾನದ ಪ್ರಜಾಪ್ರಭುತ್ವವನ್ನೇ ಹೊಗಳಬೇಕಾದರೆ 70 ವರ್ಷದ ಆ ದೇಶದ ಇತಿಹಾಸದಲ್ಲಿ 36 ವರ್ಷ ಅಲ್ಲಿನ ಆರ್ಮಿ ಸರ್ವಾಧಿಕಾರ ನಡೆಸಿದ್ದು ಮರೆಯಬೇಕಾಗುತ್ತದೆ. ಈ ಎರಡು ಮೀಡಿಯಾ ರಿಪೋರ್ಟ್ಗಳ ನಡುವೆ ಷರೀಫ್ರ ರಾಜೀನಾಮೆ ನಿಜಕ್ಕೂ ಭಾರತಕ್ಕೆ ಸವಾಲೇ ?
ಕೆಲವು ತಿಂಗಳ ಹಿಂದೆ ಪಾಕಿಸ್ಥಾನದ Dawn ಪತ್ರಿಕೆ ಅಲ್ಲಿನ ಮಿಲಿಟರಿ ಮತ್ತು ನವಾಜ್ ಷರೀಫ್ರ ತಮ್ಮ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ನಡುವೆ ಮೀಟಿಂಗ್ ಒಂದರಲ್ಲಿ ನಡೆದ ವಾದದ ವಿವರವನ್ನು ಪ್ರಕಟಿಸಿ ಕೋಲಾಹಲ ಎಬ್ಬಿಸಿತ್ತು. ಪಾಕಿಸ್ಥಾನದ ಬೇಹುಗಾರಿಕಾ ಸಂಸ್ಥೆ ಮತ್ತು ಮಿಲಿಟರಿ ಭಯೋತ್ಪಾದಕರಿಗೆ ಕೊಡುತ್ತಿರುವ ಬೆಂಬಲವನ್ನು ಷರೀಫ್ರ ತಂಡ ವಿರೋಧಿಸಿತ್ತು. ನಾಲ್ಕು ಗೋಡೆ ನಡುವೆ ನಡೆದ ಈ ಮಾತುಕತೆ ಮಾಧ್ಯಮದಲ್ಲಿ ಬಂದ ದಿನದಿಂದಲೆ ನವಾಜ್ ಷರೀಫ್ರನ್ನು ಗಂಟು ಮೂಟೆ ಕಟ್ಟಿಸಲು ಅಲ್ಲಿನ ಆರ್ಮಿ ತಯಾರಿ ನಡೆಸುತ್ತಿತ್ತು. ಕೊನೆಗೂ ಷರೀಫ್ ಸಿಕ್ಕಿ ಬಿದ್ದಿದ್ದು ದುಬೈ ಸಂಸ್ಥೆ ಒಂದರಿಂದ ಅವರಿಗೆ ಬರುತ್ತಿತ್ತೆನ್ನಲಾದ 3000 ಸಾವಿರ ಡಾಲರ್ ಸಂಬಳದ ಬಗ್ಗೆ!. ಬೆಟ್ಟ ಅಗೆದು ಇಲಿ ಹುಡುಕಿದರು ಅನ್ನೋ ಹಾಗೆ. ಇದರ ಎಲ್ಲ ಸಾಕ್ಷಿ ಕಲೆ ಹಾಕಲು ಆ ದೇಶದ ಆರ್ಮಿ, ISI ಶಿರಸಾ ಶ್ರಮಿಸಿದವು. ಇಲಿ ಹುಲಿಯಾಗಿ ಷರೀಫ್ರ ಕುರ್ಚಿ ಕಸಿಯಿತು.
ಮುಂದೆ ಏನು?
ಆರ್ಮಿ ಅಧಿಕಾರವನ್ನು ತನ್ನ ಕೈವಶ ತೆಗೆದುಕೊಂಡು ಮತ್ತೆ ದೇಶವನ್ನು ಸರ್ವಾಧಿಕಾರದ ಕೂಪಕ್ಕೆ ತಳ್ಳಬಹುದು. ಇಲ್ಲ ತನಗೆ ಬೇಕಾದವರನ್ನು ನೇಮಿಸಿ ಹಿಂಬಾಗಿಲ ಅಧಿಕಾರ ಮಾಡಬಹುದು. ಒಟ್ಟಿನಲ್ಲಿ ಮುಂದಿನ ಪಾಕಿಸ್ಥಾನದ ಪ್ರಧಾನಿಗೆ ನವಾಜ್ ಷರೀಫ್ರಿಗೆ ಇದ್ದ ಅಲ್ಪ ಸ್ವಲ್ಪ ಸ್ವಾತಂತ್ರ್ಯವು ಇರಲಿಕ್ಕಿಲ್ಲ. ಅಂದರೆ ಹೊಸ ಪ್ರಧಾನಿ ಹುಟ್ಟುಹಬ್ಬಕ್ಕೆ ಮೋದಿಯವರನ್ನು ಲಾಹೋರ್ಗೆ ಕರೆಯಿಸಿಕೊಳ್ಳೋವಷ್ಟು ಧೈರ್ಯ ಮಾಡಲಿಕಿಲ್ಲ.
So ?
ಪಾಕಿಸ್ಥಾನದ ಸೇನೆ ನಮ್ಮ ದೇಶದ ಸೇನೆ ಹಾಗೆ ಪ್ರೊಫೆಶನಲ್ ಅಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಅಂದ ಹಾಗೆ ಪಾಕಿಸ್ಥಾನ ಆರ್ಮಿ ಮಾಡದ ಬ್ಯುಸಿನೆಸ್ ಇಲ್ಲ. ಅವರೇನಾದರೂ ನಮಗೆ ಬೇಡ ಎಂದು ಯಾವುದಾದರು ಕ್ಷೇತ್ರವನ್ನು ಬಿಟ್ಟರೆ ಬೇರೆಯವರು ಅಲ್ಲಿ ಬ್ಯುಸಿನೆಸ್ ಮಾಡಬಹುದು. ಒಂದು ಅಂದಾಜಿನ ಪ್ರಕಾರ ಪಾಕಿಸ್ಥಾನ GDP ಯ ಶೇಕಡಾ 60 ರಷ್ಟು ಅಲ್ಲಿನ ಆರ್ಮಿಯ ಕೈವಶದಲ್ಲಿರುವ ವಹಿವಾಟುಗಳಿಂದ ಬರುತ್ತವೆ. ಈ ವಿಶಾಲ ವ್ಯಾಪಾರ ಸಾಮ್ರಾಜ್ಯವನ್ನು ಉಳಿಸಿಕೊಳ್ಳಲು ಚೀನಾದ ಇನ್ವೆಸ್ಟ್ಮೆಂಟ್ನ ಅಂತ್ಯಂತ ಅವಶ್ಯಕತೆಯು ಅಲ್ಲಿನ ಸೇನೆಗಿದೆ. ಅಷ್ಟೇ ಅಲ್ಲ, ಅವರ ಸೇನೆಗೆ ಬೇಕಾದ ಯುದ್ಧ ಸಾಮಗ್ರಿಗಳು ಚೀನಾವಲ್ಲದೆ ಬೇರೆ ದೇಶಗಳು ಕೊಡುತ್ತಿಲ್ಲ. ಸೋ, ಅಲ್ಲಿನ ಆರ್ಮಿ ಚೀನಾವನ್ನು ಮೆಚ್ಚಿಸಬೇಕು. ಚೀನಾವನ್ನು ಮೆಚ್ಚಿಸಲು ಭಾರತವನ್ನು ಕಾಡಬೇಕು. ಕಳೆದ ಕೆಲವು ವರ್ಷಗಳಿಂದ ಭಾರತದ ಬೆಳವಣಿಗೆಯಿಂದ ಕಂಗೆಟ್ಟಿರುವ ಚೀನಾ ನೇರವಾಗಿ ಯುದ್ಧ ಮಾಡದೆ ಪಾಕಿಸ್ಥಾನವನ್ನ ಮುಂದಿಟ್ಟು ಭಾರತವನ್ನು ಕಾಡಬಹುದು. ಈ ಕಾರಣಕ್ಕೆ CPEC ಹೆಸರಲ್ಲಿ ಚೀನಾ ಪಾಕಿಸ್ಥಾನಕ್ಕೆ ಬಿಸ್ಕೆಟ್ ಹಾಕುತ್ತಿದೆ!
ಹೀಗಾಗಿ, ಷರೀಫ್ ಭಾರತ ಮಿತ್ರರಲ್ಲದಿದ್ದರು, ಪಾಕ್ ಆರ್ಮಿ ಹಾಗು ಷರೀಫ್ ಎಂಬ ಇಬ್ಬರು ಕೆಡುಕರಲ್ಲಿ ನಮಗೆ ಷರೀಫ್ ಕಡಿಮೆ ಹಾನಿಕಾರಕ!
ಚೀನಾ ಹಿಗ್ಗುತ್ತಿದೆ. ಪಾಕಿಸ್ಥಾನ ಮುಂದಿನ ಚೈನೀಸ್ ಕಾಲೋನಿ ಆಗುವ ಲಕ್ಷಣಗಳೂ ಇವೆ…
ಮುಂಬರುವ ದಿನಗಳು ಯಾವುದೇ ಬಾಲಿವುಡ್ ಮೂವಿಗಿಂತ ಕಡಿಮೆ ಏನಿಲ್ಲ, ಹಾಗಂತ ನಾವು ಪಾಪ್ ಕಾರ್ನ್ ತಿನ್ನುತ್ತ ಮೈ ಮರೆಯುವ ಹಾಗಿಲ್ಲ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.