ಹುಬ್ಬಳ್ಳಿಯ ಮಜೇಥಿಯಾ ಫೌಡೇಷನ್ನಿಂದ ಗ್ರಾಮೀಣ ಹೆಣ್ಣು ಮಕ್ಕಳಿಗೆ ‘ವಾಟರ್ ವ್ಹೀಲ್’ ಕೊಡುಗೆ
ಹುಬ್ಬಳ್ಳಿ: ಜಗತ್ತಿಗೆ ಸೌಂದರ್ಯ ಪ್ರಾಪ್ತಿಯಾಗಿರುವುದು ಇಬ್ಬರಿಂದ.. ನೀರೆ ಮತ್ತು ನೀರು..! ನೀರೆ ನೀರೊಳಗೆ ಇದ್ದಷ್ಟು ಹಸಿರು.. ಹಸುರಿಗೆ ನೀರೇ ಉಸಿರು!
ಆದರೆ, ನಗರಗಳನ್ನು ವಿಸ್ತರಿಸುವ ಹೆಬ್ಬಯಕೆ ಇರುವ ನಮಗೆ ತರಿ ಭೂಮಿಯನ್ನು ಒಡೆದು, ನೀರನ್ನು ಬಸಿದು, ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವ ಕನಸು; ಉದ್ದಿಮೆದಾರರಿಗೆ ಕೆರೆ-ಕುಂಟೆ, ಕಾಲುವೆ-ಹರಿ-ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ ಧುಮ್ಮಸ್ ಬಡಿದು ಕಾರ್ಖಾನೆಗಳನ್ನು ಎಬ್ಬಿಸುವ ಅದಮ್ಯ ಬಯಕೆ. ಇನ್ನು ಕಾರ್ಖಾನೆ ಆಡಳಿತಗಾರರದ್ದು ತಮ್ಮಿಂದ ಹೊರಬಂದ ವಿಷಯುಕ್ತ ರಾಸಾಯನಿಕಗಳನ್ನು ಸದಿಲ್ಲದೇ ಕೆರೆಗಳಿಗೆ ಹರಿಸಿ ಕೈತೊಳೆದುಕೊಳ್ಳುವ ಹೊಂಚು; ಕೆರೆಯ ಸುತ್ತಲಿನ ದೊಡ್ಡ ಕುಳಗಳಿಗೆ ಕೆರೆಯಂಗಳದ ಮಣ್ಣನ್ನು ಮೇಲಕ್ಕೆತ್ತಿ ಇಟ್ಟಂಗಿ ರೂಪಿಸುವ ಯೋಚನೆ! ಕೆರೆಯಂಚಿನಲ್ಲಿರುವ ಶ್ರೀಮಂತರಿಗೆ ಕೆರೆಯನ್ನು ಒತ್ತುವರಿ ಮಾಡಿ ಜಮೀನನ್ನು ವಿಸ್ತರಿಸುವ ಆಸೆ! ಬಾಕಿಯವರಿಗೆ ಅದು ಮಲ-ಮೂತ್ರ ವಿಸರ್ಜನೆಗೆ ಶೌಚಾಲಯ!
ಏಷ್ಯಾ ಖಂಡದಲ್ಲಿ ಪ್ರತಿ ನಿಮಿಷಕ್ಕೆ ಒಂದು ಹೆಕ್ಟೇರ್ ನಷ್ಟು ‘ತರಿಭೂಮಿ’ ಕಣ್ಮರೆಯಾಗುತ್ತಿದೆ; ಕರ್ನಾಟಕದಲ್ಲಿ ವರ್ಷವೊಂದಕ್ಕೆ 35 ಕೆರೆಗಳು ಕಣ್ಮುಚ್ಚುತ್ತಿವೆ. ಧಾರವಾಡ ಜಿಲ್ಲೆಯ ಕೆರೆಗಳಲ್ಲಿ ಶೇಕಡಾ 31ರಲ್ಲಿ ಅಪಾರ ಹೂಳು. ಶೇ. 13 ರಷ್ಟು ಕೆರೆಗಳಲ್ಲಿ ಕೈಗಾರಿಕೆಗಳ ಕಲ್ಮಶ. 47 ರಲ್ಲಿ ಇಟ್ಟಿಗೆಯ ಗೂಡುಗಳು; 39 ರಲ್ಲಿ ಕೃಷಿ ಭೂಮಿಯ ಒತ್ತುವರಿ, 36 ರಲ್ಲಿ ಪಕ್ಷಿಗಳ ನಿರಂತರ ಬೇಟೆ.
ಹೀಗೆ, ನೂರಾರು ಕೆರೆ-ಕುಂಟೆಗಳಲ್ಲಿ ವೈವಿಧ್ಯಮಯ ಜೀವರಾಶಿಯ ಬದಲಿಗೆ ದುರ್ವಾಸನೆ ಬೀರುವ, ಕೊಳೆತ ವಸ್ತುಗಳನ್ನು ಒಳಗೊಂಡ, ಸುತ್ತಮುತ್ತಲಿನ ಜೀವಿಗಳಿಗೆ ಮಾರಕವಾದ ನೊರೆತುಂಬಿದ ಹೊಲಸು! ನಮ್ಮ ತರಿಭೂಮಿಯ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸ್ಪಷ್ಠವಾಗಿ ನೀರ್ಕೋಳಿಗಳು ತೋರಿಸುತ್ತಿವೆ.
ಮನುಷ್ಯರಿಗೆ ಮಾತ್ರ ಈ ಭೂಮಿ ಸೀಮಿತವಾಗಿಲ್ಲ. ನಮ್ಮೊಂದಿಗೆ ಸಹ ಜೀವನ ನಡೆಸುವ ಜೀವಿಗಳಿಗೂ ನಮ್ಮಷ್ಟೇ ಈ ಭೂಮಿಯ ಮೇಲೆ (ಬದುಕುವ) ಹಕ್ಕಿದೆ. ಹಾಲಿನ ಅರ್ಧ ಬೆಲೆಯಷ್ಟು ಹಣ ತೆತ್ತು ನೀರು ಖರೀದಿಸಿ ‘ಪ್ಯಾಕೇಜ್ಡ್ ವಾಟರ್’ ಕುಡಿಯುವ ಭಾಗ್ಯ ನಮಗಿದೆ. ಆದರೆ ಅವುಗಳಿಗೆ ? ಹಾಗಾಗಿ, ಇತರರ ಅಗತ್ಯಗಳನ್ನೂ ಕಸಿದುಕೊಂಡು ಬಳಸುವ ಬುದ್ಧಿ ಇನ್ನು ಕ್ಷಮ್ಯವಲ್ಲ.
ಬಳಸಲು ಬಯಸುವ ನೀರನ್ನು ಮೊದಲು ನಿಸರ್ಗದಿಂದ ಪ್ರತಿಯೊಬ್ಬ ಗಳಿಸಬೇಕು. ಗಳಿಸಿದ್ದನ್ನು ಭವಿಷ್ಯಕ್ಕೆ ಉಳಿಸಿಕೊಳ್ಳಬೇಕು. ಅರ್ಧದಷ್ಟು ಇಂಗಿಸಬೇಕು. ಬಾಕಿ ನೀರನ್ನು ಬಳಸಿಕೊಳ್ಳುವ ಅರ್ಹತೆ ಅವನಿಗೆ. ಓಡಿ ಹೋಗುತ್ತಿದ್ದವನಿಂದ ಕಿತ್ತಕೊಂಡಷ್ಟೇ ಬಂತು ಎಂಬ ಮಾತು ನೀರಿನ ವಿಚಾರದಲ್ಲಿ ನಾವಿಂದು ಅನುಸರಿಸುತ್ತಿರುವ ಧೋರಣೆ.. ಅಪಾಯಕಾರಿ.
ಅದಕ್ಕಾಗಿ, ಮನೆಗಳ ನಕಾಶೆ ಬರೆಸುವ ಮುನ್ನ ಜಲ ನಕ್ಷೆ ಕೂಡ ಬರೆಸಿದರೆ, ಕಟ್ಟುವ ಸೂರು ಇನ್ನಷ್ಟು ತಂಪು ಮತ್ತು ನೀರ ನೆಮ್ಮದಿ ಸಾಧಿಸಬಹುದು. ಕಾರಣ, ಮುಂದಿಒನ ತಲೆಮಾರಿಗೆ ನಾವು ಆಸ್ತಿ ಸಂಪಾದಿಸದಿದ್ದರೂ ನಮ್ಮ ಮಕ್ಕಳು, ಮೊಮ್ಮಕ್ಕಳು.. ಮರಿ ಮೊಮ್ಮಕ್ಕಳು ಬದುಕುತ್ತಾರೆ.. ಆದರೆ ನೀರಿನ ಆಕರಗಳ ಸಂರಕ್ಷಣೆಯಾಗದಿದ್ದರೆ.. ಈಗ ಮುಂದಿನ ಪೀಳಿಗೆಯ ಪಾಲನ್ನೂ ಸಾಲ ರೂಪದಲ್ಲಿ ನಾವು ಪಡೆದು ಬಳಸುತ್ತಿರುವುದು ಎಂಬ ವಿವೇಕ ನಮ್ಮಲ್ಲಿ ಜಾಗೃತಗೊಳ್ಳಬೇಕು..
ಹುಬ್ಬಳ್ಳಿಯ ಜಿತೇಂದ್ರ ಮಜೇಥಿಯಾ ಅವರು, ಮಜೇಥಿಯಾ ಫೌಂಡೇಷನ್ ವತಿಯಿಂದ ಹುಬ್ಬಳ್ಳಿಯ ಮೂರುಸಾವಿರ ಮಠದ ಸಭಾ ಭವನದಲ್ಲಿ ಆಯೋಜಿಸಿದ್ದ, ಗ್ರಾಮೀಣ ಹೆಣ್ಣು ಮಕ್ಕಳಿಗೆ ‘ವಾಟರ್ ವ್ಹೀಲ್’ ವಿತರಿಸುವ ಕಾರ್ಯಕ್ರಮದಲ್ಲಿ (ಜೂನ್ 30, ಶುಕ್ರವಾರ ಸಂಜೆ 5.30ಕ್ಕೆ) ಜಲ ತಜ್ಞರಿಂದ ವ್ಯಕ್ತವಾದ ವಿಚಾರಗಳಿವು.
ಸಮಾಜಮುಖಿ ಚಿಂತನೆಯ, ಹೆಸರಾಂತ ಉದ್ಯಮಿ ಜಿತೇಂದ್ರ ಮಜೇಥಿಯಾ ಅವರು ಸುಮಾರು 2 ಸಾವಿರ ರೂಪಾಯಿ ಮೌಲ್ಯದ, 45 ಲೀಟರ್ ಕುಡಿಯುವ ನೀರು ಶೇಖರಿಸಿಟ್ಟುಕೊಳ್ಳಬಲ್ಲ ನೀಲ್ ಕಮಲ್ ವಾಟರ್ ವ್ಹೀಲ್ಗಳನ್ನು 17 ಹಳ್ಳಿಗಳಿಂದ ಆಯ್ದ ನೂರು ಜನ ಹೆಣ್ಣುಮಕ್ಕಳಿಗೆ ಧಾರವಾಡ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸ್ನೇಹಲ್ ಆರ್ (ಐಎಎಸ್) ಹಾಗೂ ಹುಬ್ಬಳ್ಳಿಯ ಪದ್ಮಶ್ರೀ ಸರ್ದಾರ ವೀರನಗೌಡ ಪಾಟೀಲ ಮಹಿಳಾ ವಿದ್ಯಾ ಪೀಠದ ಜುಗಲ್ ಕಿಶೋರ್ ಸೋಮಾನಿ ಪದವಿ ಕಲಾ ಮಹಾವಿದ್ಯಾಲಯದ, ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ್ ಶೀಲವಂತ ಅವರ ಮೂಲಕ ವಿತರಿಸಿದರು.
ಈ ಸಂದರ್ಭದಲ್ಲಿ, ಗಿಡಕ್ಕೆ ನೀರುಣಿಸಿ ಮಾತನಾಡಿದ ಶ್ರೀಮತಿ ಸ್ನೇಹಲ್ ಆರ್ ಅವರು, ಸಾರ್ವಜನಿಕರ ಸಹಭಾಗಿತ್ವ, ಸಾಮುದಾಯಿಕ ಭಾಗೀದಾರಿ ಹೊರತು ಯಾವುದೇ ಸರ್ಕಾರದ ಯೋಜನೆ ನಿಶ್ಚಿತ ಫಲಾನುಭವಿಯನ್ನು ತಲುಪಲು ಸಾಧ್ಯವಿಲ್ಲ. ಸಮಾಜದ ಹಿತ ಬಯಸುವ, ನಿಸ್ವಾರ್ಥ ಉದ್ಯಮಿ ಜಿತೇಂದ್ರ ಮಜೇಥಿಯಾ ಅವರಂತಹ ಸಮಾಜಮುಖಿ ವ್ಯಕ್ತಿತ್ವದ ಕೆಲ ಜನರಿಂದ ಸರ್ಕಾರ ತಲುಪಲು ಸಾಧ್ಯವಾಗದ ವರ್ಗಗಳ, ನಿಜಕ್ಕೂ ಅವಶ್ಯಕತೆ ಇರುವ ಜನರಿಗೆ ಸಕಾಲಿಕ ಸಹಾಯ ದೊರಕುವಂತಾಗಿದೆ ಎಂದು ಶ್ಲಾಘಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಜೇಥಿಯಾ ಫೌಂಡೇಷನ್ ಸಂಚಾಲಕ ಸುಭಾಷ್ಸಿಂಗ್ ಜಮಾದಾರ, ಕುಡಿಯುವ ನೀರಿನ ಬವಣೆ ಹೇಳತೀರದ್ದು. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ನೀರು ಹೊರುವ ಕಾಯಕ ನಿತ್ಯವೂ ಸಾಹಸವೇ. ಆದಷ್ಟು ಅವರ ತಲೆಯ ಮೇಲಿನ ಭಾರವನ್ನು ನೆಲಕ್ಕೆ ವರ್ಗಾಯಿಸುವ ಮಹದಾಸೆಯಿಂದ ಆಯ್ದ ನೂರು ಕುಟುಂಬಗಳ ಮಹಿಳೆಯರಿಗೆ ‘ವಾಟರ್ ವ್ಹೀಲ್’ ಒದಗಿಸುವ ಮನಸ್ಸು ಮಾಡಿದೆವು ಎಂದರು.
ಇನ್ನೋರ್ವ ವಿಶ್ವಸ್ಥ ಅಮರೇಶ ಹಿಪ್ಪರಗಿ ಅವರು ಮಾತನಾಡಿ, ನೂರು ಹಳ್ಳಿಗಳಿಗೆ ತಮ್ಮ ನೇತೃತ್ವದ ತಂಡ ಭೇಟಿ ನೀಡಿ, ಆ ಪೈಕಿ ಅಂತಿಮವಾಗಿ ತೀರ ತೊಂದರೆ ಅನುಭವಿಸುತ್ತಿರುವ 17 ಹಳ್ಳಿಗಳನ್ನು ಪಟ್ಟಿ ಮಾಡಿಕೊಂಡು, ಯಾವುದೇ ಸರ್ಕಾರಿ ಯೋಜನೆಯಲ್ಲಿ ಫಲಾನುಭವಿಯಾಗದ ಗ್ರಾಮೀಣ ಹೆಣ್ಣು ಮಕ್ಕಳನ್ನು ಆಯ್ದು, ಸಂದರ್ಶಿಸಿ, ಅವಶ್ಯಕತೆ ಖಾತ್ರಿ ಪಡಿಸಿಕೊಂಡು, ಅಂತಿಮವಾಗಿ ೧೦೦ ಕುಟುಂಬಗಳಿಗೆ ಉಚಿತವಾಗಿ ವಾಟರ್ ವ್ಹೀಲ್ ಒದಗಿಸುವ ಕೆಲಸ ಮಾಡಿದೆವು, ಎಂದು ತಿಳಿಸಿದರು.
ತುಂಬ ಖುಷಿಯಿಂದ ವಾಟರ್ ವ್ಹೀಲ್ಗಳನ್ನು ಸಿಇಓ ಅವರಿಂದ ಸ್ವೀಕರಿಸಿದ ಕುಂದಗೋಳ ತಾಲೂಕು ಕಳಸದ ಅಮ್ಮಂದಿರು, ’ಭಾಳ.. ಉಪಕಾರ ಆತ್ರೆಪಾ. ದಿನಾಲೂ ಎರಡೆರೆಡು ಕಿಲೋ ಮೀಟರ್ ತಲಿ ಮ್ಯಾಲೆ ನೀರು ಹೊತ್ತು ಗೋಣು ನೋವು ಆಗಿತ್ತು. ಈಗ ದೂಡಿಕೊಂಡು ಹೋಗುವಂಗ ಯಂತ್ರ ಮಾಡಿಸಿಕೊಟ್ಟಾರ.. ಇವರಿಗೆ ಪುಣ್ಯ ಬರ್ಲಿ..’ ಅಂದಿದ್ದು, ಕಾರ್ಯಕ್ರಮದ ಸಾರ್ಥಕತೆ ಬಿಂಬಿಸಿತ್ತು.
ಇದೇ ಸಂದರ್ಭದಲ್ಲಿ, ಹುಬ್ಬಳ್ಳಿಯ ಮಹಿಳಾ ಗೃಹ ರಕ್ಷಕ ದಳದ ಪ್ಲಾಟೂನ್ಗೆ ಮಜೇಥಿಯಾ ಫೌಂಡೇಷನ್ ವತಿಯಿಂದ ಜಿತೇಂದ್ರ ಮಜೇಥಿಯಾ ಅವರು, ಸಮವಸ್ತ್ರಕ್ಕಾಗಿ ಹಣ ಸಹಾಯ ನೀಡಿದರು.
ವಿಶೇಷ ಆಹ್ವಾನಿತರು, ಜನ ಪ್ರತಿನಿಧಿಗಳು, ಮಜೇಥಿಯಾ ಫೌಂಡೇಷನ್ ವಿಶ್ವಸ್ಥರು, ಕುಟುಂಬಸ್ಥರು ಹಾಗೂ ಸಹೃದಯರು ಸೇರಿದಂತೆ, 17 ಗ್ರಾಮಗಳ ನೂರಾರು ಜನ ಪಾಲ್ಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.