News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಮರೆತುಹೋದ ಶಿಕ್ಷಣದ ಮೂಲ ಉದ್ದೇಶ

Educateಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಹೆಚ್ಚು ಒತ್ತಡಕ್ಕೊಳಗಾಗುವವರು ವಿದ್ಯಾರ್ಥಿಗಳೆಂದು ನೀವು ಭಾವಿಸಿದ್ದರೆ ಅದು ತಪ್ಪು. ವಿದ್ಯಾರ್ಥಿಗಳಿಗಿಂತಲೂ ಅವರ ತಂದೆ ತಾಯಿಯರೇ ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ ಎಂಬುದು ಎಲ್ಲರ ಅನುಭವ.

ಮಾರ್ಚ್ ತಿಂಗಳಲ್ಲಿ ಸಾಧಾರಣವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳು ಜರುಗುತ್ತವೆ. ಆ ಪರೀಕ್ಷೆಗಳಿಗೆ ತಮ್ಮ ಮಕ್ಕಳನ್ನು ಸಿದ್ಧಪಡಿಸುವುದು ತಂದೆ-ತಾಯಿಗಳಿಗೆ ಒಂದು ಹರಸಾಹಸದ ಕೆಲಸ. ಎಲ್ಲ ತಂದೆ-ತಾಯಿಗಳಿಗೂ ಇಂತಹ `ಸಾಹಸ’ ಇರುತ್ತದೆಂದು ನಾನು ಹೇಳುವುದಿಲ್ಲ. ಆದರೆ ಬಹುತೇಕ ತಂದೆ-ತಾಯಿಗಳಿಗೆ ಅದು ಚಡಪಡಿಕೆಯ ಕಾಲ. ತಮ್ಮ ಮಗ ಅಥವಾ ಮಗಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಬೇಕು. ಹೆಚ್ಚಿನ ಅಂಕ ಗಳಿಸಿದರೆ ಮಾತ್ರ ಪ್ರತಿಷ್ಠಿತ ಶಾಲೆಗಳಲ್ಲಿ ಮುಂದಿನ ತರಗತಿಗೆ ಪ್ರವೇಶ ಸಾಧ್ಯ. ಹೆಚ್ಚಿನ ಅಂಕಗಳೆಂದರೆ ಕೇವಲ ಶೇ. 70 ಬಂದರೆ ಸಾಲದು. ಶೇ. 90+ ಬಂದರಷ್ಟೇ ತಮ್ಮ ಮಕ್ಕಳು ಸಾಧನೆ ಮಾಡಿದಂತೆ ಎಂಬ ಭ್ರಮೆ ಬಹುತೇಕ ಪೋಷಕರಲ್ಲಿದೆ. ಫಲಿತಾಂಶ ಪ್ರಕಟವಾದಾಗ ವಿದ್ಯಾರ್ಥಿಗಳಿಗಿಂತ ಹೆಚ್ಚು ಆತಂಕಕ್ಕೊಳಗಾಗುವವರು ತಂದೆ-ತಾಯಿಗಳೇ! ಶೇ. 90ಕ್ಕಿಂತ ಹೆಚ್ಚು ಅಂಕಗಳು ಬಂದಿದ್ದರೆ ಸಂತಸ, ಸಮಾಧಾನ. ಶೇ. 50 ಅಥವಾ ಅದಕ್ಕಿಂತ ಕಡಿಮೆ ಬಂದಿದ್ದರೆ ಅಂತಹ ತಂದೆ-ತಾಯಿಗಳ ಪಾಡು ದೇವರಿಗೇ ಪ್ರೀತಿ. ಒಂದು ಗಾದೆಯಿದೆ – `ಹೆಂಗಸರ ವಯಸ್ಸು ಕೇಳಬಾರದು, ಗಂಡಸರ ಸಂಬಳ ಕೇಳಬಾರದು’. `ಮಕ್ಕಳ ಮಾರ್ಕ್ಸ್ ಕೇಳಬಾರದು’ ಎಂದು ಇದಕ್ಕೆ ಈಗ ಇನ್ನೊಂದು ವಾಕ್ಯವನ್ನೂ ಸೇರಿಸಬೇಕು. ಸಾಧಾರಣ ದರ್ಜೆಯಲ್ಲಿ ಮಕ್ಕಳು ತೇರ್ಗಡೆಯಾದರೆ ಅವರ ಭವಿಷ್ಯವೇ ಉಡುಗಿ ಹೋಯಿತೆಂಬಂತೆ ಪೋಷಕರು ಹಳಹಳಿಸುತ್ತಾರೆ. ಹೀಗೆ ಹಳಹಳಿಸುವುದರಲ್ಲೂ ಒಂದಷ್ಟು ಅರ್ಥವಿದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ ದೊರಕುವುದಿಲ್ಲ. ಅಲ್ಲೇನಿದ್ದರೂ ಶೇ. 90+ ಅಂಕ ಪಡೆದವರಿಗೆ ಮಾತ್ರ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿ ಎರಡು ದಿನಗಳಾಗುವುದರೊಳಗೇ ಅಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಕಟ್‌ಆಫ್ ಮಾರ್ಕ್ಸ್‌ಗಳ ಮಚ್ಚು ಲಾಂಗುಗಳು ಝಳಪಿಸುತ್ತವೆ. ಅವು ಪ್ರಕಟಿಸುವ ಅಡ್ಮಿಷನ್ ಲಿಸ್ಟ್‌ಗಳಲ್ಲಿ ರುಂಡಗಳು ಉರುಳುತ್ತವೆ. ಜೊತೆಗೆ ಡೊನೇಷನ್ ಡಬ್ಬಗಳು ತುಂಬಿ ಹರಿಯುತ್ತವೆ. ಮಾರ್ಕ್ಸ್ ಇದ್ದವರಿಗೆ ಮಾತ್ರ ಕಾಲ. ಇಲ್ಲದವರಿಗೆ ಉಳಿಗಾಲವಿಲ್ಲ. ಫಲಿತಾಂಶ ಪ್ರಕಟವಾದ ನಾಲ್ಕೈದು ದಿನದೊಳಗೇ ಪ್ರತಿಷ್ಠಿತ ಶಾಲೆಗಳಲ್ಲಿ `Admission Closed’ ಎಂಬ ಫಲಕ ಕಣ್ಣಿಗೆ ರಾಚುತ್ತದೆ. ಇಂತಹ ಶಾಲೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ವಿದ್ಯಾರ್ಥಿಗಳು ಗಳಿಸುವ ಅಂಕಗಳು ಮಾತ್ರ. ಶಿಕ್ಷಣವೆಂಬುದು ಹೀಗೆ ಅಂಕಗಳ ಸುತ್ತ ಗಿರಕಿ ಹೊಡೆದರೆ ಮಕ್ಕಳು ಭವಿಷ್ಯದ ಸತ್ಪ್ರಜೆಗಳಾಗಿ ಅರಳಲು ಹೇಗೆ ಸಾಧ್ಯ?

ಪೇಟೆ, ಪಟ್ಟಣಗಳಲ್ಲಿ ಅನುಕೂಲವಂತರ ಮಕ್ಕಳು ಹೆಚ್ಚಾಗಿ ಸೇರುವುದು ಇಂತಹ ಪ್ರತಿಷ್ಠಿತ ಶಾಲೆಗಳಿಗೇ. ಅಲ್ಲಿ ಡೊನೇಷನ್ ಲಕ್ಷದ ಲೆಕ್ಕದಲ್ಲಿ. ಅಂತಹ ಶಾಲೆಗಳಿಗೆ ತೆರಳಲು ಪ್ರತ್ಯೇಕ ವಾಹನಗಳು, ಪ್ರತ್ಯೇಕ ಸಮವಸ್ತ್ರ, ಪ್ರತ್ಯೇಕ ಶುಲ್ಕ… ಹೀಗೆ ಎಲ್ಲಾ ಸೇರಿದರೆ ಅತಿ ಭಾರವೆನಿಸುವಷ್ಟು ಖರ್ಚು ವೆಚ್ಚ. ಆದರೂ ಅಂತಹ ಶಾಲೆಗಳಿಗೇ ಸೇರಿಸಬೇಕೆಂಬ ಹಠ ತಂದೆ-ತಾಯಿಗಳದು. ಏಕೆಂದರೆ ಅಲ್ಲಿ ಓದಿದರೆ ಮಾತ್ರ ತಮ್ಮ ಮಕ್ಕಳು ಮುಂದೆ ಒಳ್ಳೆಯ ಉದ್ಯೋಗ ಹಿಡಿಯಬಹುದು ಎಂಬ ಹಂಬಲ. ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಅವರಿಗಿಷ್ಟವಿಲ್ಲದಿದ್ದರೂ ವಿಜ್ಞಾನ ಅಥವಾ ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ. ಕಡಿಮೆ ಅಂಕ ಗಳಿಸಿದವರು (ವಿಧಿಯಿಲ್ಲದೆ) ಕಲಾ ವಿಭಾಗ ಆಯ್ದುಕೊಳ್ಳಬೇಕಾದ ಅನಿವಾರ್ಯತೆ. ತಮಾಷೆಯೆಂದರೆ ಇಲ್ಲಿ ಕಲಿಯಬೇಕಾದ ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ತೀರಾ ಕಡಿಮೆ. ಕಲಿಯಬೇಕಾದ್ದು ಮಕ್ಕಳೇ ಹೊರತು ಪೋಷಕರಲ್ಲ. ಆದರೆ ಕಲಿಯಬೇಕಾದ ಮಕ್ಕಳಿಗೆ ತಮ್ಮ ಆಸಕ್ತಿಯ ವಿಷಯದ ಆಯ್ಕೆಗೆ ಸ್ವಾತಂತ್ರ್ಯವಿದ್ದರೆ ತಾನೆ!

ಭ್ರಮೆಯಲ್ಲಿ ಪೋಷಕರು
ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ದೊರಕಿದ್ದರೂ ತಮ್ಮ ಮಗ ಅಥವಾ ಮಗಳು ಎಂಜಿನಿಯರಿಂಗ್ ಸೀಟು ಗಿಟ್ಟಿಸಿ ಮುಂದೆ ಎಂಜಿನಿಯರ್ ಆಗಲೇಬೇಕು ಎಂದು ಹಠಕ್ಕೆ ಬಿದ್ದವರಂತೆ ತಂದೆ-ತಾಯಿಗಳು ವರ್ತಿಸುವುದನ್ನು ನೋಡಿದರೆ ಆತಂಕವಾಗುತ್ತದೆ. ಆ ಮಗುವಿಗೆ ಎಂಜಿನಿಯರಿಂಗ್ ಪರೀಕ್ಷೆ ಪಾಸು ಮಾಡುವುದು ಸಾಧ್ಯವೆ? ಅದಕ್ಕೆ ಆಸಕ್ತಿ ಇದೆಯೆ? ಇತ್ಯಾದಿ ಗಂಭೀರ ವಿಷಯಗಳ ಬಗ್ಗೆ ತಂದೆ-ತಾಯಿಗಳು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಒಟ್ಟಾರೆ ಹೇಗೋ ಎಂಜಿನಿಯರಿಂಗ್ ಪದವಿ ಮುಗಿಸಿ, ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಆಯ್ಕೆಯಾಗಿ ಕೆಲಸ ಸಿಕ್ಕಿಬಿಡಬೇಕು. ಸಾಧ್ಯವಾದರೆ ಅಮೆರಿಕೆಯಲ್ಲೋ ಆಸ್ಟ್ರೇಲಿಯಾದಲ್ಲೋ ತಮ್ಮ ಮಗ ಅಥವಾ ಮಗಳು ನೆಲೆಸಿಬಿಟ್ಟರೆ ಜೀವನ ಸಾರ್ಥಕ ಎನ್ನುವುದು ಅನೇಕ ಪೋಷಕರ ಹುಚ್ಚು ಭ್ರಮೆ. ಶಿಕ್ಷಣದ ಉzಶ ಹಾಗಿದ್ದರೆ ಅಷ್ಟಕ್ಕೇ ಸೀಮಿತವೆ? ಮಕ್ಕಳು ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಪದವಿ ಪಡೆದುಬಿಟ್ಟರೆ ಸಾಕೆ? ಅದರೊಂದಿಗೆ ಮಾನವೀಯತೆ, ಸದ್ಗುಣಗಳು , ಸುಸಂಸ್ಕೃತಿ ಇತ್ಯಾದಿ ಮಕ್ಕಳಲ್ಲಿ ಅರಳುವುದು ಬೇಡವೆ? ಪದವಿ ಪಡೆದ ಬಳಿಕ ಬದುಕಿನ ಮುಂದಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಅವರಿಗಿರುವುದು ಬೇಡವೆ? ಈ ಬಗ್ಗೆ ಹೆಚ್ಚಿನವರು ತಲೆ ಕೆಡಿಸಿಕೊಳ್ಳದಿರುವುದು ಎಂತಹ ದುರಂತ!

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಬೇಕಾದರೆ ಟ್ಯೂಶನ್ ಅನಿವಾರ್ಯ ಎಂಬ ಭ್ರಮೆಯೂ ಸಾಕಷ್ಟು ಮಂದಿ ಪೋಷಕರಿಗಿದೆ. ಟ್ಯೂಶನ್‌ಗೆ ಹೋಗದೆ ಶೇ. 90+ ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ ಎಂಬುದು ಇಂಥವರ ಮೊಂಡು ವಾದ. ಟ್ಯೂಶನ್, ಶಾಲೆಗೆ ಹೋಗಲು ದ್ವಿಚಕ್ರ ವಾಹನ, ಜೊತೆಗೆ ಖರ್ಚಿಗೆ ಸಾಕಷ್ಟು ಪಾಕೆಟ್ ಮನಿ, ಬೆಲೆ ಬಾಳುವ ಉಡುಪು, ವಾರದಲ್ಲೊಮ್ಮೆ ಹೊಟೇಲ್‌ನಲ್ಲಿ ರುಚಿರುಚಿಯಾದ ತಿಂಡಿ… ಇತ್ಯಾದಿ ಸವಲತ್ತುಗಳನ್ನು ನೀಡಿದರೂ ಮಕ್ಕಳು ಪರೀಕ್ಷೆಯಲ್ಲಿ ಶೇ. 90+ ಅಂಕ ಗಳಿಸುತ್ತಾರೆಂಬ ಖಾತ್ರಿಯೇನಿಲ್ಲ. ಅಸಲಿಗೆ ಇಷ್ಟೆಲ್ಲ ಸುಖಭೋಗಗಳಿದ್ದರೆ ಪರೀಕ್ಷೆಯಲ್ಲಿ ಶೇ. 90+ ಅಂಕ ಗಳಿಸಬೇಕೆಂಬ ಬಯಕೆಯೇ ಮಕ್ಕಳಲ್ಲಿ ಮೂಡುವುದಿಲ್ಲ. ಇದಕ್ಕೆ ಕೆಲವರು ಮಾತ್ರ ಅಪವಾದ.

ಬೆಂಕಿಯಲ್ಲಿ ಅರಳಿದ ಹೂಗಳು
ಯಾವುದೇ ಮೂಲಭೂತ ಸೌಕರ್ಯಗಳೇ ಇಲ್ಲದ, ಎರಡು ಹೊತ್ತು ಊಟಕ್ಕೂ ತತ್ವಾರವಾಗಿರುವ ಅನೇಕ ಕುಟುಂಬಗಳ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವುದಕ್ಕೆ ಇಲ್ಲಿವೆ ಕೆಲವು ನಿದರ್ಶನಗಳು. ಬೆಂಗಳೂರಿನ ಗೊಟ್ಟಿಗೆರೆಯ ಕೊಳಚೆ ಪ್ರದೇಶದ ಮೀನಾ ಎಂಬ ವಿದ್ಯಾರ್ಥಿನಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಗಳಿಸಿದ್ದು ಶೇ. 89 ಅಂಕಗಳು. ಆಕೆಯ ತಾಯಿ ರುಕ್ಕಮ್ಮನ ಉದ್ಯೋಗ ಮನೆಮನೆಗೆ ಹೋಗಿ ಮುಸುರೆ ತೊಳೆಯುವುದು, ಕಸ ಗುಡಿಸುವುದು. ತಾನೊಬ್ಬಳೇ ದುಡಿದರೆ ಹೊಟ್ಟೆಬಟ್ಟೆಗೆ ಸಾಕಾಗುವುದಿಲ್ಲವೆಂದು ಮಗಳು ಮೀನಾಳನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದ ದಿನವೂ ಮೀನಾ ಹೀಗೆಯೇ ಒಂದೆರಡು ಮನೆಗೆ ಹೋಗಿ ಮುಸುರೆ ತೊಳೆದು, ಕಸ ಗುಡಿಸಿ ಅನಂತರವೇ ಪರೀಕ್ಷೆಗೆ ಹೋಗಿದ್ದಳು. ಆದರೆ ಫಲಿತಾಂಶ ಬಂದಾಗ ಮಾತ್ರ ಆಕೆಗೆ ಶೇ. 89 ಅಂಕಗಳು! ಟ್ಯೂಶನ್‌ಗೆ ಹೋಗುವುದಿರಲಿ, ಶಾಲೆಗೆ ಹೋಗುವುದಕ್ಕೆ ಆಕೆಯ ಬಳಿ ನೆಟ್ಟಗೆ ಸರಿಯಾದ ಎರಡು ಜೊತೆ ಡ್ರೆಸ್ ಕೂಡ ಇರಲಿಲ್ಲ. ಕಸ ಮುಸುರೆ ಮಾಡಿ ಗಳಿಸಿದ ಹಣದಲ್ಲೇ ಎಲ್ಲವೂ ಆಗಬೇಕು.

ಬೆಂಗಳೂರಿನ ಜಯನಗರ 9ನೇ ಬ್ಲಾಕಿನ ಸ್ಲಂ ಏರಿಯಾದಲ್ಲಿ ವಾಸಿಸುವ ವಿನುತ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಳಿಸಿದ್ದು ಶೇ. 91 ಅಂಕ. ಆಕೆಯ ಮನೆ ಇರುವುದು ಬಿಬಿಎಂಪಿ ಉದ್ಯಾನವನದ ಒಳಗೆ, ಒಂದು ಮೂಲೆಯಲ್ಲಿ. ಅದೊಂದು ಜೋಪಡಿ. ಶಾಲೆಗೆ ಸೇರುವಾಗ ಆಕೆ ತನ್ನ ಮನೆಯ ವಿಳಾಸ ಕೊಟ್ಟಿದ್ದು – ಕೇರ್‌ಆಫ್ ಉದ್ಯಾನವನದೊಳಗೆ ಎಂದು. ಆ ಮನೆಯೆಂಬ ಜೋಪಡಿಯಲ್ಲಿ ದೀಪವಿಲ್ಲ , ಗಾಳಿಯೂ ಆಡುವುದಿಲ್ಲ. 56 ಅಳತೆಯ ಆ ಮನೆಯಲ್ಲಿ ನಿಂತರೆ ಕುಳಿತುಕೊಳ್ಳಲು ಜಾಗವಿಲ್ಲ , ಕುಳಿತರೆ ಮಲಗಲು ಸ್ಥಳವಿಲ್ಲ. ಆದರೂ ವಿನುತ ತಂದೆ -ತಾಯಿ ಜೊತೆಗೆ ಆ ಕಿಷ್ಕಿಂಧೆಯಲ್ಲೇ ಬದುಕಿ ಪರೀಕ್ಷೆಯಲ್ಲಿ ಶೇ. 91 ಅಂಕ ಗಳಿಸಿರುವುದು ಎಂಥವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ.

ಸಂಜೀವ ಎಂಬ ಇನ್ನೊಬ್ಬ ಬಡತನದಲ್ಲಿ ಬೆಳೆದ ಹುಡುಗ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಗಳಿಸಿದ್ದು ಶೇ. 93 ಅಂಕಗಳು. ಆತನ ತಂದೆಗೆ ಖಾಸಗಿ ದೇವಸ್ಥಾನದಲ್ಲಿ ಲೆಕ್ಕ ಬರೆಯುವ ಕೆಲಸ. ಯಾರೋ ಶ್ರೀಮಂತರೊಬ್ಬರು ತಮ್ಮ ಔಟ್‌ಹೌಸ್‌ನಲ್ಲಿ ಇರಲು ಅವಕಾಶ ಮಾಡಿಕೊಟಿದ್ದಾರೆ. ಆ ಮನೆಗೆ ಬಾಡಿಗೆ ಇಲ್ಲ. ಮನೆಯೇನೋ ಚೆನ್ನಾಗಿದೆ. ಆದರೆ ಅಲ್ಲಿ ಹೋದರೆ ಚಾಪೆಯ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ. ಏಕೆಂದರೆ ಫರ್ನಿಚರ್ ಖರೀದಿಸುವಷ್ಟು ಹಣವೇ ಅವರಲ್ಲಿಲ್ಲ.

ಸಿದ್ದಗುಂಟಪಾಳ್ಯದ ಜೋಪಡಿಯಲ್ಲಿರುವ ಇನ್ನೊಬ್ಬ ವಿದ್ಯಾರ್ಥಿ ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಗಳಿಸಿದ್ದು ಶೇ. 92 ಅಂಕಗಳು. ಆತ ಮುಂದೆ ಪಿಯುಸಿ ಓದಲು ಸ್ವಲ್ಪವಾದರೂ ನೆರವಾಗೋಣ ಎಂದು ಆರೆಸ್ಸೆಸ್‌ನ ಸೇವಾ ವಿಭಾಗದ ಕಾರ್ಯಕರ್ತರು ಆತನಿಗೆ ಆರ್ಥಿಕ ಸಹಾಯ ನೀಡಲು ಮುಂದಾದರು. ಆದರೆ ಆತ ಅದನ್ನು ನಿರಾಕರಿಸಿದ. ಬೇರೊಂದು ಸಂಸ್ಥೆಯವರು ನನ್ನ ಓದಿಗೆ ನೆರವು ನೀಡಿದ್ದಾರೆ. ಹಾಗಾಗಿ ನೀವು ನನ್ನಂತೆಯೇ ಬಡತನದಲ್ಲಿರುವ ಇನ್ಯಾರಿಗಾದರೂ ಈ ನೆರವು ನೀಡಿ ಎಂದು ವಿನೀತನಾಗಿ ಹೇಳಿದ. ಆತನ ಜಾಗದಲ್ಲಿ ಬೇರೆ ಇನ್ಯಾರೇ ಇದ್ದರೂ ಇದೇ ಮಾತು ಹೇಳುತ್ತಿದ್ದರೇ? ಒಂದು ಸಂಸ್ಥೆಯವರು ನನಗೆ ಹಣ ಕೊಟ್ಟರೇನು, ಇನ್ನೊಂದು ಸಂಸ್ಥೆಯವರೂ ಕೊಡಲಿ. ಹಣ ಯಾರಿಗೆ ಬೇಡ ಎಂದು ಕೊಟ್ಟ ಹಣವನ್ನು ಕಿಸೆಗೆ ಸೇರಿಸುತ್ತಿರಲಿಲ್ಲವೆ? ಆದರೆ ಆ ಸ್ಲಂ ನಿವಾಸಿ ಮಾತ್ರ ಹಣ ಪಡೆಯದೆ, ಅದನ್ನು ತನ್ನಂತೆಯೇ ಬಡತನದಲ್ಲಿರುವ ಇನ್ನೊಬ್ಬರಿಗೆ ಕೊಡಲು ಸಲಹೆ ನೀಡಿದ. ಇಂತಹ ಮಾನವೀಯತೆ ಅರಳಿದ್ದು ಅರಮನೆಯಲ್ಲಲ್ಲ , ದಟ್ಟ ದಾರಿದ್ರ್ಯ ಹೊದ್ದಿರುವ ಆ ಗುಡಿಸಿಲಿನಲ್ಲಿ!

ಕೊಳಚೆ ಪ್ರದೇಶದಲ್ಲಿರುವ ನಿರ್ಗತಿಕ ಮಕ್ಕಳಿಗೆ ಆರ್ಥಿಕ ನೆರವು ನೀಡಲೆಂದು ಅಲ್ಲೆಲ್ಲ ಓಡಾಡುವ ಸಂಘದ ಸೇವಾವಿಭಾಗದ ಕಾರ್ಯಕರ್ತ ಲಕ್ಷ್ಮೀನಾರಾಯಣ ಅವರಿಗಂತೂ ಇದೊಂದು ಮರೆಯಲಾಗದ ಅನುಭವ. ನಿಜಕ್ಕೂ ನನಗೆ ಮಾನವೀಯತೆಯ ದರ್ಶನ ಆಗಿದ್ದು ಅಂತಹ ಸ್ಲಂಗಳಲ್ಲಿ ಎನ್ನುತ್ತಾರೆ ಅವರು. ಸ್ಲಂಗಳಲ್ಲಿ ವಾಸಿಸುವವರನ್ನು ನಾವು ಕೊಳಕು ಜನರು, ಗಲೀಜಾಗಿರುವವರು ಎಂದೆಲ್ಲ ಟೀಕಿಸುತ್ತೇವೆ. ಆದರೆ ಮಾನವೀಯತೆ, ಪ್ರತಿಭಾವಂತಿಕೆ, ಅನುಕೂಲತೆ ಇಲ್ಲದಿದ್ದರೂ ಸಾಧಿಸಬೇಕೆಂಬ ಛಲ ಅರಳುವುದು ಇಂತಹ ಕಡೆಗಳಲ್ಲೇ ಎನ್ನುವುದು ಈ ನಿದರ್ಶನಗಳಿಂದ ಸಾಬೀತಾಗುತ್ತದೆ. ಆದರೆ ಇಂತಹ ಪ್ರದೇಶಗಳಲ್ಲಿ ವಾಸಿಸುವ ಪ್ರತಿಭಾವಂತ ಮಕ್ಕಳಿಗೆ ನೆರವು ನೀಡಲು ಅದೆಷ್ಟು ಜನ ಅನುಕೂಲವಂತರು ಮುಂದಾಗಿದ್ದಾರೆ? ಅದೆಷ್ಟು ವಿದ್ಯಾ ಸಂಸ್ಥೆಗಳು ಇಂತಹ ಬಡ ಮಕ್ಕಳಿಗೆ ತಮ್ಮ ಸಂಸ್ಥೆಗಳಲ್ಲಿ ಓದು ಮುಂದುವರೆಸಲು ಉಚಿತವಾಗಿ ನೆರವಾಗಿವೆ? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಇಂತಹ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಸಣ್ಣದೊಂದು ಮಾನವೀಯ ಕಾರ್ಯ ಮಾಡಬಹುದೆಂಬ ಚಿಂತನೆಯೇ ಅನೇಕರಿಗೆ ಇರುವುದಿಲ್ಲ.

ವಿದ್ಯಾ ಸಂಸ್ಥೆಗಳೆಂದರೆ ಜೂಜಿನ ಅಡ್ಡೆಯಲ್ಲ. ಶಿಕ್ಷಣದ ಅಂಗಡಿಯಲ್ಲ. ರೇಸ್ ಕುದುರೆಗಳನ್ನು ಬೆಳೆಸುವ ಸ್ಟಡ್ ಫಾರಮ್ ಅಲ್ಲ. ಕಾಲಕಾಲಕ್ಕೆ ಕಟಾವಿಗೋ ಅಥವಾ ಮೊಟ್ಟೆಗೋ ಸಾಕುವ ಕೋಳಿ ಫಾರಮ್ ಅಲ್ಲ. ಪದವೀಧರರನ್ನು ಕಂತೆಕಂತೆಯಾಗಿ ತಯಾರಿಸಿ ಹೊರಗಟ್ಟುವ ಕಾರ್ಖಾನೆಗಳೂ ಅಲ್ಲ. ಅದು ಜ್ಞಾನದ ದೇಗುಲ ಆಗಬೇಕು. ಮಾನವೀಯತೆಯನ್ನು ಬೆಳೆಸುವ ತೋಟವಾಗಬೇಕು. ಪ್ರೀತಿ, ಅಂತಃಕರಣ, ಅನುಕಂಪ, ಪ್ರಾಮಾಣಿಕತೆಯ ಹೂವುಗಳು ಅಲ್ಲರಳಿ ಸೌರಭ ಸೂಸುವಂತಾಗಬೇಕು. ಹಾಗಾಗಲು ಸಾಧ್ಯವೆ?

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top