ಹಕ್ಕಿಗಳಿಗಾಗಿ ಕೆರೆಯ ನಡುಗಡ್ಡೆಯಲ್ಲಿ ‘ಸೂರು ಖಾತ್ರಿ’!
ಧಾರವಾಡ: ಪಕ್ಷಿಗಳಿಗಾಗಿ ಮೀಸಲಿರಿಸಿದ ಬಡಾವಣೆ..! ಕೆರೆಯ ಸುತ್ತಲೂ ಚಿಕ್ಕ ನಡುಗಡ್ಡೆಗಳನ್ನು ನಿರ್ಮಿಸಿ, ನೆಮ್ಮದಿಯ ತಾಣವನ್ನು ಜನರೇ ರೂಪಿಸಿರುವ ಮಾದರಿ ಬಹುಶಃ ಇಡೀ ರಾಜ್ಯದಲ್ಲಿ ಇದೇ ಪ್ರಥಮ!
ಭಾರತರತ್ನ ಸರ್ ಎಂ.ವಿಶ್ವೇಶ್ವರಾಯಾ ಅವರ ನೀಲನಕ್ಷೆಯ ಮೂಸೆಯಲ್ಲಿ ಅರಳಿದ ಧಾರವಾಡದ ಕೆಲಗೇರಿ ಕೆರೆ ‘ರೆಕ್ಕೆಯ ಮಿತ್ರರಿಗಾಗಿ ಸೂರು’ ಎಂಬ ಹೊಸ ಕಲ್ಪನೆಗೆ ಆಶ್ರಯ ನೀಡಿದೆ.
ಕೆರೆಯನ್ನು ತನ್ನ ಸುಪರ್ದಿಯಲ್ಲಿರಿಸಿಕೊಂಡಿರುವ ಬೇಸಾಯ ವಿವಿ, ಜಿಲ್ಲಾಡಳಿತ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕೆಲಗೇರಿ ಗ್ರಾಮಸ್ಥರು ಈ ವಿಶಿಷ್ಟ ಯೋಜನೆಯ ಸೂತ್ರಧಾರರು.
ಇತ್ತೀಚೆಗೆ, ಟಾಟಾ ಹಿಟಾಚಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಹಾಗೂ ಧಾರವಾಡದ ಟಾಟಾ ಹಿಟಾಚಿ ಪ್ಲ್ಯಾಂಟ್ ಮ್ಯಾನೇಜರ್ ಉಮಾಪತಿ ಅವರು ಭೇಟಿ ನೀಡಿ, ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಎಲ್ಲ ಸಾರ್ಥಕ ಸೌಲಭ್ಯ ಹಾಗೂ ಹಣಕಾಸು ಸಹಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
ಮರಗಳನ್ನು ಬೇರು ಸಮೇತ ಬೇರೆಡೆ ಸಾಗಿಸಿ ಮರು ನಾಟಿ ಮಾಡುವಲ್ಲಿ ಯಶಸ್ಸು ಗಳಿಸಿರುವ ಅಸ್ಲಂಜಹಾನ್ ಅಬ್ಬೀಹಾಳ್, ಹಿರಿಯ ಪರಿಸರವಾದಿ ಶಂಕರ ಕುಂಬಿ ನಿವೇಶನ ರೂಪಿಸಿ, ಮನೆ ಕಟ್ಟುತ್ತಿರುವ ಹಕ್ಕಿ ಮಿತ್ರರು.
ಲಭ್ಯ ಅವಕಾಶ ಮತ್ತು ಮೂಲ ಸೌಕರ್ಯಗಳನ್ನೇ ಬಳಸಿಕೊಂಡು, ಒಂದಿಷ್ಟು ಹಸಿರು ಹೆಚ್ಚಿಸುವ ಉಮ್ಮೇದು ಹೊಂದಿದ ತಂಡ ಇಲ್ಲಿದೆ. ಜೊತೆಗೆ, ಭೂಮಿ ನಮಗಷ್ಟೇ ಮೀಸಲಿಲ್ಲ! ಎಂಬ ಸಂದೇಶವೂ ಈ ಹೆಜ್ಜೆಯಲ್ಲಿ ಅಡಗಿದೆ!
ಸ್ಥಳೀಯ ಹಕ್ಕಿಗಳು, ವಲಸೆ ಹಕ್ಕಿಗಳು ಹಾಗೂ ವಿದೇಶಿ ಬಾನಾಡಿಗಳಿಗೆ ಸುರಕ್ಷಿತ ತಾಣ ಖಾತ್ರಿಯಾಗಿಸಲು, ಕೆಲಗೇರಿ ಕೆರೆಯಲ್ಲಿ ಸೂರು ಖಾತ್ರಿ ಯೋಜನೆ ಜಾರಿಗೊಂಡಿದೆ. 7 ಕೆರೆ, 7 ಗುಡ್ಡಗಳ ಮಲೆನಾಡ ಸೆರಗು ಧಾರವಾಡದಲ್ಲಿಯೂ ಈಗ ಕಾಂಕ್ರೀಟ್ ಕಾಡಿನ ನಿರ್ಮಿತಿ ಮಿತಿಯಲ್ಲಿಲ್ಲ. ಸಹಜ ಹಸಿರು ವರವಾಗಿದ್ದ ಈ ಛೋಟಾ ಮಹಾಬಳೇಶ್ವರದಲ್ಲಿ, ಈಗ ಬಾಯ್ದೆರೆದ ಭೂಮಿ.. ಅಳಿದುಳಿದ ನೀರಿನಾಸರೆಗಳು ಪಳೆಯುಳಿಕೆಗಳಂತೆ ಗೋಚರಿಸುತ್ತವೆ.
ಏತನ್ಮಧ್ಯೆ, ಕೈಕಟ್ಟಿ ಕುಳಿತುಕೊಳ್ಳದೇ ಪಕ್ಷಿಗಳಿಗಾಗಿಯೇ ಮೀಸಲಿಟ್ಟು, ಪ್ರತಿ ನಡುಗಡ್ಡೆಯನ್ನು ವಿಶೇಷ ರೀತಿ ಒಂದೊಂದು ನಮೂನೆಯಲ್ಲಿ ವಿನ್ಯಾಸಗೊಳಿಸುತ್ತಿದೆ ಅಸ್ಲಂಜಹಾನ್ ಅಬ್ಬೀಹಾಳ್ ಹಾಗೂ ಶಂಕರ ಕುಂಬಿ ತಂಡ. ಇವುಗಳನ್ನೇ ಹಕ್ಕಿಯ ಮಿತ್ರರಿಗಾಗಿ ಸುರಕ್ಷಿತ ತಾಣವಾಗಿಸಲು ಮುನ್ನೋಟ ಯೋಜನೆ ಸಹ ಸಿದ್ಧ ಪಡಿಸಿದ್ದಾರೆ.
ಇವರ ಕಾಯಕಕ್ಕೆ ಪರಿಸರವಾದಿ ಶಂಕರ ಕುಂಬಿ ಹಾಗೂ ಮಾಲಿನ್ಯ ನಿಯಂತ್ರಣ ಅಧಿಕಾರಿ ವಿಜಯಕುಮಾರ ಕಡಕಬಾವಿ ಕೈಜೋಡಿಸಿದ್ದು ವಿಶೇಷ. ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿಗೂ ಯೋಜನೆ ಹಿಡಿಸಿತು. ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಟಾಟಾ ಹಿಟಾಚಿ ಕಂಪೆನಿ ಹೊಂಡ ತೋಡಿ, ಕೆರೆಯ ಅಂಗಳದಲ್ಲಿ ಅಲ್ಲಲ್ಲಿ ನಡುಗಡ್ಡೆ ರೂಪಿಸಲು ಜೆಸಿಬಿಗಳನ್ನು ಉಚಿತವಾಗಿ ನೀಡಿತು. ಹೀಗೆ ಎರಡು ವರ್ಷಗಳಿಂದ ನಡೆದ ಕಾಮಗಾರಿ ಈಗ ಫಲ ನೀಡುವ ಹಂತದಲ್ಲಿದೆ. ಈ ನಡುಗಡ್ಡೆಗಳಲ್ಲಿ ಈಗ ಪಕ್ಷಿಗಳ ಕಲರವ!
ಎರಡು ವರ್ಷಗಳ ಶ್ರಮ ಈಗ ಫಲ ನೀಡಿದೆ. ನಮಗೂ ಈ ಬಗ್ಗೆ ವಿಶ್ವಾಸವಿರಲಿಲ್ಲ. ಪ್ರಯತ್ನವಷ್ಟೇ ನಮ್ಮದು ಎಂದು ಮನಸ್ಸು ಗಟ್ಟಿ ಮಾಡಿಕೊಂಡು ಮುಂದಾದೆವು. ಈ ಬಾರಿ ಐದು ನಡುಗಡ್ಡೆಗಳನ್ನು ರೂಪಿಸಲು ಯೋಜಿಸಿದೆವು. ಒಂದೆಡೆ ಕೆರೆಯ ಹೂಳನ್ನು ಎತ್ತಿಸಿ, ಕೆರೆಯ ಪಾತಳಿ ಹಿಗ್ಗಿಸುವುದು. ತನ್ಮೂಲಕ ಓಡುವ ಮಳೆ ನೀರನ್ನು ಹಿಡಿದು ನಿಲ್ಲಿಸುವ ಪ್ರಯತ್ನ. ಅದೇ ಹೂಳನ್ನು ಎತ್ತಿ ನಡಿಗಡ್ಡೆಗೆ ಗುಡ್ಡ ಹಾಸುವುದು. ಮಣ್ಣು ಕೊಚ್ಚಿ ಹೋಗದಂತೆ ಗಿಡಗಳನ್ನು ನೆಟ್ಟು ಸವಕಳಿ ತಡೆಯುವುದು ನಮ್ಮ ಯೋಚನೆ ಎನ್ನುತ್ತಾರೆ ಅಸ್ಲಂ.
800 ರಿಂದ 1000 ಚದರಡಿ ವಿಸ್ತೀರ್ಣದ ಐದು ನಡುಗಡ್ಡೆಗಳನ್ನು ರೂಪಿಸಲಾಗಿದೆ. ಒಂದೊಂದು ನಡುಗಡ್ಡೆಯನ್ನು
ವಿಶಿಷ್ಟವಾಗಿ ಸಜ್ಜುಗೊಳಿಸಲಾಗುತ್ತಿದೆ. ಒಂದರಲ್ಲಿ ಬರೀ ಕರಿ ಜಾಲಿ ಗಿಡಗಳನ್ನು ನೆಟ್ಟರೆ, ಮತ್ತೊಂದರಲ್ಲಿ ಸಿಂಗಪೂರ ಚೆರ್ರಿ ಮತ್ತೊಂದು ನಡುಗಡ್ಡೆಯಲ್ಲಿ ಅರಳಿ ಹಾಗೂ ಕರಿಮತ್ತಿ, ಮಗದೊಂದರಲ್ಲಿ ಅತ್ತಿ, ಆಲ, ಬಸರಿ, ಪತ್ರೆ, ಪೀಕಜಾಲಿ, ಹುಣಸಿ, ಬಿದಿರು ಮೆಳೆ ಸಸಿ ಹೀಗೆ ವೈವಿಧ್ಯಮಯ ಹಕ್ಕಿಗಳನ್ನು ಪೋಷಿಸುವ ಸಸಿಗಳನ್ನು ನೆಡಲು ಯೋಜನೆ ಸಿದ್ಧಗೊಂಡಿದೆ.
ಅಸ್ಲಂ ಹೇಳುವಂತೆ, ಸದ್ಯಕ್ಕೆ ನೀರಿನ ಗತ್ಯವಿಲ್ಲ. ಆದರೆ ಮಳೆ ನೀರನ್ನು ಸಂಗ್ರಹಿಸಿ, ಬಳಸಿಕೊಳ್ಳುವ ಯೋಜನೆ ಇದೆ. ಅದಕ್ಕಾಗಿ ಸರಳವಾದ ವಿಧಾನವೊಂದನ್ನು ಸಿದ್ಧ ಪಡಿಸಲು ಕೋರಿದ್ದೇನೆ. ಅದು ಸಾಧ್ಯವಾದಲ್ಲಿ ಮಳೆಯ ರೂಪದಲ್ಲೇ ಪಂಪ್ ಮೂಲಕ ನೆಟ್ಟ ಸಸಿಗಳಿಗೆ ನಂತರ ಬೆಳೆದ ಮರಗಳಿಗೆ ನೀರುಣಿಸುವ ಮನಸ್ಸಿದೆ..
ಅಂತೂ, ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಪಕ್ಷಿಗಳಿಗಾಗಿಯೂ ಬಡಾವಣೆಯೊಂದು ಸಜ್ಜುಗೊಂಡಿದೆ.. ಜೊತೆಗೆ ಚಿನ್ನದ ಬೆಳೆಸು ತೋಟವೂ..!
ಇತ್ತೀಚೆಗೆ, ಟಾಟಾ ಹಿಟಾಚಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಹಾಗೂ ಧಾರವಾಡದ ಟಾಟಾ ಹಿಟಾಚಿ ಪ್ಲ್ಯಾಂಟ್ ಮ್ಯಾನೇಜರ್ ಉಮಾಪತಿ ಅವರು ಭೇಟಿ ನೀಡಿದರು. ಅಸ್ಲಂಜಹಾನ್ ಅಬ್ಬೀಹಾಳ್ ಚಿತ್ರದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.