ಜುಲೈ 28 : ಪರಿಸರ ಸಂರಕ್ಷಣೆಯ ವಿಶ್ವ ದಿನ – ಬೀಜ ಗಣೇಶ ಮೂರ್ತಿ ಮೂಲಕ ಅರಿವು ಬಿತ್ತುವ ಆಂದೋಲನ..!
ಧಾರವಾಡ : ನಮಗೆಲ್ಲರಿಗೂ ‘ನೀತಿಗಳು’ ಗೊತ್ತು; ಆದರೆ ‘ರೀತಿಗಳಾಗಬಾರದು’ ಎಂಬ ಕಾಲಘಟ್ಟದಲ್ಲಿ ಬದುಕಿದ್ದೇವೆ. ಇದೇ 28, ಪರಿಸರ ಸಂರಕ್ಷಣೆಯ ವಿಶ್ವ ದಿನ. ತಾಳಿಕೆ ಮತ್ತು ಬಾಳಿಕೆಯುಳ್ಳ ಪರಿಸರ ಸ್ನೇಹಿ ಅಭಿವೃದ್ಧಿಗೆ ಒತ್ತು ನೀಡುವುದು ಈ ಬಾರಿಯ ಆಚರಣೆ ಧ್ಯೇಯ.
ಗಣೇಶ ಚತುರ್ಥಿ ಆಚರಣೆಯ ಹೊಸ್ತಿಲಲ್ಲಿದ್ದೇವೆ. ಹಬ್ಬ ಪರಿಸರ ಸ್ನೇಹಿ ಆಗಿರಲಿ; ಮೂರ್ತಿ ಬಣ್ಣ ರಹಿತ ಕೇವಲ ಮಣ್ಣಿನ ಮೃತ್ತಿಕೆಯಾಗಿರಲಿ ಎಂಬುದು ಪರಿಸರ ಕಾರ್ಯಕರ್ತರ ಒತ್ತಾಸೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಹ ಈ ಆಂದೋಲನಕ್ಕೆ ಸಮುದಾಯದ ಸಹಭಾಗಿತ್ವ ಕೋರಿದೆ. ಮೂರ್ತಿ ಕಲಾವಿದರಿಂದ ಸಹಕಾರ ಬಯಸಿದೆ.
ಆದರೆ, ಮಹಾರಾಷ್ಟ್ರದ ಕೊಲ್ಹಾಪುರ ಸೇರಿದಂತೆ, ವಿವಿಧ ಭಾಗಗಳಿಂದ ರೆಡ್, ಗ್ರೀನ್, ವೈಟ್ ಮತ್ತು ಬ್ಲ್ಯಾಕ್ ಆಕ್ಸೈಡ್ ಬಳಸಿ ತಯಾರಿಸಿದ, ಮಣ್ಣಿನ ಗಣಪತಿ ಎಂದೇ ಬಿಂಬಿಸಿ ಮಾರುವ, ಶೇ.60 ರಷ್ಟು ಮಣ್ಣು ಮತ್ತು ಶೇ.40 ರಷ್ಟು ‘ಪಿಓಪಿ’ -ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ತಂದು ಇಲ್ಲಿ ಮಾರುವ ಪ್ರಯತ್ನ ನಡೆದಿದೆ.
ಪಾಲಿಕೆ ಮತ್ತು ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ, ಮತ್ತೆ ಈ ಬಾರಿಯೂ ಪಿಓಪಿ ಗಣಪತಿ ಮೂರ್ತಿ ಕೊಂಡು ತಂದು ಮಾರುವ ಪ್ರಯತ್ನ ತೆರೆ ಮರೆಯಲ್ಲಿ ನಡೆದಿದೆ. ಖರೀದಿಸಿದ ಮೇಲೆ ಅವುಗಳ ವಿಸರ್ಜನೆ ಹೇಗೆ ಎಂಬುದರ ಬಗ್ಗೆ ಯಾರೂ ಚಿಂತಿಸಿದಂತೆ ತೋರುತ್ತಿಲ್ಲ. ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿಗಳಿಗೂ ಮಣ್ಣಿನ ಮೂರ್ತಿಯಂತೆ ಕಾಣುವ ಆಕ್ಸೈಡ್ ಪಿಓಪಿ ಗಣಪತಿಗಳನ್ನು ಮಾರುವ ಹುನ್ನಾರ ಬಹುವಿಧದಲ್ಲಿ ನಡೆದಿದೆ.
ಕೋಟ್ಯಂತರ ರೂಪಾಯಿ ವ್ಯವಹಾರ ಇಲ್ಲಿ ಅಡಗಿದ್ದು, ವಾಣಿಜ್ಜಿಕ ರಾಜಧಾನಿ ಹುಬ್ಬಳ್ಳಿಯ ವ್ಯಾಪಾರ-ವಹಿವಾಟು ಗಣೇಶೋತ್ಸವದ 11 ದಿನ ಭರ್ಜರಿಯಾಗುವ ಕಾರಣ, ಲಕ್ಷಾಂತರ ಜನ ಗಣೇಶೋತ್ಸವದ ವೀಕ್ಷಣೆಗೆ ತಂಡೋಪತಂಡವಾಗಿ ಆಗಮಿಸುತ್ತಾರೆ. ಹಾಗಾಗಿ, ಇದೊಂದು ಬಾರಿ ಇಂತಹ ಮೂರ್ತಿಗಳ ಸ್ಥಾಪನೆಗೆ ಜಿಲ್ಲಾಡಳಿತ ಮತ್ತು ಪಾಲಿಕೆ ಅನುಮತಿಸಬೇಕು ಎಂಬುದು, ಮೂರ್ತಿಗಳನ್ನು ಖರೀದಿಸಿ ತಂದು ಮಾರುವ ‘ಕಲಾವಿದರ’ ಹಕ್ಕೊತ್ತಾಯ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪರಿಸರ ಸಂರಕ್ಷಣೆಯ ವಿಶ್ವ ದಿನದ ಶುಭ ಸಂದರ್ಭದಲ್ಲಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರಸಿದ್ಧ ಕಲಾವಿದ ಕೆಲಗೇರಿಯ ಮಂಜುನಾಥ ಹಿರೇಮಠ, ಬೀಜ ದುಂಡೆ ಪ್ರಯೋಗದ ಮುಂದುವರೆದ ಭಾಗವಾಗಿ, ಈ ಬಾರಿಯ ಗಣೇಶೋತ್ಸವದಲ್ಲಿ ‘ಬೀಜ ಗಣಪತಿ ಪ್ರತಿಷ್ಟಾಪನೆ’ (ಸೀಡ್ ಐಡೋಲ್) ಆಂದೋಲನಕ್ಕೆ ಮುನ್ನುಡಿ ಬರೆದಿದ್ದಾರೆ. ಪ್ರಯೋಗಾರ್ಥ, ಗಣಪತಿ ಮೂರ್ತಿಯ ಮೃತ್ತಿಕೆಗೆ ಬೀಜಗಳನ್ನು ಬಿತ್ತಲಾಗುತ್ತದೆ. ಗಣೇಶೋತ್ಸವದ 11 ದಿನಗಳಲ್ಲಿ ಬೀಜ ಮೊಳಕೆಯೊಡೆದು, ವಿಸರ್ಜನೆಯ ಎರಡು ದಿನಗಳ ಬಳಿಕ ಅದೇ ಬಸಿದ ಮಣ್ಣು ಮತ್ತು ಮೊಳಕೆ ಬಳಸಿ, ನಾಟಿ ಅಥವಾ ಬಿತ್ತನೆ ಮಾಡುವ ಯೋಚನೆ ಇದು.
ಬೀಜಗಳ ನೈಸರ್ಗಿಕ ಪ್ರಸಾರದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕೊಡುಗೆ ಅನನ್ಯವಾಗಿದ್ದು, ಪರಾಗಸ್ಪರ್ಷಕ್ಕೆ ಜೇನ್ನೊಣ ಮತ್ತು ದುಂಬಿಗಳ ಸೇವೆ ಮನನೀಯ. ಆದರೆ, ಎಲ್ಲವೂ ತನಗೇ ‘ಮೀಸಲಿದೆ’ ಎಂಬಂತೆ ವರ್ತಿಸುವ ಮನುಷ್ಯ ಪಾತ್ರ ಬೀಜ ಪ್ರಸಾರ, ಪರಾಗಸ್ಪರ್ಷದಲ್ಲಿ ಮಾತ್ರ ಏನೂ ಇಲ್ಲ! ಹಾಗಾಗಿ, ಬೀಜ ಗಣೇಶ ಮೂರ್ತಿ ರೂಪಿಸಿ, ಅರಿವು ಬಿತ್ತುವ ಆಂದೋಲನ.. ಸಮುದಾಯದ ಸಹಭಾಗಿತ್ವದಲ್ಲಿ! ಹಾಗಾಗಿ, ಈ ಬಾರಿ ಬೀಜ ಗಣಪತಿ ವರ್ಸಸ್ ರೆಡ್ ಆಕ್ಸೈಡ್ ಗಣಪತಿ ದಂಗಲ್!
ಕೆಲಗೇರಿಯ ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳ ಸಹಯೋಗದಲ್ಲಿ, ಕೆರೆ ಪಕ್ಕದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಟಾರ್ಪಾಲಿನ್ ಹೊದಿಕೆ ಹಾಸಿ, ನೀರು ಬಿಟ್ಟು, ಅಕ್ಕ-ಪಕ್ಕದ ಸುಮಾರು 5 ಸಾರ್ವಜನಿಕ ಗಣಪತಿಗಳು ಹಾಗೂ ೫೦೦ಕ್ಕೂ ಹೆಚ್ಚು ಮನೆಗಳಲ್ಲಿ ಪ್ರತಿಷ್ಟಾಪಿಸಲಾದ ಗಣೇಶ ಮೂರ್ತಿಗಳ ಪರಿಸರ ಸ್ನೇಹಿ ವಿಸರ್ಜನೆಗೆ ಯೋಜಿಸಲಾಗಿದೆ. ಪಕ್ಕದ ಕೆರೆಯಲ್ಲಿ ಈ ಬಾರಿ ಯಾರೂ ವಿಸರ್ಜಿಸುವಂತಿಲ್ಲ. 2-3 ದಿನಗಳಲ್ಲಿ ಮೂರ್ತಿಗಳು ಸಂಪೂರ್ಣ ಕರಗುವುದರಿಂದ, ಆ ಫಲವತ್ತಾದ ಮಣ್ಣನ್ನು ಮನೆಗಳಿಗೆ ಕೊಂಡೊಯ್ದು ಗಿಡಗಳಿಗೆ ಹಾಕಿಕೊಳ್ಳಲು, ಉಳಿದ ಮಣ್ಣು ಹೊಲಕ್ಕೆ ಹೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ, ಪೂಜೆಗೆ ಬಳಸಿದ ಹೂವು, ಮಾಲೆ, ಪತ್ರಿ, ಹಣ್ಣು ಜಲ ಕೂಡ ಸಮರ್ಪಕ ವಿಸರ್ಜನೆಗೆ ಪಕ್ಕದಲ್ಲಿಯೇ ಪ್ರತ್ಯೇಕ ಸಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಮನೆ-ಮನೆಗಳಲ್ಲಿ ಬಕೆಟ್ನಲ್ಲಿ ನೀರು ತುಂಬಿಸಿ, ಪ್ರಾಣ ಪ್ರತಿಷ್ಟಾಪಿತ ಪೂಜೆಗೈದ ಮೂರ್ತಿಗಳನ್ನು ವಿಸರ್ಜಿಸುವ ಅರಿವು ಸಹ ಮೂಡಿಸಲಾಗುತ್ತಿದೆ. ಹಾಗೆಯೇ, ಆ ಮಣ್ಣನ್ನು ಮನೆ ಅಂಗಳದ ತೆಂಗಿನ ಮರ ಅಥವಾ ಹೂ ಕುಂಡಗಳಿಗೂ ಹಾಕಿಕೊಳ್ಳಬಹುದು ಎನ್ನುತ್ತಾರೆ, ಮಂಜುನಾಥ ಹಿರೇಮಠ.
‘ಧಾರವಾಡ ದಾರಿ ತೋರಿಸ್ತು..’ ಎಂಬ ಮಾತಿದೆ. ಪರಿಸರ ಸ್ನೇಹಿಯಾಗಿ, ಪಟಾಕಿ ಮತ್ತು ಡಾಲ್ಬಿ ಸೌಂಡ್ ಸಿಸ್ಟಮ್ ಅಬ್ಬರವಿಲ್ಲದೇ, ತಾಳಿಕೆ ಮತ್ತು ಬಾಳಿಕೆ ಬರುವಂತೆ ಪೂಜಿತ ಮಣ್ಣಿನ ಮೂರ್ತಿಗಳ ಪರಿಸರ ಸ್ನೇಹಿ ವಿಸರ್ಜನೆಗೆ ಇಲ್ಲಿನ ಕೆಲ ಸುಮನಸ್ಸುಗಳು ಮುಂದಾಗಿವೆ. ಬೀಜ ಗಣೇಶ ಅರಿವಿನ ಸಸಿ ಆಚರಕರಲ್ಲಿ ಮೊಳಕೆಯೊಡೆಸಿದರೆ ಆಚರಣೆಗೂ ಒಂದರ್ಥ ಬಂದೀತು. ನಾಡವ್ಯಾಪಿಯಾಗಿ ಪಸರಿಸೀತು ಎಂಬ ಸದಾಶಯ.
ರೆಡ್, ಗ್ರೀನ್, ವೈಟ್ ಮತ್ತು ಬ್ಲ್ಯಾಕ್ ಆಕ್ಸೈಡ್ ಬಳಸಿ ತಯಾರಿಸಿದ, ಗಣಪತಿ ಮೂರ್ತಿಗಳು ಪಿಓಪಿ ಗಣಪತಿಗಳಿಗಿಂತ ದೂರಗಾಮಿ ಅಡ್ಡ ಪರಿಣಾಮ ಬೀರಬಲ್ಲವು. ಆಕ್ಸೈಡ್ ವಿಷ. ಹತ್ತಾರು ವರ್ಷ ತನ್ನ ‘ಪ್ರತಿಭೆ’ ಮೆರೆಯಬಹುದು. ಹೆಚ್ಚಾಗಿ, ಮನೆಗಳ ಫ್ಲೋರಿಂಗ್, ಟೈಲ್ಸ್ ಮಧ್ಯದ ಕೂದಲು ಗಾತ್ರದ ಅಂತರ ಬೆಸೆಯಲು ಫಿಲ್ಲರ್, ಅಢೆಸಿವ್, ಕ್ಯೂರಿಂಗ್ ಏಜೆಂಟ್ ಅಥವಾ ಟೈಲ್ಸ್ ಬಣ್ಣಕ್ಕೆ ಹೊಂದುವ ಪರ್ಮನೆಂಟ್ ಸೊಲುಷನ್ ಪಿಗ್ಮೆಂಟ್ ಆಗಿ ಬಳಕೆಯಾಗುತ್ತದೆ. ಇದು ಖಂಡಿತ ಆತ್ಮ ಘಾತುಕ ತನ. ಆಚರಣೆಯ ಸದುದ್ದೇಶವನ್ನೇ ಜೊತೆಗೆ ಹಬ್ಬದ ಅರ್ಥವನ್ನೇ ಕುಲಗೆಡಿಸುವ ನಡೆ. ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.
– ಶ್ರೀ ಮುಕುಂದ ಮೈಗೂರ, ಪರಿಸರವಾದಿ, ಅಧ್ಯಕ್ಷ, ಕ್ರಿಯಾಶೀಲ ಗೆಳೆಯರು ಬಳಗ, ಧಾರವಾಡ.
ಈಗ ಮಣ್ಣಿನ ಮೂರ್ತಿ ತಯಾರಿಸುವವರಿಲ್ಲ. ದಲ್ಲಾಳಿಯಂತೆ ಖರೀದಿಸಿ ಲಾಭದ ಲೆಕ್ಕಾಚಾರದಲ್ಲಿ ಮಾರುವ ‘ನವ ಕಲಾವಿದ’ರ ಸಂಖ್ಯೆ ಹೆಚ್ಚಿದೆ. ‘ಕಾಳಜಿ ಗೌಣ; ಲಾಭಕ್ಕೆ ಮಣೆ’ ಎಂಬಂತಹ ನಡೆ ಕಳವಳಕಾರಿ. ಪರಿಸರ ಅಸ್ನೇಹಿ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳ ಭರಾಟೆಯೂ ಹೆಚ್ಚೂ ಕಡಿಮೆ ಇದೇ ಹಾದಿಯಲ್ಲಿದೆ. ಅನ್ನ ನೀಡುವ ವೃತ್ತಿಗೂ ದ್ರೋಹ ಬಗೆದು, ಆಚರಣೆಯ ಅರ್ಥ ಕಳೆದು, ಮೌಲ್ಯಗಳನ್ನು ಆಧುನಿಕತೆಯ ಹೆಸರಿನಲ್ಲಿ ಗಾಳಿಗೆ ತೂರಿ, ಜನರ ನಂಬಿಕೆಗೂ ಮೋಸ ಮಾಡಿ, ದೇವರ ಹೆಸರಿನಲ್ಲಿ ವ್ಯಾಪಾರಕ್ಕಿಳಿಯುವುದಾದರೆ, ವೀರ ಕೇಸರಿ ಬಾಲ ಗಂಗಾಧರ ತಿಲಕರ ಆಶಯಗಳಿಗೆ ನಾವು ತಿಲಾಂಜಲಿ ಇಟ್ಟು ದಶಕಗಳೇ ಉರುಳಿದಂತಾಯಿತಲ್ಲ.. ?
-ಪ್ರೊ. ಗಂಗಾಧರ ಕಲ್ಲೂರ, ಪರಿಸರವಾದಿ, ವನ್ಯಜೀವಿ ಗೌರವ ಕ್ಷೇಮ ಪಾಲಕ, ಧಾರವಾಡ.
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಯಾವುದೇ ಸಂದರ್ಭದಲ್ಲಿ ಪಿಓಪಿ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆಗೆ ಅವಕಾಶ ನೀಡುವುದಿಲ್ಲ ಎಂಬ ನಂಬಿಕೆ ಇದೆ. ಅವಳಿ ನಗರದ ನಾಗರಿಕರಿಗೂ ಸಾಧಕ-ಬಾಧಕಗಳ ಅರಿವಾಗಿದೆ. ಮನೆ-ಮನೆಗಳಲ್ಲೂ ಈಗ ಬಣ್ಣರಹಿತ ಮಣ್ಣಿನ ಮೂರ್ತಿ ಪ್ರತಿಷ್ಟಾಪನೆಗೆ ಆದ್ಯತೆ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಅನುಚಿತ ಪ್ರಭಾವ ಅಧಿಕಾರಿಗಳ ಮೇಲೆ ತಂದೊಡ್ಡದೇ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಕಾದು ನೋಡುವ ತಂತ್ರ ನಮ್ಮದು.
– ಶ್ರೀ ಪ್ರಕಾಶ ಗೌಡರ, ಮುಖ್ಯಸ್ಥ, ಗ್ರೀನ್ ಆರ್ಮಿ, ಧಾರವಾಡ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.