ಕೆಲವೊಂದು ವ್ಯಕ್ತಿಗಳು ತಮ್ಮ ಅದ್ಭುತವಾದ ಕಾರ್ಯದ ಮೂಲಕ ಸಮಾಜದಲ್ಲಿ ಪರಿವರ್ತನೆಗಳನ್ನು ತರುವುದು ಮಾತ್ರವಲ್ಲದೇ ಇತರರಿಗೂ ಉತ್ತಮ ಕಾರ್ಯ ಮಾಡಲು ಪ್ರೇರಣೆಗಳನ್ನು ನೀಡುತ್ತಾರೆ. ಅಂತಹ ಕೆಲವೇ ಸಂಖ್ಯೆಯ ಜನರಲ್ಲಿ ಡಾ.ಜ್ಯೋತಿ ಲಾಂಬಾ ಕೂಡ ಒಬ್ಬರು.
ಗುಜರಾತಿನ ವಿಶ್ವವಿದ್ಯಾನಿಲಯವೊಂದರ ಪ್ರೊಫೆಸರ್ ಆಗಿರುವ ಲಾಂಬಾ ಇದೀಗ ಗುಜರಾತಿನ 34 ಗ್ರಾಮಗಳಲ್ಲಿ ಬರೋಬ್ಬರಿ 6 ಸಾವಿರ ಟಾಯ್ಲೆಟ್ಗಳ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ತಮ್ಮ ವಿಶ್ವವಿದ್ಯಾನಿಲಯ ಹಮ್ಮಿಕೊಂಡ ಗಾಂಧಿ ಪಾದಯಾತ್ರದ ಅಂಗವಾಗಿ ಹಳ್ಳಿ ಹಳ್ಳಿಗಳಿಗೆ ಭೇಟಿಕೊಟ್ಟ ಇವರು ಅಲ್ಲಿ ಶೌಚಾಲಯಗಳು ಇಲ್ಲದೇ ಇರುವುದನ್ನು, ಇದರಿಂದ ಮಹಿಳೆಯರು ಅನುಭವಿಸುತ್ತಿದ್ದ ಪರದಾಟಗಳನ್ನು ಮನಗಂಡರು. ಆಗಲೇ ಈ ಎಲ್ಲಾ ಗ್ರಾಮಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು ಎಂಬ ದೃಢ ಸಂಕಲ್ಪ ಮಾಡಿದರು.
ಇವರ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಕೂಡ ಈ ಹಳ್ಳಿಗಳಲ್ಲಿ ಟಾಯ್ಲೆಟ್ ಪ್ರಾಜೆಕ್ಟ್ ಆರಂಭಿಸೋಣ ಎಂದಾಗ ತಡಮಾಡದೆ ಅದರ ಭಾಗಿಯಾದರು. ಈ ಮೂಲಕವಾದರೂ ದೇಶಕ್ಕೆ ಕಿಂಚಿತ್ತು ಕೊಡುಗೆ ಕೊಡೋಣ, ಭೂಮಿ ತಾಯಿಯನ್ನು ಸ್ವಚ್ಛವಾಗಿಸೋಣ ಎಂಬ ಹೆಬ್ಬಯಕೆ ಅವರದ್ದಾಗಿತ್ತು.
ಅದರಂತೆ ಹಳ್ಳಿಗಳಿಗೆ ಹೋದ ಅವರು ಅಲ್ಲಿನ ಜನರಿಗೆ ಟಾಯ್ಲೆಟ್ ನಿರ್ಮಾಣದ ಅಗತ್ಯತೆಯ ಬಗ್ಗೆ ವಿವರಿಸಿದರು. ಆದರೆ ಬಯಲು ಶೌಚಕ್ಕೆ ಅಂಟಿ ಹೋಗಿದ್ದ ಜನ ಟಾಯ್ಲೆಟ್ ನಿರ್ಮಿಸಲು ಸುತಾರಾಂ ಒಪ್ಪಲಿಲ್ಲ. ಸರ್ಕಾರದ ಸಹಾಧನದ ಮೂಲಕ ಶೌಚಾಲಯ ನಿರ್ಮಿಸಿ ಎಂದು ಅವರನ್ನು ಒಪ್ಪಿಸಲು ಲಾಂಬಾ ಅವರಿಗೆ ಬರೋಬ್ಬರಿ 7 ತಿಂಗಳುಗಳೇ ಬೇಕಾಯಿತು.
ಅಲ್ಲಿಂದ ಲಾಂಬಾ ಹಿಂದಿರುಗಿ ನೋಡಲೇ ಇಲ್ಲ. 2013ರಿಂದ ಹಳ್ಳಿಗರಲ್ಲಿ ಟಾಯ್ಲೆಟ್ನ ಅರಿವು ಮೂಡಿಸುತ್ತಾ ಬಂದಿರುವ ಇವರು ಈ ಕಾರ್ಯಕ್ಕಾಗಿ ಹಲವಾರು ಅವಮಾನ, ಕೆಟ್ಟ ಮಾತುಗಳನ್ನು ಕೇಳಿದ್ದಾರೆ. ಆದರೂ ಎದೆಗುಂದದೆ ಕಾರ್ಯವನ್ನು ಮುಂದುವರೆಸಿದ್ದಾರೆ. ಟಾಯ್ಲೆಟ್ ನಿರ್ಮಿಸಿದವರಿಗೆ ತಮ್ಮ ಸ್ವಂತ ಹಣದಿಂದ ಉಡುಗೊರೆಗಳನ್ನೂ ನೀಡಿದ್ದಾರೆ. ಇವರ ಕಾರ್ಯದ ಫಲವಾಗಿ ಸ್ವಾತಂತ್ರ್ಯ ಕಾಲದಿಂದಲೂ ಒಂದೇ ಒಂದು ಟಾಯ್ಲೆಟ್ ಕಾಣದ ಗುಜರಾತಿನ 34 ಗ್ರಾಮಗಳಲ್ಲಿ 6ಸಾವಿರ ಟಾಯ್ಲೆಟ್ಗಳು ತಲೆಯೆತ್ತಿವೆ.
‘ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸಬಹುದು ಎಂಬುದನ್ನು ಚಿಂತಿಸದೆ ಕಾರ್ಯ ಮಾಡಬೇಕು. ಸರ್ಕಾರ ಮತ್ತು ಜನರು ಕೈಜೋಡಿಸಿದಾಗ ಮಾತ್ರ ಅಭಿವೃದ್ಧಿಯಾಗುತ್ತದೆ. ಸರ್ಕಾರಕ್ಕೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನಾವೂ ಭಾಗಿಗಳಾಗಿ ಅಭಿವೃದ್ಧಿ ಮಾಡಬೇಕಿದೆ’ ಎಂದು ಲಾಂಬಾ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.